September 8, 2024

ಅ.15 ರಿಂದ ಶೃಂಗೇರಿ ಶಾರದ ಮಠದಲ್ಲಿ ಶರನ್ನವರಾತ್ರಿ ಮಹೋತ್ಸವ

0
ಶೃಂಗೇರಿ ಶ್ರೀ ಶಾರದಾ

ಶೃಂಗೇರಿ ಶ್ರೀ ಶಾರದಾ

ಶೃಂಗೇರಿ; ಶೃಂಗೇರಿ ಶ್ರೀ ಶಾರದಾಪೀಠಂನ ಶ್ರೀ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ ೧೫ರ ಭಾನುವಾರದಿಂದ ಅ.೨೫ರ ಬುಧವಾರ ತನಕ ನೆರವೇರಲಿದೆ. ನವರಾತ್ರಿಯ ಹಿಂದಿನ ದಿನ ಅ.೧೪ರಂದು ಭಾದ್ರಪದ ಅಮಾವಾಸ್ಯೆಯ ದಿನ ಜಗನ್ಮಾತೆಗೆ ಮಹಾಭಿಷೇಕ ನೆರವೇರಲಿದೆ.ಶ್ರೀ ಶಾರದೆಗೆ ಆನೇಕ ವಿಧವಾದ ಫಲ-ಪಂಚಾಮೃತ ಅಭಿಷೇಕದ ಬಳಿಕ ಮಹಾನ್ಯಾಸಪೂರ್ವಕ ಶತರುದ್ರಾಭಿಷೇಕ ಹಾಗೂ ೧೦೮ ಸಲ ಶ್ರೀಸೂಕ್ತ ಪಠನದಿಂದ ಅಭಿಷೇಕ ನೆರವೇರಲಿದೆ. ಅಂದು ಶ್ರೀಶಾರದೆ “ಜಗತ್ಪ್ರಸೂತಿಕಾ” ಅಲಂಕಾರ ಕಂಗೊಳಿಸಲಿದ್ದಾಳೆ.

ಅ.೧೫ರ ಭಾನುವಾರ ಶ್ರೀ ಶಾರದಾಪ್ರತಿಷ್ಠೆ,ಬ್ರಾಹ್ಮೀ ಅಲಂಕಾರ,ಅ.೧೬ ಸೋಮವಾರ-ಹಂಸವಾಹಿನಿ,ಅ.೧೭-ಮಂಗಳವಾರ-ಮಾಹೇಶ್ವರೀ,ಅ.೧೮-ಬುಧವಾರ-ಮಯೂರವಾಹನಾಲಂಕಾರ,ಅ.೧೯-ಗುರುವಾರ-ವೈಷ್ಣವೀ ಅಲಂಕಾರ,ಶತಚಂಡೀಯಾಗದ ಪ್ರಯುಕ್ತ ಶಾಲಾ ಪ್ರವೇಶ,ಪುರಶ್ಚರಣಾರಂಭ.

ಅ.೨೦-ಶುಕ್ರವಾರ-ಸರಸ್ವತ್ಯಾವಾಹನೆ,ವೀಣಾಶಾರದಾಲಂಕಾರ,ಅ.೨೧-ಶನಿವಾರ-ಮೋಹಿನೀ ಅಲಂಕಾರ,ಅ.೨೨-ಭಾನುವಾರ-ರಾಜರಾಜೇಶ್ವರಿ ಅಲಂಕಾರ,ಅ.೨೩-ಸೋಮವಾರ-ಮಹಾನವಮಿ,ಸಿಂಹವಾಹನಾಲಂಕಾರ,ಶತಚಂಡೀಯಾಗದ ಪೂರ್ಣಾಹುತಿ,ಗಜಾಶ್ವಪೂಜೆ, ಸಂಜೆ ವಿಜಯೋತ್ಸವ,ಶಮೀಪೂಜೆ.ಅ.೨೪-ಮಂಗಳವಾರ-ವಿಜಯದಶಮಿ,ಗಜಲಕ್ಷ್ಮೀ ಅಲಂಕಾರ,ಲಕ್ಷ್ಮೀನಾರಾಯಣ ಹೃದಯಹೋಮ,ರಾಮಪಟ್ಟಾಭಿಷೇಕ ಸರ್ಗ ಪಾರಾಯಣಿ,ಅ.೨೫-ಬುಧವಾರ-ಗಜಲಕ್ಷ್ಮೀ ಅಲಂಕಾರ,ಶ್ರೀ ಶಾರದಾಂಬಾ ಮಹಾರಥೋತ್ಸವ,ಶ್ರೀ ಜಗದ್ಗುರುಗಳ ಅಡ್ಡಪಲ್ಲಕ್ಕಿ ಉತ್ಸವ.

