September 20, 2024

ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು

0
ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಯಡಿ ಪುಸ್ತಕಗಳ ವಿತರಣೇ ಕಾರ್ಯಕ್ರಮ

ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಯಡಿ ಪುಸ್ತಕಗಳ ವಿತರಣೇ ಕಾರ್ಯಕ್ರಮ

ಚಿಕ್ಕಮಗಳೂರು: ದಾನಿಗಳು ನೀಡುವ ಕೊಡುಗೆಗಳು ಸಮರ್ಪಕವಾಗಿ ಬಳಕೆ ಆಗಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಡಾ.ಮೀನಾ ನಾಗರಾಜ್ ತಿಳಿಸಿದರು.

ಅವರು ಶನಿವಾರ ನಗರದ ಕುವೆಂಪು ಕಲಾ ಮಂದಿರದಲ್ಲಿ ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನೂರು ಶಾಲೆಗಳಿಗೆ ನೂರು ನೂರು ಪುಸ್ತಕ ಯೋಜನೆಯಡಿ ಪುಸ್ತಕಗಳ ವಿತರಣೇ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಜಿಲ್ಲಾಡಳಿತದ ಆಶೋತ್ತರಗಳನ್ನು ಅನುಷ್ಟಾನಕ್ಕೆ ತರಲು ಖಾಸಗಿ ಸಂಘ, ಸಂಸ್ಥೆಗಳು ಕೈಜೋಡಿಸಲು ಮುಂದೆ ಬಂದಾಗ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಪ್ರೇರಣೆ ಜೊತೆಗೆ ಪ್ರಯತ್ನವೂ ಜಾರಿಗೆ ಬರುತ್ತದೆ ಎಂದರು.

ಶಾಸಕ ಎಚ್.ಡಿ.ತಮ್ಮಯ್ಯ ಮಾತನಾಡಿ, ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘ ನೀಡಿರುವ ಪುಸ್ತಕಗಳನ್ನು ಓದುವ ಮೂಲಕ ವಿದ್ಯಾರ್ಥಿಗಳು ಅದನ್ನು ಸದುಪಯೋಗಪಡಿಸಿಕೊಳ್ಳಬೇಕು. ಹಿಂದಿನ ತಲೆಮಾರು ಪುಸ್ತಕ ಓದುವ ಹವ್ಯಾಸ ಕಳೆದುಕೊಂಡಿಲ್ಲ. ಇತ್ತೀಚಿನ ತಲೆಮಾರಿನ ಮಕ್ಕಳು ಓದುವ ಅಭಿರುಚಿ ಕಳೆದುಕೊಂಡಿರಬಹುದು. ಅವರಲ್ಲೂ ಓದುವ ಹವ್ಯಾಸ ಮೂಡಿಸಬೇಕು ಎಂದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಸೂರಿ ಶ್ರೀನಿವಾಸ್ ಮಾತನಾಡಿ, ಗ್ರಂಥಾಲಯವೊಂದನ್ನು ತೆರೆಯಲು ಸಾಹಿತ್ಯ ಪರಿಷತ್ತಿಗೆ ಸೂಕ್ತ ಕೊಠಡಿಯೊಂದನ್ನು ವ್ಯವಸ್ಥೆಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.

ಲ್ಲೆಗೆ ಅಖಿಲಭಾರತ ಸಾಹಿತ್ಯ ಸಮ್ಮೇಳ ಬರಬೇಕು ಎನ್ನುವ ಒತ್ತಾಯವನ್ನು ಮುಖ್ಯಮಂತ್ರಿಗಳಿಗೆ ಮಾಡಿದ್ದೇವೆ. ಈ ವಿಚಾರದಲ್ಲಿ ಶಾಸಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕರ್ನಾಟಕ ಕನ್ನಡ ಬರಹಗಾರರ ಮತ್ತು ಪ್ರಕಾಶಕರ ಸಂಘದ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ಇದರಲ್ಲಿ ನೂರು ಶಾಲೆಗೆ ನೂರು ಪುಸ್ತಕ ಎನ್ನುವ ಕಾರ್ಯಕ್ರಮ ಅತ್ಯುತ್ತಮವಾಗಿದೆ. ಇದು ಒಂದು ಜಿಲ್ಲೆಯ ೧೦೦ ಪ್ರಾಥಮಿಕ ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಅಲ್ಲಿ ಮಕ್ಕಳಿಗೆ ಅಗತ್ಯವಾಗದ ೧೦ ಸಾವಿರ ಪುಸ್ತಕಗಳನ್ನು ಸಂಗ್ರಹಿಸುವ ಕೆಲಸ ಸವಾಲಿನದ್ದು, ಮಕ್ಕಳಿಗೆ ಅಭಿರುಚಿಗೆ ತಕ್ಕ ಪುಸ್ತಕಗಳನ್ನೇ ಆಯ್ಕೆ ಮಾಡಿ ಪ್ರತಿ ಶಾಲೆಗೆ ಹಂಚಲಾಗುತ್ತದೆ ಎಂದರು.

ಇಲ್ಲಿಂದ ಕೊಂಡೊಯ್ಯುವ ಪುಸ್ತಕದ ಬಂಡಲುಗಳನ್ನು ಹಾಗೇ ಇಟ್ಟು ಬಿಡಬಾರದು. ಅದನ್ನು ಬಿಚ್ಚಿ ಮಕ್ಕಳಿಗೆ ತೋರಿಸಿ ಕಪಾಟೊಂದರಲ್ಲಿ ಇಟ್ಟು ಮಕ್ಕಳಿಗೆ ಓದಲು ನೀಡಬೇಕು. ಇವೆಲ್ಲವೂ ಪಠ್ಯೇತರ ಪುಸ್ತಕಗಳಾಗಿವೆ. ಇದರಲ್ಲಿ ವ್ಯಾಕರಣ, ನಿಗಂಟು, ನೀತಿಕತೆಗಳು, ವಿಜ್ಞಾನ, ಮಹಾತ್ಮರ ಕಥೆಗಳಿವೆ ಕನಿಷ್ಠ ವಾರದಲ್ಲಿ ಒಂದು ಅವಧಿ ಇವುಗಳನ್ನು ಮಕ್ಕಳಿಂದ ಓದಿಸುವ ಕೆಲಸ ಆಗಬೇಕು ಎಂದರು.

ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ರಂಗನಾಥಸ್ವಾಮಿ, ಕಾದಂಬರಿಕಾರ ಎಂ.ಆರ್.ದತ್ತಾತ್ರಿ, ಕಸಾಪ ಜಿಲ್ಲಾ ಕಾರ್ಯದರ್ಶಿಗಳಾದ ಎಸ್.ಎಸ್.ವೆಂಕಟೇಶ್, ಜಿ.ಬಿ.ಪವನ್ ಇತರರು ಭಾಗವಹಿಸಿದ್ದರು.

About Author

Leave a Reply

Your email address will not be published. Required fields are marked *