September 19, 2024

ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲನ್ನು ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆಧ್ಯತೆ ನೀಡಬೇಕಿದೆ

0

ಚಿಕ್ಕಮಗಳೂರುಎಕ್ಸ್‌ಪ್ರೆಸ್- ಕರ್ನಾಟಕದ ಅತೀ ಎತ್ತರದ ಶಿಖರ, ಹಾಗೂ ಪರಿಸರ ಸೂಕ್ಷ್ಮ ಪ್ರಕೃತಿ ತಾಣಗಳನ್ನು ಒಳಗೊಂಡ ಮುಳ್ಳಯ್ಯನಗಿರಿ, ಚಂದ್ರದ್ರೋಣ ಪರ್ವತ ಸಾಲನ್ನು ಅನಿಯಂತ್ರಿತ ಪ್ರವಾಸೋದ್ಯಮದಿಂದ ಮುಕ್ತಗೊಳಿಸಿ, ಪರಿಸರ ಸ್ನೇಹಿ ಪ್ರವಾಸೋದ್ಯಮಕ್ಕೆ ಆಧ್ಯತೆ ನೀಡಬೇಕಿದೆ ಎನ್ನುವ ಒತ್ತಾಯ ಕೇಳಿಬಂದಿದೆ.

ತಪ್ಪಲಿನ ಪರಿಸರಕ್ಕೆ ಧಕ್ಕೆ ತರುತ್ತಿರುವ ಅಂಶಗಳತ್ತ ಈ ಕೂಡಲೇ ಗಮನಹರಿಸಿ ಅವುಗಳ ನಿಯಂತ್ರಣಕ್ಕೆ ಕಠಿಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪರಿಸರಾಸಕ್ತರು ಆಗ್ರಹಿಸಿದ್ದಾರೆ.

ಪ್ರಮುಖವಾಗಿ ಕೈಮರ ಚೆಕ್ ಪೋಸ್ಟ್, ಕವಿಕಲ್ ಗಂಡಿ ಹಾಗೂ ಹೊನ್ನಮ್ಮನಹಳ್ಳಗಳ ಬಳಿ ಸಾರ್ವಜನಿಕ ಶೌಚಾಲಲಯಗಳನ್ನು ಸ್ಥಾಪಿಸಲೇ ಬೇಕಿದೆ. ಪ್ರತಿದಿನ ಸಂಜೆ ೬ ಗಂಟೆಯಿಂದ ಬೆಳಗಿನ ಜಾವ ೬ ಗಂಟೆ ವರೆಗೆ ಗಿರಿ ಭಾಗಕ್ಕೆ ಪ್ರವಾಸಿ ವಾಹನಗಳಿಗೆ ಪ್ರವೇಶಾವಕಾಶವಿಲ್ಲದ ಕಾರಣ ತಮಿಳುನಾಡು, ಆಂಧ್ರಪ್ರದೇಶ ಇತರೆಡೆಯಿಂದ ಬರುವ ಪ್ರವಾಗರು ವಾಹನಗಳಲ್ಲೇ ರಾತ್ರಿ ಕಳೆಯುತ್ತಾರೆ. ಈ ಪೈಕಿ ಬಹುತೇಕರು ಕೈಮರದ ಸುತ್ತಮುತ್ತ ಪ್ರದೇಶದಲ್ಲೇ ಬಹಿರ್ದೆಸೆಗೆ ಹೋಗುತ್ತಿರುವುದರಿಂದ ಪರಿಸರ ಹಾಳಾಗುತ್ತಿದೆ. ಸ್ಥಳೀಯ ನಿವಾಸಿಗಳು ತೀವ್ರ ತೊಂದರೆ ಅನುಭವಿಸುವಂತಾಗಿದೆ ಎನ್ನುವ ದೂರುಗಳು ಕೇಳಿಬಂದಿವೆ.

ಈ ಕಾರಣಕ್ಕೆ ಕೈಮರ ಸೇರಿದಂತೆ ದತ್ತಪೀಠ, ಮುಳ್ಳಯ್ಯನಗಿರಿ ಮಾರ್ಗದಲ್ಲಿ ಹಣ ಪಾವತಿಸಿ ಬಳಸುವಂತಹ ಸಾರ್ವಜನಿಕ ಶೌಚಾಲಯಗಳನ್ನು ಸ್ಥಾಪಿಸಬೇಕೆಂಬ ಆಗ್ರಹ ಕೇಳಿಬಂದಿದೆ.

ಕವಿಕಲ್ ಗಂಡಿ ಬಳಿ ಕಸ ಸಂಗ್ರಹಣೆಗೆಂದು ಸ್ಥಳೀಯಾಡಳಿತ ಇರಿಸಿದ್ದ ಕಸದ ತೊಟ್ಟಿಗಳನ್ನು ಕಿಡಿಗೇಡಿಗಳು ಹಾಳುಗೆಡವಿದ್ದಾರೆ. ಅಲ್ಲಿ ಹೊಸದಾಗಿ ಕಸದ ತೊಟ್ಟಿಗಳನ್ನು ಇಡಬೇಕಿದೆ. ಇದೇ ರೀತಿ ಗಿರಿ ಮಾರ್ಗದಲ್ಲಿ ಕನಿಷ್ಠ ೨ ಕಿ.ಮೀ.ಗೆ ಒಂದರಂತೆ ಕಸದ ತೊಟ್ಟಿಗಳನ್ನು ಇಟ್ಟು, ವಾರಕ್ಕೆರಡು ಬಾರಿಯಾದರೂ ಘನತ್ಯಾಜ್ಯ ವಿಲೇವಾರಿ ಮಾಡಬೇಕಿದೆ.

