September 20, 2024

ಕುರಿ-ಉಣ್ಣೆ ಸಹಕಾರ ಸಂಘಕ್ಕೆ 10 ಲಕ್ಷ ನಿವ್ವಳ ಲಾಭ

0
Annual General Meeting of All Members of Sheep and Wool Co-operative Society for the year 2022-23

Annual General Meeting of All Members of Sheep and Wool Co-operative Society for the year 2022-23

ಚಿಕ್ಕಮಗಳೂರು: ಕುರಿ ಸಾಕಾಣಿಕೆ ವೃತ್ತಿಯಲ್ಲಿರುವವರಿಗೆ ನ್ಯಾಷನಲ್ ಬ್ಯಾಂಕ್‌ಗಳು ಸಾಲ ಸೌಲಭ್ಯ ಒದಗಿಸಿ ಶೇ.೫೦ರಷ್ಟು ಸಬ್ಸಿಡಿ ವ್ಯವಸ್ಥೆ ಕಲ್ಪಿಸುವ ಮೂಲಕ ಸಾಕಾಣಿಕೆದಾರರು ಆರ್ಥಿಕವಾಗಿ ಸಬಲರಾಗುವ ಕಾರ್ಯಕ್ಕೆ ಮುಂದಾಗಿದೆ ಎಂದು ಕುರಿ ಮತ್ತು ಉಣ್ಣೆ ಸಹಕಾರ ಸಂಘದ ಅಧ್ಯಕ್ಷ ಎ.ಎನ್. ಮಹೇಶ್ ಹೇಳಿದರು.

ನಗರದ ಸ್ಕೌಟ್ಸ್ ಭವನದಲ್ಲಿ ಚಿಕ್ಕಮಗಳೂರು ಕುರಿ ಮತ್ತು ಉಣ್ಣೆ ಸಹಕಾರ ಸಂಘದ ೨೦೨೨-೨೩ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯನ್ನು ಶುಕ್ರವಾರ ಉದ್ಘಾಟಿಸಿ ಮಾತನಾಡಿದ ಅವರು ಸಂಘವು ಪ್ರಸ್ತುತ ಸಾಲಿನಲ್ಲಿ ೧೦ ಲಕ್ಷ ನಿವ್ವಳ ಲಾಭಾಂಶ ಗಳಿಸಿ ಬೆಳವಣಿಗೆಯತ್ತ ಹೆಜ್ಜೆ ಹಾಕಿದೆ ಎಂದರು.

ಕುರಿ ಸಾಕಾಣಿಕೆದಾರರು ಆರ್ಥಿಕ ಹಾಗೂ ಶಕ್ತಿಯುತವಾಗಿ ಬಲಗೊಳ್ಳುವ ನಿಟ್ಟಿನಲ್ಲಿ ನ್ಯಾಷನಲ್ ಹಾಗೂ ರಾಜ್ಯ ಬ್ಯಾಂಕ್‌ಗಳಿಂದ ಸಾಲಸೌಲಭ್ಯ ವ್ಯವಸ್ಥೆ ಕಲ್ಪಿಸಿಕೊಡಲಾಗುವುದು. ಇದನ್ನು ಸೂಕ್ತ ರೀತಿಯಲ್ಲಿ ಸದ್ಬಳಕೆ ಮಾಡಿಕೊಂಡು ಮರಳಿ ಬ್ಯಾಂಕ್‌ಗಳಿಗೆ ಹಿಂತಿರುಗಿಸಿದರೆ ಇನ್ನೂ ಹೆಚ್ಚಿನ ಮಟ್ಟದಲ್ಲಿ ಅವಕಾಶಗಳು ಲಭ್ಯವಾಗಲಿವೆ ಎಂದರು.

ಕುರಿ ಸಾಕಾಣಿಕೆದಾರರಿಗೆ ಸೂಕ್ತ ಮಾರುಕಟ್ಟೆ ಒದಗಿಸಲು ನಿಟ್ಟಿನಲ್ಲಿ ಚಿಕ್ಕಮಗಳೂರು, ತರೀಕೆರೆ ಹಾಗೂ ಶಿವನಿಯ ಎಪಿಎಂಸಿಗಳಿಂದ ಕುರಿಸಂತೆ ನಡೆಸುವ ಸಂಬಂಧ ಜಾಗ ಒದಗಿಸಲು ಸರ್ಕಾರಕ್ಕೆ ಹಾಗೂ ಸ್ಥಳೀಯ ಶಾಸಕರಿಗೂ ಮನವಿ ಸಲ್ಲಿಸಲಾಗಿದೆ. ಇದನ್ನು ಮನಗಂಡು ಸರ್ಕಾರವು ಕುರಿ ಸಾಕಾಣಿಕೆದಾರರಿಗೆ ಜಾಗ ಕಲ್ಪಿಸಿ ಕೊಡಬೇಕು ಎಂದು ಆಗ್ರಹಿಸಿದರು.