ಅಲಂಕಾರದ ಹಿನ್ನೆಲೆ;-“ಈ ಜಗತ್ತಿನಲ್ಲಿ ಪರಾಶಕ್ತಿ ನಾನೋಬ್ಬಳೇ..ನನ್ನನ್ನು ಬಿಟ್ಟು ಎರಡನೆಯದು ಯಾವುದು ಇಲ್ಲ” ಎಂದು ಶ್ರೀದೇವಿ ಮಾಹಾತ್ಮ್ಯದಲ್ಲಿ ಶ್ರೀ ಶಾರದೆ ತಿಳಿಸಿದಂತೆ ಈ ವಿವಿಧ ಅಲಂಕಾರಗಳು,ಅವತಾರಗಳು ಎಲ್ಲವೂ ಆ ಜಗನ್ಮಾತೆಯದ್ದೇ ಆಗಿದೆ.ವಿದ್ಯೆಯನ್ನು ಅನುಗ್ರಹಿಸಿದಾಗ ಸರಸ್ವತಿಯಾಗಿ,ಧನ-ಧಾನ್ಯಾದಿ ಸಂಪತ್ತನ್ನು ನೀಡುವಾಗ ಮಹಾಲಕ್ಷ್ಮೀಯಾಗಿ,ದುಷ್ಟಸಂಹಾರ ಕಾಲದಲ್ಲಿ ಚಾಮುಂಡಿಯಾಗಿ,ಭಯವನ್ನು ಹೋಗಲಾಡಿಸುವ ದುರ್ಗಾಪರಮೇಶ್ವರಿ ಆವತರಿಸಿ ಭಕ್ತರನ್ನು ಅನುಗ್ರಹಿಸುತ್ತಾಳೆ.ಜಗದಂಬೆಯ ರೂಪಗಳು ಭಿನ್ನಭಿನ್ನವಾಗಿದ್ದರೂ ಸಹ ಆ ಚೈತನ್ಯ ಒಂದೇ ಆಗಿರುತ್ತದೆ.ಇಂತಹ ಮಹೋನ್ನತವಾದ ವಿಷಯ ಈ ವಿವಿಧ ಅಲಂಕಾರಗಳು ಮಾಡುವ ಹಿನ್ನಲೆಯಲ್ಲಿದೆ.

ಪಾರಾಯಣಗಳು-ನವರಾತ್ರಿ ಸಂದರ್ಭದಲ್ಲಿ ಶ್ರೀಮಠದಲ್ಲಿ ನಾಲ್ಕುವೇದಗಳ ಪಾರಾಯಣ,ವಾಲ್ಮೀಕಿ ರಾಮಾಯಣ,ದೇವೀಭಾಗವತ,ದುರ್ಗಾಸಪ್ತಶತಿ,ವಾಲ್ಮೀಕಿ ರಾಮಾಯಣ,ಶ್ರೀ ಸೂಕ್ತ ಜಪ,ಭವನೇಶ್ವರಿ ಜಪ,ಶ್ರೀ ಚಂದ್ರಮೌಳೀಶ್ವರ ಸ್ವಾಮಿಗೆ ಶತರುದ್ರಾಭಿಷೇಕ,ಶ್ರೀ ಚಕ್ರಕ್ಕೆ ನವಾಹರಣ ಪೂಜೆ,ಕುಮಾರೀ,ಸುವಾಸಿನೀ ಪೂಜೆ ನೆರವೇರುತ್ತದೆ.

