September 19, 2024

ಹಾಲಿನ ಡೈರಿ ಮತ್ತು ಟೆಕ್ಸಟೈಲ್ಸ್ ಪಾರ್ಕನ್ನು ತರುತ್ತೇವೆ

0
ಸಖರಾಯಪಟ್ಟಣದಲ್ಲಿ ನೂತನ ಶಾಸಕರ ಕಛೇರಿ ಉದ್ಘಾಟನೆ

ಸಖರಾಯಪಟ್ಟಣದಲ್ಲಿ ನೂತನ ಶಾಸಕರ ಕಛೇರಿ ಉದ್ಘಾಟನೆ

ಚಿಕ್ಕಮಗಳೂರು: ಈ ಭಾಗದ ಹಲವಾರು ಜನರು ಕೃಷಿಯನ್ನು ಅವಲಂಬಿತರಾಗಿ ಹೈನುಗಾರಿಕೆಯೊಟ್ಟಿಗೆ ಜೀವನ ನಡೆಸುತ್ತಿದ್ದಾರೆ. ಅದರಂತೆ ಕಡೂರು ತಾಲ್ಲೂಕು ಸೇರಿದಂತೆ ಲಕ್ಯಾ ಹೋಬಳಿಯ ಮಹಿಳೆಯರಿಗೆ ಅನುಕೂಲವಾಗುವಂತೆ ಟೆಕ್ಸೆಟೈಲ್ ಪಾರ್ಕನ್ನು ತರಲು ಎಲ್ಲಾ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದು ಶಾಸಕ ಹೆಚ್ ಡಿ ತಮ್ಮಯ್ಯ ಹೇಳಿದರು.

ಶುಕ್ರವಾರ ಸಖರಾಯಪಟ್ಟಣದಲ್ಲಿ ನೂತನ ಶಾಸಕರ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿ ತಿಂಗಳಲ್ಲಿ ಎರೆಡು ಮಂಗಳವಾರದಂದು ಈ ಕಛೇರಿಯಲ್ಲಿದ್ದು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತೇನೆ. ನಮ್ಮ ಸರಕಾರ ನಾಲ್ಕು ಗ್ಯಾರೆಂಟಿಗಳನ್ನು ಈಗಾಗಲೇ ಪೂರೈಸಿದೆ.

ಇದನ್ನು ಸಹಿಸಲಾಗದ ವಿರೋಧ ಪಕ್ಷಗಳು ಬಾಯಿಗೆ ಬಂದಂತೆ ಮಾತನಾಡುತ್ತಿವೆ. ಅದಕ್ಕೆ ಕಿವಿಗೊಡದೆ ಕ್ಷೇತ್ರದ ಅಭಿವೃದ್ಧಿಯೇ ನಮಗೆ ಮುಖ್ಯ. ಈ ಭಾಗದ ಸಮಸ್ಯೆ ನಮಗೆ ಅರಿವಿದೆ. ಅದನ್ನು ಆದ್ಯತೆಯ ಮೇರೆಗೆ ಪರಿಹರಿಸುತ್ತೇನೆ. ಹಾಲಿನ ಡೈರಿ ತರುವುದು ಸುಲಭದ ಕೆಲಸವಲ್ಲ. ಆದರೂ ಏನೇ ಆಗಲಿ ಡೈರಿ ಮತ್ತು ಗಾರ್ಮೆಂಟ್ಸನ್ನು ಕಡೂರು ಶಾಸಕ ಆನಂದರವರ ಸಹಕಾರದಿಂದ ಈ ಭಾಗದಲ್ಲೇ ಮಾಡುತ್ತೇವೆ. ಸಾರ್ವಜನಿಕರು ೪೦ ಕಿಮೀ ದೂರದ ಚಿಕ್ಕಮಗಳೂರಿಗೆ ಬರಬೇಕಿತ್ತು. ಅದನ್ನರಿತು ಈ ಕಛೇರಿಯನ್ನು ಉದ್ಘಾಟನೆ ಮಾಡಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.

ಪ್ರಾಸ್ತಾವಿಕವಾಗಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಡಿಮನೆ ಸತೀಶ್ ಮಾತನಾಡಿ, ೨೫ ವರ್ಷಗಳಿಂದ ಈ ಭಾಗದಲ್ಲಿ ಕಾಂಗ್ರೆಸ್‌ಗೆ ಅಧಿಕಾರ ಸಿಕ್ಕಿರಲ್ಲಿಲ್ಲ. ಕಳೆದ ಸಾಲಿನ ಶಾಸಕರನ್ನು ಹುಡುಕುವುದೇ ಕಷ್ಟವಾಗಿತ್ತು. ಆ ಕಾರಣವಾಗಿ ನಾವು ಅ ತಪ್ಪನ್ನು ಸರಿಪಡಿಸಲು ಕಛೇರಿಯನ್ನು ಉದ್ಘಾಟನೆ ಮಾಡಿದ್ದೇವೆ. ಶಾಸಕ ತಮ್ಮಯ್ಯನವರು ಈ ಭಾಗದ ನೀರಾವರಿ ಸಮಸ್ಯೆಗೆ ಶಾಶ್ವತವಾಗಿ ಪರಿಹಾರವನ್ನು ಕೊಡಿಸುವಲ್ಲಿ ಕೈಜೋಡಿಸಬೇಕು ಎಂದರು.

