September 19, 2024

Attempt to besiege MLA CT Ravi’s house: ಶಾಸಕ ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ – ಕಾಂಗ್ರೆಸ್ ಕಾರ್ಯಕರ್ತರ ಬಂಧನ- ಬಿಜೆಪಿ ಕಾರ್ಯಕರ್ತರಿಂದಲು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್: ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಹೇಳಿದ್ದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರಿಂದ ಶಾಸಕ ಸಿ.ಟಿ.ರವಿ ಮನೆಗೆ ಮುತ್ತಿಗೆ ಯತ್ನ…, ಬಿಜೆಪಿ ಕಾರ್ಯಕರ್ತರಿಂದಲು ಕಾಂಗ್ರೆಸ್ ವಿರುದ್ಧ ಪ್ರತಿಭಟನೆ…, ಎರಡು ಕಡೆಯವರನ್ನು ಮಾರ್ಗ ಮಧ್ಯೆ ತಡೆದ ಪೊಲೀಸರು…, ಪರಸ್ಪರ ಘೋಷಣೆ, ಕಾಂಗ್ರೆಸ್ ಕಾರ್ಯಕರ್ತರ ಬಂಧನ.

ಇದು ಶನಿವಾರ ನಗರದ ಬಸವನ ಹಳ್ಳಿ ಮುಖ್ಯರಸ್ತೆಯಲ್ಲಿ ನಡೆದ ಹೈಡ್ರಾಮ.ಈಚೆಗೆ ಕೊಪ್ಪದಲ್ಲಿ ನಡೆದ ಬಿಜೆಪಿ ಜನಸ್ಪಂದನ ಸಭೆಯಲ್ಲಿ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯೂ ಆದ ಸಿ.ಟಿ. ರವಿ ಅವರು ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಿದ್ರಾಮುಲ್ಲಾ ಖಾನ್ ಎಂದು ಕರೆದು, ಅವರ ಹಿಂದೂ ವಿರೋಧಿ ನಿಲುವನ್ನು ಖಂಡಿಸಿದ್ದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಜಿಲ್ಲಾ ಕಾಂಗ್ರೆಸ್ ಸಿ.ಟಿ.ರವಿ ಮನೆಗೆ ಹಾಕುವ ಎಚ್ಚರಿಕೆ ನೀಡಿತ್ತು. ಅದರಂತೆ ಶನಿವಾರ ತಾಲೂಕು ಕಚೇರಿಯಿಂದ ಘೋಷಣೆ ಕೂಗುತ್ತಾ ಬಸವನಹಳ್ಳಿ ಮುಖ್ಯ ರಸ್ತೆಯಲ್ಲಿರುವ ಸಿ.ಟಿ. ರವಿ ಅವರ ಮನೆಯತ್ತ ಕಾಂಗ್ರೆಸ್ ಕಾರ್ಯಕರ್ತರು ಹೊರಟರು.

ಆದರೆ ಪೊಲೀಸರು ಅವರನ್ನು ರಂಗಣ್ಣನವರ ಛತ್ರದ ಎದುರಿನಲ್ಲಿ ತಡೆದರು. ಈ ವೇಳೆ ಸ್ಥಳದಲ್ಲೇ ಕುಳಿತ ಕಾಂಗ್ರೆಸ್ಸಿಗರು ಪ್ರತಿಭಟನೆ ಮುಂದುವರೆಸಿದರು.
ಕಾಂಗ್ರೆಸ್ ಪ್ರತಿಭಟನೆ ಮೊದಲೇ ತಿಳಿದಿದ್ದ ಬಿಜೆಪಿ ಕಾರ್ಯಕರ್ತರು ಶಾಸಕರ ನಿವಾಸದ ಬಳಿ ಜಮಾಯಿಸಿದ್ದರು. ಅತ್ತ ಕಾಂಗ್ರೆಸ್ ಕಾರ್ಯಕರ್ತರನ್ನು ಮಧ್ಯದಲ್ಲೇ ತಡೆದ ವಿಚಾರ ಗೊತ್ತಾಗುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರು ಅಲ್ಲಿಗೆ ತೆರಳಿ ಪ್ರತಿರೋಧ ವ್ಯಕ್ತಪಡಿಸಲು ಮುಂದಾದರು.

ಪರಿಸ್ಥಿತಿ ಕೈಮೀರುವ ಲಕ್ಷಣ ಗೋಚರಿಸುತ್ತಿದ್ದಂತೆ ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ಮಹಾತ್ಮ ಎಲೆಕ್ಟ್ರಿಕಲ್ಸ್ ಬಳಿಯಲ್ಲಿ ತಡೆದರು. ಒಂದು ಕಡೆ ಕಾಂಗ್ರೆಸ್ಸಿಗರು ಭಾಷಣ ಮುಂದುವರಿದರೆ, ಅತ್ತ ಬಿಜೆಪಿ ಕಾರ್ಯಕರ್ತರ ಘೋಷಣೆ ಮುಂದುವರೆದಿತ್ತು. ಆಗಾಗ ಕಾಂಗ್ರೆಸ್ ಕಾರ್ಯಕರ್ತರತ್ತ ನುಗ್ಗಲು ಪ್ರಯತ್ನಿಸುತ್ತಿದ್ದ ಬಿಜೆಪಿ ಕಾರ್ಯಕರ್ತರನ್ನು ನಿಯಂತ್ರಿಸಲು ಪೊಲೀಸರು ಹರ ಸಾಹಸ ಪಟ್ಟರು. ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ನಡುವೆ ವಾಗ್ವಾದವೂ ನಡೆಯಿತು.

