September 19, 2024

ಚಿಕ್ಕಮಗಳೂರು ಜಿಲ್ಲಾ ಪ್ರವಾಸ ಮುಂದೂಡಲು ಎಸ್ಪಿ ಸಲಹೆ

0

ಚಿಕ್ಕಮಗಳೂರು: ಜಿಲ್ಲೆಯಾದ್ಯಂತ ವರುಣಾರ್ಭಟ ಮುಂದುವರಿದಿರುವ ಹಿನ್ನೆಲೆಯಲ್ಲಿ ಹೊರಗಿನಿಂದ ಬರುವ ಪ್ರವಾಸಿಗರು ತಮ್ಮ ಪ್ರವಾಸದ ಯೋಜನೆಯನ್ನು ಮಳೆ ಬಿಡುವು ನೀಡುವವರೆಗೆ ಮುಂದೂಡಬೇಕು ಎಂದು ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಉಮಾಪ್ರಶಾಂತ್ ಮನವಿ ಮಾಡಿದ್ದಾರೆ.

ಭಾರೀ ಮಳೆಯಿಂದಾಗಿ ಭೂ ಕುಸಿತ, ರಸ್ತೆ ಸಂಪರ್ಕ ಕಡಿತದಂತಹ ಅವಘಡಗಳು ಸಂಭವಿಸುತ್ತಿದೆ. ಇದೇ ವೇಳೆ ಗಿರಿ ಶ್ರೇಣಿ, ಚಾರ್ಮಾಡಿ ಘಾಟಿ ಸೇರಿದಂತೆ ವಿವಿಧೆಡೆಗಳಲ್ಲಿ ಪ್ರವಾಸಿಗರು ತುಂಬಿ ತುಳುಕುತ್ತಿದ್ದಾರೆ. ಮಳೆ ಹೆಚ್ಚಾದಂತೆ ಅನಾಹುತಗಳು ಹೆಚ್ಚಾಗುವ ಸಾಧ್ಯತೆಗಳೂ ಹೆಚ್ಚಿರುತ್ತದೆ.

ಈ ಹಿನ್ನೆಲೆಯಲ್ಲಿ ಪ್ರವಾಸಿಗರು ಜಿಲ್ಲೆಗೆ ಭೇಟಿ ನೀಡುವ ತಮ್ಮ ಯೋಜನೆಯನ್ನು ಸಧ್ಯಕ್ಕೆ ಮುಂದೂಡಬೇಕು ಎಂದು ಎಸ್ಪಿ ಮನವಿ ಮಾಡಿದ್ದಾರೆ.

ಪಕ್ಕದ ಉಡುಪಿ ಜಿಲ್ಲೆಯ ಕೊಲ್ಲೂರು ಅರಿಶಿನ ಗುಂಡಿಯ ಜಲಪಾತದಬಳಿ ರೀಲ್ಸ್ ಮಾಡುವಾಗ ಭದ್ರಾವತಿ ಮೂಲದ ಶರತ್ ಎಂಬ ಯುವಕ ಜಾರಿಬಿದ್ದು ನೀರಿನಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಇಂದಷ್ಟೇ ಸಂಭವಿಸಿರುವ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಲು ಯೋಜಿಸಿರುವ ಪ್ರವಾಸಿಗರು ಜಿಲ್ಲಾ ಪೊಲೀಸ್ ಮನವಿಗೆ ಸ್ಪಂದಿಸುವುದು ಸೂಕ್ತವಾಗಿದೆ.

ನಿರಂತರ ಮಳೆಯಿಂದಾಗಿ ಮುಳ್ಳಯ್ಯನಗಿರಿ, ದತ್ತಪೀಠ ಭಾಗದ ಫಾಲ್ಸ್‌ಗಳಲ್ಲಿ ಭಾರೀ ಪ್ರಮಾಣದಲ್ಲಿ ನೀರು ಧುಮ್ಮಿಕ್ಕುತ್ತಿದೆ. ಅಲ್ಲದೆ ತೇವಾಂಶ ಹೆಚ್ಚಾದಂತೆ ಗಿರಿಯ ಮಣ್ಣು ಸಡಿಲಗೊಂಡು ಕುಸಿತಕ್ಕೊಳಗಾಗುವ ಆತಂಕ ಹೆಚ್ಚಿದೆ. ಇದರ ನಡುವೆ ಮಳೆ ವಾತಾವರಣದ ಮುದವನ್ನು ಅನುಭವಿಸಲು ಬರುವ ಯುವಕರು ದಾರಿ ಮಧ್ಯೆ ಕುಣಿದು, ಇತರೆ ವಾಹನಗಳ ಸಂಚಾರಕ್ಕೆ ತೊಂದರೆ ಉಂಟು ಮಾಡುತ್ತಿರುವ ಘಟನೆ ಪದೇ ಪದೇ ಸಂಭಿಸುತ್ತಲೇ ಇದೆ. ಇದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ಇನ್ನೂ ಕೆಲವರು ಭಾರೀ ಪ್ರಮಾಣದಲ್ಲಿ ಧುಮ್ಮುಕ್ಕುತ್ತಿರುವ ಜಲಪಾತದ ಮುಂದೆ ಸೆಲ್ಫಿಗೆ ಮುಗಿಬೀಳುತ್ತಿದ್ದಾರೆ. ಇನ್ನೂ ಕೆಲವರು ಅಪಾಯಕಾರಿ ಸ್ಥಳಗಳಲ್ಲಿ ನಿಂತು ನಿಸರ್ಗದ ಜೊತೆಗೆ ಫೋಟೋ ತೆಗೆಸಿಕೊಳ್ಳು ಮುಂದಾಗುತ್ತಿದ್ದಾರೆ. ನಿರಂತರ ಮಳೆಯಿಂದಾಗಿ ಇಂತಹ ಸ್ಥಳಗಳಲ್ಲಿ ಜಾರಿ ಬೀಳುವ ಸಾಧ್ಯತೆಯೂ ಹೆಚ್ಚಿರುವ ಕಾರಣ ಮಳೆ ಕಡಿಮೆ ಆಗುವರೆಗೆ ಜನರು ಮಲೆನಾಡು ಭಾಗದ ಪ್ರವಾಸ ಯೋಜನೆಯನ್ನು ಕೈಬಿಡುವುದು ಸೂಕ್ತವಾಗಿದೆ.

SP advises to postpone Chikmagalur district trip

About Author

Leave a Reply

Your email address will not be published. Required fields are marked *

You may have missed