September 7, 2024

ಮಕ್ಕಳ ಜೀವನ ಶೈಲಿಯನ್ನು ಬದಲಾಯಿಸುವ ಚಾತುರ್ಯ ಶಿಕ್ಷಕರಿಗೆ ಇದೆ

0
ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ

ಶೃಂಗೇರಿ: ‘ನಮಗೆಲ್ಲರಿಗೂ ವ್ಯಕ್ತಿತ್ವ ಗುರುತಿಸಿ, ವಿದ್ಯೆಯನ್ನು ನೀಡಿ, ಜೀವನ ಮಾಡಲು ಕಲಿಸಿದವರು ಗುರುಗಳು. ಮಕ್ಕಳ ಜೀವನ ಶೈಲಿಯನ್ನು ಬದಲಾಯಿಸುವ ಚಾತುರ್ಯ ಶಿಕ್ಷಕರಿಗೆ ಇದೆ. ಆದರಿಂದ ಅವರಿಗೆ ಸಮಾಜದಲ್ಲಿ ವಿಶೇಷವಾದ ಸ್ಥಾನವಿದೆ. ಗುರು ಮತ್ತು ಗುರಿ ಇದ್ದರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಶಾಸಕ ಟಿ.ಡಿ ರಾಜೇಗೌಡ ಹೇಳಿದರು.

ಶೃಂಗೇರಿಯ ಆದಿಚುಂಚನಗಿರಿ ಸಮೂದಾಯ ಭವನದಲ್ಲಿ ಮಂಗಳವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಆಯೋಜಿಸಿದ ಜಿಲ್ಲಾ ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ದೇಶದ ಭವಿಷ್ಯವನ್ನು ರೂಪಿಸುವವರು ಶಿಕ್ಷಕರು. ನಮ್ಮ ದೇಶದಲ್ಲಿ ಗುರುಕುಲ ಪದ್ದತಿಯಿಂದ ಗುರು ಮತ್ತು ಶಿಷ್ಯರ ನಡುವಿನ ಸಂಬಂಧ ಅನನ್ಯವಾಗಿದೆ. ಗುರು ಎಂದರೆ ಅಜ್ಞಾನ ಹೋಗಲಾಡಿಸಿ, ಜ್ಞಾನವನ್ನು ನೀಡುವವರು. ತಪ್ಪು ಮಾಡಿದಾಗ ವಿದ್ಯಾರ್ಥಿಗೆ ಸರಿ ದಾರಿ ತೋರುವ ಶಿಕ್ಷಕ ದೇಶದ ಏಳಿಗೆಗೆ ಕಾರಣನಾಗಿದ್ದಾನೆ. ಪ್ರತಿಯೊಬ್ಬರು ಡಾ.ಸರ್ವಪಲ್ಲಿ ರಾಧಕೃಷ್ಣನ್ ಅವರ ತತ್ವ, ಆದರ್ಶಗಳನ್ನು ಅನುಸರಿಸಿದರೆ ಭಾರತ ದೇಶ ಅಭೂತಪೂರ್ವವಾಗಿ ಯಶಸ್ಸು ಕಾಣಲು ಸಾಧ್ಯ. ಶಿಕ್ಷಕರು ವಿದ್ಯಾರ್ಥಿಗಳ ಬದುಕನ್ನು ರೂಪಿಸುವ ನೇತಾರರು. ಮಕ್ಕಳ ಆತ್ಮವಿಶ್ವಾಸ ಹಾಗೂ ನೈತಿಕ ಶಿಕ್ಷಣ ನೀಡುವಲ್ಲಿ ನಮ್ಮ ಶಿಕ್ಷಕರ ಪಾತ್ರ ಅನನ್ಯ’ ಎಂದರು.

