September 19, 2024

Donate blood and save lives: ರಕ್ತದಾನ ಮಾಡಿ ಜೀವ ಉಳಿಸಿ

0
ವಿಶ್ವ ರಕ್ತದಾನಿಗಳ ದಿನ - ೨೦೨೩ ಕಾರ್ಯಕ್ರಮ

ವಿಶ್ವ ರಕ್ತದಾನಿಗಳ ದಿನ - ೨೦೨೩ ಕಾರ್ಯಕ್ರಮ

ಚಿಕ್ಕಮಗಳೂರು: ರಕ್ತವು ಮಾನವನ ದೇಹದ ಉಳಿವಿಗೆ ಹಾಗೂ ಬೆಳವಣಿಗೆಗೆ ಅತ್ಯಂತ ಅವಶ್ಯಕವಾದ ವಸ್ತುವಾಗಿದೆ, ಏನಾದರೂ ಅವಘಡಗಳು ಸಂಭವಿಸಿದಾಗ ಜೀವಕ್ಕೆ ಅಪಾಯ ಇರುತ್ತದೆ. ಅಂತಹ ಸಂದರ್ಭದಲ್ಲಿ ರಕ್ತದಾನ ಮಾಡುವ ಮೂಲಕ ಜೀವ ಉಳಿಸಬೇಕು ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಸೋಮ ಎ.ಎಸ್. ಹೇಳಿದರು.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕ, ಐ.ಡಿ.ಎಸ್.ಜಿ. ಸರ್ಕಾರಿ ಪದವಿ ಪೂರ್ವ ಕಾಲೇಜು ಹಾಗೂ ಕರ್ನಾಟಕ ರಾಜ್ಯ ಏಡ್ಸ್ ನಿಯಂತ್ರಣ ಸಂಸ್ಥೆ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ನಗರದ ಐ.ಡಿ.ಎಸ್.ಜಿ ಪದವಿ ಪೂರ್ವ ಕಾಲೇಜಿನಲ್ಲಿ ಇಂದು ಹಮ್ಮಿಕೊಳ್ಳಲಾಗಿದ್ದ ವಿಶ್ವ ರಕ್ತದಾನಿಗಳ ದಿನ – ೨೦೨೩ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅನ್ನದಾನ, ವಿದ್ಯಾದಾನದಂತೆ ರಕ್ತದಾನವು ಕೂಡ ಶ್ರೇಷ್ಠವಾದ ದಾನವಾಗಿದೆ, ಭಾರತ ಹಳ್ಳಿಗಳ ದೇಶ ಅಪಘಾತ ಅಥವಾ ಬೇರಾವುದೆ ಸಂದರ್ಭದಲ್ಲಿ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸುವಾಗ ಮರಣ ಹೊಂದಿರುವುದನ್ನು ಕಾಣುತ್ತೇವೆ. ಆ ವ್ಯಕ್ತಿಗೆ ತಕ್ಷಣ ಅವರಿಗೆ ಬೇಕಾದ ರಕ್ತವನ್ನು ನೀಡಿದರೆ ಪ್ರಾಣಾಪಾಯದಿಂದ ಬದುಕಿ ಉಳಿಯುತ್ತಾರೆ. ಇದರಿಂದ ರಕ್ತದಾನ ಮಾಡುವ ಮೂಲಕ ಮತ್ತೊಬ್ಬರ ಪ್ರಾಣವನ್ನು ಉಳಿಸಿದಂತಾಗುತ್ತದೆ ಎಂದ ಅವರು ಇಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೆಡ್ ಕ್ರಾಸ್ ಸಂಸ್ಥೆ ಸೇರಿದಂತೆ ವಿವಿಧ ರಕ್ತ ನಿಧಿ ಕೇಂದ್ರದಲ್ಲಿ ಅಪಘಾತವಾದ ಅಥವಾ ಬೇರಾವುದೆ ಅನಾರೋಗ್ಯ ಪೀಡಿತ ವ್ಯಕ್ತಿಗೆ ಬೇಕಾದಂತಹ ರಕ್ತ ಸಿಗುತ್ತದೆ. ಆರೋಗ್ಯವಂತ ವ್ಯಕ್ತಿ ಎಷ್ಟು ಬಾರಿಯಾದರೂ ರಕ್ತದಾನ ಮಾಡಬಹುದು ಎಂದರು.

ಸಾರ್ವಜನಿಕರು ರಸ್ತೆ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಚಾಲನ ಪರವಾನಗಿ ವಾಹನ ವಿಮೆ ಮುಂತಾದ ದಾಖಲೆಗಳನ್ನು ಹೊಂದಿರಬೇಕು, ಚಾಲನ ಪರವಾನಗಿ ಇಲ್ಲದೇ ವಾಹನ ಚಾಲನೆ ಮಾಡಬಾರದು ರಸ್ತೆ ಮಧ್ಯದಲ್ಲಿ ಅಪಘಾತವಾದರೆ ಅಥವಾ ಬೇರಾವುದೆ ಅನಾಹುತಗಳಾದರೆ ಮಾನವೀಯ ದೃಷ್ಠಿಯಿಂದ ಅಂತಹವರನ್ನು ಆಸ್ಪತ್ರೆಗೆ ಸೇರಿಸುವ ಮೂಲಕ ಜೀವ ಉಳಿಸಲು ನೇರವಾಗ ಬೇಕೆಂದು ತಿಳಿಸಿದರು.