ಶಾಸಕರ ಮನೆಗೆ ಮುತ್ತಿಗೆ ಹಾಕಲು ಮುಂದಾಗಿರುವ ಕಾಂಗ್ರೆಸ್ಸಿಗರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಬಿಜೆಪಿ ಕಾರ್ಯಕರ್ತರು ಪಟ್ಟು ಹಿಡಿದರು. ಇದನ್ನು ಕಂಡ ಕಾಂಗ್ರೆಸ್ಸಿಗರು ಬಿಜೆಪಿ ಕಾರ್ಯಕರ್ತರತ್ತ ನುಗ್ಗುವ ಪ್ರಯತ್ನ ನಡೆಸಿದರು. ಆಗಾಗ ಎರಡೂ ಕಡೆ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ನೂಕಾಟ ತಳ್ಳಾಟ ನಡೆಯುತ್ತಲೇಇತ್ತ.

ಪೊಲೀಸರು ಸಮಾಧಾನಪಡಿಸಲು ಯತ್ನಿಸಿದರಾದರು ಪ್ರಯೋಜನವಾಗದ ಕಾರಣ ಅಂತಿಮವಾಗಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಕರೆದೊಯ್ದರು.
ಪ್ರತಿಭಟನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಶಾಸಕ ಸಿಟಿ ರವಿ ಅವರನ್ನು ಅವಾಚ್ಯ ಪದಗಳಿಂದ ನಿಂದಿಸಿದರು. ಇತ್ತ ಬಿಜೆಪಿ ಕಾರ್ಯಕರ್ತರು ಮುಲ್ಲಾ ಸಿದ್ದರಾಮಯ್ಯ, ಹಿಂದು ವಿರೋಧಿ ಎಂದು ಕೂಗುತ್ತಿದ್ದರು. ಕಾಂಗ್ರೆಸ್ ಮುಖಂಡರುಗಳಾದ ರೇಖಾ ಹುಲಿಯಪ್ಪ ಗೌಡ, ಸುಧೀರ್ ಕುಮಾರ್ ಮರೊಳ್ಳಿ, ಇತರರು ಮಾತನಾಡಿ ಸಿದ್ರಾಮುಲ್ಲಾ ಖಾನ್ ಹೇಳಿಕೆಯನ್ನು ಖಂಡಿಸಿದರು. ಪಕ್ಷದ ಮುಖಂಡರುಗಳಾದ ಎಂ.ಎಲ್. ಮೂರ್ತಿ, ಹಿರೇಮಗಳೂರು ಪುಟ್ಟಸ್ವಾಮಿ ಸೇರಿದಂತೆ ಹಲವರು ಭಾಗವಹಿಸಿದ್ದರು.

ಬಿಜೆಪಿ ಪಾಳ್ಯದಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಬೆಳವಾಡಿ ರವೀಂದ್ರ, ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್, ಮಾಜಿ ಅಧ್ಯಕ್ಷ ಪುಷ್ಪರಾಜ್, ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಕೆ.ಪಿ. ವೆಂಕಟೇಶ್ ಇತರರು ಮಾತನಾಡಿ ಸಿದ್ರಾಮುಲ್ಲಾ ಖಾನ್ ಎನ್ನುವ ಶಾಸಕ ಸಿಟಿ ರವಿ ಅವರ ಹೇಳಿಕೆಯನ್ನು ಸಮರ್ಥಿಸಿಕೊಂಡು, ಸಿದ್ದರಾಮಯ್ಯ ಅವರ ಹಿಂದು ವಿರೋಧಿ ನಿಲುವುಗಳನ್ನು ಖಂಡಿಸುವುದಾಗಿ ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಶಾಂತ್ ಖುದ್ದು ಸ್ಥಳದಲ್ಲಿದ್ದು ಪರಿಸ್ಥಿತಿ ನಿಯಂತ್ರಿಸಿದರು. ನಾಲ್ಕೈದು ಮಂದಿ ಸರ್ಕಲ್ ಇನ್ಸ್ಪೆಕ್ಟರ್ಗಳು, ಐದಾರು ಸಬ್ ಇನ್ಸ್ಪೆಕ್ಟರ್ ಸೇರಿದಂತೆ ಬಾರಿ ಬಂದೋಬಸ್ತ್ ಏರ್ಪಡಿಸಲಾಗಿತ್ತು.

Attempt to besiege MLA CT Ravi’s house

About Author

Leave a Reply

Your email address will not be published. Required fields are marked *

You may have missed