September 20, 2024

ಸರ್ಫೇಸಿ ಕಾಯ್ದೆಯಡಿ ಯಾವುದೇ ಕಾಫಿ ತೋಟವನ್ನೂ ಹರಾಜು ಮಾಡಬಾರದು

0
ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಬ್ಯಾಂಕರ್‍ಸ್ ಮತ್ತು ಕಾಫಿ ಬೆಳೆಗಾರರ ಸಂಘಟನೆಗಳ ಸಭೆ

ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಬ್ಯಾಂಕರ್‍ಸ್ ಮತ್ತು ಕಾಫಿ ಬೆಳೆಗಾರರ ಸಂಘಟನೆಗಳ ಸಭೆ

ಚಿಕ್ಕಮಗಳೂರು:  ಸರ್ಫೇಸಿ ಕಾಯ್ದೆಯಡಿ ಯಾವುದೇ ಕಾಫಿ ತೋಟವನ್ನೂ ಹರಾಜು ಮಾಡಬಾರದು ಮತ್ತು ಬೆಳೆಗಾರರಿಗೆ ಕಿರುಕುಳ ನೀಡಬಾರದು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗಿದೆ ಎಂದು ಕರ್ನಾಟಕ ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಡಾ. ಎಚ್.ಟಿ.ಮೋಹನ್ ಕುಮಾರ್ ತಿಳಿಸಿದರು.

ಶುಕ್ರವಾರ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರ ನೇತೃತ್ವದಲ್ಲಿ ನಡೆದ ಬ್ಯಾಂಕರ್‍ಸ್ ಮತ್ತು ಕಾಫಿ ಬೆಳೆಗಾರರ ಸಂಘಟನೆಗಳ ಸಭೆಯಲ್ಲಿ ಭಾಗವಹಿಸಿ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಕಾಫಿ ಬೆಳೆಗಾರರಿಗೆ ಸರ್ಫೇಸಿ ಕಾಯ್ದೆ ಪ್ರಕಾರ ನೋಟೀಸು ನೀಡಿ ತೋಟಗಳನ್ನ ಹರಾಜು ಮಾಡುತ್ತಿರುವ ಬಗ್ಗೆ ಆತಂಕ ತೋಡಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಬ್ಯಾಂಕರ್‍ಸ್ ಮತ್ತು ಬೆಳೆಗಾರರ ಸಂಘಟನೆಗಳ ಸಭೆ ನಡೆಸಿದ್ದಾರೆ ಎಂದರು.

ಕಾಫಿ ಸಹ ಕೃಷಿ ಚಟುವಟಿಕೆಯೇ ಆಗಿರುವುದರಿಂದ ಸರ್ಫೇಸಿ ಕಾಯ್ದೆ ಬಳಸಿ ಬೆಳೆಗಾರರ ವಿರುದ್ಧ ಕ್ರಮ ಕೈಗೊಳ್ಳಬಾರದು ಎಂದು ಈ ಮೊದಲಿನಿಂದಲೂ ಸರ್ಕಾರವನ್ನು ಒತ್ತಾಯಿಸುತ್ತಲೇ ಬಂದಿದ್ದೇವೆ ಎಂದರು.

ಬೆಳೆಗಾರರು ೨೦೧೬ ರಿಂದಲೂ ಅತೀವೃಷ್ಠಿ, ಅನಾವೃಷ್ಠಿ, ಪ್ರವಾಹಗಳಿಂದಾಗಿ ತತ್ತರಿಸಿದ್ದಾರೆ. ಬೆಳೆಗಾರರು ಹಣಕಾಸಿನ ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾರ್ಮಿಕರ ಸಮಸ್ಯೆಗಳಿವೆ. ಈ ಎಲ್ಲಾ ಸಮಸ್ಯೆಗಳಿಂದ ಬೆಳೆಗಾರರನ್ನು ಹೊರಕ್ಕೆ ತರಲು ಜಿಲ್ಲಾಡಳಿತ, ಸರ್ಕಾರಗಳು ಮುಂದಾಗಬೇಕು. ಒನ್ ಟೈಮ್ ಸೆಟ್ಲಮೆಂಟ್ ಹೆಸರಲ್ಲಿ ಚಕ್ರಬಡ್ಡಿಗಳು, ಪೆನಾಲ್ಟಿಗಳನ್ನು ಹಾಕಬಾರದು. ಸರಳ ಬಡ್ಡಿ ಆಧಾರದಲ್ಲೇ ಸಾಲದ ಖಾತೆಗಳನ್ನು ಇತ್ಯರ್ಥಪಡಿಸಬೇಕು ಎಂದು ಕೆಜಿಎಫ್‌ನಿಂದ ಮನವಿ ಮಾಡಿದ್ದೇವೆ ಎಂದರು.

ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸುವ ಭರವಸೆ ನೀಡಿರುವ ಬ್ಯಾಂಕ್ ಅಧಿಕಾರಿಗಳು ಈ ಬಗ್ಗೆ ಉನ್ನತಾಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದರು.