ಹೊರಗಿನಿಂದ ದ್ವಿಚಕ್ರ ವಾಹನ ಹಾಗೂ ಕಾರುಗಳಲ್ಲಿ ಬರುವ ಕೆಲವು ಪ್ರವಾಸಿಗರು ವಾಹನದ ಸೈಲೆನ್ಸರ್ ಕರ್ಕಶ ಶಬ್ಧ ಬರುವಂತೆ ಪರಿವರ್ತಿಸಿಕೊಂಡು ಬರುತ್ತಿರುವುದರಿಂದ ಗಿರಿ ಭಾಗದಲ್ಲಿ ಶಬ್ಧ ಹಾಗೂ ವಾಯು ಮಾಲಿನ್ಯಕ್ಕೆ ಕಾರಣವಾಗುತ್ತಿದೆ. ಇದರಿಂದ ಪ್ರಶಾಂತ ವಾತಾವರಣ ಕಲುಷಿತವಾಗುತ್ತಿದೆ ಹಾಗೂ ಪ್ರಾಣಿ, ಪಕ್ಷಿಗಳಿಗೂ ಅಡಚಣೆ ಉಂಟಾಗುತ್ತಿದೆ. ಇಂತಹ ವಾಹನಗಳು ಕೈಮರ ಪ್ರವೇಶಿಸುವ ಮುನ್ನವೇ ಪೊಲೀಸರು ಮಾರ್ಗಮಧ್ಯೆ ತಡೆದು ದಂಡ ವಿಧಿಸುವ ಜೊತೆಗೆ ಅಂತಹವರನ್ನು ಹಿಂದಕ್ಕೆ ಕಳಿಸಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಗಿರಿಪ್ರದೇಶದಲ್ಲಿ ವರ್ಷ ಪೂರ್ತಿ ಕಾಣಬಹುದಾಗಿದ್ದ ನೀರಿನ ಒರತೆ ಹಾಗೂ ಬುಗ್ಗೆಗಳನ್ನು ಇತ್ತೀಚಿನ ವರ್ಷಗಳಲ್ಲಿ ಕಾಣಲಾಗುತ್ತಿಲ್ಲ. ಮಳೆ ನೀರನ್ನು ಹಿಡಿದಿಡುವ ಅಪರೂಪದ ಹುಲ್ಲುಗಾವಲು ಪ್ರತಿ ವರ್ಷ ಕೃತಕ ಬೆಂಕಿಗೆ ಸಿಕ್ಕಿ ದೊಡ್ಡ ಪ್ರಮಾಣದಲ್ಲಿ ಸುಟ್ಟುಹೋಗುತ್ತಿರುವುದು ಇದಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಪ್ರತಿ ವರ್ಷ ನವೆಂಬರ್‌ನಿಂದಲೇ ಬೆಂಕಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕಡೆ ಗಮನ ಹರಿಸಬೇಕಾಗಿದೆ.

ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ಸಂಘಟನೆಗಳು ಹಾಗೂ ಪದಾಧಿಕಾರಿಗಳನ್ನು ಪ್ರತಿವರ್ಷ ಪರಿಸರ ದಿನಾಚರಣೆ ಸಂದರ್ಭದಲ್ಲಿ ಗುರುತಿಸಿ ಗೌರವಿಸುವ ಮೂಲಕ ಒಂದಷ್ಟು ಪ್ರೋತ್ಸಾಹ ನೀಡುವ ಕಾರ್ಯವೂ ಜಿಲ್ಲಾಡಳಿತ, ಸರ್ಕಾರದಿಂದಾಗಬೇಕು ಎನ್ನುವ ಅಭಿಪ್ರಾಯಗಳೂ ವ್ಯಕ್ತವಾಗಿದೆ.

ಗಿರಿ ಭಾಗದ ಪ್ರಕೃತಿ ತಾಣಗಳಲ್ಲಿ ಬಹಿರಂಗವಾಗಿ ಮದ್ಯದ ಪಾರ್ಟಿಗಳನ್ನು ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ಕೊಡಬಾರದು. ಹೋಂಸ್ಟೇ, ರೆಸಾರ್ಟ್‌ಗಳಿಗೆ ಮಾತ್ರ ಇದು ಸೀಮಿತವಾಗಬೇಕು. ಬಹುತೇಕರು ಮಾರ್ಗಮಧ್ಯೆ ಅಲ್ಲಲ್ಲಿ ವಾಹನಗಳನ್ನು ನಿಲ್ಲಿಸಿಕೊಂಡು ಮದ್ಯ ಸೇವಿಸಿ ಮೋಜು ಮಸ್ತಿ ಮಾಡುತ್ತಿದ್ದು, ಅದಕ್ಕೆ ಕಡಿವಾಣ ಹಾಕಬೇಕಾಗಿದೆ.ಗುರುವೇಶ್, ಸಂಚಾಲಕರು ಚಂದ್ರದ್ರೋಣ ತಪ್ಪಲು ಸಂರಕ್ಷಣಾ ಸಮಿತಿ

Prioritize eco-friendly tourism

About Author

Leave a Reply

Your email address will not be published. Required fields are marked *

You may have missed