ಮಲ್ಲೇಗೌಡ ಆಸ್ಪತ್ರೆಯ ರಕ್ತ ಕೇಂದ್ರದ ಹಿರಿಯ ತಜ್ಞ ಡಾ. ಎನ್. ಮುರಳೀಧರ ಮಾತನಾಡಿ ರಕ್ತದ ಗುಂಪುಗಳ ವರ್ಗೀಕರಣ ಮತ್ತು ಅದನ್ನು ವಿಂಗಡಿಸುವ ಬಗೆಯನ್ನು ಕಂಡು ಹಿಡಿದ ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಜನ್ಮ ದಿನವನ್ನು ವಿಶ್ವ ರಕ್ತದಾನ ದಿನವನ್ನಾಗಿ, ರಕ್ತದಾನದ ಮಹತ್ವದ ಬಗೆಗೆ ಜನರಲ್ಲಿ ಜಾಗೃತಿ ಮೂಡಿಸುವ ರಕ್ತದಾನಕ್ಕೆ ಪ್ರೇರಣೆ ನೀಡುವ ಮತ್ತು ರಕ್ತದಾನಿಗಳಿಗೆ ಗೌರವ ಸಲ್ಲಿಸುವ ಉದ್ದೇಶದಿಂದ ಪ್ರತಿ ವರ್ಷ ಜೂನ್ ೧೪ ರಂದು ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ ಎಂದ ಅವರು ಮೊದಲ ಬಾರಿಗೆ ೨೦೦೪ರ ಜೂನ್ ೧೪ ರಂದು ವಿಶ್ವ ಆರೋಗ್ಯ ಸಂಸ್ಥೆ ಮತ್ತು ಅದರ ಅಂಗ ಸಂಸ್ಥೆಗಳು ರಕ್ತದಾನಿಗಳ ದಿನವನ್ನು ಆಚರಿಸಲು ಪ್ರಾರಂಭಿಸಿದವು. ಬಳಿಕ ನಿರಂತರವಾಗಿ ಪ್ರತಿ ವರ್ಷ ವಿಶ್ವ ರಕ್ತದಾನಿಗಳ ದಿನವನ್ನು ಆಚರಿಸಲಾಗುತ್ತಿದೆ ಎಂದರು.

ರಕ್ತದಾನ ಮಾಡುವುದರಿಂದ ಹೊಸ ರಕ್ತ ಕಣಗಳು ಉತ್ಪತ್ತಿಯಾಗಿ, ರಕ್ತದಲ್ಲಿನ ಕೊಲೆಸ್ಟರಾಲ್ ಪ್ರಮಾಣ ಕಡಿಮೆಯಾಗಿ ರಕ್ತದೊತ್ತಡ ಹಾಗೂ ಹೃದಯಾಘಾತ ಉಂಟಾಗುವ ಸಂಭವ ಕಡಿಮೆಯಾಗುತ್ತದೆ. ಕಿಡ್ನಿ ತೊಂದರೆಗಳು, ಮೆದುಳಿನ ರಕ್ತಸ್ರಾವದಿಂದಾಗುವ ಮೃತ್ಯು ಮತ್ತು ಇನ್ನಿತರ ಖಾಯಿಲೆಗಳಿಂದ ದೂರವಿರಬಹುದಾಗಿದೆ ಎಂದು ಹೇಳಿದರು.

ರಕ್ತದಾನದ ಬಗ್ಗೆ ಬಹಳಷ್ಟು ಜನರಲ್ಲಿ ತಪ್ಪು ಕಲ್ಪನೆಗಳಿವೆ, ರಕ್ತದಾನದ ಮಹತ್ವವನ್ನು ಎಲ್ಲಾರಿಗೂ ತಿಳಿಸುವುದು, ಜಾಗೃತಿ ಮೂಡಿಸುವುದು ಮತ್ತು ಅವರಲ್ಲಿರುವ ತಪ್ಪು ಕಲ್ಪನೆಯನ್ನು ಹೋಗಲಾಡಿಸಲಾಗುವುದು, ರಕ್ತದಾನಿಗಳನ್ನು ಗುರುತಿಸಿ ಅಭಿನಂದಿಸಿ ಸನ್ಮಾನಿಸುವುದು ಈ ದಿನದ ಹಿನ್ನಲೆಯಾಗಿದೆ ಎಂದು ತಿಳಿಸಿದರು. ಐ.ಡಿ.ಎಸ್.ಜಿ. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರಮೇಶ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಅರ್ಥಶಾಸ್ತ್ರ ಉಪನ್ಯಾಸಕ ಕೆ.ಎನ್. ಲಕ್ಷ್ಮೀಕಾಂತ ಜಿಲ್ಲಾ ಏಡ್ಸ್ ತಡೆಗಟ್ಟುವ ಮತ್ತು ನಿಯಂತ್ರಣ ಘಟಕದ ಅಧಿಕಾರಿ ಡಾ. ಬಾಲಕೃಷ್ಣ, ಎಂ.ಎಸ್.ಎಸ್. ಘಟಕದ ಅಧಿಕಾರಿ ಬಾಲಕೃಷ್ಣ, ರಾಜುನರಸಯ್ಯ ಮುಂತಾದವರಿದ್ದರು.

Donate blood and save lives

About Author

Leave a Reply

Your email address will not be published. Required fields are marked *

You may have missed