September 20, 2024
ಕ.ವಿ.ಪ್ರ.ನಿ.ನಿ. ನೌಕರರ ಸಭಾಭವನದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ

ಕ.ವಿ.ಪ್ರ.ನಿ.ನಿ. ನೌಕರರ ಸಭಾಭವನದಲ್ಲಿ ಗೃಹ ಜ್ಯೋತಿ ಯೋಜನೆಗೆ ಚಾಲನೆ

ಚಿಕ್ಕಮಗಳೂರು:  ರಾಜ್ಯದ ಪ್ರತಿ ಕುಟುಂಬಕ್ಕೆ ೨೦೦ ಯುನಿಟ್ ವಿದ್ಯುತ್ ಉಚಿತವಾಗಿ ನೀಡುವ ಗೃಹ ಜ್ಯೋತಿ ಯೋಜನೆಗೆ ಶೃಂಗೇರಿ ಕ್ಷೇತ್ರದ ಶಾಸಕ ಟಿ.ಡಿ. ರಾಜೇಗೌಡ ಅವರು ಕ.ವಿ.ಪ್ರ.ನಿ.ನಿ. ನೌಕರರ ಸಭಾಭವನದಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಇಂದು ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಚುನಾವಣೆ ಸಂದರ್ಭದಲ್ಲಿ ನಾವು ೦೫ ಆಶ್ವಾಸನೆಗಳನ್ನು ನೀಡಿದ್ದೇವು. ಅದರಂತೆ ಒಂದಾಂದಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದ್ದು, ಈಗಾಗಲೇ ಶಕ್ತಿ, ಅನ್ನಭಾಗ್ಯ, ಗೃಹಜ್ಯೋತಿ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಗೃಹಲಕ್ಷ್ಮಿ ಹಾಗೂ ಯುವನಿಧಿ ಯೋಜನೆಗಳು ಶೀಘ್ರದಲ್ಲೇ ಅನುಷ್ಠಾನಗೊಳ್ಳಲಿವೆ.

ರಾಜ್ಯದಲ್ಲಿ ೨.೨೦ ಕೋಟಿ ಗೃಹ ಬಳಕೆಯ ಗ್ರಾಹಕರಿದ್ದು, ಈಗಾಗಲೇ ಉಚಿತ ವಿದ್ಯುತ್‌ಗಾಗಿ ೧ ಕೋಟಿ ೨೦ ಲಕ್ಷಕ್ಕೂ ಹೆಚ್ಚು ಗ್ರಾಹಕರು ನೋಂದಾಯಿಸಿಕೊಂಡಿದ್ದು, ನೋಂದಾವಣಿಗೆ ಅಂತಿಮ ದಿನಾಂಕವನ್ನು ನಿಗಧಿಪಡಿಸಿರುವುದಿಲ್ಲ. ಜಿಲ್ಲೆಯಲ್ಲಿ ಮೂರು ಲಕ್ಷದ ಮೂವತ್ತೈದು ಸಾವಿರ ವಿದ್ಯುತ್ ಸಂಪರ್ಕಗಳಿದ್ದು, ಇದರಲ್ಲಿ ೨ ಲಕ್ಷದ ೪೦ ಸಾವಿರ ಗ್ರಾಹಕರು ಉಚಿತ ವಿದ್ಯುತ್‌ಗಾಗಿ ನೋಂದಾಯಿಸಿಕೊಂಡಿದ್ದಾರೆ ಎಂದರು.

ದೇಶದಲ್ಲಿ ನುಡಿದಂತೆ ನಡೆದ ಸರ್ಕಾರವೆಂದರೆ ಅದು ನಮ್ಮ ಸರ್ಕಾರವೆಂದ ಅವರು ಶಕ್ತಿ ಯೋಜನೆಯಿಂದ ಧಾರ್ಮಿಕ ಮಂದಿರ ಹಾಗೂ ಪ್ರವಾಸಿ ಸ್ಥಳಗಳ ವೀಕ್ಷಣೆಗೆ ಆಗಮಿಸುವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದ ವ್ಯಾಪಾರಸ್ಥರಿಗೆ ಸೇರಿದಂತೆ, ಹಲವರಿಗೆ ಆರ್ಥಿಕವಾಗಿ ಲಾಭವಾಗುತ್ತಿದೆ ಎಂದು ತಿಳಿಸಿದರು.

