September 19, 2024

Indira Gandhi’s birth anniversary: ಇಂದಿರಾಗಾಂಧಿಯವರು ನಮಗೆ ದಾರಿದೀಪ

0

ಚಿಕ್ಕಮಗಳೂರು:  ಭಾರತದ ಮೊದಲ ಮಹಿಳಾ ಪ್ರಧಾನಮಂತ್ರಿ ಇಂದಿರಾಗಾಂಧಿಯವರನ್ನು ಟೀಕೆ ಮಾಡಲು ಯಾರಿಂದಲೂ ಸಾಧ್ಯವಿಲ್ಲ. ಅವರ ಮಾರ್ಗದರ್ಶನ ನಮಗೆ ದಾರಿ ದೀಪವಾಗಿದೆ ಎಂದು ಕೆಪಿಸಿಸಿ ಸದಸ್ಯ ಎ.ಎನ್.ಮಹೇಶ್ ತಿಳಿಸಿದರು.

ಅವರು ಶನಿವಾರ ನಗರದ ಜಿಲ್ಲಾ ಕಾಂಗ್ರೆಸ್ ಕಛೇರಿಯಲ್ಲಿ ನಡೆದ ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯವರ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ತ್ಯಾಗ ಬಲಿದಾನಗೈದ ಇಂದಿರಾಗಾಂಧಿಯವರು ದೇಶಕ್ಕೆ ಅಪಾರವಾದ ಜನಪರ ಕೊಡುಗೆಗಳನ್ನು ನೀಡಿದ್ದಾರೆ ಎಂದು ಹೇಳಿದರು.

ಭಾರತದ ಇತಿಹಾಸದಲ್ಲಿ ಸ್ವಾತಂತ್ರ್ಯಕ್ಕಾಗಿ ಬಿಜೆಪಿಯ ಯಾವುದೇ ನಾಯಕರು ತನ್ನ ಪ್ರಾಣವನ್ನು ತ್ಯಾಗ ಬಲಿದಾನ ಮಾಡಿರುವ ನಿದರ್ಶನವಿಲ್ಲ. ಜನರನ್ನು ಮರುಳು ಮಾಡುವ ಮತ್ತು ಸುಳ್ಳು ಹೇಳುವ ಕಲೆಯನ್ನು ಬಿಜೆಪಿಯ ನಾಯಕರು ಕರಗತ ಮಾಡಿಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿ ಸರ್ಕಾರಗಳು ದೇಶದ ಸಂಪತ್ತನ್ನು ಲೂಟಿ ಮಾಡುವ ಮೂಲಕ ದೇಶವನ್ನು ದಿವಾಳಿ ಮಾಡುತ್ತಿವೆ. ಹೇಡಿ ವೀರ ಸಾವರ್ಕರ್‌ನನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡುತ್ತಿರುವುದು ದುರ್ದೈವ ಎಂದು ಹೇಳಿದರು.

ಸ್ವಾತಂತ್ರ್ಯ ಬಂದ ನಂತರ ಭಾರತ ದೇಶದಲ್ಲಿ ಇಷ್ಟೊಂದು ಕ್ರಾಂತಿಕಾರಕ ಬದಲಾವಣೆಗಳು ಕಂಡಿರುವುದು ಇಂದಿರಾಗಾಂಧಿಯವರು ಪ್ರಧಾನಮಂತ್ರಿ ಆದ ಸಂದರ್ಭದಲ್ಲಿ ಮಾತ್ರ. ಅವರ ಆದರ್ಶ ಮೌಲ್ಯಗಳನ್ನು ಎಲ್ಲರೂ ತಮ್ಮ ಜೀವನದಲ್ಲಿ ಮೈಗೂಡಿಸಿಕೊಳ್ಳುವಂತೆ ಮನವಿ ಮಾಡಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಕೆ.ಮಹಮದ್ ಮಾತನಾಡಿ, ಇಂದಿರಾಗಾಂಧಿಯವರು ದೇಶದ ಉಳಿವಿಗೆ ತನ್ನ ಪ್ರಾಣವನ್ನು ತ್ಯಜಿಸಿದ್ದಾರೆ. ಸ್ವಾತಂತ್ರ್ಯ ಸಂಗ್ರಾಮಕ್ಕೆ ತಮ್ಮನ್ನು ತೊಡಗಿಸಿಕೊಳ್ಳುವ ಮೂಲಕ ದೇಶದ ಐಕ್ಯತೆ, ಅಖಂಡತೆಗಾಗಿ ಹೋರಾಡಿದ್ದಾರೆ ಎಂದರು.

