September 19, 2024

ಕಾಡಾನೆಗಳ ತುಳಿತಕ್ಕೆ ಒಳಗಾದ 6 ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕು

0
ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ ಸುದ್ದಿಗೋಷ್ಠಿ

ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಕೂಡಲೇ ಅವುಗಳನ್ನು ಸ್ಥಳಾಂತರಿಸಿ ಕಾಡಾನೆಗಳ ತುಳಿತಕ್ಕೆ ಒಳಗಾಗಿ ಮೃತಪಟ್ಟಿರುವ ೬ ಕುಟುಂಬಗಳಿಗೆ ಸೂಕ್ತ ಪರಿಹಾರ ನೀಡಬೇಕೆಂದು ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ದೀಪಕ್‌ದೊಡ್ಡಯ್ಯ ಒತ್ತಾಯಿಸಿದರು.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿ ನಿನ್ನೆ ನಡೆದ ಕಂಚಿನಕಲ್ಲು ದುರ್ಗದ ಕಿನ್ನಿ ಎಂಬಾತನನ್ನು ಕಾಡಾನೆಗಳು ತುಳಿದು ಸಾಯಿಸಿದ್ದು, ಇದರಿಂದಾಗಿ ಮಲೆನಾಡಿಗರಲ್ಲಿ ಜೀವಭಯ ಉಂಟಾಗಿದ್ದು ಪ್ರತಿನಿತ್ಯ ತೋಟ, ಗದ್ದೆ, ಅಂಗಡಿ ಮತ್ತು ಆಸ್ಪತ್ರೆಗೆ ಓಡಾಡಲು ತೊಂದರೆಯಾಗಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರ ವಿದ್ದಾಗ ಜಾರಿಗೆ ತಂದಿದ್ದ ಆನೆ ಕಾರ್ಯಪಡೆಗೆ ಒಬ್ಬ ಅರಣ್ಯ ಸಂರಕ್ಷಣಾಧಿಕಾರಿ ದರ್ಜೆಯ ಅಧಿಕಾರಿ ನೇಮಕವಾಗಿದ್ದು ಈಗ ಆ ಅಧಿಕಾರಿಯು ವರ್ಗವಾಗಿದ್ದಾರೆ, ಆ ಜಾಗಕ್ಕೆ ಬೇರೆಯವರನ್ನು ನೇಮಿಸಿಲ್ಲ ಆ ಕಾರ್ಯಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು ೪೦ ಜನ ನೌಕರರಿಗೆ ಮೂರ್ನಾಲ್ಕು ತಿಂಗಳುಗಳಿಂದ ವೇತನ ನೀಡದೆ ಇರುವುದು ಅವರುಗಳು ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸಲು ಕಷ್ಟವಾಗಿದೆ ಎಂದು ದೂರಿದರು.

ಈ ಕಾರಣದಿಂದ ಇಷ್ಟೊಂದು ಅವಗಡಗಳು ನಡೆಯುತ್ತಿವೆ, ಸರ್ಕಾರ ಕೂಡಲೇ ಆನೆ ಕಾರ್ಯಪಡೆಗೆ ಒಬ್ಬ ದಕ್ಷ ಅಧಿಕಾರಿಯನ್ನು ನೇಮಿಸಿ ನೌಕರರಿಗೆ ಬಾಕಿ ಇರುವ ವೇತನವನ್ನು ಪಾವತಿಸಿ ಅವರುಗಳು ಸರಿಯಾದ ರೀತಿ ಕಾರ್ಯನಿರ್ವಹಿಸುವಂತೆ ಮಾಡಲು ಆಗ್ರಹಿಸಿದರು.

ನಿನ್ನೆ ನಡೆದ ಕಂಚಿನಕಲ್ಲು ದುರ್ಗದ ಕಿನ್ನಿ ಪರಿಶಿಷ್ಟ ಪಂಗಡದ ಕೂಲಿಕಾರ್ಮಿಕನಾಗಿದ್ದು ಆತನ ಸಾವು ದುಃಖ ತಂದಿದೆ ಈ ಘಟನೆಯನ್ನು ಅರಣ್ಯ ಇಲಾಖೆಯ ಮತ್ತು ಪೊಲೀಸ್ ಇಲಾಖೆಯ ಅಧಿಕಾರಿಗಳು ಅತ್ಯಂತ ಅವಸರದಲ್ಲಿ ಪೂರ್ಣಗೊಳಿಸಿದ್ದರ ಹಿಂದಿನ ಮರ್ಮವೇನು ಎಂಬುದು ಅರ್ಥವಾಗಿಲ್ಲ. ಈ ಎರಡು ಇಲಾಖೆಯ ಅಧಿಕಾರಿಗಳು ಮೃತ ಕಿನ್ನಿಯ ಸಂಬಂಧಿಕರಿಗೆ ಅಪೂರ್ಣ ಮಾಹಿತಿ ನೀಡಿ ತರಾತುರಿಯಲ್ಲಿ ಎಲ್ಲ ವಿಧಿ-ವಿಧಾನಗಳನ್ನು ಮುಗಿಸಿದ್ದಾರೆ ಎಂದು ಆರೋಪಿಸಿದರು.

ಈ ಪ್ರಕ್ರಿಯೆಯಲ್ಲಿ ಕಾನೂನಿನ ನ್ಯೂನತೆಗಳಾಗಿದ್ದು, ಆ ಬಡ ಕುಟುಂಬಕ್ಕೆ ನೀಡಬೇಕಾಗಿದ್ದ ಪೂರ್ಣ ಪ್ರಮಾಣದ ಪರಿಹಾರ ಸಿಕ್ಕಿಲ್ಲ, ಇಡೀ ಘಟನೆಯನ್ನು ಅವಲೋಕಿಸಿದರೆ ಮಾನವ ಹಕ್ಕಿನ ಉಲ್ಲಂಘನೆಯಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಇದರ ಸಂಪೂರ್ಣ ಮಾಹಿತಿಯನ್ನು ಒಳಗೊಂಡ ದೂರನ್ನು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ ಸಲ್ಲಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡು ಅವಸರ ಅವಸರವಾಗಿ ಈ ಘಟನೆಯನ್ನು ಮುಗಿಸಲು ಯತ್ನಿಸಿರುವ ಅಧಿಕಾರಿಗಳು ಇದರ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಸಿದರು.

ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಗಳು ಮತ್ತು ಜಿಲ್ಲಾಧಿಕಾರಿಗಳು ಈ ಹಗರಣವನ್ನು ಮಾನವೀಯತೆಯ ನೆಲೆಯಲ್ಲಿ ಬಗೆಹರಿಸಿ ಅರ್ಹರಿಗೆ ನ್ಯಾಯ ಒದಗಿಸಿಕೊಡಲು ಕೋರಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಆಲ್ದೂರು ಮಂಡಲ ಅಧ್ಯಕ್ಷ ದಿನೇಶ್, ಕಾರ್ಯದರ್ಶಿ ಕೃಷ್ಣಮೂರ್ತಿ, ನಿಶಾಂತ್ ಇದ್ದರು.

District BJP Vice President Deepak Doddaiah press conference

About Author

Leave a Reply

Your email address will not be published. Required fields are marked *

You may have missed