September 19, 2024

ಕೊಲೆ ಆರೋಪಿಗಳನ್ನು ಬಂಧಿಸದಿರುವ ಬಗ್ಗೆ ಬೇಸತ್ತು ದಯಾಮರಣ ಕೋರಿ ಮನವಿ

0
ಕೊಲೆಯಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮದ್ ಅನ್ವರ್ ಕುಟುಂಬದ ಸದಸ್ಯರು

ಕೊಲೆಯಾದ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹಮದ್ ಅನ್ವರ್ ಕುಟುಂಬದ ಸದಸ್ಯರು

ಚಿಕ್ಕಮಗಳೂರು:  ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ ಕೊಲೆ ಪ್ರಕರಣದ ಆರೋಪಿಗಳನ್ನು ೫ ವರ್ಷ ಕಳೆದರು ಬಂಧಿಸದಿರುವ ಬಗ್ಗೆ ಬೇಸತ್ತು ದಯಾಮರಣ ಕೋರಿ ಮೃತರ ಕುಟುಂಬ ಇಂದು ಅಪರ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿತು.

ಇಂದು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮೃತನ ಸಹೋದರ ಅಬ್ದುಲ್ ಕಬೀರ್ ಕಳೆದ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಗಳು, ಗೃಹ ಸಚಿವರು ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಿ ಆಗ್ರಹಿಸಿದ್ದು ಯಾವುದೇ ಪ್ರಯೋಜನವಾಗಿಲ್ಲ. ನ್ಯಾಯವೂ ಸಿಕ್ಕಿಲ್ಲ ಎಂದು ಆರೊಪಿಸಿದರು.

ರಾಜ್ಯಪಾಲರು ಹಾಗೂ ಮಾನ್ಯ ಘನವೆತ್ತ ರಾಷ್ಟ್ರಪತಿಯವರಿಗೆ ಮೃತರ ಕುಟುಂಬ ದಯಾಮರಣ ಕೋರಿ ಅಪರ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಿದ್ದು, ಕೊಲೆ ಆರೋಪಿಗಳನ್ನು ಬಂಧಿಸಬೇಕು ಇಲ್ಲವಾದರೆ ನಮಗೆ ದಯಾ ಮರಣ ಕೊಡಬೇಕೆಂದು ಆಗ್ರಹಿಸಿದ್ದಾರೆ.

ಕೇಬಲ್ ನೆಟ್‌ವರ್ಕ್ ಉದ್ಯಮಿ ಹಾಗೂ ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಆಗಿದ್ದ ಮಹಮದ್ ಅನ್ವರ್ ಎಂಬುವವರನ್ನು ನಗರದ ಗೌರಿ ಕಾಲುವೆ ಬಡಾವಣೆಯ ಗುಡ್‌ಮಾರ್ನಿಂಗ್ ಶಾಪ್ ಹತ್ತಿರ ದಿ:೨೨-೦೬-೨೦೧೮ ರ ರಾತ್ರಿ ಸುಮಾರು ೯ ರಿಂದ ೯.೩೦ ರ ಸಮಯದಲ್ಲಿ ದುಷ್ಕರ್ಮಿಗಳು ಡ್ರ್ಯಾಗನ್ ಮತ್ತು ಚಾಕುವಿನಿಂದ ೧೫ ಬಾರಿ ಇರಿದು ಬರ್ಬರವಾಗಿ ಕೊಲೆ ಮಾಡಿ, ಇಂದಿಗೆ ೫ ವರ್ಷ ಆಗಿರುತ್ತದೆ ಎಂದು ಹೇಳಿದರು.

ಕೊಲೆ ನಡೆದು ಇಲ್ಲಿಯವರೆಗೆ ಪೋಲೀಸ್ ಇಲಾಖೆ ಅಥವಾ ಈ ಪ್ರಕರಣ ಈಗಾಗಲೇ ಸಿ.ಐ.ಡಿ ವ್ಯಾಪ್ತಿಯಲ್ಲಿದ್ದು, ಇಲ್ಲಿಯವರೆಗೆ ತನಿಖೆ ಮಾಡಿ ಕೊಲೆಗಾರ ಆರೋಪಿಗಳನ್ನು ಪತ್ತೆ ಮಾಡಿ ಬಂಧಿಸುವಲ್ಲಿ ವಿಫಲರಾಗಿರುವುದಿಂದ ನಮ್ಮ ಕುಟುಂಬವು ಕಂಗಾಲಾಗಿ ಚಿಂತಜನಕ ಸ್ಥಿತಿಯಲ್ಲಿದೆ ಎಂದು ತಿಳಿಸಿದರು.

