September 19, 2024

Vishva Hindu Parishad-Bazarandal road block and protest: ವಿಶ್ವಹಿಂದೂ ಪರಿಷತ್-ಬಜರಂದಳ ರಸ್ತೆತಡೆ ನಡೆಸಿ ಪ್ರತಿಭಟನೆ

0
ವಿಶ್ವಹಿಂದೂ ಪರಿಷತ್-ಬಜರಂದಳ ರಸ್ತೆತಡೆ ನಡೆಸಿ ಪ್ರತಿಭಟನೆ

ವಿಶ್ವಹಿಂದೂ ಪರಿಷತ್-ಬಜರಂದಳ ರಸ್ತೆತಡೆ ನಡೆಸಿ ಪ್ರತಿಭಟನೆ

ಚಿಕ್ಕಮಗಳೂರು: ಗೋಹತ್ಯೆ ನಿಷೇಧ ಹಾಗೂ ಮತಾಂತರ ನಿಷೇಧ ಕಾನೂನನ್ನು ವಾಪಾಸ್ ಪಡೆಯುವ ಮೂಲಕ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ಸಮಾಜವನ್ನು ಬಲಿಕೊಡಲು ಹೊರಟಿದೆ ಎಂದು ಆರೋಪಿಸಿ ವಿಶ್ವಹಿಂದೂ ಪರಿಷತ್, ಬಜರಂದಗಳ ಸಂಘಟನೆ ಕಾರ್ಯಕರ್ತರು ಶುಕ್ರವಾರ ನಗರದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು.

ನಗರದ ಹನುಮಂತಪ್ಪ ವೃತ್ತದಲ್ಲಿ ಕಾಂಗ್ರೆಸ್ ಸರ್ಕಾರ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದ ಕಾರ್ಯಕರ್ತರು ಸರ್ಕಾರ ಅಧಿಕಾರಕ್ಕೆ ಬಂದ ಹದಿನೈದೇ ದಿನದಲ್ಲಿ ಮುಸ್ಲಿಮರ ತುಷ್ಟೀಕರಣಕ್ಕೆ ಮುಂದಾಗಿದೆ ಎಂದು ದೂರಿದರು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ವಿಶ್ವಹಿಂದೂ ಪರಿಷತ್ ಸಹಕಾರ್ಯದರ್ಶಿ ರಂಗನಾಥ್, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ತಮ್ಮ ಚಟಕ್ಕಾಗಿ ಹಿಂದೂ ಸಮಾಜವನ್ನು ಬಲಿಕೊಡಲು ಮುಂದಾಗಿದ್ದಾರೆ. ಸುಳ್ಳು ಭರವಸೆ, ಪೊಳ್ಳು ಮಾತುಗಳನ್ನು ಆಡಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ಅವರು ಸತ್ಯವನ್ನೇ ಹೇಳಿದ್ದರೆ ಕೇವಲ ೧೫ ಸ್ಥಾನಕ್ಕೆ ಇಳಿಯುತ್ತಿದ್ದರು. ಇದೀಗ ಹಿಂದೂಗಳನ್ನು ತುಳಿದು ಮುಸ್ಲಿಮರ ಅಟ್ಟಹಾಸಕ್ಕೆ ದಾರಿಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

ಎಲ್ಲಿ ಮತಾಂತರ ನಡೆಯುತ್ತದೆ ಅಲ್ಲಿಗೆ ಬಜರಂಗದಳ ಹೋಗೇ ಹೋಗುತ್ತದೆ. ಅದನ್ನು ತಡೆದೇ ತಡೆಯುತ್ತದೆ. ಲವ್ ಜಿಹಾದ್, ಭಯೋತ್ಪಾಧನೆಗಳನ್ನೂ ತಡೆಯುತ್ತೇವೆ ಎಂದು ಹೇಳಿದರು.

ಸರ್ಕಾರದ ಈ ಧೋರಣೆಯಿಂದ ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗುತ್ತದೆ. ಅಮಾಯಕ ಹಿಂದೂಗಳನ್ನು ಕ್ರಿಶ್ಚಿಯನ್ ಮಿಷನರಿಗಳು ಆಮಿಷಗಳ ಮೂಲಕ ಮತ್ತು ಮುಸ್ಲಿಮರು ಲವ್ ಜಿಹಾದ್ ಮೂಲಕ ಮತಾಂತರ ಮಾಡಲಿದ್ದಾರೆ. ಅದನ್ನು ತಡೆಯುವ ಉದ್ದೇಶದಿಂದ ಬಿಜೆಪಿ ಜಾರಿಗೆ ತಂದ ಕಾಯಿದೆಯನ್ನು ಕಾಂಗ್ರೆಸ್ ಹಿಂದೆ ಪಡೆಯುವ ಕೆಟ್ಟ ಹುನ್ನಾರಕ್ಕೆ ಕೈ ಹಾಕಿದೆ ಎಂದು ಆರೋಪಿಸಿದರು.

ಬಜರಂಗದಳ ನಗರ ಸಂಯೋಜಕ ಶ್ಯಾಂ ವಿ.ಗೌಡ ಮಾತನಾಡಿ, ಗೋಹತ್ಯೆ, ಮತಾಂತರ ನಿಷೇಧ ಕಾಯ್ದೆ ಹಿಂದಕ್ಕೆ ಪಡೆದಿರುವ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಷಡ್ಯಂತ್ರಗಳನ್ನು ಜಾರಿಗೆ ತರಲು ಹೊರಟಿದೆ. ಸರ್ಕಾರ ತಕ್ಷಣ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಆಗ್ರಹಿಸಿದರು.

ಯುವ ಮೋರ್ಚಾ ಜಿಲ್ಲಾಧ್ಯಕ್ಷ ಸಂತೋಷ್ ಕೋಟ್ಯಾನ್ ಮಾತನಾಡಿ, ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣದ ಮೂಲಕ ಹಿಂದೂಗಳಿಗೆ ಅನ್ಯಾಯ ಮಾಡುತ್ತಿದೆ. ಹಿಂದೆ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ಮತಾಂತರ ನಿಷೇಧ ಮತ್ತು ಗೋಹತ್ಯೆ ನಿಷೇಧ ಕಾಯ್ದೆಗಳೆರಡನ್ನೂ ಸಿದ್ದರಾಮಯ್ಯ ಸರ್ಕಾರ ಹಿಂದಕ್ಕೆ ಪಡೆಯುತ್ತಿರುವುದು ಹಿಂದೂಗಳ ಭಾವನೆಗೆ ಧಕ್ಕೆ ತರುವಂತಹದ್ದು, ಅಲ್ಪ ಸಂಖ್ಯಾತರನ್ನು ಓಲೈಸುವುದಷ್ಟೇ ಇದರ ಉದ್ದೇಶವಾಗಿದೆ. ರಾಜ್ಯ ಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಎರಡೂ ಪ್ರಮುಖ ಕಾಯಿದೆಗಳನ್ನು ಮುಂದುವರಿಸಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ವೇಳೆ ರಸ್ತೆ ತಡೆ ನಡೆಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದು ಬಿಡುಗಡೆಗೊಳಿಸಿದರು. ಪ್ರತಿಭಟನೆಯಲ್ಲಿ ಶಶಿ ಆಲ್ದೂರು ಇತರರು ಭಾಗವಹಿಸಿದ್ದರು.

Vishva Hindu Parishad-Bazarandal road block and protest

About Author

Leave a Reply

Your email address will not be published. Required fields are marked *

You may have missed