September 20, 2024

ಕಾಫಿ ಬೆಳೆಗಾರರೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಅವರ ಬೇಡಿಕೆಗಳು ಈಡೇರುತ್ತವೆ

0
ಆವತಿ ಹೋಬಳಿ ಕಾಫಿಬೆಳೆಗಾರರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟನೆ

ಆವತಿ ಹೋಬಳಿ ಕಾಫಿಬೆಳೆಗಾರರ ಸಂಘದ ವಾರ್ಷಿಕ ಮಹಾಸಭೆ ಉದ್ಘಾಟನೆ

ಚಿಕ್ಕಮಗಳೂರು:  ಕಾಫಿ ಬೆಳೆಗಾರರೆಲ್ಲರೂ ಸಂಘಟಿತರಾಗಿ ಹೋರಾಟ ಮಾಡಿದರೆ ಮಾತ್ರ ಅವರ ಬೇಡಿಕೆಗಳು ಈಡೇರುತ್ತವೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ.ಮೋಹನ್‌ಕುಮಾರ್ ಸಲಹೆ ಮಾಡಿದರು.

ತಾಲೂಕಿನ ಆವತಿಯಲ್ಲಿ ಮಂಗಳವಾರ ನಡೆದ ಆವತಿ ಹೋಬಳಿ ಕಾಫಿಬೆಳೆಗಾರರ ಸಂಘದ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕಾಫಿ ಬೆಳೆಗಾರರು ಪರಿಸರಕ್ಕೆ ಹಾನಿಯಾಗದಂತೆ ನೆರಳಿನಡಿಯಲ್ಲಿ ಕಾಫಿ ಬೆಳೆಯುವುದು, ತಲಾ ತಲಾಂತರಗಳಿಂದಲೂ ಬಂದಿರುವ ವಾಡಿಕೆಯಾಗಿದೆ. ಒಬ್ಬೊಬ್ಬ ಬೆಳೆಗಾರ ವರ್ಷಕ್ಕೆ ನೂರರಿಂದ ಸಾವಿರ ಸಂಖ್ಯೆಯಷ್ಟು ಕಾಡುಜಾತಿಯ ಮರ ಗಿಡಗಳನ್ನು ನೆಡುತ್ತಾರೆ ಎಂದರು.

ಕಾಫಿ ಬೆಳೆಗಾರರು ರೈತರೇ ಹೊರತು ಉದ್ಯಮಿಗಳಲ್ಲ. ಆದರೂ, ರೈತರಿಗೆ ಸಿಗುತ್ತಿರುವ ಸರ್ಕಾರದ ಸೌಲಭ್ಯಗಳು ಕಾಫಿ ಬೆಳೆಗಾರರಿಗೆ ಸಿಗುತ್ತಿಲ್ಲ. ಕೆಲವು ಶ್ರೀಮಂತ ಬೆಳೆಗಾರರನ್ನು ಮುಂದಿಟ್ಟು ಇಡೀ ಸಮುದಾಯವೆ ಶ್ರೀಮಂವಾಗಿದೆ ಎಂದು ಬಾವಿಸುವುದು ತಪ್ಪು ಎಂದು ಹೇಳಿದರು.

ನಮಗೆ ಬ್ಯಾಂಕ್‌ಗಳು ಸಾಲ ನೀಡುವುದು ಬೆಳೆಯ ಮೇಲೆ ಕೃಷಿ ಸಾಲವಾಗಿ. ಆದರೂ, ಇದಕ್ಕೆ ಸರ್ಫೇಸಿ ಕಾಯ್ದೆಯಡಿ ನೋಟಿಸ್ ಜಾರಿಗೊಳಿಸಿ ಹರಾಜು ಪ್ರಕ್ರಿಯೆಗೆ ಮುಂದಾಗು ತ್ತಿರುವುದು ಖಂಡನೀಯ. ಇಲ್ಲಿಯವರೆಗೆ ಅತಿವೃಷ್ಟಿ ನಮ್ಮನ್ನು ಕಾಡಿದರೆ, ಈ ವರ್ಷ ಬರ ಗಾಲ ನಮ್ಮನ್ನು ಕಾಡುತ್ತಿದೆ. ಕಾಫಿಬೆಳೆಗಾರರು ಒಂದಲ್ಲ ಒಂದು ಸಮಸ್ಯೆಯಲ್ಲಿ ಸಿಲುಕಿ ಕೊಂಡಿದ್ದಾರೆ ಎಂದ ಅವರು, ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಈಗಲಾದರೂ ಬೆಳೆಗಾರರ ನೆರವಿಗೆ ಬರಬೇಕು ಎಂದು ಒತ್ತಾಯಿಸಿದರು.

