September 11, 2024

ಜಿಲ್ಲೆಯ ಭೂ ಅಕ್ರಮದ ಸಮಗ್ರ ತನಿಖೆಗೆ ರೈತಸಂಘ ಆಗ್ರಹ

0
ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯ ಕಡೂರು ಮತ್ತು ಮೂಡಿಗೆರೆ ತಾಲ್ಲೂಕುಗಳಲ್ಲಿ ನಡೆದಿರುವ ಭೂ ಅಕ್ರಮದ ಸಮಗ್ರ ತನಿಖೆ ನಡೆಸಲು ೧೫ ಜನರ ತನಿಖಾಧಿಕಾರಿಗಳ ತಂಡವನ್ನು ನೇಮಿಸಿರುವುದನ್ನು ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ ಸ್ವಾಗತಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಎರಡು ತಾಲ್ಲೂಕುಗಳಲ್ಲಿ ಫಾರಂ ನಂ ೫೦, ೫೩, ೫೭ ರಲ್ಲಿ ಭೂ ಅಕ್ರಮ ನಡೆದಿರುವ ಬಗ್ಗೆ ಸಂಘದ ವತಿಯಿಂದ ದೂರು ಸಲ್ಲಿಸಿದ್ದು ಇದರ ಆಧಾರದ ಮೇಲೆ ತನಿಖಾ ತಂಡ ರಚಿಸಲಾಗಿದೆ ಎಂದು ತಿಳಿಸಿದರು.

ಕಡೂರು ತಾಲ್ಲೂಕಿನಲ್ಲಿ ಸರ್ಕಾರಿ ಬೀಳು ಎಂದು ದಾಖಲಾಗಿದ್ದ ಉಳಿನಾಗರು ಸರ್ವೇ ನಂ, ೪೩ರ ೫ ಎಕರೆ ೦.೩ ಗುಂಟೆ ಜಮೀನನ್ನು ೪೦ ವರ್ಷಗಳ ಹಿಂದೆ ಮರಣ ಹೊಂದಿದ್ದ ವ್ಯಕ್ತಿಯ ಹೆಸರಿಗೆ ಖಾತೆ ಮಾಡಿ ನಂತರ ಧಾನಪತ್ರದ ಆಧಾರದ ಮೇಲೆ ಖಾಸಗಿ ವ್ಯಕ್ತಿಗಳಿಗೆ ಪರಬಾರೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಡೂರು ತಹಸೀಲ್ದಾರ್ ಜೆ.ಉಮೇಶ್ ಎಫ್.ಐ.ಆರ್ ದಾಖಲು ಮಾಡಿರುವುದಾಗಿ ತಿಳಿದುಬಂದಿದೆ ಎಂದರು.

ತಹಸಿಲ್ದಾರ್ ಜೆ.ಉಮೇಶ್ ಕಡೂರು ತಾಲ್ಲೂಕಿಗೆ ಬಂದ ನಂತರ ಫಾರಂ ನಂಬರ್, ೫೦,೫೩,೫೭, ಅಡಿಯಲ್ಲಿ ಜಮೀನು ಉಳ್ಳವರಿಗೆ, ಗ್ರಾಮದಲ್ಲಿ ವಾಸವಿಲ್ಲದ ವ್ಯಕ್ತಿಗಳಿಗೆ, ನೌಕರರಿಗೆ ಸೇರಿದಂತೆ ಅರ್ಹ ಫಲಾನುಭವಿಗಳನ್ನು ಕಡೆಗಣಿಸಿ ಹಣ ಪಡೆದು ಜಮೀನುನ್ನು ಹಂಚಿದ್ದಾರೆ ಎಂದು ದೂರಿದರು.

ಅರ್ಜಿ ಪಡೆಯದೆ ದಾಖಲಾತಿಗಳನ್ನು ಸೃಷ್ಠಿಸದೆ ಕಛೇರಿಯಲ್ಲಿ ಕುಳಿತು ಗ್ರಾಮ ಲೆಕ್ಕಿಗರು ರೆವಿನ್ಯೂ ಇನ್ಸ್‌ಪೆಕ್ಟರ್ ಶಿರಸ್ತೆದಾರ್ ಭೂಮಿ ಕೇಂದ್ರದ ಸಿಬ್ಬಂದಿಗಳು ಸೇರಿ ಅಕ್ರಮ ಎಸಗಿದ್ದು ಸರ್ಕಾರ ಯಾವುದೇ ಮುಲಾಜಿಲ್ಲದೆ ಇವರುಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಮೂಡಿಗೆರೆ ತಾಲ್ಲೂಕಿನಲ್ಲಿಯು ಮನಸೊ ಇಚ್ಚೆ ಸರ್ಕಾರಿ ಜಮೀನನ್ನು ೫೦,೫೩,೫೭ ಹೆಸರಲ್ಲಿ ಅಕ್ರಮವಾಗಿ ಮಂಜೂರು ಮಾಡಿದ್ದು ಸರ್ಕಾರಿ ಜಾಗದಲ್ಲೇ ಹೊರಗಿನ ಖಾಸಗಿ ವ್ಯಕ್ತಿಗಳು ರೆಸಾರ್ಟ್ ಹೋಂಸ್ಟೇಗಳನ್ನು ನಿರ್ಮಿಸಿ ವ್ಯಾಪಾರ ನಡೆಸುತ್ತಿರುವ ಇವರುಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಆಗ್ರಹಿಸಿದರು.

