September 16, 2024

ಜ್ಞಾನಭಿಕ್ಷೆ ನೀಡಿದ ಗುರುವನ್ನು ಸದಾ ಸ್ಮರಿಸಿಕೊಳ್ಳಬೇಕು

0
ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ ನೇ ಜನ್ಮ ದಿನಾಚರಣೆ ಹಾಗೂ ೬೨ ನೇ ಶಿಕ್ಷಕರ ದಿನಾಚರಣೆ

ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ ನೇ ಜನ್ಮ ದಿನಾಚರಣೆ ಹಾಗೂ ೬೨ ನೇ ಶಿಕ್ಷಕರ ದಿನಾಚರಣೆ

ಚಿಕ್ಕಮಗಳೂರು:  ಸಮಾಜದಲ್ಲಿ ಜನ್ಮ ನೀಡಿದ ತಾಯಿಗೆ ಮೊದಲ ಸ್ಥಾನವಾದರೆ ನಂತರದ ಸ್ಥಾನ ಗುರುವಿಗೆ. ಜ್ಞಾನ ಭಿಕ್ಷೆ ನೀಡುವ ಗುರುವನ್ನು ಸಮಾಜ ಸದಾ ಸ್ಮರಿಸಿಕೊಳ್ಳಬೇಕು ಎಂದು ಶಾಸಕ ಎಚ್.ಡಿ.ತಮ್ಮಯ್ಯ ಅಭಿಪ್ರಾಯಿಸಿದರು.

ಅವರು ಇಂದು ನಗರದ ಕುವೆಂಪು ಕಲಾಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ವಿವಿಧ ಇಲಾಖೆ ಆಶ್ರಯದಲ್ಲಿ ಡಾ.ಸರ್ವಪಲ್ಲಿ ರಾಧಾಕೃಷ್ಣನ್ ಅವರ ೧೩೬ ನೇ ಜನ್ಮ ದಿನಾಚರಣೆ ಹಾಗೂ ೬೨ ನೇ ಶಿಕ್ಷಕರ ದಿನಾಚರಣೆ ಮತ್ತು ನಿವೃತ್ತ ಶಿಕ್ಷಕರ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಗುರು ಬ್ರಹ್ಮ, ವಿಷ್ಣು, ಮಹೇಶ್ವರ. ಅಂತಹ ಮಹತ್ವದ ಸ್ಥಾನ ಗುರುವಿಗೆ ಇದೆ. ಜೀವ ತಾಯಿಯ ಭಿಕ್ಷೆ, ಬದುಕು ತಂದೆಯ ಭಿಕ್ಷೆ, ಜ್ಞಾನ ಗುರುವಿನ ಭಿಕ್ಷೆ ಅಂತಹ ಗುರುವನ್ನು ಒಂದು ದಿನ ನೆನೆದರೆ ಸಾಲದು. ಸದಾ ನೆನಪಿಸಿಕೊಳ್ಳಬೇಕು ಎಂದು ಹೇಳಿದರು.

ಡಾ.ಸರ್ವಪಲ್ಲಿ ರಾಧಾಕೃಷ್ಣ ಅವರು ದೇಶದ ಅಭಿವೃದ್ಧಿಗೆ, ಶಿಕ್ಷಣ ಕ್ಷೇತ್ರಕ್ಕೆ ತಮ್ಮ ಜೀವನ ಮುಡುಪಾಗಿಟ್ಟವರು. ಶಿಕ್ಷಕ ವೃತ್ತಿಗೆ ನ್ಯಾಯ ಒದಗಿಸಿದವರು. ಅಬ್ದುಲ್‌ಕಲಾಂ ಮತ್ತು ಡಾ.ರಾಧಾಕೃಷ್ಣನ್ ಅವರು ಬದುಕಿರುವವರೆಗೂ ಶಿಕ್ಷಕ ವೃತ್ತಿ ಮಾಡಿದವರು ಎಂದು ಬಣ್ಣಿಸಿದರು.

ನಗರಸಭೆ ಅಧ್ಯಕ್ಷ ವರಸಿದ್ದಿವೇಣುಗೋಪಾಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರಿಗೆ ವಿಶೇಷವಾದ ಸ್ಥಾನವಿದೆ. ಶಿಲ್ಪಿ ಒಂದು ಕಲ್ಲಿಗೆ ಮೂರ್ತ ರೂಪ ಕೊಡುವಂತೆ ಓರ್ವ ಶಿಕ್ಷಕ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸುತ್ತಾನೆ ಎಂದು ತಿಳಿಸಿದರು.

