September 19, 2024

ಪೌಷ್ಠಿಕ ಆಹಾರ ಸೇವನೆ ಜ್ಞಾನಾರ್ಜನೆಗೆ ಪೂರಕ

0
೯ನೇ ಮತ್ತು ೧೦ನೇ ತರಗತಿಯ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಾ ಸಮಾರಂಭ

೯ನೇ ಮತ್ತು ೧೦ನೇ ತರಗತಿಯ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಾ ಸಮಾರಂಭ

ಚಿಕ್ಕಮಗಳೂರು: ವಿದ್ಯಾರ್ಥಿಗಳಿಗೆ ನೀಡಲಾಗುತ್ತಿರುವ ಪೌಷ್ಠಿಕ ಆಹಾರದ ಗುಣಮಟ್ಟ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶಿಕ್ಷಕರು ಮತ್ತು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಸಮನ್ವಯತೆ ಸಾಧಿಸಿ ಕರ್ತವ್ಯ ನಿರ್ವಹಿಸಬೇಕೆಂದು ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇ ಗೌಡ ಹೇಳಿದರು.

ನಗರದ ಜ್ಯೂನಿಯರ್ ಕಾಲೇಜಿನಲ್ಲಿಂದು ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ೯ನೇ ಮತ್ತು ೧೦ನೇ ತರಗತಿಯ ಸರ್ಕಾರಿ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಟಿಕ ಆಹಾರ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ಊಟದಲ್ಲಿ ಪೌಷ್ಟಿಕಾಂಶದ ಕೊರತೆಯಿಂದ ಅನೇಕ ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ಸಾಧ್ಯತೆಯಿದ್ದು, ಪೌಷ್ಠಿಕ ಆಹಾರ ಸೇವನೆ ಜ್ಞಾನಾರ್ಜನೆಗೆ ಪೂರಕ ಮತ್ತು ಶಾಲೆಗಳಲ್ಲಿ ಒಟ್ಟಿಗೆ ಕುಳಿತು ಆಹಾರ ಸೇವನೆ ಮಾಡುವುದರಿಂದ ಸಾಮರಸ್ಯ, ಭಾವೈಕ್ಯತೆ ಮೂಡುತ್ತದೆ ಎಂದು ಹೇಳಿದರು.

ಬಿಸಿಯೂಟ ಯೋಜನೆ ಆರಂಭವಾದ ನಂತರ ಸಾಕ್ಷರತಾ ಯೋಜನೆಗಳಲ್ಲಿ ಬಹಷ್ಟು ಅಭಿವೃದ್ದಿಯಾಗಿದೆ, ಮಕ್ಕಳ ಹಾಜರಾತಿಯು ಹೆಚ್ಚಳವಾಗಿದೆ. ಬಡ ರೈತ ಕುಟುಂಬಗಳಿಂದ ಬಂದಿರುವ ಗ್ರಾಮೀಣ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟ ಯೋಜನೆ ವರದಾನವಾಗಿದ್ದು, ಇದರಿಂದ ಬಡಮಕ್ಕಳ ವಿದ್ಯಾರ್ಜನೆ ಸುಲಲಿತವಾಗಲಿದೆ ಎಂದರು.

ಆಹಾರ ಪದ್ದತಿ ಎಂಬುದು ಪ್ರತಿಯೊಬ್ಬರಿಗೂ ಸಂವಿಧಾನಬದ್ದ ಹಕ್ಕಾಗಿದ್ದು ೮ರಿಂದ ೯ರವರೆಗಿನ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಬಿಸಿಯೂಟದೊಂದಿಗೆ ಸೇವಿಸುವವರಿಗೆ ಮೊಟ್ಟೆ, ಉಳಿದ ವಿದ್ಯಾರ್ಥಿಗಳಿಗೆ ಬಾಳೆಹಣ್ಣು ಮತ್ತು ಕಡಲೆಚಿಕ್ಕಿಯನ್ನು ನೀಡುತ್ತಿರುವುದು ಸ್ವಾಗತಾರ್ಹ ಎಂದರು.

