September 8, 2024

ವಿಶ್ವಕರ್ಮ ಸಮಾಜ ಸಂಘಟಿತರಾಗಬೇಕು

0
ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮ

ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮ

ಚಿಕ್ಕಮಗಳೂರು: ವಿಶ್ವಕರ್ಮ ಸಮುದಾಯ ಸಂಘಟಿತರಾಗದ ಕಾರಣದಿಂದ ಇಂದು ಸರ್ಕಾರದ ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದೇವೆಂದು ಹಾಸನ ಜಿಲ್ಲೆ ಅರಮಾದನ ಹಳ್ಳಿ ವಿಶ್ವ ಬ್ರಾಹ್ಮಣ ಮಹಾ ಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಶಿವ ಸುಜ್ಞಾನ ತೀರ್ಥ ಮಹಾ ಸ್ವಾಮಿಗಳು ವಿಷಾಧ ವ್ಯಕ್ತಪಡಿಸಿದರು.

ಅವರು ಗುರುವಾರ ನಗರದ ಕುವೆಂಪು ಕಲಾಮಂದಿರದಲ್ಲಿ ಏರ್ಪಡಿಸಿದ್ದ ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿ ಸಂಘಟನೆ ಕೇವಲ ಒಂದು ತಾಲ್ಲೂಕು ಹೋಬಳಿಗೆ ಸೀಮಿತವಾಗದೆ ಇಂದು ಜಿಲ್ಲಾ ಮಟ್ಟದಲ್ಲಿ ವಿಶ್ವಕರ್ಮ ಸೇವಾ ಸಂಘ ಸ್ಥಾಪನೆಯಾಗುತ್ತಿರುವುದು ಶ್ಲಾಘನೀಯ ಎಂದ ಅವರು ಬಹುಸಂಖ್ಯಾತ ಸಮಾಜದ ಸಂಘಟನೆಗಳು ಆ ಜನಾಂಗದ ರಾಜಕಾರಣಿಗಳ ಬಲದಿಂದ ಸರ್ಕಾರದ ಸೌಲಭ್ಯಗಳನ್ನು ಪಡೆದು ಸಮಾಜದ ತುತ್ತ ತುದಿಗೆ ಹೋಗಿದ್ದಾರೆ, ಸರ್ಕಾರ ಈ ದೊಡ್ಡ ಸಮುದಾಯಗಳನ್ನು ಓಲೈಸಿಕೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಕೊಡುತ್ತಿರುವುದನ್ನು ನಾವಿಂದು ಕಾಣುತ್ತಿದ್ದೇವೆ ಎಂದರು.

ಹಿಂದೆ ಕೆ.ಪಿ ನಂಜುಂಡಿ ನೇತೃತ್ವದಲ್ಲಿ ಸಂಘಟನೆಯನ್ನು ಸ್ಥಾಪಿಸಿ ಬೃಹತ್ ಸಮಾವೇಶ ಆಚರಿಸುವ ಮೂಲಕ ಮೊದಲು ಮಠಗಳು ಸಮಾಜವನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ಸಾಮಾಜಿಕ ಸಾಮರಸ್ಯ ಮೂಡಿಸಬೇಕು ಎಂಬುದು ಅದರ ಆಶಯವಾಗಿದ್ದು, ಹೋರಾಟ ನಡೆಸಿದರೂ ಸೀಮಿತ ಸೌಲಭ್ಯಗಳು ದೊರಕಿದವು. ವಿಶ್ವಕರ್ಮ ಅಭಿವೃದ್ಧಿ ನಿಗಮ, ಸರ್ಕಾರದ ವತಿಯಿಂದ ವಿಶ್ವಕರ್ಮ ಜಯಂತಿ ಮಹೋತ್ಸವ, ಜಕಣಾಚಾರ್ಯರ ಜನ್ಮದಿನಾಚರಣೆ ಬಿಟ್ಟರೆ ಬೇರೇನೂ ಸಿಗಲಿಲ್ಲ ಎಂದು ಹೇಳಿದರು.

ಚನ್ನಗಿರಿ ತಾಲ್ಲೂಕಿನ ವಿಶ್ವಕರ್ಮ ಮಾನವ ಸಂಸ್ಥಾನ ಸಾವಿತ್ರಿ ಪೀಠ ಕಾಶಿ ಮಠದ ಪರಮ ಪೂಜ್ಯ ಅಷ್ಟೋತ್ತರ ಶತಶ್ರೀ ಶಂಕರಾತ್ಮಾನಂದ ಸರಸ್ವತಿ ಮಹಾಸ್ವಾಮಿ ಮಾತನಾಡಿ ಸಂಘಗಳು ಕೇವಲ ಹೆಸರಿಗೆ ಮಾತ್ರ ಸ್ಥಾಪಿತವಾಗದೇ ಸಮಾಜದಲ್ಲಿರುವ ಬಡವರ ಸೇವೆಗೆ ಮುಂದಾಗುವುದರ ಮೂಲಕ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಿ ಸರ್ಕಾರದ ಗಮನ ಸೆಳೆಯಲು ಪಕ್ಷಾತೀತವಾಗಿ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಶಾಸಕ ಹೆಚ್.ಡಿ ತಮ್ಮಯ್ಯ ಹಿಂದುತ್ವವನ್ನು ಯಾರಿಗೂ ಗುತ್ತಿಗೆ ಕೊಟ್ಟಿಲ್ಲ. ಪೋಷಕರು ತಮ್ಮ ತಮ್ಮ ಮನೆಗಳಲ್ಲಿ ಹಿಂದೂ ಧರ್ಮದ ಸಂಸ್ಕಾರ, ಸಂಸ್ಕೃತಿ ಹಾಗೂ ಆಚರಣೆಗಳನ್ನು ಮಕ್ಕಳಿಗೆ ಕಲಿಸಿಕೊಟ್ಟರೆ ತಂತಾನೆ ಹಿಂದುತ್ವ ಉಳಿಯುತ್ತದೆ ಎಂದು ಅಭಿಪ್ರಾಯಿಸಿದರು.

