September 19, 2024

ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

0
ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

ರಾಜ್ಯ ಕಾಂಗ್ರೆಸ್ ಸರ್ಕಾರ ವಿರುದ್ಧ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರ ಪ್ರತಿಭಟನೆ

ಚಿಕ್ಕಮಗಳೂರು: ಹಿಂದಿನ ಬಿಜೆಪಿ ಸರ್ಕಾರದಲ್ಲಿ ಜಾರಿಗೆ ತಂದಿದ್ದ ರೈತಪರವಾದ ಹಲವು ಯೋಜನೆಗಳನ್ನು ರದ್ದು ಪಡಿಸುವ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ರೈತ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಿ ಬಿಜೆಪಿ ರೈತ ಮೋರ್ಚಾ ಕಾರ್ಯಕರ್ತರು ಗುರುವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ಜಿಲ್ಲಾ ಬಿಜೆಪಿ ಕಚೇರಿಯಿಂದ ಆಜಾದ್ ಪಾರ್ಕ್ ವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಕಾಂಗ್ರೆಸ್ ಸರ್ಕಾರದ ವಿರುದ್ಧ ಧಿಕ್ಕಾರಗಳನ್ನು ಕೂಗಿದರು.

ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಕೆ.ಆರ್.ಆನಂದಪ್ಪ ಮಾತನಾಡಿ, ಮಳೆ ವೈಫಲ್ಯದಿಂದಾಗಿ ರಾಜ್ಯದಲ್ಲಿ ೪೩ ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೂ ಅದರ ಬಗ್ಗೆ ಚಿಂತನೆಗಳಿಲ್ಲದೆ ಕೇವಲ ಗ್ಯಾರಂಟಿಗಳ ಬಗ್ಗೆ ಕಾಂಗ್ರೆಸ್ ಪ್ರಚಾರ ಮಾಡುತ್ತಿದೆ ಆದರೆ ಯಾವ ಗ್ಯಾರಂಟಿಯೂ ಪರಿಪೂರ್ಣವಾಗಿ ಜಾರಿಯಾಗಿಲ್ಲ ಎಂದು ದೂರಿದರು.

ಪರಿಶಿಷ್ಟರ ಅಭಿವೃದ್ಧಿಗೆ ಮೀಸಲಿಟ್ಟ ೧೧ ಸಾವಿರ ಕೋಟಿ ರೂ. ಅನುದಾನವನ್ನೂ ಗ್ಯಾರಂಟಿಗೆ ಬಳಸಿಕೊಂಡು ಅನ್ಯಾಯ ಮಾಡಿದೆ. ದಲಿತರು ಹಾಗೂ ರೈತ ವಿರೋಧಿಯಾಗಿ ನಡೆದುಕೊಂಡಿದೆ ಎಂದು ಆರೋಪಿಸಿದರು.

ರಾಜ್ಯ ಕಾರ್ಯದರ್ಶಿ ಡಾ.ನವೀನ್‌ಕುಮಾರ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಇದೇ ರೀತಿ ರೈತವಿರೋಧಿ ನೀತಿ ಮುಂದುವರಿಸಿದಲ್ಲಿ ಕಾಂಗ್ರೆಸಿಗರು ಗ್ರಾಮಗಳಿಗೆ ಕಾಲಿಡದಂತೆ ಪ್ರತಿಭಟಿಸುತ್ತೇವೆ ಎಂದು ಎಚ್ಚರಿಸಿದರು.

೧೯೨೦ ರಲ್ಲಿ ಈ ದೇಶದ ರೈತರಿಗೆ ನಿಜವಾದ ಸ್ವಾತಂತ್ರ್ಯ ಬಂದಿತು. ರೈತ ಬೆಳೆದ ಉತ್ಪನ್ನಗಳನ್ನು ಎಲ್ಲಿ ಬೇಕಾದರೂ ಮಾರಾಟ ಮಾಡಬಹುದಾದ ಮಹತ್ವದ ಕಾಯ್ದೆಯನ್ನು ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು ಜಾರಿಗೆ ತಂದಿದ್ದವು. ಈಗಿನ ಕಾಂಗ್ರೆಸ್ ಸರ್ಕಾರ ದಲ್ಲಾಳಿಗಳ ಜೊತೆ ಶಾಮೀಲಾಗಿ ರೈತವಿರೋಧಿಯಾಗಿ ವರ್ತಿಸುತ್ತಿರುವುದನ್ನು ಖಂಡಿಸುತ್ತೇವೆ ಎಂದರು.

