September 20, 2024

ಖೈದಿಗಳು ಮಾಡಿದ ತಪ್ಪಿನ ಕೆಡುಕುಗಳಿಂದಾಗಿ ಜೈಲಿನಲ್ಲಿದ್ದೀರಿ

0
ಜಿಲ್ಲಾ ಕಾರಾಗೃಹ ಆವರಣದಲ್ಲಿ ನಡೆದ ಬದುಕು ಬದಲಿಸಬಹುದು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ

ಜಿಲ್ಲಾ ಕಾರಾಗೃಹ ಆವರಣದಲ್ಲಿ ನಡೆದ ಬದುಕು ಬದಲಿಸಬಹುದು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರ

ಚಿಕ್ಕಮಗಳೂರು: ಖೈದಿಗಳು ನಮ್ಮ ಹಣೆ ಬರಹ ಎಂದು ಭಾವಿಸದೆ ನೀವು ಮಾಡಿದ ತಪ್ಪಿನ ಕೆಡುಕುಗಳಿಂದಾಗಿ ಜೈಲಿನಲ್ಲಿದ್ದೀರಿ. ಈ ಸಮಯವನ್ನು ಶಿಕ್ಷೆಗೋಸ್ಕರ ಎನ್ನದೆ ಜೀವನ ಬದಲಾವಣೆಗಾಗಿ ಬಂದಿದ್ದೇವೆಂದು ಭಾವಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಬಿ.ಗೋಪಾಲಕೃಷ್ಣ ಕರೆ ನೀಡಿದರು.

ಅವರು ಇಂದು ಜಿಲ್ಲಾ ಕಾರಾಗೃಹ ಆವರಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಜಿಲ್ಲಾ ಕಾರಾಗೃಹ, ರಾಜ್ಯ ಸರ್ವೋದಯ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಬದುಕು ಬದಲಿಸಬಹುದು ವ್ಯಕ್ತಿತ್ವ ವಿಕಸನ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

ಜೈಲು ಶಿಕ್ಷೆಯನ್ನು ಅನುಭವಿಸಿ, ಹೊರ ಹೋದ ನಂತರ ಎರಡನೇ ಅವಧಿಗೆ ಜೀವಿಸಲು ಅವಕಾಶ ಸಿಕ್ಕಿದೆ ಎಂದು ಭಾವಿಸಿ, ಸಮಾಜದಲ್ಲಿ ಉತ್ತಮ ಪ್ರಜೆಗಳಾಗಿ ಒಳ್ಳೆಯ ಸ್ಥಾನಮಾನ ಗಳಿಸಿ, ಮಾದರಿ ಜೀವನ ನಡೆಸಿ ಎಂದು ಕಿವಿಮಾತು ಹೇಳಿದರು.

ಮಹಾತ್ಮಾ ಗಾಂಧೀಜಿಯವರು ಎಲ್ಲರ ಬದುಕಿನಲ್ಲಿ ತುಂಬಾ ಹತ್ತಿರವಾಗುತ್ತಾರೆ. ಯಾಕೆಂದರೆ ಅವರ ಜೀವನವೇ ಸಂದೇಶ ಎಂದು ಹೇಳಿದ್ದಾರೆ. ಪ್ರತಿಯೊಂದನ್ನೂ ಮುಚ್ಚು ಮರೆಯಿಲ್ಲದೆ ಎಲ್ಲರೊಂದಿಗೆ ಹಂಚಿಕೊಳ್ಳುವ ಸ್ವಭಾವ ಹೊಂದಿದ್ದರು ಎಂದು ತಿಳಿಸಿದರು.

ಗಾಂಧೀಜಿ ಸಹ ದುಶ್ಚಟಗಳಿಗೆ ದಾಸರಾಗಿದ್ದು, ಅದನ್ನು ಅವರೇ ಹೇಳಿಕೊಂಡಿದ್ದಾರೆ. ಇದರಿಂದ ಹೊರಬಂದು ಮನಃ ಪರಿವರ್ತನೆ ಮಾಡಿಕೊಳ್ಳಲು ಏನೆಲ್ಲಾ ಪ್ರಯೋಗ ಮಾಡಿದರು ಎಂದು ಮೈ ಎಕ್ಸಪರಿಮೆಂಟ್ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂದು ವಿವರಿಸಿದರು.