ಶಾಸಕ ಹೆಚ್.ಡಿ ತಮ್ಮಯ್ಯ ಮಾತನಾಡಿ ವಿದ್ಯಾರ್ಥಿಗಳು ದೊಡ್ಡ ಕನಸು, ದೊಡ್ಡ ಗುರಿಯೊಂದಿಗೆ ವ್ಯಾಸಂಗ ಮಾಡಿ ಉನ್ನತ ಹುದ್ದೆಗಳನ್ನು ಅಲಂಕರಿಸುವ ಮೂಲಕ ಸರ್ಕಾರದ ಯೋಜನೆಗಳಿಗೆ ಸಾರ್ಥಕತೆ ತಂದುಕೊಡಬೇಕೆಂದು ಕಿವಿಮಾತು ಹೇಳಿದರು. ವಿದ್ಯಾರ್ಥಿಗಳು ಹಸಿವಿನಿಂದ ಬಳಲಬಾರದು ಮತ್ತು ವಿದ್ಯಾರ್ಥಿಗಳ ಹಾಜರಾತಿ ಹೆಚ್ಚಳ ಮಾಡುವ ಗುರಿಯೊಂದಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಮಧ್ಯಾಹ್ನದ ಬಿಸಿಯೂಟ ಜಾರಿಗೊಳಿಸಲಾಗಿದೆ ಎಂದರು.

ಸರ್ಕಾರಿ ಶಾಲೆಗಳಲ್ಲಿ ನುರಿತ ಶಿಕ್ಷಕರು, ಸಮವಸ್ತ್ರ, ಪಠ್ಯಪುಸ್ತಕ, ವಿದ್ಯಾರ್ಥಿವೇತನ , ಮಧ್ಯಾಹ್ನದ ಬಿಸಿಯೂಟ ಸೇರಿದಂತೆ ವಿದ್ಯಾರ್ಥಿಗಳಿಗೆ ಎಲ್ಲಾ ಬಗೆಯ ನೆರವು ನೀಡುತ್ತಿದ್ದು, ಸರ್ಕಾರದ ಯೋಜನೆಯ ಸದುಪಯೋಗಪಡಿಸಿಕೊಂಡು ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

ವಿಶೇಷವಾಗಿ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಡವರು, ಅಲ್ಪಸಂಖ್ಯಾತರು, ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಮೇಲಿನ ಕಾಳಜಿಯಿಂದ ೧ರಿಂದ ೭ನೇ ತರಗತಿಯವರೆಗಿನ ಮಕ್ಕಳಿಗೆ ನೀಡುತ್ತಿದ್ದ ಪೌಷ್ಠಿಕ ಆಹಾರವನ್ನು ೮ರಿಂದ ೧೦ನೇ ತರಗತಿಯ ವಿದ್ಯಾರ್ಥಿಗಳಿಗೂ ಯೋಜನೆಯನ್ನು ವಿಸ್ತರಿಸಿದ್ದಾರೆ ಎಂದು ಹೇಳಿದರು.

ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾ.ಗೋಪಾಲಕೃಷ್ಣ ಮಾತನಾಡಿ ಜಿಲ್ಲೆಯಲ್ಲಿ ೧ರಿಂದ ೧೦ನೇ ತರಗತಿಯವರೆಗೆ ವ್ಯಾಸಂಗ ಮಾಡುತ್ತಿರುವ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ೮೦,೫೯೨ ವಿದ್ಯಾರ್ಥಿಗಳು ಬಿಸಿಯೂಟ ಯೋಜನೆಯೊಂದಿಗೆ ಪೂರಕ ಪೌಷ್ಟಿಕ ಆಹಾರ ಯೋಜನೆಯ ಲಾಭ ಪಡೆಯಲಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ್ ಸಾರ್ವಜನಿಕ ಶಿಕ್ಷಣ ಇಲಾಖೆಯ ನಿರ್ದೇಶಕ ರಂಗನಾಥಸ್ವಾಮಿ, ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ವಿರೂಪಾಕ್ಷ ಸೇರಿದಂತೆ ಹಲವರಿದ್ದರು.

Consuming nutritious food is a supplement to knowledge acquisition

About Author

Leave a Reply

Your email address will not be published. Required fields are marked *

You may have missed