ದಾಖಲೆಯಲ್ಲಿ ಖಾತೆ ವಜಾಗೊಳಿಸಿ ಜಮೀನು ಖುಲ್ಲಾ ಮಾಡಿಸದಿದ್ದರೆ ಪುನಃ ಅವರುಗಳೇ ಜಮೀನು ವಶಪಡಿಸಿಕೊಳ್ಳುವ ಸಾಧ್ಯತೆಯಿದ್ದು ಸರ್ಕಾರ ಪೂರ್ಣ ಜಮೀನನ್ನು ವಶಕ್ಕೆ ಪಡೆದು ಅರ್ಹ ಬಡ ಜಮೀನುರಹಿತರಿಗೆ ಭೂಮಿ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.

ಈಗಾಗಲೇ ಗ್ರಾಮ ಲೆಕ್ಕಿಗರು ರೆವಿನ್ಯೂ ಇನ್ಸ್‌ಪೆಕ್ಟರ್ ಶಿರಸ್ತೆದಾರ ಭೂಮಿ ಕೇಂದ್ರದ ಸಿಬ್ಬಂಧಿಗಳು ಈ ಕೇಸ್‌ನಿಂದ ತಮ್ಮನ್ನು ಬಚಾವ್ ಮಾಡುವಂತೆ ಶಾಸಕರ ಮೇಲೆ ಒತ್ತಡ ತರುತ್ತಿರುವುದಾಗಿ ತಿಳಿದುಬಂದಿದ್ದು ಶಾಸಕರು ಯಾವುದೇ ಒತ್ತಡಕ್ಕೆ ಒಳಗಾಗದೆ ನಿಷ್ಪಕ್ಷಪಾತ ತನಿಖೆಗೆ ಸಹಕರಿಸಿ ಭ್ರಷ್ಟರ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಬೇಕಾಗಿ ಒತ್ತಾಯಿಸುತ್ತೇನೆ ಎಂದರು.

ಜಿಲ್ಲೆಯಲ್ಲಿ ಕಳೆದ ೧೦ ವರ್ಷಗಳಿಂದಲೂ ಸಾವಿರಾರು ಎಕರೆ ಸರ್ಕಾರಿ ಭೂಮಿಯನ್ನು ಖಾಸಗಿ ವ್ಯಕ್ತಿಗಳಿಗೆ ಅಕ್ರಮವಾಗಿ ಮಂಜೂರು ಮಾಡಿರುವ ಪ್ರಕರಣಗಳಿದ್ದು ಜಿಲ್ಲೆಯ ಎಲ್ಲಾ ತಾಲ್ಲೂಕಿನಲ್ಲಿ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು.

ಒಟ್ಟಾರೆಯಾಗಿ ಜಿಲ್ಲೆಯಲ್ಲಿ ೪ ಸಾವಿರಕ್ಕೂ ಹೆಚ್ಚು ಖಾಸಗಿ ವ್ಯಕ್ತಿಗಳಿಗೆ ಭೂ ಮಂಜೂರಾತಿ ನೀಡಿದ್ದು ಈ ಭೂ ಅಕ್ರಮದಲ್ಲಿ ಭಾಗಿಯಾಗಿರುವ ಎಲ್ಲರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು. ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಜೆ ಜಾರ್ಜ್ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಜೇಂದ್ರಕುಮಾರ್ ಕಟಾರಿಯಾರವರಿಗೆ ಮನವಿ ನೀಡುತ್ತೇವೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಮಹೇಶ್, ಕಡೂರು ತಾಲ್ಲೂಕು ಅಧ್ಯಕ್ಷ ಕೆ.ಟಿ ಆನಂದ್, ಕಾರ್ಯದರ್ಶಿ ಬಸವರಾಜ್, ಉಪಾಧ್ಯಕ್ಷ ವಿಜಯಕುಮಾರ್ ಇತ್ತೀಚೆಗೆ ರೈತ ಸಂಘ ಸೇರ್ಪಡೆಗೊಂಡ ಶಿವಣ್ಣ ಮಲ್ಲುಂಡಪ್ಪ, ಶಿವಾನಂದ್ ಉಪಸ್ಥಿತರಿದ್ದರು.

The farmers’ union demands a comprehensive investigation into the land illegality in the district

 

About Author

Leave a Reply

Your email address will not be published. Required fields are marked *

You may have missed