September 8, 2024

ಮೂಲಸೌಕರ್ಯ ಒದಗಿಸದ ಅಧಿಕಾರಿಗಳ ವಿರುದ್ಧ ಕ್ರಮ

0
ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕುಂದು ಕೊರತೆಗಳ ಸಭೆ

ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕುಂದು ಕೊರತೆಗಳ ಸಭೆ

ಚಿಕ್ಕಮಗಳೂರು:  ಗ್ರಾಮ ಪಂಚಾಯಿತಿಯ ವ್ಯಾಪ್ತಿಯ ಪ್ರತಿ ಹಳ್ಳಿಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಅಧಿಕಾರಿಗಳು ಒತ್ತು ನೀಡಬೇಕು. ನಿರ್ಲಕ್ಷ್ಯವಹಿಸಿದ್ದಲ್ಲಿ ಅಂತಹ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ವಹಿಸಲಾಗುವುದು ಎಂದು ಮೂಡಿಗೆರೆ ಶಾಸಕ ನಯನ ಮೋಟಮ್ಮ ಎಚ್ಚರಿಸಿದರು.

ತಾಲ್ಲೂಕಿನ ಹರಿಹರದಹಳ್ಳಿ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಶುಕ್ರವಾರ ಮಾತನಾಡಿದ ಅವರು ಗ್ರಾಮಸ್ಥರಿಗೆ ನೆರವಾಗುವ ದೃಷ್ಟಿಯಿಂದ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರು ಕಾರ್ಯನಿರ್ವಹಿಸಿ ಗ್ರಾಮಸ್ಥರ ವಿಶ್ವಾಸ ಗಳಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕುಂದುಕೊರತೆಯ ಸಭೆಯು ಪಕ್ಷಾತೀತವಾಗಿದ್ದು ಪಂಚಾಯಿತಿ ವ್ಯಾಪ್ತಿಯ ಪ್ರತಿಯೊಬ್ಬರ ಸಮಸ್ಯೆಗಳನ್ನು ಆಲಿಸುವ ಮೂಲಕ ಪರಿಹಾರ ಕಂಡುಕೊಡಲಾಗುವುದು. ಗ್ರಾಮದ ನಿವಾಸಿಗಳು ಯಾವುದೇ ಸಮಸ್ಯೆಗಳಿದ್ದರೆ ಮುಕ್ತವಾಗಿ ತಿಳಿಸಬಹುದಾಗಿದ್ದು ಆದಷ್ಟು ಸಮಸ್ಯೆ ಸ್ಥಳದಲ್ಲೇ ಪರಿಹರಿಸಲಾಗುವುದು. ಇನ್ನೂ ಕೆಲವು ಸಮಸ್ಯೆಗಳಿಗೆ ಸಮಯಕಾವಕಾಶ ತೆಗೆದುಕೊಂಡು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದರು.

ಗ್ರಾಮಗಳಲ್ಲಿ ರಸ್ತೆ, ವಿದ್ಯುತ್ ದೀಪ, ಕುಡಿಯುವ ನೀರು ಸೇರಿದಂತೆ ಇನ್ನಿತರೆ ಮೂಲಸೌಕರ್ಯ ಒದಗಿಸಲು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗ್ರಾ.ಪಂ. ಆಡಳಿತ ಮಂಡಳೀ ಕಾರ್ಯನಿರ್ವಹಿಸಬೇಕು. ದೇಶದ ಬೆನ್ನೆಲು ಬಾದ ರೈತರಿಗೆ ಎಂದಿಗೂ ತೊಂದರೆಯಾಗದಂತೆ ಸೇವೆ ನೀಡುವುದೇ ಸರ್ಕಾರದ ಗುರಿ ಎಂದು ಹೇಳಿದರು.

ಕ್ಷೇತ್ರದಲ್ಲಿ ಈಗಾಗಲೇ ೪೯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ೨೮ ಜನಸಂಪರ್ಕ ಸಭೆ ನಡೆಸಿಕೊಂಡು ಇದೀಗ ಹರಿಹರದಹಳ್ಳಿ ಗ್ರಾ.ಪಂ.ಗೆ ಹಾಜರಾಗಿದ್ದು ಬಹುತೇಕ ಭೇಟಿ ನೀಡಿದ ಪಂಚಾಯಿತಿಗಳಲ್ಲಿ ಸ್ಮಶಾನ ಹಾಗೂ ಆಶ್ರಯ ನಿವೇಶನ ಸಮಸ್ಯೆಗಳಿದ್ದು ಸಂಬಂಧಪಟ್ಟ ಅಧಿಕಾರಿಗಳಿಗೆ ಚರ್ಚಿಸಿ ಗ್ರಾಮಸ್ಥರ ಮೂಲ ಬೇಡಿಕೆಗಳನ್ನು ಈಡೇರಿಸಲಾಗುವುದು ಎಂದು ಹೇಳಿದರು.

ಆರದವಳ್ಳಿ ಗ್ರಾಮಸ್ಥ ಯೋಗೀಶ್ ಮಾತನಾಡಿ ಗ್ರಾಮದಲ್ಲಿ ಆಶ್ರಯ ಯೋಜನೆಯಲ್ಲಿ ಮನೆ ಮಂಜೂರಾ ಗಿದೆ. ಆದರೆ ಇದುವರೆಗೂ ಹಕ್ಕುಪತ್ರ ವಿತರಿಸಿಲ್ಲ. ಈ ಸಂಬಂಧವಾಗಿ ಪಂಚಾಯಿತಿಯ ಅಧಿಕಾರಿಗಳನ್ನು ವಿಚಾ ರಿಸಿದರೆ ಸ್ಪಂದಿಸುತ್ತಿಲ್ಲ. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಸಂಬಂಧಿಸಿದ ಅಧಿಕಾರಿಗಳ ಜೊತೆ ಮಾತುಕತೆ ನಡೆಸಿ ಸಮಸ್ಯೆಗಳಿದ್ದಲ್ಲಿ ಬಗೆಹರಿಸಿ ಹಕ್ಕುಪತ್ರ ವಿತರಿಸಲಾಗುವುದು ಎಂದರು.