ಮಾಜಿ ವಿಧಾನ ಪರಿಷತ್ ಸದಸ್ಯೆ ಗಾಯತ್ರಿಶಾಂತೇಗೌಡ ಮಾತನಾಡಿ, ಜಿಲ್ಲೆಯಲ್ಲಿ ೫ ಜನ ಶಾಸಕರಿದ್ದಾರೆ. ನಮ್ಮ ಕಾಂಗ್ರೆಸ್ ಸರಕಾರ ಹೇಳಿರುವ ಎಲ್ಲಾ ಗ್ಯಾರೆಂಟಿಗಳನ್ನು ಕೊಟ್ಟಿದೆ. ಯಾವುದಾದರೂ ನುಡಿದಂತೆ ನಡೆಯುವ ಸರಕಾರವಿದ್ದರೆ ಅದು ಕರ್ನಾಟಕದ ಕಾಂಗ್ರೆಸ್ ಸರಕಾರ ಎಂದರು.

ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಂಶುಂತ್ ಮಾತನಾಡಿ ಜನಪರ ಮತ್ತು ಜನಸ್ನೇಹಿಯಾಗಿ ಜನಪ್ರಿಯತೆ ಗಳಿಸಿರುವ ಶಾಸಕ ಎಚ್.ಡಿ.ತಮ್ಮಯ್ಯ ರವರು ಇಟ್ಟಿರುವ ಹೆಜ್ಜೆ ಅತ್ಯಂತ ಉತ್ತಮವಾದ ಹೆಜ್ಜೆಯಾಗಿದೆ, ನೂತನವಾಗಿ ಉದ್ಘಾಟನೆಗೊಂಡ ಜನಸ್ಪಂದನಾ ಕಛೇರಿ ಜನರ ಸಂಕಷ್ಟಗಳಿಗೆ ಸ್ಪಂದಿಸಲೆಂದೇ ಪ್ರಾರಂಭ ಮಾಡಲಾಗಿದೆ, ಜನರ ಬಳಿ ನಡೆಯುವಂತಹ ಹೆಜ್ಜೆಯಿಂದ ಗ್ರಾಮೀಣ ಭಾಗದ ಜನರ ಕುಂದು-ಕೋರತೆಗಳನ್ನು ಬಗೆಹರಿಸುವ ಜೊತೆಗೆ ಅವರ ಕಷ್ಟ-ಸುಖಗಳನ್ನು ತಿಳಿದು ಸ್ಪಂದಿಸಲು ಅನುಕೂಲವಾಗಲಿದೆ ಎಂದರು.

ಎಐಸಿಸಿ ಕಾರ್ಯದರ್ಶಿ ಸಂದೀಪ್ ಮಾತನಾಡಿ ಜನಸ್ಪಂದನಾ ಶಾಸಕರ ಕಾರ್ಯಾಲಯ ಉದ್ಘಾಟನೆ ಇಂದು ನೆರೆವೇರಿದ್ದು, ಕ್ಷೇತ್ರದ ಅಭಿವೃದ್ಧಿ ಕಾರ್ಯದಲ್ಲಿ ಗ್ರಹಣ ಹಿಡಿದ ಸಂದರ್ಭದಲ್ಲಿ, ಕ್ಷೇತ್ರದ ಜನರು ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆಮಾಡುವ ಮೂಲಕ ಆ ಗ್ರಹಣವನ್ನು ನಿರ್ಮೂಲ ಮಾಡಿದ್ದಾರೆ, ಸಾಮಾನ್ಯ ಜನರ ಕೆಲಸ-ಕಾರ್ಯವನ್ನು ಖುದ್ದಾಗಿ ನಿರ್ವಹಿಸುವ ಉದ್ದೇಶಕ್ಕಾಗಿ, ಜಿಲ್ಲೆಯ ೫ ಕ್ಷೇತ್ರಗಳಲ್ಲಿಯೂ ನಿರಂತರ ಜನಸಂಪರ್ಕದಲ್ಲಿರುವ ಉದ್ದೇಶದಿಂದ ಕಾರ್ಯಾಲಯ ನಿರ್ಮಾಣ ಮಾಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಸಖರಾಯಪಟ್ಟಣ ಗ್ರಾಪಂ.ಅಧ್ಯಕ್ಷೆ ರಾಜಮ್ಮ, ಮುಖಂಡರಾದ ಎಂ ಎಲ್ ಮೂರ್ತಿ, ಮಹಮ್ಮದ್, ರೇಖಾಹುಲಿಯಪ್ಪಗೌಡ, ಮಂಜೇಗೌಡ, ಅಕ್ಮಲ್, ಶಿವಾನಂದಸ್ವಾಮಿ, ಅಕ್ಮಲ್, ಚಂದ್ರಪ್ಪ, ಗ್ರಾಪಂ.ನ ಅಧ್ಯಕ್ಷರು,ಎಲ್ಲಾ ಸದಸ್ಯರು ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.

Inauguration of new MLA’s office in Sakharayapatnam

About Author

Leave a Reply

Your email address will not be published. Required fields are marked *

You may have missed