September 16, 2024

Congress party insulted Ambedkar: ಕಾಂಗ್ರೇಸ್ ಪಕ್ಷದಿಂದ ಅಂಬೇಡ್ಕರ್ ಗೆ ಅವಮಾನ

0

????????????????????????????????????

ಚಿಕ್ಕಮಗಳೂರು: ಕಾಂಗ್ರೇಸ್ ಪಕ್ಷ ಅಂಬೇಡ್ಕರ್‌ರವರು ಜೀವಂತ ವಾಗಿದ್ದಾಗಲೂ ಅವಮಾನಿಸಿದೆ, ಸತ್ತ ಮೇಲೂ ಅವಮಾನಿಸಿದೆ ಎಂದು ಕೊಳ್ಳೆಗಾಲ ಶಾಸಕ ಮಹೇಶ್ ವಾಗ್ದಾಳಿ ನಡೆಸಿದರು.

ಬಿಜೆಪಿ ಜಿಲ್ಲಾ ಯುವ ಮೋರ್ಚಾದ ವತಿಯಿಂದ ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಆಯೋಜಿಸಲಾಗಿದ್ದ ಮೀಸಲಾತಿ ಹೆಚ್ಚಳ ಮಾಡಿದ ರಾಜ್ಯ ಸರ್ಕಾರಕ್ಕೆ ಅಭಿನಂದನೆ ಹಾಗೂ ಎಸ್ಸಿ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮವನ್ನು  ಉದ್ಘಾಟಿಸಿ ಮಾತನಾಡಿದರು.

ಕಾಂಗ್ರೇಸ್‌ನವರು ಡಾ.ಬಿ.ಆರ್.ಅಂಬೇಡ್ಕರ್‌ರವರು ಸ್ಪರ್ಧಿಸಿದ ಪ್ರತಿ ಚುನಾವಣೆಯಲ್ಲಿಯೂ ಸೋಲಿಸಿ ಅವರನ್ನು ಅವಮಾನಿಸಿದರು. ಅವರ ಮರಣ ನಂತರ ಅವರ ದೇಹವನ್ನು ಗೌರವಯುತವಾಗಿ ಸಂಸ್ಕಾರ ಮಾಡಲು ದೆಹಲಿಯಲ್ಲಿ ಭೂಮಿ ನೀಡದೇ ಅವಮಾನಿಸಿದರು ಇವರನ್ನು ದಲಿತರು ಸಹಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅಂಬೇಡ್ಕರ್‌ರವರನ್ನು ಗೌರವ ಸಲ್ಲಿಸುವ ನಿಟ್ಟಿನಲ್ಲಿ ಮಹಾ ಪರಿನಿರ್ವಾಹಣಾ ಸ್ಥಳ ಅಭಿವೃದ್ದಿ, ಪಂಚತೀರ್ಥಧಾಮಗಳ ಘೋಷಣೆ ಮತ್ತು ಅಭಿವೃದ್ದಿಗೊಳಿಸಿದೆ ಎಂದು ಹೇಳಿದರು.

೧೯೫೮ರಲ್ಲಿ ಜನಸಂಖ್ಯೆಗನುಗುಣವಾಗಿ ಪರಿಶಿಷ್ಟ ಜಾತಿ ಮತ್ತು ವರ್ಗದವರಿಗೆ ಮೀಸಲಾತಿ ನೀಡಲಾಗಿತ್ತು. ತದ ನಂತರದ ದಿನಗಳಲ್ಲಿ ಆಡಳಿತ ನಡೆಸಿದ ಕಾಂಗ್ರೇಸ್ ಸರ್ಕಾರ ಮೀಸಲಾತಿ ಹೆಚ್ಚಿಸುವ ಬಗ್ಗೆ ಚಿಂತನೆಯನ್ನು ನಡೆಸಿರಲಿಲ್ಲ ಇದೀಗ ಮೀಸಲಾತಿ ಹೆಚ್ಚಿಸಲು ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಬರಬೇಕಾಯಿತು ಎಂದು ಹೇಳಿದರು.

