September 19, 2024

ಕಾಫಿನಾಡಿನಲ್ಲಿ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್

0

ಚಿಕ್ಕಮಗಳೂರು: ಕಾಫಿನಾಡಿನಲ್ಲಿ ಮಳೆಯಾಗುತ್ತಿದ್ದು, ಕಳಸ ತಾಲೂಕಿನ ಚನ್ನಹಡ್ಲು ಗ್ರಾಮದಲ್ಲಿ ಭಾರಿ ಗಾತ್ರದ ಬೀಟೆ ಮರವೊಂದು ರಸ್ತೆ ಅಡ್ಡಲಾಗಿ ಉರುಳಿ ಬಿದ್ದು ಸುಮಾರು ಎರಡು ಗಂಟೆಗಳ ಕಾಲ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಯಿತು. ಮಲೆನಾಡಿನಲ್ಲಿ ಗಾಳಿಸಹಿತ ಭಾರಿ ಮಳೆಯಾಗುತ್ತಿದ್ದು ಈ ವೇಳೆ ಬೃಹತ್ ಗಾತ್ರದ ಬೀಟೆ ಮರ ಧರೆಗುರುಳಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಮರ ತೆರವಿಗೆ ಗ್ರಾಮಸ್ಥರು ಮುಂದಾಗಿದ್ದಾರೆ.

೨ ಗಂಟೆಗಳ ಶ್ರಮದ ಬಳಿಕ ಮರವನ್ನು ತೆರವುಗೊಳಿಸುವ ಮೂಲಕ ಸುಗಮ ಸಂಚಾರಕ್ಕೆ ಅನುವುಮಾಡಿಕೊಡಲಾಯಿತು. ಇಂದಿನಿಂದ ಮೂರು ದಿನಗಳ ಕಾಲ ಆರೆಂಜ್ ಅಲರ್ಟ್ ಘೋಷಣೆಯಾಗಿದ್ದು, ಮಳೆ ಅಬ್ಬರ ಮಂಗಳವಾರದಿಂದ ಮುಂದುವರೆದಿದೆ. ಮಳೆಬಿರುಸುಗೊಂಡಿದ್ದರಿಂದ ಕಳಸ ತಾಲೂಕಿನ ಕಲ್ಮಕ್ಕಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಎಂಸ್ಯಾಂಡ್ ಸಾಗಿತ್ತಿದ್ದ ಟಿಪ್ಪರ್‌ಲಾರಿ ಉರುಳಿಬಿದ್ದಿದೆ. ಚಾಲಕನಿಗೆ ಸಣ್ಣಪುಟ್ಟಗಾಯಗಳಾಗಿವೆ.

ಕಡಲತೀರದ ಜಿಲೆಗಳಾದ ಮಂಗಳೂರು ಮತ್ತು ಉಡುಪಿಯಲ್ಲಿ ವರುಣನ ಆರ್ಭಟ ಮುಂದುವರೆದ ಪರಿಣಾಮ ಜಿಲ್ಲೆಯ ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯ ಪ್ರವೇಶದ ಮುನ್ಸೂಚನೆ ದೊರೆತ್ತಿದೆ. ಮಣ್ಣಿನಿಂದ ಮೇಲೆದ್ದಿರುವ ಸಸಿಮಡಿಗಳು ನೀರಿಗಾಗಿ ಆಗಸದತ್ತ ಮುಖಮಾಡಿದ್ದು, ಮಳೆಯಿಂದ ಸಸಿಗಳಿಗೆ ಜೀವ ಕಳೆ ಬಂದಂತಾಗಿದೆ.

ಆರರ್ದಾ ಮಳೆಗೆ ಕಳೆದ ವರ್ಷ ಗದ್ದೆಯ ಬೇಸಾಯ ಕಾರ್ಯಗಳು ಆರಂಭಗೊಂಡಿದ್ದವು ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಗದ್ದೆಕೆಲಸಗಳು ವಿಳಂಬವಾಗಿವೆ. ಈಗಾಗಲೇ ಬೆಳೆದುನಿಂತಿರುವ ಶುಂಠಿ ಬೆಳೆಗೆ ಮಳೆ ವರದಾನವಾಗಿದೆ. ಮುಂಗಾರು ಪೂರ್ವ ಮಳೆ ಜಿಲ್ಲೆಯಲ್ಲಿ ಉತ್ತಮವಾಗಿ ಸುರಿದಿದ್ದರಿಂದ ಅಲ್ಲೊಂದು ಇಲ್ಲೊಂದು ಕಾಫಿಗಿಡದಲ್ಲಿ ಕಾಫಿಹಣ್ಣುಬಿಟ್ಟಿದ್ದು, ಮಳೆಸುರಿದರೆ ಮಣ್ಣುಪಾಲಾಗುವುದನ್ನು ತಪ್ಪಿಸಲು ಅವುಗಳನ್ನು ಬಿಡಿಸುವ ಕಾರ್ಯದಲ್ಲಿ ಕಾರ್ಮಿಕರು ಮುಂದಾಗಿದ್ದಾರೆ.ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭವಾಗಿರುವ ಸೂಚನೆಗಳು ಕಂಡುಬರುತ್ತಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದಂತಾಗಿದೆ.

