September 19, 2024

ಹಸಿರು ಕ್ರಾಂತಿಯ ಮೂಲ ಪುರುಷ ರೇಣುಕ ಭಗವತ್ಪಾದರು

0

ಚಿಕ್ಕಮಗಳೂರುಎಕ್ಸ್‌ಪ್ರೆಸ್- ಹಸಿರು ಕ್ರಾಂತಿ ಮೂಲ ಪುರುಷರು ರೇಣುಕ ಭಗವತ್ಪಾದರು. ಪರಿಸರಕ್ಕೆ ಪೂರಕವಾದ ಬದುಕನ್ನು ಸಿದ್ಧಾಂತ ಶಿಖಾಮಣಿ ಪ್ರತಿಪಾದಿಸುತ್ತದೆ ಎಂದು ಬಾಳೆಹೊನ್ನೂರಿನ ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರುಗಳು ನುಡಿದರು.

ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಆಯೋಜಿಸಿದ್ದ ’ವಿಶ್ವ ಪರಿಸರ ದಿನ’ ಕಾರ್ಯಕ್ರಮದಲ್ಲಿ ಹಲಸಿನ ಸಸಿಗಳನ್ನು ವಿತರಿಸುವ ಮೂಲಕ ನಗರದಲ್ಲಿ ಮಂಗಳವಾರ ಸಂಜೆ ಚಾಲನೆ ನೀಡಿ ಅವರು ಆಶೀರ್ವಚನ ನೀಡಿದರು. ಉತ್ತುವ, ಬಿತ್ತುವ, ಉಡುವ, ನಡೆವ ಆರಾಧಿಸುವುದು ಸೇರಿದಂತೆ ನೊರೆಂಟು ಕ್ರಿಯಾ ಕ್ರಾಂತಿಗಳನ್ನು ಮಾಡುವ ಮಾನವ ಕುಲದ ಮಹಾಮೇರು ವ್ಯಕ್ತಿತ್ವವುಳ್ಳ ಆದಿ ರೇಣುಕರು ಹಸಿರು ಕ್ರಾಂತಿಯ ಮೂಲ ಪುರುಷರೆಂದು ಪ್ರತಿಪಾದಿಸಿದರು. ಆದಿ ರೇಣುಕ ಭಗವತ್ಪಾದರು

ಕೊಲನಪಾಕಿಯಲ್ಲಿ ಆವೀರ್ಭವಿಸಿ ಸಸ್ಯಶ್ಯಾಮಲೆಯಿಂದ ಆವೃತವಾದ ಮಲಯಾಚಲ ತಪೋ ಭೂಮಿಯಲ್ಲಿ ಅಗಸ್ತ್ಯರಿಗೆ ಧರ್ಮಸಿದ್ಧಾಂತ ಬೋಧಿಸಿದ್ದು ಇತಿಹಾಸ. ಹಸಿರು ವನಸಿರಿಯ ನಡುವಿನ ಸಂವಾದ ರೂಪಿ ಕಾವ್ಯ ’ಸಿದ್ಧಾಂತ ಶಿಖಾಮಣಿ’ಯಲ್ಲಿ ಸಹಜವಾಗಿಯೆ ಪರಿಸರ ಕಾಳಜಿಯೂ ವ್ಯಕ್ತವಾಗಿದೆ. ಪಂಚ ಭೂತಗಳನ್ನು ಆರಾಧಿಸುವ ಮೂಲಕ ಪರಿಸರ-ಪ್ರಕೃತಿ ಸಮತೋಲನ ಕಾಪಾಡುವ ದೈವವನ್ನು ನೆನಪಿಸಿಕೊಳ್ಳಲಾಗುತ್ತಿದೆ ಎಂದರು.

ವೇದ-ಮಂತ್ರಗಳಲ್ಲಿ ಪ್ರಕೃತಿಯ ಆರಾಧನೆ ಧಾರಾಳವಾಗಿದೆ. ವಿಜ್ಞಾನದಂತೆ ಧರ್ಮ ಶಾಸ್ತ್ರವೂ ಪರಿಸರ ಸಂರಕ್ಷಣೆಯನ್ನು ಪ್ರತಿಪಾದಿಸಿದೆ. ಜಲ, ನೆಲ, ವನ, ಜೀವ ವೈವಿಧ್ಯ ಕಾಪಾಡುವುದರ ಜೊತೆಗೆ ಮಾಲಿನ್ಯ ನಿಯಂತ್ರಣದ ಬಗ್ಗೆಯೂ ಜಾಗೃತಿ ವಹಿಸಬೇಕು. ಗಿಡ ನೆಡುವುದರ ಜೊತೆಗೆ ನೀರು, ನೆರಳು, ಆಸರೆ ನೀಡಿ ಅದು ಚೆನ್ನಾಗಿ ಬೆಳೆಯುವಂತೆ ಕಾಳಜಿ ವಹಿಸಬೇಕು. ಪರಿಸರ ಸಂರಕ್ಷಣೆಯೂ ದೈವಿಕ ಕಾರ್‍ಯಗಳಲ್ಲೊಂದು ಎಂದ ರಂಭಾಪುರಿ ಜಗದ್ಗುರುಗಳು ಹಲವಾರು ವರ್ಷಗಳಿಂದ ಚಿಕ್ಕಮಗಳೂರಿನಲ್ಲಿ ಮಾಧ್ಯಮ ಸಂಸ್ಕೃತಿ ಪ್ರತಿಷ್ಠಾನ ಪರಿಸರ ಕಾಳಜಿಯ ಕಾರ್ಯ ನಿರ್ವಹಿಸಿಕೊಂಡು ಬಂದಿದೆ. ಜಗದ್ಗುರುಗಳವರ ಹಸಿರು ಪಾದಯಾತ್ರೆ, ವೃಕ್ಷಾರೋಪಣ, ಸಸಿ ವಿತರಣೆಯ ಪುಣ್ಯ ಕಾರ್‍ಯವನ್ನು ಮಾಡಿಕೊಂಡು ಬಂದಿರುವುದು ಸಮಾಜಕ್ಕೊಂದು ಆದರ್ಶ ಎಂದು ಶ್ಲಾಘಿಸಿದರು.

