September 19, 2024

Collector notice: ಶೈಕ್ಷಣಿಕ ದತ್ತು ಕಾರ್ಯಕ್ರಮದಡಿ ಶಾಲೆಗಳ ಶೈಕ್ಷಣಿಕ ಗುಣಮಟ್ಟ ಪರಿಶೀಲಿಸಲು ಜಿಲ್ಲಾಧಿಕಾರಿ ಸೂಚನೆ

0

ಚಿಕ್ಕಮಗಳೂರು: ಶೈಕ್ಷಣಿಕ ದತ್ತು ಕಾರ್ಯಕ್ರಮ ಅನುಷ್ಠಾನ ಸಂಬಂಧ ಜಿಲ್ಲೆಯಲ್ಲಿ ಉಸ್ತುವಾರಿ ಸಮಿತಿ ರಚಿಸಲಾಗಿದ್ದು, ಶಾಲೆಯಲ್ಲಿನ ಶೈಕ್ಷಣಿಕ ಗುಣಮಟ್ಟದ ಬಗ್ಗೆ ಪರಿಶೀಲನೆ ನಡೆಸಬೇಕು. ದತ್ತು ಯೋಜನೆಗೆ ನಿಯೋಜಿಸಲಾಗಿರುವ ಅಧಿಕಾರಿಗಳು ಶಾಲೆಗೆ ತಿಂಗಳಿಗೆ ಕನಿಷ್ಠ ಒಂದು ಅಥವಾ ಎರಡು ಬಾರಿ ಭೇಟಿ ನೀಡಿ ಶಾಲೆಗಳ ಶೈಕ್ಷಣಿಕ ಪ್ರಗತಿಯನ್ನು ಅವಲೋಕಿಸಿ ಸಲಹೆ ಹಾಗೂ ಮಾರ್ಗದರ್ಶನ ನೀಡುವಂತೆ ಜಿಲ್ಲಾಧಿಕಾರಿ ಕೆ.ಎನ್.ರಮೇಶ್ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆ ಹಾಗೂ ಪದವಿಪೂರ್ವ  ಕಾಲೇಜುಗಳ ಶೈಕ್ಷಣಿಕ ದತ್ತು ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬ್ಲಾಕ್ ಹಂತದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಶೈಕ್ಷಣಿಕ ದತ್ತು ಯೋಜನೆ ಪಡೆಯುವ ಅಧಿಕಾರಿಗಳ ವಿವರ ಮತ್ತು ಕ್ರಿಯಾ ಯೋಜನೆಯನ್ನು ನಿರ್ವಹಿಸಬೇಕು. ಡಯಟ್ ತಾಲ್ಲೂಕು ನೋಡಲ್ ಅಧಿಕಾರಿಗಳು ಪ್ರಗತಿ ವರದಿಯನ್ನು ಕಾಲಕಾಲಕ್ಕೆ ಸಂಗ್ರಹಿಸಿ ಮಾಹಿತಿ ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಶಾಲೆಗಳಲ್ಲಿನ ಶೈಕ್ಷಣಿಕ ಗುಣಮಟ್ಟ ಹಾಗೂ ಬೋಧನಾ ಗುಣಮಟ್ಟವನ್ನು ಉತ್ತಮಪಡಿಸುವುದು ಶೈಕ್ಷಣಿಕ ದತ್ತು ಕಾರ್ಯಕ್ರಮದ ಮುಖ್ಯ ಉದ್ದೇಶ. ಶೈಕ್ಷಣಿಕ ಗುಣಮಟ್ಟ ಕಾಪಾಡುವಲ್ಲಿ ಹೆಚ್ಚಿನ ಒತ್ತು ನೀಡಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ಪ್ರಭು ಮಾತನಾಡಿ, ಶೈಕ್ಷಣಿಕ ಚಟುವಟಿಕೆಗಳಾದ ಶಿಕ್ಷಕರ ಪಾಠ ಬೋಧನೆ, ವಿದ್ಯಾರ್ಥಿಗಳ ಕಲಿಕಾ ಮಟ್ಟ, ಕಲಿಕೆಯ ಮೌಲ್ಯಮಾಪನಾ ವಿಧಾನ, ದಾಖಲಾತಿಗಳ ನಿರ್ವಹಣೆ, ಸ್ಮಾರ್ಟ್ ತರಗತಿ ಸೌಲಭ್ಯಗಳ ಬಳಕೆ, ಕಂಪ್ಯೂಟರ್ ಲ್ಯಾಬ್ ಬಳಕೆ, ಸಹಪಠ್ಯ ಚಟುವಟಿಕೆಗಳ ನಿರ್ವಹಣೆ ಮುಂತಾದ ಅಂಶಗಳನ್ನು ಪರಿಶೀಲನೆ ಮಾಡಿ ಅಗತ್ಯ ಸಲಹೆ, ಸೂಚನೆಗಳನ್ನು ಮುಖ್ಯ ಶಿಕ್ಷಕರಿಗೆ ಮತ್ತು ಸಹ ಶಿಕ್ಷಕರಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳ ಪಟ್ಟಿಯನ್ನು ಶಾಲಾ ಮುಖ್ಯಸ್ಥರಿಂದ ಪಡೆದು ಅಗತ್ಯ ಮಾರ್ಗದರ್ಶನ ನೀಡಬೇಕು, ಶಾಲೆ ಬಿಟ್ಟ ಮಕ್ಕಳಿದ್ದಲ್ಲಿ ಅವರನ್ನು ಶಾಲೆಗೆ ಕರೆತರಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು, ಶಿಕ್ಷಕರ ಸಾಮರ್ಥ್ಯ ಅಭಿವೃದ್ಧಿಗಾಗಿ ಇಲಾಖೆಯಿಂದ ನೀಡಲಾಗಿರುವ ತರಬೇತಿಗಳು ಸದ್ಭಳಕೆಯಾಗುತ್ತಿರುವ ಬಗ್ಗೆ ಪರಿಶೀಲಿಸಿ ಅನುಪಾಲನಾ ವರದಿ ನೀಡುವಂತೆ ಅವರು ಸೂಚಿಸಿದರು.

ಉಪವಿಭಾಗಾಧಿಕಾರಿ ರಾಜೇಶ್, ತಹಶೀಲ್ದಾರ್ ವಿನಾಯಕ ಸಾಗರ್ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ರಂಗನಾಥ ಸ್ವಾಮಿ ಉಪಸ್ಥಿತರಿದ್ದರು.

Collector notice

About Author

Leave a Reply

Your email address will not be published. Required fields are marked *

You may have missed