ಕೊಲೆ ನಡೆದ ಸಂದರ್ಭದಲ್ಲಿ ಆ ದಿನ ಪೋಲೀಸ್ ವರಿಷ್ಠಾಧಿಕಾರಿ ಅಣ್ಣಾಮಲೈ ಕರ್ತವ್ಯದಲ್ಲಿದ್ದು, ತದನಂತರ ಬಂದಂತಹ ಹರೀಶ್ ಪಾಂಡೆರವರು ಹಂತಕರನ್ನು ಆದಷ್ಟು ಶೀಘ್ರ ಪತ್ತೆ ಹಚ್ಚಿಕೊಡುವ ಭರವಸೆ ಕೊಟ್ಟಿದ್ದರೆ ವಿನಹ ಭರವಸೆಗಳು ಕೇವಲ ಇಂದಿಗೂ ಭರವಸೆಯಾಗಿಯೇ ಉಳಿದಿದೆ. ನಂತರದಲ್ಲಿ ಬಂದಂತಹ ೨ ಎಸ್.ಪಿ ಅಧಿಕಾರಿಗಳ ಪೈಕಿ ಒಬ್ಬರ ವರ್ಗಾವಣೆಯಾಗಿದ್ದು, ಪ್ರಸ್ತುತ ಇರುವ ಎಸ್.ಪಿ ಅಧಿಕಾರಿಗಳ ಗಮನದಲ್ಲಿ ಸದರಿ ಪ್ರಕರಣವು ಚಾಲ್ತಿಯಲ್ಲಿದೆ ಎಂದು ವಿವರಿಸಿದರು.

ಇಲ್ಲಿಯವರೆಗೆ ಈ ಕೊಲೆ ಸಂಬಂಧ ಪೋಲೀಸ್ ಇಲಾಖೆಗಾಗಲಿ, ಸಿ.ಐ.ಡಿ ಇಲಾಖೆಗಾಗಲಿ ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ವಿಳಂಭವಾಗಿರುವುದಕ್ಕೆ ರಾಜಕೀಯ ಒತ್ತಡವೋ, ಪ್ರಭಾವಿ ಮುಖಂಡರುಗಳ ಕಾಣದ ಕೈವಾಡ ಇರುವಂತೆ ಕಾಣುತ್ತದೆ. ಕಾರಣ ಸದರಿ ಪ್ರಕರಣದ ತನಿಖೆಗೆ ಇಲ್ಲಿಯವರೆಗೆ ನಿಯುಕ್ತಿಗೊಂಡ ಎಲ್ಲರಿಗೂ ಒಂದಲ್ಲ ಒಂದು ರೀತಿಯಲ್ಲಿ ಬೇರೆ ಕಡೆಗೆ ವರ್ಗಾವಣೆ ಮಾಡುತ್ತಾ ಬಂದಿರುತ್ತಾರೆ. ಇದರಿಂದ ಪ್ರತಿ ಸಲವು ನಾವು ಸದರಿ ಪ್ರಕರಣದ ಬಗ್ಗೆ ಹೊಸದಾಗಿ ತನಿಖಾಧಿಕಾರಿಗಳಿಗೆ ವಿವರಣೆಯನ್ನು ನೀಡಿ ನೀಡಿ ಬೇಸತ್ತಿದ್ದೇವೆ ಎಂದು ವಿಷಾದ ವ್ಯಕ್ತಪಡಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಆರ್ ಸಿದ್ದಿಕ್, ನಜೀರ್, ಮೃತರ ಪುತ್ರ ವಾಹಜ್, ಬಬ್ಲು ಉಪಸ್ಥಿತರಿದ್ದರು.

Plea for euthanasia

About Author

Leave a Reply

Your email address will not be published. Required fields are marked *

You may have missed