September 8, 2024

ವಚನ ಸಾಹಿತ್ಯ ಪಿತಾಮಹ ಫ.ಗು.ಹಳಕಟ್ಟಿ ಸಾಹಿತ್ಯ ಸೇವೆ ಅನನ್ಯ

0
Zilla Kannada Sahitya Parishad Chikkamagaluru

Zilla Kannada Sahitya Parishad Chikkamagaluru

ಚಿಕ್ಕಮಗಳೂರು: ವಚನಕಾರರು ಸಮಾಜವನ್ನು ತಿದ್ದುವುದಕ್ಕೆ ನೀಡಿದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಸಂರಕ್ಷಿಸಿ, ಜನತೆಗೆ ಪರಿಚಯಿಸಿದ ಕೀರ್ತಿ ಡಾ.ಫ.ಗು.ಹಳಕಟ್ಟಿಯವರಿಗೆ ಸಲ್ಲುತ್ತದೆ. ಅವರ ಸಾಹಿತ್ಯ ಸೇವೆ ಅನನ್ಯವಾದದ್ದು ಎಂದು ಎಸ್.ಟಿ.ಜೆ. ಮಹಿಳಾ ಪದವಿ ಕಾಲೇಜು ಪ್ರಾಂಶುಪಾಲೆ ಜೆ. ಕೆ. ಭಾರತಿ ಹೇಳಿದರು.

ಅವರು ನಗರದ ಎಸ್. ಟಿ. ಜೆ ಕಾಲೇಜು ಬಾಲಕಿಯರ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಚಿಕ್ಕಮಗಳೂರು ಹಾಗೂ ಎಸ್ ಟಿ ಜೆ ಬಾಲಕಿಯರ ಪದವಿ ಪೂರ್ವ ಕಾಲೇಜು ಇವರುಗಳ ಸಂಯುಕ್ತಾಕ್ಷರದಲ್ಲಿ ಆಯೋಜಿಸಿದ್ದ ದತ್ತಿ ಉಪನ್ಯಾಸ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡಿ ಡಾ.ಫ.ಗು.ಹಳಕಟ್ಟಿಯವರ ವಚನ ಸಾಹಿತ್ಯ ಸಂರಕ್ಷಣೆ ವಚನ ಸಾಹಿತ್ಯ ಮತ್ತು ವಚನಕಾರರ ಬಗ್ಗೆ ಅಮೂಲಾಗ್ರವಾಗಿ ತಿಳಿಯಲು ಡಾ.ಫ.ಗು.ಹಳಕಟ್ಟಿಯವರ ಶ್ರಮದಿಂದ ಸಾಧ್ಯವಾಗಿದೆ ಎಂದರು.

ನಶಿಸಿ ಹೋಗುತ್ತಿದ್ದ ವಚನ ಸಾಹಿತ್ಯದ ಮೂಲ ಪ್ರತಿಗಳಾದ ತಾಳೆಗರಿಗಳನ್ನು, ವಚನಗಂಟುಗಳನ್ನು ಮನೆ ಮನೆಗಳಿಗೆ ತೆರಳಿ ಹುಡುಕಿ, ಸಂಗ್ರಹಿಸಿದ ಡಾ.ಫ.ಗು.ಹಳಕಟ್ಟಿಯವರು ಗ್ರಂಥರೂಪದಲ್ಲಿ ಪ್ರಕಟಿಸಿ ಸಾಹಿತ್ಯ ಲೋಕಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.

ಫ. ಗು. ಹಳಕಟ್ಟಿಯವರ ಭಾವಚಿತ್ರ ಅನಾವರಣ ಮಾಡಿ ಪುಷ್ಪ ನಮನ ಸಲ್ಲಿಸಿ ಮಾತನಾಡಿದ ಯುರೇಕಾ ಅಕಾಡೆಮಿಯ ಪ್ರಾಂಶುಪಾಲರಾದ ದೀಪಕ್ ದೊಡ್ಡಯ್ಯ ಮಾತನಾಡಿ ವಚನ ಸಾಹಿತ್ಯ ವಿಶ್ವದ ಅಗ್ರಗಣ್ಯ ಸಾಹಿತ್ಯವಾಗಿದೆ ವಚನ ಸಾಹಿತ್ಯದ ಪರಿಕಲ್ಪನೆ ನಮ್ಮೆಲ್ಲರಿಗೂ ಕೂಡ ಆದರ್ಶ ತತ್ವಗಳನ್ನು ಅಳವಡಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು.