ಗ್ರಾಮಸ್ಥ ಮೋಹನ್ ಮಾತನಾಡಿ ಪಂಚಾಯಿತಿ ಆಡಳಿತರೂಢ ಪಕ್ಷವು ದಲಿತರು ಹಾಗೂ ಸಾಮಾನ್ಯರಿಗೆ ಕಡೆಗಣಿಸಲಾಗುತ್ತಿದೆ. ಕೇವಲ ಅನುಕೂಲಕ್ಕೆ ತಕ್ಕಂತೆ ಅವರವರ ವ್ಯಾಪ್ತಿಗಳಲ್ಲಿ ಬಳಸಿಕೊಳ್ಳಲಾಗುತ್ತಿದ್ದಾರೆ ಎಂದು ಆರೋಪಿಸಿದರು. ಇದಕ್ಕೆ ಸ್ಪಂದಿಸಿದ ಶಾಸಕರು ಅಂಬೇಡ್ಕರ್ ಸಂವಿಧಾನದಂತೆ ಪ್ರತಿಯೊಬ್ಬರಿಗೂ ಸಮರ್ಪಕ ವಾಗಿ ಸವಲತ್ತು ಒದಗಿಸಬೇಕು. ಇದನ್ನು ಹೊರತುಪಡಿಸಿ ಬೇಕಾದವರಿಗೆ ಮಾತ್ರ ಸವಲತ್ತು ಹಂಚಿಕೆಗೊಂಡಲ್ಲಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.

ಹೊಸಕೋಟೆ ಗ್ರಾಮಸ್ಥ ಶಿವರಾಜ್ ಮಾತನಾಡಿ ಕ್ರಸರ್‌ಗೇಟ್‌ನಿಂದ ಹೊಸಕೋಟೆಯ ಬಸವಣ್ಣ ದೇವಾಲ ಯದವರೆಗೂ ರಸ್ತೆ ಡಾಂಬರೀಕರಣಗೊಂಡು ಹಲವಾರು ವರ್ಷಗಳೇ ಕಳೆದಿದ್ದು ಪ್ರತಿನಿತ್ಯ ಗ್ರಾಮಸ್ಥರಿಗೆ ಸಂಚರಿ ಸಲು ತೀವ್ರ ಕಿರಿಕಿರಿಯಾಗುತ್ತಿದೆ. ಇದಕ್ಕೆ ಸ್ಪಂದಿಸಿದ ಶಾಸಕರು ರಸ್ತೆ ಡಾಂಬರೀಕರಣಕ್ಕಾಗಿ ಅನುದಾನ ಬಿಡುಗಡೆ ಗೊಳಿಸಿ ಡಾಂಬರೀಕರಣಕ್ಕೆ ಮುಂದಾಗುವುದು ಎಂದರು.

ಕ್ಷೇತ್ರದಲ್ಲಿ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಜಾನುವಾರುಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರತಿ ಗ್ರಾಮಕ್ಕೂ ಕುಡಿಯುವ ನೀರಿನ ತೊಟ್ಟಿಯನ್ನು ಶಾಸಕರ ಅನುದಾನದಲ್ಲಿ ನಿರ್ಮಿಸಿ ಪೂರ್ಣಗೊಳಿಸಲಾಗುವುದು. ರಾಮನಹಳ್ಳಿ ಸರ್ಕಾರಿ ಶಾಲೆಯ ಶೌಚಾಲಯ ಕೊರತೆಯಿರುವ ಹಿನ್ನೆಲೆಯಲ್ಲಿ ಗಮನಕ್ಕೆ ತಂದಾಗ ಕೂಡಲೇ ಶೌಚಾಲಯ ನಿರ್ಮಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಹಾಪ್‌ಕಾಮ್ಸ್ ಗೌರವಾಧ್ಯಕ್ಷ ಎ.ಎನ್.ಮಹೇಶ್, ಹರಿದರಹಳ್ಳಿ ಗ್ರಾ.ಪಂ. ಅಧ್ಯಕ್ಷೆ ಶಾರದಾ ಮಾಸ್ತೇಗೌಡ, ಉಪಾಧ್ಯಕ್ಷ ಜೆ.ಎನ್.ಮಹೇಶ್, ಸದಸ್ಯರುಗಳಾದ ಹೆಚ್.ಎಂ.ಮಂಜೇಗೌಡ, ಯಶ್ವಂತ್ ರಾಜ್ ಅರಸ್, ಜಯಂತಿ, ಸ್ವಪ್ನ, ಮುಳ್ಳೇಗೌಡ, ತಾಲ್ಲೂಕು ಪಂಚಾಯಿತಿ ಸಹಾಯಕ ಅಧಿಕಾರಿ ಜಯಸಿಂಹ, ಕ್ಷೇತ್ರ ಶಿಕ್ಷಣಾಧಿಕಾರಿ ಹೆಚ್.ಸಿ.ರವೀಶ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಭಾಗವಹಿಸಿದ್ದರು.

Action against authorities for not providing infrastructure

About Author

Leave a Reply

Your email address will not be published. Required fields are marked *

You may have missed