ಮಾಧ್ಯಮ ಸಂಸ್ಕ್ರತಿ ಪ್ರತಿಷ್ಠಾನದ ಅಧ್ಯಕ್ಷ ಪ್ರಭುಲಿಂಗಶಾಸ್ತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ ಪಂಚ ಪೀಠಗಳಲ್ಲಿ ಮೊದಲನೆಯದಾದ ಶ್ರೀ ಜಗದ್ಗುರು ರಂಭಾಪುರಿ ಪೀಠ ಪೃಥ್ವಿ ತತ್ತ್ವವನ್ನು ಜಗತ್ತಿಗೆ ಸಾರುತ್ತಿದೆ. ಇದರ ಒಡೆಯರಾದ ಪೂಜ್ಯ ಜಗದ್ಗುರುಗಳ ಸಾನ್ನಿಧ್ಯದಲ್ಲಿ ಪ್ರತಿ ವರ್ಷ ಪರಿಸರ ದಿನವನ್ನು ನಗರದಲ್ಲಿ ಸಂಭ್ರಮಿಸಲಾಗುತ್ತಿದೆ. ಕಲ್ಯಾಣನಗರ, ವಿಕಾಸನಗರ, ಉಪ್ಪಳ್ಳಿ, ರತ್ನಗಿರಿ ಬೋರೆ ಬಡಾವಣೆ ಸೇರಿದಂತೆ ನಗರದ ವಿವಿಧೆಡೆ ಪೂಜ್ಯರು ವಿತರಿಸಿದ ಗಿಡಗಳು ಚೆನ್ನಾಗಿ ಬೆಳೆದು ನಿಂತಿರುವುದು ಸಂತಸದ ಸಂಗತಿ ಎಂದರು.

ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿ, ಬೇರುಗಂಡಿ ಬೃಹನ್ಮಠದ ರೇಣುಕ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಶಂಕರದೇವರಮಠದ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಪಾಲ್ಗೊಂಡಿದ್ದರು.

ಜಿಲ್ಲಾ ಪತ್ರಕರ್ತರ ಸಂಘದ ಕಾರ್‍ಯದರ್ಶಿ ಅಶೋಕ ಕುಮಾರ್ ಸ್ವಾಗತಿಸಿ, ಪ್ರತಿಷ್ಠಾನದ ಕಾರ್‍ಯದರ್ಶಿ ಸುಮಿತ್ರಾ ಶಾಸ್ತ್ರಿ ವಂದಿಸಿದರು. ಶೈಲಾ ಬಸವರಾಜ ಪರಿಸರ ಗೀತೆ ಹಾಡಿದರು. ಮುಗ್ತಿಹಳ್ಳಿ ಸಿದ್ದಲಿಂಗೇಶ್ವರ, ನಂದಿಕೆರೆ ಮಂಜುನಾಥ್, ಶ್ರೀ ಜಗದ್ಗುರು ರೇಣುಕಾಚಾರ್ಯ ಟ್ರಸ್ಟ್ ಕಾರ್‍ಯದರ್ಶಿ ಮಲ್ಲಿಕಾರ್ಜುನ, ಖಜಾಂಚಿ ಬಸವರಾಜಣ್ಣ, ಟ್ರಸ್ಟಿ ಸೋಮಶೇಖರ್, ಶ್ರೀ ಪಾರ್ವತಿ ಮಹಿಳಾ ಮಂಡಳಿಯ ಕಾರ್‍ಯದರ್ಶಿ ಭವಾನಿ ವಿಜಯಾನಂದ, ಖಜಾಂಚಿ ಸೌಭಾಗ್ಯ ಜಯಣ್ಣ, ಅಕ್ಕಮಹಾದೇವಿ ಮಹಿಳಾ ಸಂಘದ ಉಪಾಧ್ಯಕ್ಷರಾದ ಪಾರ್ವತಿ, ರೇಣುಕಾ ಕುಮಾರ್ ಮತ್ತಿತರರು ಉಪಸ್ಥಿರಿದ್ದರು.

Renuka Bhagwatpada was the original man of Green Revolution

About Author

Leave a Reply

Your email address will not be published. Required fields are marked *

You may have missed