September 16, 2024

ಶಾಸಕರ ವಿರುದ್ದ ವಾಟ್ಸಾಪ್ ಸ್ಟೇಟಸ್ ಹಾಕಿದ ಮಹಿಳಾ ಪೋಲೀಸ್ ಪೇದೆ ಸೇವೆಯಿಂದ ಅಮಾನತ್ತು

0
ಕಡೂರು : ಕಡೂರು ಪೊಲೀಸ್ ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾವಣೆಯನ್ನು ವಿರೋಧಿಸಿ ಮಹಿಳಾ ಪೋಲೀಸ್ ಪೇದೆ ಲತಾ ಎಂಬುವವರು ಶಾಸಕರ ವಿರುದ್ದ ವಾಟ್ಸಾಪ್ ಸ್ಟೇಟಸ್ ಹಾಕಿದ್ದ ಹಿನ್ನಲೆಯಲ್ಲಿ ಸೇವೆಯಿಂದ ಅಮಾನತ್ತುಗೊಂಡಿದ್ದಾರೆ.
ಕಡೂರು ಠಾಣೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಮಹಿಳಾ ಪೇದೆ ಲತಾ ಎಂಬುವವರು ದ್ವೇಷದ ವರ್ಗಾವಣೆಯ ಕುರಿತಾಗಿ ಶಾಸಕ ಆನಂದ್ ಅವರ ವಿರುದ್ದವೇ ಮೌನ ಸಮರದ ಮೂಲಕ ಆಕ್ರೋಶವನ್ನು ಹೊರಹಾಕಿರುವ ಸ್ಟೇಟಸ್ ತುಣುಕುಗಳು ವೈರಲ್‌ಗೊಂಡಿದೆ.
ಚುನಾವಣೆ ಸಂದರ್ಭದಲ್ಲಿ ಹೆಲ್ಮೆಟ್ ಹಾಕಿಲ್ಲ ಎಂದು ಸ್ಥಳೀಯ ಕಾಂಗ್ರೆಸ್ ಕಾರ್ಯಕರ್ತರಿಗೆ ಮಹಿಳಾ ಪೇದೆ ದಂಡ ಹಾಕಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಸ್ಥಳಕ್ಕೆ ಬಂದು ಆನಂದ್ ಅವರು ಆಕ್ರೋಶ ಹೊರಹಾಕಿದ್ದರು. ಅವರು ಪೊಲೀಸರ ವಿರುದ್ಧ ಆಕ್ರೋಶ ಹೊರ ಹಾಕಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಚುನಾವಣೆ ಮುಗಿದ ಬಳಿಕ ಮಹಿಳಾ ಪೇದೆಯನ್ನು ಕಡೂರು ಠಾಣೆಯಿಂದ ತರೀಕೆರೆ ಪೊಲೀಸ್ ಠಾಣೆಗೆ ವರ್ಗಾಯಿಸಿದ್ದರ ಬಗ್ಗೆ ಹಳೆಯ ದ್ವೇಷಕ್ಕೆ ವರ್ಗಾವಣೆ ಮಾಡಲಾಗಿದೆ ಎಂದು ಮಹಿಳಾ ಪೇದೆ ಆಕ್ರೋಶವನ್ನು ಹೊರಹಾಕಿದ್ದು, ಈ ಮಧ್ಯೆ, ಕಳೆದ ೪ ದಿನಗಳ ಹಿಂದೆ ಶಾಸಕರ ಮನೆಗೆ ತೆರಳಿ ಮಹಿಳಾ ಪೇದೆ ವರ್ಗಾವಣೆಯ ವಿಚಾರವಾಗಿ ಪ್ರಶ್ನಿಸಿದ್ದಾರೆ.