ಪ್ರಗತಿಪರ ಕೃಷಿಕ ಧರ್ಮರಾಜ್ ಹೊಂಕರವಳ್ಳಿ ಮಾತನಾಡಿ, ಕಾಫಿ ಬೆಳೆಗಾರರು ತಮ್ಮ ತೋಟಗಳಲ್ಲಿ ಕೇವಲ ಕಾಫಿಯ ಮೇಲೆ ಮಾತ್ರ ಅವಲಂಭನೆಯಾಗದೆ. ಕಾಳುಮೆಣಸು, ಏಲಕ್ಕಿ, ಅಡಿಕೆಯನ್ನು ಆಯಾ ಪ್ರದೇಶಕ್ಕೆ ಅನುಗುಣವಾಗಿ ಬೆಳೆದರೆ ಅವರ ಬದುಕು ಸುಧಾರಿಸುತ್ತದೆ ಎಂದರು.

ಕಾಫಿ ತೋಟಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಸ್ಥಳಾಂತರಿಸುವ ಮೂಲಕ ರೈತರು ಮತ್ತು ಕಾರ್ಮಿಕರ ಸಾವು ನೋವನ್ನು ತಡೆಗಟ್ಟಬೇಕು ಎಂದು ಸಭೆಯಲ್ಲಿ ರಾಜ್ಯ ಸರ್ಕಾರ ವನ್ನು ಒತ್ತಾಯಿಸಲಾಯಿತು.

ಆವತಿ ಹೋಬಳಿ ಬೆಳೆಗಾರರ ಸಂಘದ ಗೌರವ ಕಾರ್ಯದರ್ಶಿ ಕೆರೆಮಕ್ಕಿಮಹೇಶ್ ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದರು. ಅಧ್ಯಕ್ಷ ಎಚ್.ಎನ್.ಶ್ರೀಧರ್ ಅಧ್ಯಕ್ಷತೆವಹಿಸಿದ್ದರು. ಕೆ. ಜಿ.ಎಫ್.ಮಾಜಿ ಅಧ್ಯಕ್ಷರಾದ ಬಿ.ಎಸ್.ಜಯರಾಮ್, ಅತ್ತಿಕಟ್ಟೆ ಜಗನ್ನಾಥ್, ಉಪಾಧ್ಯಕ್ಷರಾದ ಎ.ಕೆ.ವಸಂತೇಗೌಡ, ಸಂಘಟನಾ ಕಾರ್ಯದರ್ಶಿ ಕೆ.ಎ.ನರೇಂದ್ರ, ಆವತಿ ಗ್ರಾ.ಪಂ. ಅಧ್ಯಕ್ಷೆ ಪವಿತ್ರ, ಬಸರವಳ್ಳಿ ಗ್ರಾ.ಪಂ. ಉಪಾಧ್ಯಕ್ಷೆ ಬಿಂದು, ಬ್ಯಾರವಳ್ಳಿ ಗ್ರಾ.ಪಂ.ಅಧ್ಯಕ್ಷ ಎಂ.ಜೆ. ಸಂದೀಪ್, ಉಪಾಧ್ಯಕ್ಷೆ ನೀಲಾವತಿ, ಬಿ.ಸಿ.ಪ್ರಕಾಶ್ ಎ.ಎಂ.ಸತೀಶ್, ಪ್ಲಾಟರ್‍ಸ್ ಕ್ಲಬ್ ಅಧ್ಯಕ್ಷ ಎ.ಬಿ.ಉದಯಕುಮಾರ್ ಉಪಸ್ಥಿತರಿದ್ದರು.

Inauguration of Annual General Meeting of Avati Hobli Coffee Growers Association

 

About Author

Leave a Reply

Your email address will not be published. Required fields are marked *