ಸಿದ್ದರಾಮಯ್ಯನವರು ಪರಿಶಿಷ್ಟ ಜಾತಿ ವರ್ಗಗಳ ಜನರ ಮೀಸಲಾತಿ ಹೆಚ್ಚಳ ಮಾಡಲು ನನ್ನ ಅವಧಿಯಲ್ಲಿ ನ್ಯಾಯಮೂರ್ತಿ ನಾಗಮೋಹನ್‌ದಾಸ್ ಸಮಿತಿಯನ್ನು ರಚಿಸಲಾಗಿತ್ತು ಎಂದು ಹೇಳಿಕೊಳ್ಳುತ್ತಿದ್ದಾರೆ. ನಾಗಮೋಹನ್‌ದಾಸ್‌ಯವರು ವರದಿ ನೀಡಿ ಹಲವು ವರ್ಷಗಳೇ ಕಳೆದರೂ ಏಕೆ ಮೀಸಲಾತಿ ಹೆಚ್ಚಳ ಮಾಡಿರಲಿಲ್ಲ ಎಂದು ಪ್ರಶ್ನಿಸಿದರು.

ಈ ಹಿಂದೆ ಮಂಡಲ್ ಆಯೋಗದ ವರದಿಯನ್ನು ಇಂದಿರಾಗಾಂ ಶೀಥಲೀಕರಣ ಘಟಕಕ್ಕೆ ಎಸೆದಿದ್ದರು. ಬಿಜೆಪಿ ಮತ್ತು ಬಿಎಸ್ಪಿ ಒತ್ತಡದಿಂದ ಅಂದಿನ  ಪ್ರಧಾನಿ ವಿ.ಪಿ.ಸಿಂಗ್ ಹಿಂದುಳಿದ ವರ್ಗಗಳಿಗೆ  ಮೀಸಲು ನೀಡುವ ಮಂಡಲ ಆಯೋಗದ ವರದಿ ಅನುಷ್ಠಾನಕ್ಕೆ ತಂದರು.

ಅಂಬೇಡ್ಕರ್ ಸಂವಿಧಾನ ರಚನಾ ಸಮಿತಿಗೆ ಹೋಗಲು ಅಡಚಣೆ ಉಂಟುಮಾಡಿದ್ದವರು ಇದೇ ಕಾಂಗ್ರೆಸ್ಸಿಗರು. ಚುನಾಣೆಯಲ್ಲಿ ಎರಡು ಬಾರಿ ಅಂಬೇಡ್ಕರ್ ಸೋಲನುಭವಿಸಲು ಕಾಂಗ್ರೆಸ್ ಕಾರಣ. ಬಾಬಾಸಾಹೇಬರಿಗೆ ಅಪಮಾನ ಮಾಡಿರವ ಕಾಂಗ್ರೆಸ್ ಗೆ ಪರಿಶಿಷ್ಟರು ಮತಹಾಕಬಾರದು ಎಂದರು.

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮಾತನಾಡಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯದ ಪ್ರತಿ ಪರಿಶಿಷ್ಟ ಜಾತಿ ವರ್ಗದ ಜನ ವಾಸಿಸುವ ಬಡಾವಣೆಗೆ ಕಾಂಕ್ರೀಟ್ ರಸ್ತೆ, ಸಮುದಾಯಭವನ, ಅಂಬೇಡ್ಕರ್‌ಭವನ ಸೇರಿದಂತೆ ಹಲವು ಸೌಲಭ್ಯಗಳನ್ನು ನೀಡಿದೆ ಎಂದರು.