ವಾಟ್ಸ್‌ಪ್ ಸ್ಟೇಟಸ್‌ನಲ್ಲಿ ಬರೆದಿದ್ದೇನು? : ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದ ಮಹಿಳಾ ಪೇದೆ, ’ನನಗೆ ಏನಾದರೂ ತೊಂದರೆಯಾದರೆ ಎಂಎಲ್‌ಎನೇ ಕಾರಣ’, ’ಕಡೂರು ಎಂಎಲ್‌ಎ ನನ್ನ ಕಡೆಯಿಂದ ಧಿಕ್ಕಾರವಿರಲಿ’, ಎಂದು ವಾಟ್ಸ್‌ಪ್ ಸ್ಟೇಟಸ್‌ನಲ್ಲಿ ಉಲ್ಲೇಖಿಸಿದ್ದರು. ಈ ಮಧ್ಯೆ, ಶಾಸಕ ಆನಂದ್ ವಿರುದ್ಧ ಪೋಸ್ಟ್ ಮಾಡಿದ್ದಕ್ಕೆ ಮಹಿಳಾ ಪೇದೆಯನ್ನು ಅಮಾನತು ಮಾಡಿ ಚಿಕ್ಕಮಗಳೂರು ಎಸ್ಪಿ ಉಮಾ ಪ್ರಶಾಂತ್ ಅವರು ಆದೇಶ ಹೊರಡಿಸಿದ್ದಾರೆ.
ಮಹಿಳಾ ಪೊಲೀಸ್ ಪೇದೆ ಲತಾ ಅವರ ವರ್ಗಾವಣೆಯಲ್ಲಿ ಯಾವುದೇ ನನ್ನ ಹಸ್ತಕ್ಷೇಪ ಇಲ್ಲ, ಈ ವಿಚಾರವಾಗಿ ಯಾವುದೇ ತರಹದ ಪರ-ವಿರೋಧವಾಗಿ ಶಿಫಾರಸ್ಸು ಲೆಟರ್‌ಗಳನ್ನು ನಾನು ಕೊಟ್ಟಿಲ್ಲ, ಪೊಲೀಸ್ ಇಲಾಖೆಯಲ್ಲಿ ಸಹಜವಾಗಿಯೇ ನಡೆಯುವ ವರ್ಗಾವಣೆ ಪ್ರಕ್ರಿಯೆಯಲ್ಲಿ ಇದು ಕೂಡ ನಡೆದಿರಬಹುದಾಗಿದೆ. ಈ ವಿಚಾರದಲ್ಲಿ ಯಾವುದೇ ಮಾಹಿತಿ ಇಲ್ಲ ಎಂದು ಶಾಸಕ ಕೆ.ಎಸ್. ಆನಂದ್ ಸ್ಪಷ್ಟನೆ ನೀಡಿದರು.
ಈ ಕುರಿತು ಪಟ್ಟಣದ ತಮ್ಮ ಕಚೇರಿಯಲ್ಲಿ ಶನಿವಾರ ಮಾಧ್ಯಮಗಳೊಂದಿಗೆ ಮಹಿಳಾ ಪೇದೆಯ ಆರೋಪದ ಬಗ್ಗೆ ಪ್ರತಿಕ್ರಿಯಿಸಿ ಮಾತನಾಡಿ, ಕ್ಷೇತ್ರದಲ್ಲಿ ನಡೆಯುವ ಅಕ್ರಮ ಮದ್ಯಮಾರಾಟ, ಅಕ್ರಮವಾಗಿ ಮರಳು ಸಾಗಾಣಿಕೆ ಹಾಗೂ ಇತರೆ ಕಾನೂನು ಬಾಹಿರ ಚಟುವಟಿಕೆಗಳ ಮೇಲೆ ಕಡಿವಾಣ ಹಾಕುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚನೆ ನೀಡಿದ್ದೆನು, ಈ ವಿಚಾರದಲ್ಲಿ ಪೊಲೀಸ್ ಇಲಾಖೆಯನ್ನು ಶಿಸ್ತು ಕಾಪಾಡಿಕೊಳ್ಳಲು ಎಸ್ಪಿ ಅವರು ಅಗತ್ಯಕ್ರಮವನ್ನು ವಹಿಸಿದ್ದಾರೆ. ಇಲಾಖೆಯ ಕೆಲ ವ್ಯವಸ್ಥೆಗಳನ್ನು ಸರಿಪಡಿಸಿಕೊಳ್ಳುವ ಹಿನ್ನಲೆಯಲ್ಲಿ ವರ್ಗಾವಣೆ ಪ್ರಕ್ರಿಯೆಗಳನ್ನು