ಆರೆಂಜ್ ಅಲರ್ಟ್: ಭಾರತ ಹವಾಮಾನ ಇಲಾಖೆ, ನವದೆಹಲಿ ಹಾಗೂ ರಾಜ್ಯ ಹವಾಮಾನ ಇಲಾಖೆ, ಬೆಂಗಳೂರು ನೀಡಿರುವ ಮುನ್ಸೂಚನೆಯ ಪ್ರಕಾರ ಚಿಕ್ಕಮಗಳೂರು ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮುಂದಿನ ೨-೩ ದಿನಗಳು ಮೋಡ ಕವಿದ ವಾತಾವರಣ ಹಾಗೂ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ಸಂಪರ್ಕ ಅಧಿಕಾರಿಗಳು ಹಾಗೂ ಕೇಂದ್ರದ ಹಿರಿಯ ವಿಜ್ಞಾನಿಗಳು ಹಾಗೂ ಮುಖ್ಯಸ್ಥರಾದ ಡಾ. ಕೃಷ್ಣಮೂರ್ತಿ ಎ.ಟಿ. ತಿಳಿಸಿದ್ದಾರೆ.

ತಾಲ್ಲೂಕುವಾರು ಮುನ್ಸೂಚನೆಯ ಪ್ರಕಾರ ಜಿಲ್ಲೆಯ ಮಲೆನಾಡು ತಾಲ್ಲೂಕುಗಳಾದ ಕೊಪ್ಪ, ಮೂಡಿಗೆರೆ, ಎನ್.ಆರ್.ಪುರ, ಶೃಂಗೇರಿ ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳಿಗೆ ಮುಂದಿನ ೨-೩ ದಿನಗಳಲ್ಲಿ ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು – ಮಿಂಚು ಸಹಿತ ಸಾಧಾರಣದಿಂದ ಭಾರಿ ಮಳೆಯಾಗುವ ಸಂಭವವಿದೆ ಹಾಗೂ ಇದರ ಜೊತೆ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ.

ತರೀಕೆರೆ ಹಾಗೂ ಕಡೂರು ತಾಲ್ಲೂಕುಗಳಿಗೆ ಮುಂದಿನ ೨-೩ ದಿನಗಳು ಮೋಡ ಕವಿದ ವಾತಾವರಣದ ಜೊತೆಗೆ ಗುಡುಗು – ಮಿಂಚು ಸಹಿತ ಸಾಧಾರಣದಿಂದ ಹೆಚ್ಚು ಮಳೆಯಾಗುವ ಸಂಭವವಿದೆ ಹಾಗೂ ಇದರ ಜೊತೆ ಗಾಳಿಯ ವೇಗ ಹೆಚ್ಚು ಇರುವ ಸಂಭವವಿದೆ. ಆದ್ದರಿಂದ ರೈತರು ಗೊಬ್ಬರ ಹಾಕುವುದು, ಬಿತ್ತನೆ ಚಟುವಟಿಕೆಗಳು ಹಾಗೂ ಕೃಷಿ ಚಟುವಟಿಕೆಗಳನ್ನು ಮುಂದಿನ ೨-೩ ದಿನಗಳವರೆಗೆ ಮುಂದೂಡುವುದು ಸೂಕ್ತ ಎಂದು ಜಿಲ್ಲಾ ಕೃಷಿ ಹವಾಮಾನ ಘಟಕದ ವಿಷಯ ತಜ್ಞರಾದ ಶಬ್ನಂ ಪಿ.ಎಸ್ ತಿಳಿಸಿದ್ದಾರೆ.

ರೈತರು ಹಾಗೂ ಸಾರ್ವಜನಿಕ ಒಂದು ಸ್ಥಳದ ನಿರ್ದಿಷ್ಟವಾದ ಹವಾಮಾನ ಮುನ್ಸೂಚನೆಗಳನ್ನು ತಿಳಿದುಕೊಳ್ಳಲು ಮೌಸಮ್ ಆಪ್ ಅನ್ನು ಹವಾಮಾನ ಮುನ್ಸೂಚನೆ ಹಾಗೂ ಬೆಳೆ ಸಲಹೆಗಳನ್ನು ತಿಳಿದುಕೊಳ್ಳಲು ಮೇಘಧೂತ್ ಆಪ್ ಅನ್ನು ಹಾಗೂ ಗುಡುಗು ಮತ್ತು ಮಿಂಚಿನ ಮುನ್ಸೂಚನೆಯನ್ನು ತಿಳಿದುಕೊಳ್ಳಲು ದಾಮಿನಿ ಆಪ್ ಅನ್ನು ಗೂಗಲ್ ಪ್ಲೇ ಸ್ಟೋರ್‍ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ರೈತರು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ : ೮೦೮೮೭೩೪೪೮೫, ೦೮೨೬೩ ೨೨೮೧೯೮ ಸಂಪರ್ಕಿಸಬಹುದಾಗಿದೆ.

Orange alert for three days in Kaffinad

 

About Author

Leave a Reply

Your email address will not be published. Required fields are marked *

You may have missed