ಇಲ್ಲಿ ಬಂದಿರುವ ಪ್ರತಿಯೊಬ್ಬರ ಬದುಕು ವಿಭಿನ್ನವಾಗಿದೆ. ಆದರೆ ದಾರಿ ಕಾಣದಾಗಿದ್ದರಿಂದ ಇಲ್ಲಿ ಕುಳಿತಿದ್ದೀರಿ, ಹುಟ್ಟುತ್ತಾ ಯಾರೂ ಕೆಟ್ಟವರಿರುವುದಿಲ್ಲ, ಜೀವನದ ದಾರಿಯಲ್ಲಿ ನಡೆಯುವಾಗ ನೋಡುತ್ತಾ, ಕಲಿಯುತ್ತಾ, ಮಾಡುತ್ತಾ ಕೆಲವು ಘಟನೆಗಳು ಸಂಭವಿಸಿರುವುದರಿಂದ ಆರೋಪಿಗಳಾಗಿದ್ದೀರಿ ಎಂದರು.

ಭಗವಂತ ಹುಟ್ಟಿದವರಿಗೆಲ್ಲಾ ಒಂದಲ್ಲಾ ಒಂದು ಪ್ರತಿಭೆ ಕೊಟ್ಟೇ ಕೊಟ್ಟಿರುತ್ತಾನೆ. ಕೆಲವರು ಅಧಿಕಾರಿಗಳು, ಕಾರ್ಪೆಂಟರ್, ಅಡುಗೆಯವರು ಹೀಗೆ ನಾನಾ ರೀತಿಯ ಕಸುಬುಗಳನ್ನು ಮಾಡುವವರಾಗಿರಬಹುದು ಅದನ್ನು ಈ ಸಂದರ್ಭದಲ್ಲಿ ಹುಡುಕಬೇಕಾಗುತ್ತದೆ. ಜೈಲಿನಿಂದ ಹೊರ ಹೋದ ಬಳಿಕ ಒಳ್ಳೆಯ ಕಾರ್ಯದಲ್ಲಿ ತೊಡಗಿ, ಉತ್ತಮ ಜೀವನವನ್ನು ನಡೆಸಲು ತಮ್ಮ ನಿರ್ಧಾರಗಳನ್ನು ಬದಲಾಯಿಸಿಕೊಳ್ಳಲು ಇದು ಒಳ್ಳೆಯ ಅವಕಾಶ ಎಂದು ಹೇಳಿದರು.

ಶಿಕ್ಷಣಕ್ಕಿಂತ ಇನ್ನೊಂದು ಇಂಡಸ್ಟ್ರಿ ಮತ್ತೊಂದಿಲ್ಲ ಏನಾದರೂ ಒಂದನ್ನು ಕಲಿತು ಜೈಲಿನಿಂದ ಹೊರಹೋದ ನಂತರ ತಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಿ ಎಂದು ಸಲಹೆ ನೀಡಿದ ಅವರು ನಿಮ್ಮ ಜೀವನ ನಿಮ್ಮ ಕೈಯಲ್ಲಿದೆ, ಯಾರೂ ಕಿತ್ತುಕೊಂಡಿಲ್ಲ ಎಂಬುದನ್ನು ಅರಿಯಿರಿ ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಕೃಷ್ಣ, ವಕೀಲರಾದ ನಟರಾಜ್, ಮುಖ್ಯ ತರಬೇತುದಾರರಾಗಿ ಮುಂಬೈನ ಲಕ್ಷ್ಮಣ್ ತುಕರಾಂ ಗೋಲೆ, ಪ್ರಜಾಪಿತ ಬ್ರಹ್ಮಾಕುಮಾರಿಸ್ ಈಶ್ವರಿ ಸಂಸ್ಥೆಯ ರಾಜಯೋಗಿನಿ ಭಾಗ್ಯಕ್ಕ, ಕರ್ನಾಟಕ ರಾಜ್ಯ ಸರ್ವೋದಯ ಮಂಡಳಿ ಅಧ್ಯಕ್ಷ ಡಾ. ಹೆಚ್.ಎಸ್ ಸುರೇಶ್, ಬೆಂಗಳೂರಿನ ಡಾ.ಯ.ಚಿ ದೊಡ್ಡಯ್ಯ, ಕೊಪ್ಪದ ಎಸ್.ನರಸಿಂಹಮೂರ್ತಿ, ಜಿಲ್ಲಾ ಕಾರಾಗೃಹದ ಜೈಲರ್ ನೆಲಧರಿ, ಅಧೀಕ್ಷಕ ಎಸ್.ಎಸ್ ಮೇಟಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪ ನಿರ್ದೇಶಕರಾದ ಡಾ. ಹೆಚ್.ವಿ ಮಂಜುಳ, ಮತ್ತಿತರರು ಭಾಗವಹಿಸಿದ್ದರು.

Personality Development Training Workshop

About Author

Leave a Reply

Your email address will not be published. Required fields are marked *