September 20, 2024

ಜಾನುವಾರುಗಳಿಗೆ ಕಾಲು ಬಾಯಿ ಜ್ವರ ಲಸಿಕೆ ಕೊಡಿಸಿ

0

ಚಿಕ್ಕಮಗಳೂರು: ಪಶುಪಾಲಕರು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ಕೊಡಿಸಿ ಜಾನುವಾರುಗಳ ಆರೋಗ್ಯ ಕಾಪಾಡುವಂತೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಿ.ಎನ್. ತಿಳಿಸಿದರು.

ಜಿಲ್ಲಾಧಿಕಾರಿಗಳ ಕಛೇರಿ ಸಭಾಂಗಣದಲ್ಲಿ ಇಂದು ಜಾನುವಾರುಗಳಿಗೆ ಕಾಲುಬಾಯಿ ಜ್ವರ ಲಸಿಕೆ ನೀಡುವ ಸಂಬಂಧ ನಡೆದ ಪಶು ಇಲಾಖೆ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಆಗಸ್ಟ್ ೨೬ ರಿಂದ ಅಕ್ಟೋಬರ್ ೨೫ ರವರೆಗೆ ಎಲ್ಲಾ ದನ, ಎಮ್ಮೆಗಳಿಗೆ ರಾಷ್ಟ್ರೀಯ ಜಾನುವಾರು ರೋಗಗಳ ನಿಯಂತ್ರಣ ಕಾರ್ಯಕ್ರಮದಡಿ ನಾಲ್ಕನೆ ಸುತ್ತಿನ ಲಸಿಕೆ ಹಾಕಲಾಗುತ್ತಿದ್ದು, ಪಶು ಪಾಲಕರು ತಮ್ಮ ರಾಸುಗಳಿಗೆ ತಪ್ಪದೇ ಲಸಿಕೆ ಹಾಕಿಸುವಂತೆ ತಿಳಿಸಿದ ಅವರು ಕಾಲುಬಾಯಿ ರೋಗವು ದನ, ಎಮ್ಮೆ ಮುಂತಾದ ರಾಸುಗಳಿಗೆ ಬರುವ ವೈರಾಣು ರೋಗವಾಗಿದೆ ಜಾನುವಾರುಗಳು ಈ ರೋಗಕ್ಕೆ ತುತ್ತಾದರೆ ಹಾಲಿನ ಇಳುವರಿ ಇಳಿಮುಖವಾಗುವುದು, ಗರ್ಭಪಾತ, ಗರ್ಭಕಟ್ಟುವಲ್ಲಿ ವಿಳಂಬ, ಎತ್ತ ಮತ್ತು ಹೋರಿಗಳಲ್ಲಿ ಕೆಲಸ ಮಾಡುವ ಸಾಮರ್ಥ್ಯ ಕ್ಷೀಣಿಸುವುದು ಕಂಡು ಬರುತ್ತದೆ. ಪಾಶುಪಾಲಕರು ಮುನ್ನೆಚ್ಚರಿಕೆಯಾಗಿ ಲಸಿಕೆ ಹಾಕಿಸುವಂತೆ ತಿಳಿಸಿದರು.

ಲಸಿಕಾ ಕಾರ್ಯಕ್ರಮ ಪ್ರತಿದಿನ ಯಾವ ಯಾವ ಗ್ರಾಮಗಳಲ್ಲಿ ಹಾಕಲಾಗುತ್ತದೆ ಎಂಬ ಮಾಹಿತಿಯನ್ನು ಗ್ರಾಮಕ್ಕೆ ಮೂರು ದಿನ ಮುಂಚಿತವಾಗಿ ಪಶುಪಾಲನಾ ಇಲಾಖೆಯವರು ತಿಳಿಸುತ್ತಾರೆ. ಈಲ್ಲೆಯಾದ್ಯಂತ ತಾಲ್ಲೂಕುವಾರು ಜಾನುವಾರು ಸಂಖ್ಯೆಗೆ ಅನುಗುಣವಾಗಿ ಮೊದಲ ಬಾರಿಗೆ ಗ್ರಾಮವಾರು ಬಯಲು ಪ್ರದೇಶಗಳಲ್ಲಿ ೧೦೦ ರಿಂದ ೧೨೦ ಜಾನುವಾರುಗಳನ್ನು ಹಾಗೂ ಮಲೆನಾಡು ಪ್ರದೇಶದಲ್ಲಿ ೫೦ ರಿಂದ ೭೫ ಜಾನುವಾರುಗಳನ್ನು ಹೊಂದಿರುವ ಕುಟುಂಬಗಳ ಪ್ರದೇಶವನ್ನು ಗುರುತಿಸಿ ಬ್ಲಾಕ್‌ಗಳನ್ನಾಗಿ ರಚಿಸಲಾಗಿದೆ. ಪ್ರತಿ ಬ್ಲಾಕ್‌ಗೂ ತಂಡವಾರು ಲಸಿಕೆ ದಾರರು ಮುಂಚಿತವಾಗಿ ತಿಳಿಸಿದ ದಿನದಂದು ಭೇಟಿ ನೀಡಿದಾಗ ಜಾನುವಾರು ಮಾಲೀಕರುಗಳು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಸಿ ಸರ್ಕಾರದ ಸವಲತ್ತು ಸದುಪಯೋಗಪಡಿಸಿಕೊಳ್ಳುವಂತೆ ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗೋಪಾಲಕೃಷ್ಣ ಮಾತನಾಡಿ ಅಧಿಕಾರಿಗಳು ಮುಂಚಿತವಾಗಿ ಜಾನುವಾರುಗಳಿಗೆ ಲಸಿಕೆ ಹಾಕಿಸುವ ಕುರಿತು ಪ್ರಚಾರ ಮಾಡಬೇಕು. ಕಾಲುಬಾಯಿ ಜ್ವರದಿಂದ ಆಗುವ ಪರಿಣಾಮಗಳ ಕುರಿತು ರೈತರಲ್ಲಿ, ಪಶುಪಾಲಕರಲ್ಲಿ ಜಾಗೃತಿ ಮೂಡಿಸಿ ಲಸಿಕೆ ಹಾಕಿಸುವಂತೆ ತಿಳಿಸಬೇಕು ಎಂದರು.

ಸಭೆಯಲ್ಲಿ ಪಶುಸಂಗೋಪನಾ ಇಲಾಖೆ ಉಪನಿರ್ದೇಶಕರು ಡಾ. ಮೋಹನ್ ಕುಮಾರ್, ಸಹಾಯಕ ನಿರ್ದೇಶಕ ಡಾ. ರಮೇಶ್ ಸೇರಿದಂತೆ ಪಶುಪಾಲನೆ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Foot-and-mouth disease vaccine for cattle

About Author

Leave a Reply

Your email address will not be published. Required fields are marked *