September 20, 2024

ಸಂಚಾರಿ ಪೊಲೀಸರ ಮುಂದೆ ಹಾಸ್ಯ ನಟ ಚಂದ್ರಪ್ರಭ ಭೇಟಿ

0
ಸಂಚಾರಿ ಪೊಲೀಸರ ಮುಂದೆ ಹಾಸ್ಯ ನಟ ಚಂದ್ರಪ್ರಭ ಭೇಟಿ

ಸಂಚಾರಿ ಪೊಲೀಸರ ಮುಂದೆ ಹಾಸ್ಯ ನಟ ಚಂದ್ರಪ್ರಭ ಭೇಟಿ

ಚಿಕ್ಕಮಗಳೂರು: ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಖಾಸಗಿ ವಾಹಿನಿಯ ಕಾಮಿಡಿ ಶೋನ ಹಾಸ್ಯ ನಟ ಚಂದ್ರಪ್ರಭ ಇಂದು ಚಿಕ್ಕಮಗಳೂರು ಸಂಚಾರಿ ಪೊಲೀಸರ ಮುಂದೆ ಹಾಜರಾಗಿ ತಮ್ಮ ತಪ್ಪಿಗೆ ಬಹಿರಂಗ ಕ್ಷಮೆ ಯಾಚಿಸಿದ್ದಾರೆ.

ಸೆಪ್ಟೆಂಬರ್ 4 ರಂದು ರಾತ್ರಿ ನಗರದ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ದ ಎದುರು ಚಂದ್ರಪ್ರಭ ಅವರು ಪ್ರಯಾಣಿಸುತ್ತಿದ್ದ ಕಾರು ಸ್ಕೂಟರ್‌ವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಘಟನೆಯಲ್ಲಿ ಸ್ಕೂಟರ್ ಸವಾರ ಮಾಲತೇಶ್ ಎಂಬುವವರು ತೀವ್ರವಾಗಿ ಗಾಯಗೊಂಡಿದ್ದರು. ಈ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಮರುದಿನ ಹೇಳಿಕೆ ನೀಡಿದ್ದ ಚಂದ್ರಪ್ರಭ ಸ್ಕೂಟರ್ ಸವಾರ ಮದ್ಯ ಸೇವಿಸಿದ್ದರು. ಅವರನ್ನು ನಾವೇ ಆಸ್ಪತ್ರೆಗೆ ದಾಖಲಿಸಿ ಅಲ್ಲಿಂದ ಬೇರೊಂದು ಕಾರ್ಯಕ್ರಮಕ್ಕೆ ತೆರಳಿದ್ದೆವು ಎಂದು ತಿಳಿಸಿದ್ದರು.

ವಾಸ್ತವವಾಗಿ ಗಾಯಾಳು ಮಾಲತೇಶ್ ಮದ್ಯ ಸೇವಿಸಿರಲಿಲ್ಲ. ಹಾಗೂ ಅವರನ್ನು ಚಂದ್ರಪ್ರಭ ಆಸ್ಪತ್ರೆಗೆ ದಾಖಲಿಸಿರಲಿಲ್ಲ. ಈ ಕಾರಣಕ್ಕೆ ಅವರ ವಿರುದ್ಧ ಆಕ್ರೋಶವೂ ವ್ಯಕ್ತವಾಗಿದ್ದ ಕಾರಣ ಸಂಚಾರಿ ಪೊಲೀಸರು ಹಿಟ್‌ಅಂಡ್ ರನ್ ಪ್ರಕರಣ ದಾಖಲಿಸಿಕೊಂಡು ಚಂದ್ರಪ್ರಭಗೆ ನೋಟೀಸು ನೀಡಿದ್ದರು. ಈ ಹಿನ್ನೆಲೆಯಲ್ಲಿ ಇಂದು ಚಂದ್ರಪ್ರಭ ಸಂಚಾರಿ ಪೊಲೀಸ್ ಠಾಣೆಗೆ ಹಾಜರಾಗಿ ಹೇಳಿಕೆ ನೀಡಿದರು. ಈ ವೇಳೆ ಅವರ ಕಾರನ್ನು ವಶಕ್ಕೆ ಪಡೆದ ಪೊಲೀಸರು ಷರತ್ತುಗಳನ್ನು ವಿಧಿಸಿ ಠಾಣಾ ಜಾಮೀನು ನೀಡಿದರು.

ನಂತರ ಸುದ್ದಿಗಾರರ ಜೊತೆ ಮಾತನಾಡಿದ ಚಂದ್ರಪ್ರಭ, ನಾನು ಶೂಟಿಂಗ್ ಮುಗಿಸಿಕೊಂಡು ಹೋಗುವಾಗ ಈ ಘಟನೆ ನಡೆದಿತ್ತು. ಯಾರೋ ಹೇಳಿದ್ದನ್ನು ಕೇಳಿ ಅಪಘಾತಕ್ಕಿಡಾದ ವ್ಯಕ್ತಿ ಮದ್ಯ ಸೇವಿಸಿದ್ದರು ಎಂದು ಹೇಳಿದ್ದೆ. ಅವರು ಮದ್ಯ ಸೇವಿಸಿರಲಿಲ್ಲ. ಅದಕ್ಕಾಗಿ ಕ್ಷಮೆ ಕೇಳುತ್ತೇನೆ ಎಂದರು. ಘಟನೆ ನಡೆದಾಗ ರಾತ್ರಿ 12 ಗಂಟೆ ಆಗಿತ್ತು. ಈ ಕಾರಣಕ್ಕೆ ನನಗೂ ಭಯವಾಗಿತ್ತು. ಕಾರ್ಯಕ್ರಮವೊಂದಕ್ಕೆ ಹೋಗಬೇಕಿದ್ದರಿಂದ ನಿಲ್ಲದೆ ತೆರಳಿದ್ದೆ. ಇದಕ್ಕೆ ಕ್ಷಮೆ ಇರಲಿ. ಕಾನೂನಿಗೆ ನಾನು ಬದ್ಧನಾಗಿದ್ದೇನೆ. ಅಪಘಾತಕ್ಕೀಡಾಗಿರುವ ವ್ಯಕ್ತಿಯ ಅಣ್ಣ, ತಮ್ಮಂದಿರು, ತಾಯಿ, ಸಂಬಂಧಿಕರನ್ನು ಹಾಗೂ ವೈದ್ಯರನ್ನು ಭೇಟಿ ಮಾಡುತ್ತೇನೆ ಎಂದರು.

ಅವರೂ ದಲಿತ ಸಮುದಾಯದವರು, ನಾನೂ ಅದೇ ಸಮುದಾಯದಿಂದ ಬಂದವನು, ನಮ್ಮ ತಂದೆಯವರು ತೀರಿಕೊಂಡು 11 ತಿಂಗಳಾಗಿದೆ. ನನ್ನ ತಾಯಿ ಕೂಲಿ ಮಾಡಿ ನನ್ನನ್ನು ಸಾಕಿದ್ದಾರೆ. ಆಕಸ್ಮಿಕವಾಗಿ ಈ ಘಟನೆ ನಡೆದಿದೆ. ನನ್ನ ಸಾಮರ್ಥ್ಯಕ್ಕನುಸಾರ ಅವರಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತೇನೆ ಎಂದು ಚಂದ್ರಪ್ರಭ ಕಣ್ಣಾಲಿಗಳನ್ನು ತುಂಬಿಕೊಂಡು ಗದ್ಗದಿತರಾದರು.

Comedy actor Chandraprabh met with the traffic police

About Author

Leave a Reply

Your email address will not be published. Required fields are marked *