ಬ್ಯಾಂಕ್‌ನವರು ಸಾಲಗಾರರ ಖಾತೆ ಸುಸ್ತಿ ಆಗುತ್ತಿದ್ದಂತೆ ಪತ್ರಿಕೆಗಳಲ್ಲಿ ನೋಟೀಸು ನೀಡಿ, ಬ್ಯಾಂಕ್ ಬಳಿ ಬ್ಯಾನರ್‌ಗಳನ್ನು ಹಾಕಿ ನಂತರ ಸಂಬಂಧಪಟ್ಟವರ ತೋಟಗಳನ್ನು ಇ-ಹರಾಜು ಹಾಕುತ್ತಿದ್ದಾರೆ ಇದನ್ನು ಮಾಡಬಾರದು ಎಂದು ಒತ್ತಾಯಿಸಿದ್ದೇವೆ. ಹಿಂದೆಲ್ಲಾ ಗ್ರಾಹಕರ ಸಭೆಗಳನ್ನು ನಡೆಸಿ ಬ್ಯಾಂಕರ್‍ಸ್ ಜೊತೆ ಮುಖಾ ಮುಖಿ ಚರ್ಚಿಸಿ ಮಸ್ಯೆಗಳನ್ನು ಬಗೆಹರಿಸಿಕೊಳ್ಳಲಾಗುತ್ತಿತ್ತು. ಅದನ್ನೇ ಈಗಲೂ ಮುಂದುವರಿಸಬೇಕು ಎಂದು ಒತ್ತಾಯಿಸಲಾಗಿದೆ ಎಂದರು.

ಗ್ರಾಹಕರಿಲ್ಲದೆ ಬ್ಯಾಂಕ್ ನಡೆಸಲು ಸಾಧ್ಯವಿಲ್ಲ. ಹಿಂದೆಲ್ಲ ಶೇ.೨೭ ರಷ್ಟು ಬಡ್ಡಿಯನ್ನೂ ಕಟ್ಟಿ ಬ್ಯಾಂಕ್‌ಗಳಿಗೆ ಸಾಕಷ್ಟು ಅನುಕೂಲವನ್ನೂ ಮಾಡಿಕೊಟ್ಟಿದ್ದೇವೆ. ಇದರಿಂದ ಬ್ಯಾಂಕ್‌ಗಳು ಅಭಿವೃದ್ಧಿ ಹೊಂದಿವೆ. ಇಂದು ಕಾಫಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ ಅದನ್ನು ಪರಿಗಣಿಸಿ ಇನ್ನು ಮುಂದೆ ತೋಟಗಳನ್ನು ಹರಾಜು ಮಾಡಲು ಬಿಡಬಾರದು ಎಂದು ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದ್ದೇವೆ ಎಂದರು.

ಜಿಲ್ಲಾಧಿಕಾರಿಗಳು ಈ ವಿಷಯವನ್ನು ಎಸ್‌ಎಲ್‌ಬಿಸಿ ಸಭೆಗೆ ಕಳಿಸಿಕೊಡಲಾಗುವುದು. ಅಲ್ಲಿ ಚರ್ಚಿಸಿ ಅಹವಾಲುಗಳನ್ನು ಪರಿಹರಿಸುವಂತೆ ಕೋರುವುದಾಗಿ ಭರವಸೆ ನೀಡಿದ್ದಾರೆ ಎಂದರು.

ಕರ್ನಾಟಕ ಬೆಳೆಗಾರರ ಸಂಘಟನೆ ಖಜಾಂಚಿ ಎಚ್.ಎಂ.ಉಮೇಶ್, ವಸ್ತಾರೆ ಬೆಳೆಗಾರರ ಸಂಘದ ಅಧ್ಯಕ್ಷ ಟಿ.ಡಿ.ಮಲ್ಲೇಶ್, ಆವುತಿ ಬೆಳೆಗಾರರ ಸಂಘದ ಶ್ರೀಧರ್, ಕೆಜಿಎಫ್ ಮಾಜಿ ಅಧ್ಯಕ್ಷ ಜೈರಾಂ ಹಾಗೂ ಜಿಲ್ಲೆಯ ಎಲ್ಲಾ ಬ್ಯಾಂಕ್‌ಗಳ ಅಧಿಕಾರಿಗಳು, ಜಿಲ್ಲಾ ಲೀಡ್ ಬ್ಯಾಂಕ್ ಆದ ಯೂನಿಯನ್ ಬ್ಯಾಂಕ್‌ನ ಮ್ಯಾನೇಜರ್ ಸೇರಿದಂತೆ ಕರ್ನಾಟಕ ಬೆಳೆಗಾರರ ಒಕ್ಕೂಟದ ಹತ್ತು ಸಂಘಟನೆಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಜರಿದ್ದರು.

No coffee plantation should be auctioned under the Surface Act

About Author

Leave a Reply

Your email address will not be published. Required fields are marked *