ಉಪನ್ಯಾಸಕ, ಲೇಖಕ ಎಚ್.ಎಸ್.ಸತ್ಯನಾರಾಯಣ ಉಪನ್ಯಾಸ ನೀಡಿ, ಮೃಗತ್ವದಿಂದ ಮನುಷ್ಯತ್ವದ ಕಡೆಗೆ ಕರೆದೊಯ್ಯುವುದು ಶಿಕ್ಷಣ. ನಾವೆಲ್ಲ ಬದುಕಿರುವುದು ದ್ವೇಷಕ್ಕಾಗಿ ಅಲ್ಲ ದೇಶಕ್ಕಾಗಿ. ತರ್ಕ ಬಿಟ್ಟು ನಮ್ಮ ಮನಸ್ಸಿಗೆ ತೃಪ್ತಿಯಾಗುವಂತೆ ಮಾಡದರೆ ಸಾಕು ಎಂದು ಡಾ.ರಾಧಾಕೃಷ್ಣನ್ ಹೇಳಿದ್ದಾರೆ ಎಂದರು.

ಶಿಕ್ಷಕ ವೃತ್ತಿಯನ್ನು ಗೌರವಿಸುವಂತಹ ಪರಂಪರೆ ನಮ್ಮದು. ಗುರುವಾದವರು ಹಗುರವಾಗಿ ನಡೆದುಕೊಳ್ಳದೆ ತಮ್ಮ ಘನತೆ, ಗೌರವ ಕಾಪಾಡಿಕೊಳ್ಳಬೇಕು. ವೃತ್ತಿ ಮತ್ತು ಸೇವೆ ಈ ಎರಡೂ ಗುಣಗಳು ಶಿಕ್ಷಕ ನಲ್ಲಿರಬೇಕಾಗುತ್ತದೆ ಲೋಕಶಿಕ್ಷಣ ಕಲಿಸದಿದ್ದರೆ ಶಿಕ್ಷಣಕ್ಕೆ ಮಹತ್ವವಿಲ್ಲ ಎಂದು ಹೇಳಿದರು.

ಉಪವಿಭಾಗಾಕಾರಿ ಎಚ್.ಡಿ.ರಾಜೇಶ್ ಮಾತನಾಡಿ, ಎಲ್ಲರಿಗೂ ಶಿಕ್ಷಕ ವೃತ್ತಿ ಮಾಡುವ ಸೌಭಾಗ್ಯ ಸಿಗುವುದಿಲ್ಲ. ಸಮಾಜವನ್ನು ಸರಿದಾರಿಯಲ್ಲಿ ಕರೆದೊಯ್ಯುವ ಶಕ್ತಿ ಶಿಕ್ಷಕರಿಗೆ ಮಾತ್ರ ಇದೆ. ಶಿಕ್ಷಕರ ಉತ್ತಮ ಕಾರ್ಯದಿಂದ ಶೈಕ್ಷಣಿಕ ಕ್ಷೇತ್ರ ಪ್ರಗತಿಯಲ್ಲಿದೆ ಎಂದು ಶ್ಲಾಘಿಸಿದರು. ತಾಲೂಕಿನ ೫೦ ಕ್ಕೂ ಹೆಚ್ಚು ನಿವೃತ್ತ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ರವೀಶ್, ಕೆ.ಆರ್.ಉದಯ್‌ಕುಮಾರ್, ಸಹಾಯಕ ನಿರ್ದೇಶಕರು ಮದ್ಯಾಹ್ನ ಉಪಹಾರ ಯೋಜನೆ, ಪ್ರಭಾರಿ ಸಮನ್ವಯ ಅಧಿಕಾರಿ ಎಂ.ಎಂ.ನಾಗರಾಜ್ ಶಿಕ್ಷಕರ ಸಂಘದ ಅಧ್ಯಕ್ಷ ಕಿರಣ್, ನಗರಸಭೆ ಉಪಾಧ್ಯಕ್ಷ ಅಮೃತೇಶ್‌ಚೆನ್ನಕೇಶವ, ನಾಗರಾಜ್, ಉದಯ್‌ಕುಮಾರ್, ಕೆ.ಎನ್.ಮಂಜುನಾಥ್, ಡಿ.ಪಿ.ಉಮೇಶ್, ಕೆ.ಎಂ.ಕುಮಾರ್, ಎಲ್.ಟಿ.ಅಜ್ಜಯ್ಯ, ಗಂಗಾಧರ್, ಪ್ರಹ್ಲಾದ್, ಶ್ರೀನಿವಾಸ್, ಸುಮಿತ್ರ, ಎಂ.ಬಿ.ಚಂದ್ರೇಗೌಡ, ಸಿದ್ಧಮೂರ್ತಿ, ಸುಂದರೇಶ್, ಜೋಗಪ್ಪ, ಚಂದ್ರೇಗೌಡ, ಸಿ.ಎಸ್.ಸುರೇಶ್, ಶಂಕರೇಗೌಡ, ಗುರುಶಾಂತಪ್ಪ, ಶಿವಪ್ಪ.ಡಿ.ಎಸ್, ವಸಂತಕುಮಾರಿ, ಶಿವನಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು. ವೀರೇಶ್ ಕೌಲಗಿ ನಿರೂಪಿಸಿ, ಟಿ.ಬಿ.ಕೆ ಅರಸ್ ವಂದಿಸಿದರು.

Dr. Sarvapalli Radhakrishnan’s 136th Birth Anniversary and 62nd Teacher’s Day

About Author

Leave a Reply

Your email address will not be published. Required fields are marked *