ಮಹತ್ವಪೂರ್ಣವಾದ ಮಹಾರಥೋತ್ಸವ;-ರಾಜಬೀದಿಯಲ್ಲಿ ನವರಾತ್ರಿ ಉತ್ಸವದ ಸಲುವಾಗಿ ನಡೆಯಲಿರುವ ರಥೋತ್ಸವ ಅತ್ಯಂತ ವೈಭವವಾಗಿ ನೆರವೇರುತ್ತದೆ.ನಾನಾಪ್ರಾಂತ್ಯಗಳಿಂದ ಆಗಮಿಸುವ ಸದ್ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡು ಧನ್ಯತಾಭಾವದಿಂದ ಪುನೀತರಾಗುತ್ತಾರೆ.ನವರಾತ್ರಿ ಎಂದರೆ ಒಂಭತ್ತು ರಾತ್ರಿಗಳು.ಮದು-ಕೈಟಭ,ಶುಂಭ-ನಿಶುಂಭ ಮೊದಲಾದ ಮಹಾರಾಕ್ಷಸರನ್ನು ಕೊಂದ ಜನನ್ಮಾತೆಯನ್ನು ಈ ಸಂದರ್ಭದಲ್ಲಿ ವಿಶೇಷವಾಗಿ ಪೂಜಿಸುತ್ತಾರೆ.

ದರ್ಬಾರು ನವರಾತ್ರಿಯ ವಿಶೇಷ ಕಾರ್ಯಕ್ರಮ.ಈ ದರ್ಬಾರು ಶ್ರೀ ವಿದ್ಯಾರಣ್ಯರ ಕಾಲದಿಂದಲೂ ನಡೆದುಕೊಂಡು ಬಂದಿದೆ.ಜಗದ್ಗುರುಗಳು ಶ್ರೀಮಠದ ಸಂಪ್ರದಾಯಕ್ಕೆ ಅನುಸಾರವಾಗಿ ಕಿರೀಟ,ಆಭರಣಗಳನ್ನು ಧರಿಸಿ,ಸ್ವರ್ಣ ಸಿಂಹಾಸನದಲ್ಲಿ ಅಸೀನರಾಗುತ್ತಾರೆ.ಸಂಜೆ ೬ಗಂಟೆಗೆ ಶ್ರೀಮಠದ ಆವರಣದಲ್ಲಿ ದೇಶ-ವಿಖ್ಯಾತ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮ ನೀಡಲಿದ್ದಾರೆ.

ವರುಷಕೊಮ್ಮೆ ನಾಡಿನ ಎಲ್ಲ ವರ್ಗದ ಜನರನ್ನು ಒಂದೆಡೆ ಸೇರಿಸಿ ತನ್ಮೂಲಕ ಜನರಲ್ಲಿ ಧಾರ್ಮಿಕ ಜಾಗೃತಿ ಮೂಡಿಸುವ ಸಲುವಾಗಿ ನಡೆಯಲಿರುವ ನವರಾತ್ರಿ ಉತ್ಸವ ಅತ್ಯಂತ ಮಹತ್ತ್ವಪೂರ್ಣ ಪಡೆದಿದೆ.ಈ ವೈಭವವನ್ನು ಎಷ್ಟೂ ವರ್ಣಿಸಿದರೂ ಸಾಲದು.ಪ್ರತಿಯೊಬ್ಬರು ತಮ್ಮ ಜೀವಿತಾವಧಿಯಲ್ಲಿ ಒಮ್ಮೆಯಾದರೂ ನವರಾತ್ರಿ ಹಬ್ಬವನ್ನು ನೋಡಲೇಬೇಕು.

Sharannavaratri Mahotsav at Sringeri Sarada Mutt

About Author

Leave a Reply

Your email address will not be published. Required fields are marked *

You may have missed