September 20, 2024

’ಅಮೃತ ಸರೋವರ’ ಜಲ ಮೂಲ ಸಂರಕ್ಷಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮ

0
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಗೋಪಾಲಕೃಷ್ಣ

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಗೋಪಾಲಕೃಷ್ಣ

ಚಿಕ್ಕಮಗಳೂರು: ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಸಂದರ್ಭದಲ್ಲಿ ಜಲ ಮೂಲ ಸಂರಕ್ಷಿಸುವ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಕಾರ್ಯಕ್ರಮದ ’ಅಮೃತ ಸರೋವರ’ ಎಂಬ ಘೋಷವಾಕ್ಯದೊಂದಿಗೆ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ|| ಗೋಪಾಲಕೃಷ್ಣ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮಿನಿ ಸಭಾಂಗಣದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಜಲಮೂಲ ಪುನಃಶ್ಚೇತನ ಹಾಗೂ ನಿರ್ಮಾಣ ಮಾಡಲು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್‌ರಾಜ್ ಇಲಾಖೆ ಸೂಚನೆ ಮೇರೆಗೆ ಈ ಜಿಲ್ಲೆಯಲ್ಲಿಯೂ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಈ ಕಾರ್ಯಕ್ರಮದನ್ವಯ ಜಿಲ್ಲೆಯಲ್ಲಿ ಅಭಿವೃದ್ಧಿಪಡಿಸಲಾಗಿರುವ ೧೮೫ ಕೆರೆಗಳ ಪೈಕಿ ೧೨೬ ಕೆರೆಗಳು ಪೂರ್ಣವಾಗಿ ಅಭಿವೃದ್ಧಿಪಡಿಸಲಾಗಿದ್ದು, ೫೯ ಕೆರೆಗಳು ಪ್ರಗತಿಯಲ್ಲಿದೆ ಎಂದು ಹೇಳಿದರು.

೭೬ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಅಭಿವೃದ್ದಿ ಮಾಡಿರುವ ಕೆರೆಗಳ ದಂಡೆ ಮೇಲೆ ಧ್ವಜಾರೋಹಣ ಮಾಡುವ ಮೂಲಕ ಆಯಾ ಗ್ರಾಮಗಳ ಜನರಿಗೆ ಜಲಮೂಲ ಪುನಃಶ್ಚೇತನ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದವರು ದೇಶಕ್ಕಾಗಿ ಹುತಾತ್ಮರಾದ ಕುಟುಂಬದವರು ಅಥವಾ ಪದ್ಮ ಪುರಸ್ಕಾರ ಪಡೆದ ಹಿರಿಯ ನಾಗರೀಕರಿಂದ ಧ್ವಜಾರೋಹಣ ನೆರವೇರಿಸಲಾಗುವುದು ಎಂದರು.

ಆ.೧೫ ರಂದು ೭ ಗಂಟೆಗೆ ಎಲ್ಲಾ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು ಜಿಲ್ಲೆಯ ಹಿರೇಗೌಜ ಗ್ರಾ.ಪಂ ವ್ಯಾಪ್ತಿಯ ಚಿಕ್ಕಗೌಜ ಗ್ರಾಮದ ಅಮೃತ ಸರೋವರ ಸ್ಥಳದಲ್ಲಿ ಧ್ವಜಾರೋಹಣ ನೆರವೇರಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದೆಂದು ತಿಳಿಸಿದರು.

ಈಗಾಗಲೇ ನಿಗಧಿಪಡಿಸಿರುವಂತೆ ಅಜ್ಜಂಪುರ ಹಾಗೂ ತರೀಕೆರೆ ತಾಲ್ಲೂಕಿನ ೨೯ ಕೆರೆಗಳು ಚಿಕ್ಕಮಗಳೂರು ೨೩, ಕಡೂರು ೪೧, ಕೊಪ್ಪ ೪, ಮೂಡಿಗೆರೆ ೧೭, ನರಸಿಂಹರಾಜಪುರ ೯ ಹಾಗೂ ಶೃಂಗೇರಿ ತಾಲ್ಲೂಕಿನಲ್ಲಿ ೩ ಕೆರೆಗಳು ಸೇರಿದಂತೆ ಒಟ್ಟು ೧೨೬ ಅಮೃತ ಸರೋವರ ಕೆರೆಗಳನ್ನು ಅಭಿವೃದ್ಧಿಪಡಿಸಲಾಗಿದ್ದು ಈ ಎಲ್ಲಾ ಕೆರೆಗಳ ಆವರಣದಲ್ಲಿ ಸ್ವಾತಂತ್ರ್ಯೋತ್ಸವ ಆಚರಿಸಲಾಗುವುದೆಂದು ಹೇಳಿದರು.

ವಿಶೇಷವಾಗಿ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಮಹಾತ್ಮರ ಶಿಲಾ ಫಲಕಗಳನ್ನು ಪ್ರತಿಷ್ಠಾಪಿಸುವುದರ ಜೊತೆಗೆ ಕೆರೆಯ ಆವರಣದಲ್ಲಿ ಹೂವು, ಹಣ್ಣಿನ ಗಿಡಗಳು ಔಷಧಿ ವನಗಳನ್ನು ನಿರ್ಮಾಣ ಮಾಡುವುದಲ್ಲದೆ ಬೆಳೆಗ್ಗೆ ೬-೩೦ ರಿಂದ ೭ ಗಂಟೆಯೊಳಗೆ ಗ್ರಾಮದ ಸಮುದಾಯದವರೊಂದಿಗೆ ತಿರಂಗಯಾತ್ರೆ ಮೂಲಕ ಇಡೀ ಗ್ರಾಮಗಳಲ್ಲಿ ಸಂಚರಿಸಿ ಅಮೃತ ಸರೋವರ ಸ್ಥಳದಲ್ಲಿ ಮುಕ್ತಾಯಗೊಳಿಸಲಾಗುವುದು, ತಿರಂಗ ಯಾತ್ರೆ ನಂತರ ಅಮೃತ ಸರೋವರ ತಲುಪಿದ ನಂತರ ಸ್ವಚ್ಚತಾ ಪ್ರತಿಜ್ಞೆ ಬೋಧಿಸಲಾಗುವುದೆಂದು ತಿಳಿಸಿದರು.

