September 20, 2024

ಮಹಿಳೆಯರು ಆರ್ಥಿಕವಾಗಿ ಸದೃಢವಾದರೆ ಒಳಿತು

0
ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ’ಅನಂತಹುಣ್ಣಿಮೆ’ ಕಾರ್‍ಯಕ್ರಮ

ಚಿಕ್ಕಮಗಳೂರು: ಮಹಿಳೆಯರು ಆರ್ಥಿಕವಾಗಿ ಸದೃಢವಾದರೆ ಒಳಿತು ಎಂದು ಡಿಸಿಸಿ ಬ್ಯಾಂಕ್ ಶಾಖಾವ್ಯವಸ್ಥಾಪಕಿ ಭಾರತಿಶಿವಪ್ರಸಾದ್ ಅಭಿಪ್ರಾಯಿಸಿದರು.

ಅಕ್ಕಮಹಾದೇವಿ ಮಹಿಳಾ ಸಂಘದ ಗೃಹಮಂಡಳಿ ಬಡಾವಣೆಯ ’ಶರಣೆ ನೀಲಮ್ಮ’ ತಂಡವು ನಗರದ ಶ್ರೀಜಗದ್ಗುರು ರೇಣುಕಾಚಾರ್ಯ ಸಮುದಾಯಭವನದಲ್ಲಿ ’ಅನಂತಹುಣ್ಣಿಮೆ’ ಕಾರ್‍ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಕೆಲಸವಾದರೂ ಆಸಕ್ತಿ, ಶ್ರದ್ಧೆಯಿಂದ ಮಾಡಬೇಕು. ಮಾಡುವ ಕಾಯಕದಲ್ಲಿ ಕೀಳರಿಮೆ ಬೇಡ. ಚಿಕ್ಕ-ದೊಡ್ಡ ಕೆಲಸವೆನ್ನದೆ ಮಾಡುವ ಕೆಲಸದಲ್ಲಿ ಪ್ರಾಮಾಣಿಕತೆ-ನಿಯತ್ತಾಗಿ ಮಾಡಿದಾಗ ಯಶಸ್ಸು ಸಿಗುತ್ತದೆ. ಸಾಧ್ಯವಿರುವ ಕೆಲಸವನ್ನು ನಿರ್ವಹಿಸುವುದರಿಂದ ಮಹಿಳೆ ಸ್ವಾವಲಂಬಿಯಾಗಲು ಸಾಧ್ಯ ಎಂದರು.

ಮಹಿಳೆಯರೆಲ್ಲರೂ ಇಂದು ಸಬಲರ ಆಗಿದ್ದಾರೆ, ಅಬಲೆಯರಲ್ಲ. ಸಾಮಾಜಿಕವಾಗಿ, ಆರ್ಥಿಕವಾಗಿ ಮತ್ತು ಧಾರ್ಮಿಕವಾಗಿ ನೆಲೆಕಟ್ಟನ್ನು ಹೊಂದಿದ್ದಾರೆ. ಆರ್ಥಿಕ ದೃಢತೆಗೆ ಇದು ವೇದಿಕೆಯಾಗಬೇಕು ಎಂದು ಅಭಿಪ್ರಾಯಿಸಿದ ಭಾರತಿ, ನೆರೆಹೊರೆಯನ್ನು ಚೆನ್ನಾಗಿಟ್ಟುಕೊಳ್ಳಬೇಕು. ನಮ್ಮ ಅಭಿವೃದ್ಧಿ ಬೇರೆಯವರಿಂದ ಸಾಧ್ಯವಿಲ್ಲ. ನಮ್ಮತನ ಇದ್ದರೆ ಬೆಳವಣಿಗೆ ಕಾಣಬಹುದು ಎಂದರು.

ಮಹಿಳಾ ಮೀಸಲಾತಿ ಜಾರಿಗೆ ಬರುತ್ತಿದೆ. ಮಹಿಳೆಯರು ಎಲ್ಲ ಕ್ಷೇತ್ರಗಳಲ್ಲೂ ಕ್ರಿಯಾಶೀಲರಾದರೆ ಭ್ರಷ್ಟಾಚಾರ ಕಡಿಮೆಯಾಗುತ್ತದೆಂಬ ಭಾವನೆ ಇದರ ಹಿನ್ನಲೆಯಲ್ಲಿದೆ. ಮಹಿಳೆ ಸದಾ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುತ್ತಾರೆ. ಕುಟುಂಬದ ನಿರ್ವಹಣೆಯ ಜೊತೆಗೆ ಸಂಘ-ಸಂಸ್ಥೆಯೊಂದಿಗೆ ಕಾರ್‍ಯನಿರ್ವಹಿಸುತ್ತಾಳೆ. ಮೊದಲು ಮನೆ ನಂತರ ಪರಿಸರ ಸರಿಯಾಗಿ ನಿಭಾಯಿಸಿದರೆ ಸಮಾಜ, ರಾಜ್ಯ, ದೇಶ ಮುಂದುವರೆಯಲು ಸಹಕಾರಿಯಾಗುತ್ತದೆ ಎಂದರು.

ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಂಡಾಗ ಮತ್ತಷ್ಟು ಆರ್ಥಿಕವಾಗಿ ಸದೃಢವಾಗಲು ಸಾಧ್ಯವೆಂದ ಭಾರತಿ, ಸ್ವಸಹಾಯ ಗುಂಪುಗಳು ಸಾಕಷ್ಟು ಸಹಕಾರಿಯಾಗಿವೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದಂತೆ ಸರ್ಕಾರಗಳಿಂದ ಅನೇಕ ಉಪಯುಕ್ತ ಯೋಜನೆಗಳು ಅನುಷ್ಠಾನಗೊಂಡಿವೆ. ವಿವಿಧ ಆರ್ಥಿಕ ಚಟುವಟಿಕೆಗಳಿಗೆ ತರಬೇತಿ, ಸಾಲ, ಸೇರಿದಂತೆ ಹಲವು ಸೌಕರ್‍ಯ-ಸೌಲಭ್ಯಗಳನ್ನು ಒದಗಿಸುತ್ತಿದೆ ಅವುಗಳನ್ನು ಮಹಿಳೆಯರು ಸದುಪಯೋಗ ಪಡಿಸಿಕೊಳ್ಳಬೇಕೆಂದ ಭಾರತಿ, ಅಕ್ಕಮಹಾದೇವಿ ಮಹಿಳಾ ಸಂಘ ನಿರಂತರವಾಗಿ ಸಂಘಟಿತವಾಗಿ ತಿಂಗಳಿಗೊಂದು ಕಾರ್‍ಯಕ್ರಮ ನಡೆಸುತ್ತಿವುದು ಕಡಿಮೆ ಸಾಧನೆಯಲ್ಲ ಎಂದರು.

\ಅಕ್ಕಮಹಾದೇವಿ ಮಹಿಳಾ ಸಂಘದ ಅಧ್ಯಕ್ಷೆ ಯಮುನಾಸಿ.ಶೆಟ್ಟಿ ಸಮಾರಂಭದ ಅಧ್ಯಕ್ಷತೆವಹಿಸಿ ಮಾತನಾಡಿ ಸದಸ್ಯರ ಸಹಕಾರದಿಂದಾಗಿ ಸಂಘದ ಚಟುವಟಿಕೆಗಳು ಚುರುಕಾಗಿ ನಡೆಯುತ್ತದೆ. ಸೇವಾ ಮನೋಭಾವ ಪರಸ್ಪರ ಹೊಂದಾಣಿಕೆ ಹೆಚ್ಚಾಗಬೇಕು. ವೇದಿಕೆಯನ್ನು ಸದ್ಭಳಕೆ ಮಾಡಿಕೊಂಡು ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸಬಹುದೆಂದರು.

ನೀಲಮ್ಮ ತಂಡದ ಮುಖ್ಯಸ್ಥೆ ವಿಶಾಲಯೋಗೀಶ ಪ್ರಾಸ್ತಾವಿಸಿ ಎಲ್ಲ ಸದಸ್ಯರ ಸಹಕಾರದೊಂದಿಗೆ ಕಾರ್‍ಯಕ್ರಮ ಯಶಸ್ವಿಯಾಗಿದೆ ಎಂದರು. ಖಜಾಂಚಿ ಭಾರತಿಶಿವರುದ್ರಪ್ಪ, ಸಹಕಾರ್‍ಯದರ್ಶಿ ನಾಗಮಣಿಕುಮಾರ್, ನಿರ್ದೇಶಕಿಯರಾದ ಗೀತಾಜಗದೀಶ್, ಹೇಮಲತಾ ವೇದಿಕೆಯಲಿದ್ದರು.

ನಾಗರತ್ನಜಯದೇವ ಸ್ವಾಗತಿಸಿ, ಭಾವನಾ ನಿರೂಪಿಸಿದರು. ಸಂಗೀತಾಮಹಾಂತೇಶ್ ಪ್ರಾರ್ಥಿಸಿ, ವೀಣಾಮಲ್ಲಿಕಾರ್ಜುನ ಅತಿಥಿ ಪರಿಚಯಿಸಿ, ಅನುಸೂಯ ವಂದಿಸಿದರು. ಮಹಾದೇವಮ್ಮ ಅವರ ವಚನಗಾಯನ ಗಮನಸೆಳೆಯಿತು. ಸಾಂಸ್ಕೃತಿಕ ಕಾರ್‍ಯಕ್ರಮ ಆಕರ್ಷಕವಾಗಿತ್ತು. ವಿವಿಧ ಆಟೋಟ ಸ್ಪರ್ಧೆ ಏರ್ಪಡಿಸಿದ್ದು ವಿಜೇತರಿಗೆ ಉಪಾಧ್ಯಕ್ಷೆ ವಿಶಾಲಯೋಗೀಶ್ ಬಹುಮಾನ ವಿತರಿಸಿದರು.

‘Anantahunnime’ programme

About Author

Leave a Reply

Your email address will not be published. Required fields are marked *