ಘ. ಗು. ಹಳಕಟ್ಟಿ ಯವರಿಂದಾಗಿ ವಚನ ಸಾಹಿತ್ಯ ಸಂಗ್ರಹಕ್ಕೆ ಕಾರಣರಾಗಿದ್ದಾರೆ ಇವರಿಂದಾಗಿ ಈ ನಾಡಿನಲ್ಲಿ ವಚನ ಸಾಹಿತ್ಯ ತನ್ನ ಪರಂಪರೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಅಧ್ಯಕ್ಷ ರವೀಶ್ ಬಸಪ್ಪ ವಚನ ಪಿತಾಮಹ ಫ. ಗು. ಹಳಕಟ್ಟಿಯರ ಕುರಿತು ಉಪನ್ಯಾಸ ನೀಡಿ ಮಾತನಾಡಿ, ೧೨ನೇ ಶತಮಾನದ ಶಿವ ಶವರಣರು ಜಾತಿ ಮತ್ತು ಧರ್ಮಗಳ ಎಲ್ಲೇ ಮೀರಿ ಲಿಂಗ, ವರ್ಣ, ವರ್ಗ ರಹಿತವಾದ ಸಮಾಜವನ್ನು ಕಟ್ಟುವ ನಿಟ್ಟಿನಲ್ಲಿ ಶ್ರಮಿವಹಿಸಿ, ಹಿತವಾದ ಬದುಕು ನಡೆಸಿದ ಅನುಭಾವ ಶರಣರು. ಇಂತಹ ಶರಣ ಪರಂಪರೆ ೧೨ನೇ ಶತಮಾನದ ನಂತರ ಕಾಲಗರ್ಭದಲ್ಲಿ ವಚನಗಳಿಗೆ ದೂಳು ಹಿಡಿದು ವಚನಕಾರರ ಬದುಕಿಗೆ ಒಂದಿಷ್ಟು ಮಂಕು ಕವಿದಂತಾಯಿತು. ತದನಂತರ ಅಲ್ಲೊಂದು ಇಲ್ಲೊಂದು ಸಂಶೋಧನೆಗಳಾದ ಮೇಲೆ ಅದಕ್ಕೆ ಪೂರ್ಣ ಸ್ವರೂಪದ ಬೆಳಕನ್ನು, ಕ್ಷಕಿರಣ ಬೀರಲು ಅವತರಿಸಿ ಬಂದ ವ್ಯಕ್ತಿ ವಚನ ಸಾಹಿತ್ಯ ಪಿತಾಮಹ ಡಾ. ಫ. ಗು. ಹಳಕಟ್ಟಿಯರು ಎಂದರು.

ಫಕೀರಪ್ಪ ಗುರುಬಸಪ್ಪ ಹಳಕಟ್ಟಿ ಎಂಬ ವ್ಯಕ್ತಿ ಒಂದು ಶಕ್ತಿಯಾಗಿ, ಒಂದು ವಿಶ್ವವಿದ್ಯಾಲಯ, ಸರ್ಕಾರಗಳು ಮಾಡದೇ ಇರುವ ಬಹುದೊಡ್ಡ ಕಾರ್ಯವನ್ನು ಕೈಗೆತ್ತಿಕೊಂಡು ಹರಕಲು ಗುಡಿಸಲು, ಮುರುಕಲು ಮನೆ, ಹರಿದ ಚಾಪೆ, ಅಂಗಿ, ಮೇಲೊಂದು ಟೋಪಿ, ಕಚ್ಚೆ ಪಂಚೆ ಹಾಕಿಕೊಂಡು ಫಕೀರನಂತೆ ಸೈಕಲ್ ಮೇಲೆ ಕುಳಿತು ಹಳ್ಳಿಹಳ್ಳಿಗಳನ್ನು, ಮಠಮಾನ್ಯಗಳನ್ನು, ದೇವಾಲಯಗಳನ್ನು ಸುತ್ತಿ ತನ್ನ ಬದುಕನ್ನು ವಚನ ಸಾಹಿತ್ಯಕ್ಕಾಗಿ ಧಾರೆ ಎರೆದ ಮಹಾನ್ ಚೇತನ ಎಂದು ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಸೂರಿ ಶ್ರೀನಿವಾಸ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಶ್ವ ಸಾಹಿತ್ಯಕ್ಕೆ ವಚನ ಸಾಹಿತ್ಯ ಅಮೂಲ್ಯ ಕೊಡುಗೆ ನೀಡಿದೆ. ಸಮ ಸಮಾಜದ ಪರಿಕಲ್ಪನೆ ತಂದುಕೊಟ್ಟ ಕೀರ್ತಿ ೧೨ ನೇ ಶತಮಾನದ ಶಿವ ಶರಣರಿಗೆ ಸಲ್ಲುತ್ತದೆ ಇವನಾರವ ಇವನಾರವ ಎನ್ನದೆ ಇವೆ ನಿಮ್ಮವ ಇವೆ ನಮ್ಮವ ಎಂದು ಹಾರಸಿದವರು ನಮ್ಮ ನಿಜ ಶರಣರು. ಶರಣರ ಸಾಹಿತ್ಯದ ಸಾವಿರಾರು ವಚನಗಳನ್ನು ಡಾ.ಫ.ಗು.ಹಳಕಟ್ಟಿಯವರು ಸಂಗ್ರಹಿಸಿ, ಸಂರಕ್ಷಣೆ ಮಾಡಿದ್ದಾರೆ ಎಂದರು.

ಪ್ರಾಸ್ತಾವಿಕವಾಗಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಬಿ .ಹೆಚ್. ಸೋಮಶೇಖರ್ ಮಾತನಾಡಿದರು ಈ ಕಾರ್ಯಕ್ರಮದಲ್ಲಿ ಎಸ್ .ಟಿ. ಜೆ. ಬಾಲಕಿಯರ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಜಿ. ಸಂತೋಷ್ ಕುಮಾರ್ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಸಂಘಟನಾ ಕಾರ್ಯದರ್ಶಿ ಸಚಿನ್ ಸಿಂಗ್ ಉಪಸ್ಥಿತರಿದ್ದರು

Zilla Kannada Sahitya Parishad Chikkamagaluru

About Author

Leave a Reply

Your email address will not be published. Required fields are marked *

You may have missed