ಇದೇ ಕಾರ್ಯಕ್ರಮದೊಂದಿಗೆ ರಾಜ್ಯ ಸರ್ಕಾರದ ನೂತನ ಯೋಜನೆಯಾದ ಕೂಸಿನ ಮನೆ ಎಂಬ ಯೋಜನೆಯಡಿ ಶಿಶುಪಾಲನಾ ಕೇಂದ್ರಗಳನ್ನು ಆರಂಭಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಜಿಲ್ಲೆಗೆ ೧೧೯ ಶಿಶುಪಾಲನಾ ಕೇಂದ್ರಗಳು ಮಂಜೂರಾಗಿದ್ದು ಎಲ್ಲಾ ತಾಲ್ಲೂಕು ಕೇಂದ್ರಗಳಲ್ಲಿ ೩೮ ಶಿಶುಪಾಲನಾ ಕೇಂದ್ರ ಸ್ಥಾಪನೆ ಮಾಡಲಾಗುತ್ತಿದ್ದು ೬ ತಿಂಗಳಿನಿಂದ ೩ ವರ್ಷದವರೆಗೆ ಈ ಕೇಂದ್ರದಲ್ಲಿ ಶಿಶುಗಳನ್ನು ಆರೈಕೆ ಮಾಡಲಾಗುವುದು, ಇದರಿಂದ ದುಡಿಯವ ವರ್ಗದ ಮಹಿಳೆಯರಿಗೆ ಅನುಕೂಲವಾಗಲಿದೆ ಕೇರ್ ಟೇಕರ್‌ಗಳ ನೇಮಕಾತಿ ಹಾಗೂ ಕಟ್ಟಡ ಇತರೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರ ಮಂಜೂರಾತಿ ನೀಡಿದೆ ಎಂದರು.

ಅಮೃತ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಎಲ್ಲಾ ಗ್ರಾ.ಪಂ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ತ್ರಿವರ್ಣ ಧ್ವಜ, ಬ್ಯಾಡ್ಜ್ ತಯಾರಿಸುವುದು ಸೇರಿದಂತೆ ದೇಶಭಕ್ತಿಗೆ ಸಂಬಂಧಿಸಿದಂತೆ ಮಕ್ಕಳಿಂದ ಗಾಯನ ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೇರಿ ಮಾಟಿ, ಮೇರಿ ದೇಶ್ ಎಂಬ ಕೇಂದ್ರ ಸರ್ಕಾರದ ಕಾರ್ಯಕ್ರಮದಡಿ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರ ಯೋಧರನ್ನು ಸ್ಮರಿಸಿ ಪ್ರತಿ ಗ್ರಾ.ಪಂ ವ್ಯಾಪ್ತಿಯಿಂದ ಜಿಲ್ಲಾ ಮಟ್ಟದವರೆಗೆ ಒಂದು ಹಿಡಿ ಮಣ್ಣು ಸಂಗ್ರಹಿಸಿ ರಾಜ್ಯ ಮಟ್ಟಕ್ಕೆ ಕಳಿಸಿಕೊಡಲಾಗುವುದು ಅಲ್ಲಿ ಬೃಹತ್ ಪ್ರಮಾಣದ ಕಾರ್ಯಕ್ರಮ ನಡೆಸಿ ದೇಶಕ್ಕಾಗಿ ಬಲಿದಾನ ಮಾಡಿದವರನ್ನು ಸ್ಮರಿಸಿ ಗೌರವಿಸುವ ಕಾರ್ಯಕ್ರಮ ನಡೆಸಲಾಗುವುದೆಂದು ಹೇಳಿದರು.

ಬೆಳಗ್ಗೆ ೭ ಗಂಟೆಯಿಂದ ಜಿಲ್ಲೆಯ ಎಲ್ಲಾ ಕಡೆ ಈ ಕಾರ್ಯಕ್ರಮ ಆರಂಭವಾಗಿ ೭.೩೦ ನಂತರ ತಾಲ್ಲೂಕು ಮಟ್ಟದಲ್ಲಿ ೯ ಗಂಟೆಗೆ ಜಿಲ್ಲಾ ಮಟ್ಟದಲ್ಲಿ ಈ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆಚರಿಸಲಿದ್ದು ಜಿಲ್ಲೆಯ ಎಲ್ಲಾ ಸಾರ್ವಜನಿಕರು ಭಾಗವಹಿಸುವಂತೆ ಮನವಿ ಮಾಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಿ.ಪಂ ಉಪಕಾರ್ಯದರ್ಶಿ ಕರೀಗೌಡ, ಸಹಾಯಕ ಕಾರ್ಯದರ್ಶಿ ಅಪೂರ್ವ ಉಪಸ್ಥಿತರಿದ್ದರು.

‘Amrita Sarovar’ is an ambitious program of Central Government to conserve water source

About Author

Leave a Reply

Your email address will not be published. Required fields are marked *

You may have missed