September 16, 2024

ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ಅಗತ್ಯ

0
ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ

ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆ

ಚಿಕ್ಕಮಗಳೂರು: ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಹಲವು ಕಾನೂನುಗಳಿದ್ದು, ಅವುಗಳ ನಿರ್ದೇಶನದಂತೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಹೆಚ್ಚಿನ ಜಾಗೃತಿ ವಹಿಸುವ ಅಗತ್ಯವಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್. ರಮೇಶ್ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ರಸ್ತೆ ಸುರಕ್ಷತಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಾದ್ಯಂತ ಎಲ್ಲಾ ಪ್ರಮುಖ ರಸ್ತೆಗಳಲ್ಲಿ ಸುರಕ್ಷತಾ ನಿಯಮಗಳ ಬಗ್ಗೆ ಮಾಹಿತಿ ನೀಡುವ ಪ್ರದರ್ಶನ ಫಲಕಗಳನ್ನು ಹಾಗೂ ಅಗತ್ಯವಿರುವ ಕಡೆಗಳಲ್ಲಿ ಸೂಚನಾ ಫಲಕಗಳನ್ನು ಆಳವಡಿಸಬೇಕು. ನಿರಂತರವಾಗಿ ರಸ್ತೆ ಸುರಕ್ಷಿತಾ ನಿಯಮಗಳ ಬಗ್ಗೆ ಅರಿವಿನ ಚಟುವಟಿಕೆಗಳು ನಡೆಯಬೇಕು. ಅಪಘಾತಗಳಿಗೆ ಎಡೆ ಮಾಡಿಕೊಡುವ ಅನಗತ್ಯ ರಸ್ತೆ ಉಬ್ಬುಗಳನ್ನು ತೆಗೆಯಬೇಕು ಹೆಚ್ಚು ಅಪಘಾತಗಳು ನಡೆಯುವ ಸ್ಥಳಗಳಲ್ಲಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಪಾದಾಚಾರಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ರಸ್ತೆ ಅಭಿವೃದ್ಧಿಪಡಿಸಬೇಕು ಎಂದು ತಿಳಿಸಿದರು.

ಮಧ್ಯಪಾನ ಮಾಡಿ ವಾಹನ ಚಲಾಯಿಸುವುದು ಸೀಟ್ ಬೆಲ್ಟ್ ಹಾಕದಿರುವುದು, ಅತಿಯಾದ ವೇಗದಲ್ಲಿ ವಾಹನ ಚಲಾಯಿಸುವುದು, ವಾಹನ ಚಲಾಯಿಸುವಾಗ ಮೊಬೈಲ್ ಫೋನ್ ಬಳಕೆ, ಗುಣಮಟ್ಟದ ಹೆಲ್ಮೆಟ್ ಧರಿಸದೇ ಇರುವುದು ಮತ್ತು ಸರಿಯಾದ ರೀತಿಯಲ್ಲಿ ಹೆಲ್ಮೆಟ್ ಧರಿಸದೇ ಇರುವುದರಿಂದ ಅಪಘಾತಗಳು ಆಗುವ ಸಾಧ್ಯತೆ ಹೆಚ್ಚಿವೆ. ಆದ್ದರಿಂದ ಸಂಭವಿಸುವ ಅಪಘಾತಗಳಲ್ಲಿ ಯಾವ ಕಾರಣದಿಂದ ಹೆಚ್ಚು ಅಪಘಾತಗಳಾಗುತ್ತಿವೆ ಎಂಬುದರ ಬಗ್ಗೆ ಸಮಗ್ರ ವರದಿಯನ್ನು ಮತ್ತು ಅವುಗಳನ್ನು ತಡೆಗಟ್ಟಲು ಕೈಗೊಂಡಿರುವ ಪರಿಹಾರ ಕ್ರಮಗಳ ಕುರಿತ ಮಾಹಿತಿಯನ್ನು ಒದಗಿಸುವಂತೆ ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದ ಅವರು ರಸ್ತೆ ನಿಯಮಗಳನ್ನು ಯಾರು ಉಲ್ಲಂಘಿಸುತ್ತಾರೆ ಅಂತಹವರ ವಿರುದ್ಧ ಶಿಸ್ತು ಕ್ರಮಕೈಗೊಳ್ಳುವಂತೆ ಹೇಳಿದರು.

ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಶ್ರೀಧರ್ ಸಭೆ ಮಾಹಿತಿ ನೀಡಿ ಜಿಲ್ಲೆಯಲ್ಲಿ ೨೨ ಬ್ಲಾಕ್ ಸ್ಪಾಟ್‌ಗಳಿದ್ದು, ೧೦ ಬ್ಲಾಕ್ ಸ್ಪಾಟ್‌ಗಳನ್ನು ಪೂರ್ಣಗೊಳಿಸಲಾಗಿದ್ದು ಜಂಟಿ ತಪಾಸಣೆ ಮಾಡಲಾಗಿದೆ. ಇನ್ನೂ ೦೮ ಬ್ಲಾಕ್ ಸ್ಪಾಟ್‌ಗಳು ಪೂರ್ಣವಾಗಲಿದ್ದು, ಲೋಕೋಪಯೋಗಿ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆಯಿಂದ ಜಂಟಿ ತಪಾಸಣೆ ಮಾಡಬೇಕಾಗಿದೆ. ಉಳಿದ ನಾಲ್ಕು ಬ್ಲಾಕ್ ಸ್ಪಾಟ್‌ಗಳ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಭೆಗೆ ಮಾಹಿತಿ ನೀಡಿದರು.

ಆಜಾದ್ ಪಾರ್ಕ್ ವೃತ್ತಗಳ ರಸ್ತೆಯ ಇಕ್ಕೆಲಗಳಲ್ಲಿರುವ ತಳ್ಳುವ ಗಾಡಿ ವ್ಯಾಪಾರಸ್ಥರಿಂದ ವಾಹನಗಳ ಓಡಾಟಕ್ಕೆ ಅಡಚಣೆ ಉಂಟಾಗುತ್ತಿದ್ದು ಪೊಲೀಸ್ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ತೆರವುಗೊಳಿಸಲು ಕ್ರಮಕೈಗೊಳ್ಳಬೇಕು, ನಗರದ ಪ್ರಮುಖ ರಸ್ತೆಗಳಲ್ಲಿ ಸ್ಪಾಟ್ ಲೈಟ್‌ಗಳನ್ನು ಆಳವಡಿಸುವಂತೆ ತಿಳಿಸಿದ ಅವರು ರಸ್ತೆ ಇಕ್ಕೆಲಗಳಲ್ಲಿರುವ ಕೆಲವು ಮರಗಳು ತುಂಬಾ ಹಳೆಯ ಮರಗಳಾಗಿದ್ದು ಮಳೆಗಾಲದ ಸಂದರ್ಭದಲ್ಲಿ ವಾಹನಗಳ ಸಂಚಾರಕ್ಕೆ ಅಡಚಣೆಯಾಗುತ್ತದೆ. ಅಂತಹ ಮರಗಳನ್ನು ತೆರವುಗೊಳಿಸುವಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.

ಸಭೆಯಲ್ಲಿ ಪ್ರಾದೇಶಿಕ ಸಾರಿಗೆ ಅಧಿಕಾರಿ ಮುರುಗೇಂದ್ರ ಬಿ ಶಿರೋಳ್ಕರ್., ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವಿಭಾಗೀಯ ನಿಯಂತ್ರಣಾಧಿಕಾರಿ ಬಸವರಾಜು, ನಗರಸಭೆ ಆಯುಕ್ತ ಉಮೇಶ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು ಹಾಗೂ ಕಾರ್ಯಪಾಲಕ ಅಭಿಯಂತರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿದ್ದರು.

More awareness about road safety is needed in the district

About Author

Leave a Reply

Your email address will not be published. Required fields are marked *