ಕಳೆದ ಎರಡು ವರ್ಷಗಳಲ್ಲಿ ಕರೋನ, ಅತಿವೃಷ್ಠಿಯಿಂದ ಜನ ತತ್ತರಿಸಿ ಹೋಗಿದ್ದಾರೆ, ಅಲ್ಲದೇ ಬೆಲೆ ಏರಿಕೆ ಜೀವನ ನಿರ್ವಹಣೆ ಕಷ್ಟಕರವಾಗಿದೆ. ಜನರ ಹಿತದೃಷ್ಠಿಯಿಂದ ನಮ್ಮ ಸರ್ಕಾರ ಜಾರಿಗೆ ತಂದಿರುವ ಯೋಜನೆಗಳು ಅವರ ಆರ್ಥಿಕ ಬದುಕನ್ನು ಸದೃಢಗೊಳಿಸಲು ಸಹಕಾರಿಯಾಗಲಿದೆ ಎಂದ ಅವರು ಸರ್ಕಾರ ಜಾರಿಗೆ ತರುವ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ತಲುಪಬೇಕು. ಆರ್ಥಿಕವಾಗಿ ಸದೃಢವಾಗಿರುವವರು ಈ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬಾರದು. ಇದರಿಂದ ಬಡಜನತೆಗೆ ಇನ್ನೂ ಉತ್ತಮ ಯೋಜನೆಗಳನ್ನು ರೂಪಿಸಲು ಸಾಧ್ಯವಾಗುತ್ತದೆಯಲ್ಲದೇ, ದೇಶದ ಅಭಿವೃದ್ಧಿಯಾಗುತ್ತದೆ ಎಂದು ಹೇಳಿದರು.

ಚಿಕ್ಕಮಗಳೂರು ಕ್ಷೇತ್ರದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ಬಡವರಿಗಾಗಿ ರೂಪಿಸಿರುವ ಅತ್ಯುತ್ತಮ ಕಾರ್ಯಕ್ರಮ ಇದಾಗಿದೆ. ೧೨ನೇ ಶತಮಾನದಲ್ಲಿ ಬಸವಣ್ಣನವರು ಹೇಳಿದಂತೆ ಕಾಯಕವೇ ಕೈಲಾಸ ಎಂಬ ಮಾತನ್ನು ನಮ್ಮ ಸರ್ಕಾರವು ಕೃತಿ ರೂಪದಲ್ಲಿ ಜಾರಿಗೆ ತರುತ್ತಿದೆ. ಬಡವರು, ಧೀನ ದಲಿತರು, ಹಿಂದುಳಿದವರ ಪರವಾಗಿದ್ದು, ಅವರ ಏಳಿಗೆಗೆ ಶ್ರಮಿಸಲು ಕಟಿಬದ್ಧವಾಗಿದೆ. ಸರ್ಕಾರ ಘೋಷಿಸಿರುವ ೫ ಯೋಜನೆಗಳಲ್ಲಿ ಈಗಾಗಲೇ ೩ ಯೋಜನೆಗಳನ್ನು ಜಾರಿಗೆ ತರಲಾಗಿದ್ದು, ಇನ್ನೂ ಉಳಿದ ೨ ಯೋಜನೆಗಳನ್ನು ಶೀಘ್ರದಲ್ಲೇ ಜಾರಿಗೊಳಿಸಲಾಗುತ್ತದೆ ಎಂದರು. ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ ಮಾತನಾಡಿದರು.

ಗೃಹಜ್ಯೋತಿ ಫಲಾನುಭವಿಗಳಾದ ಬಾಬೀಜಾನ್ ಬಿನ್ ಅದಿಲ್, ಸುರೇಂದ್ರ ಚಂದ್ರಯ್ಯ, ಸಿದ್ದೇಗೌಡ, ಮಹೇಶ್ ರಾಜು ಟಿ.ಎಂ., ಸುರೇಶ್ ಕೆ.ಎಸ್., ಸಣ್ಣರಾಜು, ಹನುಮಂತಯ್ಯ ಮುಂತಾದವರಿಗೆ ವೇದಿಕೆಯಲ್ಲಿ ಜುಲೈ ಮಾಹೆಯ ಉಚಿತ ವಿದ್ಯುತ್ ರಸೀದಿ ನೀಡಲಾಯಿತು.

ಮೆಸ್ಕಾಂನ ವ್ಯವಸ್ಥಾಪಕ ನಿರ್ದೇಶಕಿ ಡಿ. ಪದ್ಮಾವತಿ ಪ್ರಸ್ತಾವಿಕವಾಗಿ ಮಾತನಾಡಿದರು. ಚಿಕ್ಕಮಗಳೂರು ವೃತ್ತದ ಮೆಸ್ಕಾಂ ಅಧೀಕ್ಷಕ ಇಂಜಿನಿಯರ್ ಬಿ. ಸೋಮಶೇಖರ್ ಸ್ವಾಗತಿಸಿದರು. ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ. ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮುಂತಾದವರಿದ್ದರು.

Launch of Griha Jyoti Yojana

About Author

Leave a Reply

Your email address will not be published. Required fields are marked *