ಸಂಸ್ಕಾರ, ಸಂಸ್ಕೃತಿ ಬರಿ ಓದಿನಿಂದ ಬರವಂತಹದ್ದಲ್ಲ. ಮನೆಗಳಲ್ಲಿ ಪೋಷಕರು ನಮ್ಮ ಧರ್ಮಸಂಸ್ಕಾರ, ಸಂಸ್ಕೃತಿ ಕಲಿಸಿಕೊಡಬೇಕಾಗುತ್ತದೆ. ಹಿಂದುತ್ವವನ್ನು ಗುತ್ತಿಗೆ ಪಡೆದು ನಮ್ಮ ಧರ್ಮ ಸಂಸ್ಕೃತಿ ಉಳಿಸಲು ಯಾರಿಂದಲೂ ಸಾಧ್ಯವಿಲ್ಲ ಎಂದು ಹೇಳಿದರು.

ಕರ್ನಾಟಕ ರಾಜ್ಯ ವಿಶ್ವಕರ್ಮ ಅಭಿವೃದ್ಧಿ ನಿಗಮದ ನಿರ್ದೇಶಕ ರಮೇಶ್‌ಕಡಿದಾಳ್ ಪ್ರಾಸ್ತಾವಿಸಿ, ಜಿಲ್ಲೆಯಲ್ಲಿ ೩೫ ಸಾವಿರ ಜನಸಂಖ್ಯೆಯ ಹೊಂದಿರುವ ವಿಶ್ವ ಕರ್ಮ ಸಮುದಾಯಕ್ಕೆ ಒಂದು ರಾಜಕೀಯ ಪ್ರಾತಿನಿಧ್ಯ ಇಲ್ಲದಾಗಿದೆ.ಸರಕಾರ ನಮ್ಮನ್ನು ಈವರೆಗೂ ಗುರುತಿಸಿಲ್ಲ. ನಿಗಮದ ಯೋಜನೆಗೆ ಸಮರ್ಪಕ ಅನುದಾನ ನೀಡುತ್ತಿಲ್ಲ. ಹೀಗಾಗಿ ವಿಶ್ವಕರ್ಮ ಸೇವಾ ಸಂಘ ಅಸ್ತಿತ್ವಕ್ಕೆ ತಂದಿದ್ದು ಅದರ ಮೂಲಕ ಒತ್ತಡ ಹಾಕಿ ನಮ್ಮ ಬೇಡಿಕೆಗೆ ಆಗ್ರಹಿಸಲಾಗುವುದು ಎಂದರು.

ವಿಶ್ವ ಕರ್ಮ ಸೇವಾ ಸಂಘದ ಅಧ್ಯಕ್ಷ ಚೇತನ್‌ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಝೀ ಟಿವಿ ಕನ್ನಡ ವಾಹಿನಿಯಲ್ಲಿ ಸರಿಗಮಪ ಕಾರ್ಯಕ್ರಮದಲ್ಲಿ ವಿಜೇತರಾದ ಗಾಯಕಿ ಪ್ರಗತಿ ಬಸವರಾಜ ಬಡಿಗೇರ ಅವರನ್ನು ಸನ್ಮಾನಿಸಲಾಯಿತು. ದಾನಿಗಳಾದ ಲತಾವಿಶೇಷ್ ಮತ್ತು ಡಾ.ಎಂ.ಪಿ. ನಾಗರಾಜ್, ಸಂಘದ ಪ್ರಧಾನ ಕಾರ್ಯದರ್ಶಿ ಮಂಜುನಾಥ, ಉಪಾಧ್ಯಕ್ಷ ಉಮೇಶಾಚಾರ್ಯ, ಮುಖಂಡರಾದ ಭಾಸ್ಕರಾಚಾರ್ಯ, ರತ್ನಾಕರ ಚಾರ್ಯ, ಮುಂಟೇಲಿಂಗಾಚಾರ್, ಮಹೇಂದ್ರಚಾರ್, ದೇವೇಂದ್ರಚಾರ್ ಮತ್ತಿತರರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಜಿಲ್ಲಾ ವಿಶ್ವಕರ್ಮ ಸೇವಾ ಸಂಘದ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಲಾಯಿತು. ಸಂಘದ ಉಪಾಧ್ಯಕ್ಷ ಉಮೇಶಾಚಾರ್ಯ ಸ್ವಾಗತಿಸಿ, ಬಾಸ್ಕರ್ ನಿರೂಪಿಸಿ, ಮಂಜುನಾಥ್ ವಂದಿಸಿದರು.

Vishwakarma society should be organized

About Author

Leave a Reply

Your email address will not be published. Required fields are marked *

You may have missed