ಇಂದಿರಾಗಾಂಧಿಯವರು ತನ್ನ ಅಧಿಕಾರದ ಅವಧಿಯಲ್ಲಿ ಉತ್ತಮವಾದ ಜನಪರವಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದು, ಅವುಗಳು ಇಂದು ಉಳಿದಿವೆ. ಅವರು ಕೈಗೊಂಡ ದಿಟ್ಟ ಹೋರಾಟಗಳು ಇಂದು ಭಾರತವನ್ನು ಉನ್ನತ ಸ್ಥಾನಕ್ಕೆ ನಿಲ್ಲಿಸಿದೆ ಎಂದು ಹೇಳಿದರು.

ರಾಜ್ಯ ಮಹಿಳಾ ಕಾಂಗ್ರೆಸ್ ಘಟಕದ ಉಪಾಧ್ಯಕ್ಷೆ ರೇಖಾಹುಲಿಯಪ್ಪಗೌಡ ಮಾತನಾಡಿ, ರಾಜ್ಯ ಮತ್ತು ಕೇಂದ್ರ ಬಿಜೆಪಿ ಸರ್ಕಾರಗಳು ಜನರ ಮಧ್ಯೆ ವಿಷ ಬೀಜವನ್ನು ಬಿತ್ತುವ ಮೂಲಕ ಸೌಹಾರ್ದತೆಯನ್ನು ಹಾಳು ಮಾಡುತ್ತಿದ್ದರೆ, ಕಾಂಗ್ರೆಸ್ ಎಲ್ಲಾ ಸಮುದಾಯಗಳನ್ನು ಒಂದುಗೂಡಿಸುವ ಕೆಲಸವನ್ನು ಮಾಡುತ್ತಿದೆ ಎಂದು ತಿಳಿಸಿದರು.

ದೇಶದಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಯುವಕರು ನಿರುದ್ಯೋಗಿಗಳಾಗಿದ್ದಾರೆ ಅವರ ಬಗ್ಗೆ ಬಿಜೆಪಿ ಕಿಂಚಿತ್ತೂ ಯೋಚಿಸದೆ, ದೇಶದ ಎಲ್ಲಾ ಸಂಪತ್ತುಗಳನ್ನು ಮಾರಾಟ ಮಾಡುವ ಮೂಲಕ ದೇಶವನ್ನು ದಿವಾಳಿ ಮಾಡಲು ಮುಂದಾಗುತ್ತಿದೆ ಎಂದು ಹೇಳಿದರು.

ಕಾಂಗ್ರೆಸ್ ಮುಖಂಡ ಬಿ.ಹೆಚ್.ಹರೀಶ್ ಮಾತನಾಡಿ, ಕಾಂಗ್ರೆಸ್ ಪಕ್ಷವು ದೇಶದ ಜನರಿಗಾಗಿ ಹಲವಾರು ಕೊಡುಗೆಗಳನ್ನು ಕೊಟ್ಟಿದೆ. ಅವುಗಳನ್ನು ಉಳಿಸಿ ಬೆಳೆಸುವ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕಾಗಿದೆ ಎಂದು ತಿಳಿಸಿದರು.

ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇಂದಿರಾಗಾಂಧಿಯವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪಾರ್ಚನೆ ಮಾಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಇಂದಿರಾ, ಪರಮೇಶ್ ರಾಜ್ ಅರಸ್, ಎಸ್.ಸಿ.ಘಟಕದ ಜಿಲ್ಲಾಧ್ಯಕ್ಷ ಮಲ್ಲೇಶಸ್ವಾಮಿ, ನಗರ ಕಾಂಗ್ರೆಸ್ ಅಧ್ಯಕ್ಷ ತನೋಜ್ ಕುಮಾರ್ ನಾಯ್ಡು, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಶಬಾನಾ ಸುಲ್ತಾನ್, ಎನ್‌ಎಸ್‌ಯುಐ ರಾಜ್ಯ ಕಾರ್ಯದರ್ಶಿ ಆದಿಲ್, ಮುಖಂಡರಾದ ಮಹಮದ್ ಅಕ್ಬರ್, ಬಿ.ಎಂ.ಸಂದೇಶ್, ಶೃದೀಪ್, ರಾಜಶೇಖರ್, ಸುರೇಶ್ ಕುಮಾರ್, ಹೆಚ್.ಇ.ಪ್ರಕಾಶ್, ಸಿಲ್ವೆಸ್ಟರ್, ನಾಗೇಶ್, ಅನ್ಸರ್ ಅಲಿ, ನಗಿನಾ, ಭರತೇಶ್, ಚಂದನ್ ಸೇರಿದಂತೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಇದ್ದರು.

Indira Gandhi’s birth anniversary

 

About Author

Leave a Reply

Your email address will not be published. Required fields are marked *

You may have missed