ವಿಶೇಷ ಉಪನ್ಯಾಸ ನೀಡಿದ ಪ್ರೋ.ಕೆ.ಶ್ರೀಪತಿ ಹಳಗುಂದ ಮಾತನಾಡಿ, ‘ಕಲಿಯುಗದಲ್ಲಿ ಜನರು ಲಕ್ಷ್ಮೀ(ಹಣ)ಯನ್ನು ಒಲಿಸಿಕೋಳ್ಳಲು ಹೋಗಿ, ಸರಸ್ವತಿ(ವಿದ್ಯೆ)ಯನ್ನು ದೂರ ಮಾಡುತ್ತೀದ್ದಾರೆ. ಹೃದಯ ಹೃದಯಗಳ ನಡುವಿನ ಮಾತುಕತೆಯೇ ಶಿಕ್ಷಣ. ವಿದ್ಯಾರ್ಥಿಗಳು ಬಿಳಿ ಬಣ್ಣದ ಖಾಲಿ ಹಾಳೆ ಇದ್ದಂತೆ, ಅದರಲ್ಲಿ ಶಿಕ್ಷಕರು ಜ್ಞಾನವನ್ನು ಬರೆಯಬೇಕು. ಲಿಂಗ, ಜಾತಿ, ಧರ್ಮವನ್ನು ಮೀರಿದ ಕುಲವೇ ಗುರುಕುಲ. ಶಿಕ್ಷಕನಿಗೆ ಶಿಕ್ಷಿಸಲು ಅರ್ಹನಲ್ಲದಿದ್ದರೆ ಅವರಿಗೆ ಕ್ಷೇಮಿಸು ಪ್ರಶ್ನೆಯೇ ಬರುವುದಿಲ್ಲ. ಪ್ರಸ್ತುತ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಯೋಚನೆ ಬೇರೆ, ಇಲಾಖಾಧಿಕಾರಿಗಳ ಯೋಜನೆಯೇ ಬೇರೆಯಾಗಿದೆ. ಆದರಿಂದ ಶಿಕ್ಷಕರು ಮಕ್ಕಳಿಗೆ ಪೂರ್ಣ ಪ್ರಮಾಣದ ಶಿಕ್ಷಣ ಒದಗಿಸಲು ಸಾಧ್ಯ ಇಲ್ಲಾ. ಕಲಿಸುವ ಇಚ್ಚಾಶಕ್ತಿ ಶಿಕ್ಷಕನಲ್ಲಿ ಮತ್ತು ಕಲಿಯುವ ಇಚ್ಚಾಶಕ್ತಿ ವಿದ್ಯಾರ್ಥಿಗಳಲ್ಲಿರಬೇಕು’ ಎಂದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥ ಸ್ವಾಮಿ ಮಾತನಾಡಿ, ‘ಶಿಕ್ಷಕರು ಮೌಲ್ಯಧಾರಿತ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ತಮ್ಮಲ್ಲಿರುವ ಸೃಜನ ಶೀಲತೆಯನ್ನು ಮಕ್ಕಳಲ್ಲಿ ಅನಾವರಣಗೊಳಿಸುವ ಪ್ರಾಮಾಣಿಕ ಪ್ರಯತ್ನದಲ್ಲಿ ಅವರು ಸಾಫಲ್ಯ ಹೊಂದಬೇಕು’ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲೆಯ ಕಿರಿಯ ಪ್ರಾಥಮಿಕ ಶಾಲೆಯ ೮ ಜನ ಶಿಕ್ಷಕರಿಗೆ, ಹಿರಿಯ ಪ್ರಾಥಮಿಕ ಶಾಲೆಯ ೭ ಜನ ಶಿಕ್ಷಕರಿಗೆ ಮತ್ತು ಪ್ರೌಢಶಾಲಾ ವಿಭಾಗದ ೮ ಜನ ಶಿಕ್ಷಕರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ಪ್ರಶಸ್ತಿ ನೀಡಿ ಗೌರವಿಸಿದರು. ಶೃಂಗೇರಿ ತಾಲ್ಲೂಕಿನ ನಿವೃತ್ತ ಶಿಕ್ಷಕರಾದ ಕಿರಣ್ ಕುಮಾರ್, ಶೋಭಾ ಟಿ.ಎಸ್ ಮತ್ತು ಶಾಂತರವರಿಗೆ ಸನ್ಮಾನಿಸಿದರು. ಸ್ಕೌಟ್ಸ್ ಮತ್ತು ಗೈಡ್ಸ್‌ನ ವಿಭಾಗದಲ್ಲಿ ಕೊಪ್ಪದ ಶಿಕ್ಷಕ ಶಾಂತಕುಮಾರ್ ಮತ್ತು ಆದಿಚುಂಚನಗಿರಿಯ ದೃಷ್ಟಿ ಮಾಂದ್ಯ ಸಂಗೀತ ಶಿಕ್ಷಕ ಕುಮಾರ್‌ರವರನ್ನು ಗೌರವಿಸಿದರು.

ಶಿಕ್ಷಕರ ದಿನಾಚರಣಾ ಸಮಿತಿಯಿಂದ ಶಾಸಕ ಟಿ.ಡಿ ರಾಜೇಗೌಡ ಮತ್ತು ಬಿ.ಇ.ಓ ರಾಘವೇಂದ್ರ ಎನ್.ಜಿರವರನ್ನು ಸನ್ಮಾನಿಸಿದರು. ಕಾರ್ಯಕ್ರಮಕ್ಕೂ ಮುನ್ನ ಶಾರದಾ ಪೀಠದಿಂದ ಆದಿಚುಂಚನಗಿರಿ ಸಮೂದಾಯ ಭವನದ ವರೆಗೂ ಎಲ್ಲಾ ಶಿಕ್ಷಕರು ಮೆರವಣಿಗೆ ನಡೆಸಿದರು. ಮೆರವಣಿಗೆಗೆ ಶಾಸಕ ಟಿ.ಡಿ ರಾಜೇಗೌಡ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ವಿದ್ಯಾರಣ್ಯಪುರ ಗ್ರಾ.ಪಂ ಅಧ್ಯಕ್ಷ ಪ್ರವೀಣ್ ಪೂಜಾರಿ, ಉಪಾಧ್ಯಕ್ಷೆ ಸುನೀತಾ, ಮರ್ಕಲ್ ಗ್ರಾ.ಪಂ ಅಧ್ಯಕ್ಷ ಮಹೇಶ್, ಸದಸ್ಯರಾದ ಪ್ರಪುಲ್ಲಾ, ಮಮತ ಉದಯ್, ಮಂಜುನಾಥ್, ಶಿಕ್ಷಣ ಇಲಾಖೆಯ ಉಪನಿರ್ದೇಶಕ ಪ್ರಕಾಶ್ ಕೆ.ಎಸ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ಜಿ ರಾಘವೇಂದ್ರ, ಜಿಲ್ಲಾ ನೋಡೆಲ್ ಅಧಿಕಾರಿ ಸತೀಶ್, ತಾಲ್ಲೂಕು ನೋಡೆಲ್ ಅಧಿಕಾರಿ ವಿಜಯ್ ಕುಮಾರ್ ಟಿ.ಎಚ್ ಮತ್ತು ಶಿಕ್ಷಕರ ವಿವಿಧ ಸಂಘದ ಅಧ್ಯಕ್ಷರು, ಪದಾಧಿಕಾರಿಗಳು ಇದ್ದರು.

District Level Teacher’s Day Programme

About Author

Leave a Reply

Your email address will not be published. Required fields are marked *

You may have missed