ಸಹಕಾರ ಸಂಘ ಎಂದರೆ ಸಾಲ ಎಂಬಂತಾಗಿದೆ. ಇದರೊಂದಿಗೆ ಸಾಕಾಣಿಕೆ ಬಗ್ಗೆ ತರಬೇತಿಗಳನ್ನು ಸಹ ನೀಡಲಾಗಿದೆ. ರಾಜ್ಯದ ಹೆಸರುಘಟ್ಟ ಹಾಗೂ ಬಂಡೂರಿನಲ್ಲಿ ದೊಡ್ಡಮಟ್ಟದಲ್ಲಿ ಸಾಕಾಣಿಕೆ ಬಗ್ಗೆ ಕಾರ್ಯಾಗಾರ ಪ್ರತಿ ತಿಂಗಳು ಹಮ್ಮಿಕೊಳ್ಳುತ್ತಿದೆ. ಸಾಕಾಣಿಕೆಯಲ್ಲಿ ಆಸಕ್ತಿ ಹೊಂದಿರುವವರು ಭಾಗವಹಿಸಬಹುದಾಗಿದ್ದು ಸಂಘದಲ್ಲಿ ೩೦೦ ಕ್ಕೂ ಹೆಚ್ಚು ಮಂದಿ ತರಬೇತಿಗಾಗಿ ಸದಸ್ಯತ್ವ ಪಡೆದುಕೊಂಡಿದ್ದಾರೆ ಎಂದರು.

ಚಿಕ್ಕಮಗಳೂರು, ತರೀಕೆರೆ, ಕಡೂರು ಸೇರಿದಂತೆ ೧೬೦೦ ಮಂದಿ ಸಂಘದಲ್ಲಿ ಸದಸ್ಯತ್ವ ಹೊಂದಿದ್ದಾರೆ. ಇತರೆ ತಾಲ್ಲೂಕಿನಲ್ಲಿಂದ ಸದಸ್ಯತ್ವಕ್ಕಾಗಿ ಅರ್ಜಿಗಳು ಬರುತ್ತಿರುವುದರಿಂದ ಸದ್ಯದ ಮಟ್ಟಕ್ಕೆ ಮೂಡಿಗೆರೆಗೆ ಕುರಿ ಸಾಕಾಣಿಕೆ ದಾರರಿಗೆ ಮಾತ್ರ ಅವಕಾಶ ಕಲ್ಪಿಸಿಕೊಡುವ ಆಲೋಚನೆ ಹೊಂದಲಾಗಿದೆ ಎಂದು ತಿಳಿಸಿದರು.

ಚಿಕ್ಕಮಗಳೂರು ಜಿಲ್ಲಾ ವ್ಯಾಪ್ತಿಯಲ್ಲೂ ಕುರಿ ಸಾಕಾಣೀಕೆ ಸಂಬಂಧ ಲಕ್ಯಾ, ಶಿವನಿ, ಉದ್ದೇಬೋರನಹಳ್ಳಿ, ಅಂಬಳೆ ಗ್ರಾಮದಲ್ಲಿ ಜಿಲ್ಲಾ ಸಂಘದ ವತಿಯಿಂದ ಒಂದು ದಿನದ ತರಬೇತಿ ಕಾರ್ಯಾಗಾರ ಹಮ್ಮಿಕೊಂಡಿದ್ದು ಸ್ಥಳೀಯವಾಗಿ ಸಾಕಾಣಿಕೆದಾರರನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಸಂಘವು ಕಾರ್ಯೋನ್ಮುಖವಾಗಿದೆ ಎಂದರು.

ಸಂಘದ ಉಪಾಧ್ಯಕ್ಷ ಕೆ.ಸಿ.ಕೆಂಗೇಗೌಡ ಮಾತನಾಡಿ ಜಿಲ್ಲೆಯ ಹಲವಾರು ಹೋಬಳಿಗಳಲ್ಲಿ ಕುರಿ ಸಾಕಾಣಿಕೆ ಉಪ ಹಾಗೂ ಜನಪ್ರಿಯ ಕಸುಬಾಗಿದೆ. ಸಂಘವು ಆರ್ಥಿಕವಾಗಿ ಬೆಳವಣಿಗೆಯಾಗುವ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಠೇವಣಿ ಇರಿಸಿದರೆ ಸಂಕಷ್ಟದಲ್ಲಿರುವ ಸದಸ್ಯರಿಗೆ ಸಾಲ ವಿತರಿಸಿ ಬಳಿಕ ಹಿಂತಿರುಗಿಸಿದರೆ ಸದಸ್ಯರು ಹಾಗೂ ಸಂಘವು ಅರ್ಥಿಕವಾಗಿ ಬೆಳವಣಿಗೆ ಹೊಂದಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ಸಂಘದ ನಿರ್ದೇಶಕರುಗಳಾದ ಲಕ್ಷ್ಮಣಗೌಡ, ಎ.ಮೂರ್ತಿ, ಬಸವರಾಜ್, ಟಿ.ಎಸ್.ಗೀತಾ ಬಾಯಿ, ಕೆ.ಎನ್.ಗುಣವತಿ, ಸದಸ್ಯರುಗಳಾದ ಚಂದ್ರಪ್ಪ, ಮಂಜುನಾಥ್, ಚಂದ್ರಶೇಖರ್, ಕೃಷ್ಣಮೂರ್ತಿ, ಮಹಾ ದೇವಮ್ಮ, ಕಾರ್ಯದರ್ಶಿ ಹೆಚ್.ಮನು ಮತ್ತಿತರರು ಹಾಜರಿದ್ದರು

10 lakh net profit for sheep-wool co-operative society

About Author

Leave a Reply

Your email address will not be published. Required fields are marked *