ನಡೆಸಿದ್ದಾರೆ. ಈ ವ್ಯಾಪ್ತಿಯಲ್ಲಿ ಪೇದೆ ಲತಾ ಅವರು ಸಹಜವಾಗಿ ವರ್ಗಾವಣೆಗೊಂಡಿರಬಹುದು. ಅವರ ವರ್ಗಾವಣೆ ವಿಚಾರದಲ್ಲಿ ನನ್ನ ಹೆಸರನ್ನು ತಂದಿರುವುದು ಒಂದು ರೀತಿ ಷಡ್ಯಂತ್ರದ ರಾಜಕೀಯ ಪ್ರೇರಿತವಾಗಿ ಸೃಷ್ಟಿಸಲಾಗುತ್ತಿದೆ ಎಂದರು.
ಮಹಿಳಾ ಪೇದೆಯು ವಿವಿಧ ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸಿದ್ದರ ಬಗ್ಗೆಯೂ ಕನಿಷ್ಟ ಮಾಹಿತಿಯು ನನಗಿಲ್ಲ. ಕಳೆದ ನಾಲ್ಕು ದಿನಗಳ ಹಿಂದೆ ನನ್ನ ಮನೆಗೆ ಭೇಟಿ ನೀಡಿದ ಲತಾ ಅವರು ವರ್ಗಾವಣೆಯ ವಿಚಾರದ ಬಗ್ಗೆ ಏರುಧ್ವನಿಯಲ್ಲಿಯೇ ಪ್ರಶ್ನಿಸಿದ್ದರು. ಆದರೆ ನಿಮ್ಮ ವರ್ಗಾವಣೆ ವಿಚಾರಕ್ಕು ನನಗೂ ಯಾವುದೇ ರೀತಿಯ ಸಂಬಂಧವಿಲ್ಲ. ನಿಮ್ಮ ಮೇಲಾಧಿಕಾರಿಗಳನ್ನು ವಿಚಾರಿಸಿಕೊಳ್ಳಿ ಎಂದು ಸೌಜನ್ಯದಿಂದ ತಿಳಿಸಿದ್ದೇನು. ಆದಾದ ಕೆಲವೇ ಗಂಟೆಗಳಲ್ಲಿ ನನ್ನ ವಿರುದ್ದ ಸ್ಟೇಟಸ್ ಹಾಕಿಕೊಂಡಿದ್ದಾರೆ ಎಂದರು.
ಶಿಸ್ತು ಕಾಪಾಡುವ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಸಿಬ್ಬಂದಿಯೊಬ್ಬರು ಶಾಸಕ ಸ್ಥಾನಕ್ಕೆ ಅಗೌರವ ತೋರುವ ರೀತಿಯಲ್ಲಿ ವರ್ತಿಸಿರುವುದರ ಕುರಿತು ಘಟನೆಯ ಬಗ್ಗೆ ವಿಧಾನಸಭೆಯ ಸ್ವೀಕರ್ ಅವರ ಗಮನಕ್ಕೆ ತಂದು ಸೂಕ್ತಕ್ರಮಕ್ಕಾಗಿ ಒತ್ತಾಯಿಸಲಾಗುತ್ತದೆ. ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯಿಲ್ಲ ಎಂದರು.
Female police constable suspended from service for posting WhatsApp status against MLA

About Author

Leave a Reply

Your email address will not be published. Required fields are marked *