ರೈತರ ಮಕ್ಕಳು ಉನ್ನತ ವ್ಯಾಸಂಗ ಪಡೆಯಬೇಕು. ಮುಖ್ಯವಾಹಿನಿಗೆ ಅವರೂ ಬರಬೇಕು ಎನ್ನುವ ಕಾರಣಕ್ಕೆ ಬಿಜೆಪಿ ಸರ್ಕಾರ ೧೧ ಲಕ್ಷ ರೈತರ ಮಕ್ಕಳಿಗೆ ವಿದ್ಯಾನಿಧಿ ಯೋಜನೆಯಡಿ ನೆರವು ನೀಡಿತ್ತು. ಅದನ್ನೂ ಕಾಂಗ್ರೆಸ್ ಸರ್ಕಾರ ಕಿತ್ತುಹಾಕಿದೆ. ರೈತರ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ನೀಡಲು ಬೊಮ್ಮಾಯಿ ಅವರ ಸರ್ಕಾರ ೩೫೦೦ ಕೋಟಿ ರೂ. ಅನುದಾನ ಮಿಸಲಿಟ್ಟಿತ್ತು. ಎಲ್ಲಾ ತಾಲ್ಲೂಕುಗಳು ಹಾಗೂ ಜಿಲ್ಲಾ ಮಟ್ಟದಲ್ಲಿ ಗೋಶಾಲೆಗಳನ್ನು ತೆರೆಯುವುದು, ಗೋಹತ್ಯೆ ನಿಷೇಧ ಮಾಡುವುದನ್ನು ಜಾರಿಗೆ ತಂದಿತ್ತು. ಈಗಿನ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಓಲೈಕೆಗಾಗಿ ಅದನ್ನು ರದ್ದು ಪಡಿಸುವ ಕೆಟ್ಟ ನಿರ್ಧಾರ ತೆಗೆದುಕೊಂಡಿದೆ ಎಂದು ದೂರಿದರು.

ಕಾಂಗ್ರೆಸ್‌ನ ಆಷಾಢಭೂತಿ ತನ, ತುಷ್ಠೀಕರಣ ನೀತಿಯನ್ನು ನಿಲ್ಲಿಸದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ಹಮ್ಮಿಕೊಳ್ಳಲಾಗುವುದು. ೧.೫೦ ಲಕ್ಷ ಕೋಟಿ ರೂ. ಹಣವನ್ನು ನೀರಾವರಿಗೆ ಕೊಡುತ್ತೇವೆ ಎಂದು ಭರವಸೆ ನೀಡಿದ್ದ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ನಂತರ ಮೊದಲ ಬಜೆಟ್‌ನಲ್ಲಿ ೩೦ ಸಾವಿರ ಕೋಟಿ ರೂ. ಕೊಡುವ ಕಡೆ ಕೇವಲ ೫ ರಿಂದ ೧೦ ಸಾವಿರ ಕೋಟಿ ಕೊಟ್ಟಿದ್ದಾರೆ ಎಂದು ದೂರಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರುಡಪ್ಪ ಮಾತನಾಡಿ, ರೈತರು, ದಲಿತರ ಹೆಸರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಎಲ್ಲರಿಗೂ ದ್ರೋಹವೆಸಗುತ್ತಿದೆ. ಕೃಷಿ ಸಮ್ಮಾನ್ ಯೋಜನೆಯಡಿ ಪ್ರತಿ ರೈತರಿಗೆ ೪ ಸಾವಿರ ರೂ. ನೆರವು ನೀಡಲಾಗುತ್ತಿತ್ತು. ಅದನ್ನೂ ಕಾಂಗ್ರೆಸ್ ನಿಲ್ಲಿಸಿ ಅನ್ಯಾಯ ಮಾಡಿದೆ ಎಂದು ಆರೋಪಿಸಿದರು.

ಅವೈಜ್ಞಾನಿಕವಾಗಿ ವಿದ್ಯುತ್ ದರ ಏರಿರಿಸಲಾಗಿದೆ, ಭೂ ಸಿರಿ ಯೋಜನೆ, ಕೃಷಿ ಭೂಮಿ ಮಾರಾಟ ಕಾಯ್ದೆ, ಕ್ಷೀರ ಸಮೃದ್ಧಿ ಸಹಕಾರ ಬ್ಯಾಂಕ್, ಜೀವನ್ ಜ್ಯೋತಿ ವಿಮಾ ಯೋಜನೆ, ಸಿರಿಧಾನ್ಯ ಸಂರಿಸುವ ರೈತ ಉತ್ಪಾದಕ ಸಂ, ರೈತ ಸಂಪದ ಯೋಜನೆ, ಸಹಸ್ತ್ರ ಸರೋವರ ಮತ್ತು ಸಹ್ಯಾದ್ರಿ ಸಿರಿ ಯೋಜನೆ, ಮೀನುಗಾರರಿಗೆ ವಸತಿ ಸೌಲ, ಕಲ್ಯಾಣ ಕರ್ನಾಟಕದ ಕೃಷಿ ಕ್ಲಸ್ಟರ್ ಹೀಗೆ ರೈತರಿಗೆ ಅನುಕೂಲವಾಗುವ ಹತ್ತಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ರದ್ದು ಪಡಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದರು.

ಪ್ರತಿಭಟನೆಯಲ್ಲಿ ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ದೇವರಾಜ್ ಶೆಟ್ಟಿ, ಬೆಳವಾಡಿ ರವೀಂದ್ರ, ರೈತ ಮೊರ್ಚಾ ಕಾರ್ಯದರ್ಶಿ ದಿನೇಶ್ ಪಾದಮನೆ, ಕೆ.ಪಿ.ವೆಂಕಟೇಶ್, ಈಶ್ವರಳ್ಳಿ ಮಹೇಶ್, ಮಧುರಾಜ್ ಅರಸ್ ಇತರರು ಭಾಗವಹಿಸಿದ್ದರು.

Protest by BJP Raitha Morcha workers against the state Congress government

About Author

Leave a Reply

Your email address will not be published. Required fields are marked *

You may have missed