ಶಾಸಕ ಸಿ.ಟಿ ರವಿ ಮಾತನಾಡಿ ಕಣ್ಣಿದ್ದು ಕುರುಡರಾಗಿರುವವರಿಗೆ, ಕಿವಿ ಇದ್ದು ಕಿವುಡರಾಗಿರುವವರಿಗೆ, ಶಾಶ್ವತ ಕೆಲಸಗಳು ಕಾಣುವುದಿಲ್ಲ, ಕೇಳಿಸುವುದು ಇಲ್ಲ ಎಂದು ವಾಗ್ದಾಳಿ ನಡೆಸಿದರು.

ಮೆಡಿಕಲ್ ಕಾಲೇಜ್, ಕಡೂರು-ಚಿಕ್ಕಮಗಳೂರು ರಸ್ತೆ, ಹಾಲು ಒಕ್ಕೂಟ ಸ್ಥಾಪನೆ, ಪ್ರತಿ ಹಳ್ಳಿಗಳ ಕೆರೆ ತುಂಬಿಸುವ ಕೆಲಸಗಳು, ಮನೆ ಮನೆಗೆ ಕುಡಿಯುವ ನೀರು ಒದಗಿಸುವುದು, ಕಾಂಕ್ರೀಟ್ ರಸ್ತೆ ನಿರ್ಮಾಣ ಮಾಡಿರುವುದು ಶಾಶ್ವತ ಕೆಲಸ ಅಲ್ಲವೇ ಎಂದು ಪ್ರಶ್ನಿಸಿದ ಅವರು ಅದರೊಂದಿಗೆ ರಾಜಕೀಯ ಪರಿಭಾಷೆಯನ್ನು ಬದಲಾಯಿಸಿ ಸಾಮಾಜಿಕ ಹಕ್ಕುಗಳನ್ನು ನೀಡಿದ್ದೇವೆ ಎಂದು ಹೇಳಿದರು.

ಇತ್ತೀಚೆಗೆ ಬಾಳೆಹೊನ್ನೂರಿನ ತೋಟವೊಂದರಲ್ಲಿ ದಲಿತ ಕಾರ್ಮಿಕರ ಮೇಲೆ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಮುಖಂಡರು ನನ್ನ ಕ್ಷೇತ್ರವೂ ಅಲ್ಲದ, ನನ್ನ ಯಾವುದೇ ಪಾತ್ರವಿಲ್ಲದಿದ್ದರೂ ನನ್ನ ವಿರುದ್ದ ಧಿಕ್ಕಾರ ಕೂಗಿದರು ಎಂದ ಅವರು ನನ್ನ ಉನ್ನತಿಯನ್ನು ಸಹಿಸದೇ ಹೊಟ್ಟೆಕಿಚ್ಚಿನಿಂದ ಧಿಕ್ಕಾರ ಕೂಗುತ್ತಿದ್ದಾರೆ ಎಂದರು.

ಈ ಕಾರ್ಯಕ್ರಮದಲ್ಲಿ ಕರ್ನಾಟಕ ಸಫಾಯಿಕರ್ಮಚಾರಿ ನಿಗಮದ ಅಧ್ಯಕ್ಷ ಕೆ.ಪಿ.ವೆಂಕಟೇಶ್, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರುಡಪ್ಪ, ಜಿಲ್ಲಾ ಎಸ್ಸಿ ಮೋರ್ಚಾದ ನರಸಿಂಹಮೂರ್ತಿ, ಕಾರ್ಯದರ್ಶಿ ಹಂಪಯ್ಯ, ಸಿಡಿಎ ಅಧ್ಯಕ್ಷ ಪಿ.ಆನಂದ್, ಗ್ರಾಮಾಂತರ ಮಂಡಳದ ಅಧ್ಯಕ್ಷ ಮಹೇಶ್, ದೇವರಹಳ್ಳಿ ಸೂರಿ, ದೀಪಕ್ ದೊಡ್ಡಯ್ಯ ಸೇರಿದಂತೆ ಹಲವರಿದ್ದರು.

Congress party insulted Ambedkar

 

About Author

Leave a Reply

Your email address will not be published. Required fields are marked *