September 20, 2024

ದಲಿತರು-ಶೂದ್ರರಿಗೆ ದೇಶವನ್ನು ಆಡಲು ಯಾವುದೇ ಅವಕಾಶವೇ ಸಿಕ್ಕಿಲ್ಲ

0
ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬಿ ಎಸ್ ಪಿ ಜಿಲ್ಲಾ ಸಮಾವೇಶ

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬಿ ಎಸ್ ಪಿ ಜಿಲ್ಲಾ ಸಮಾವೇಶ

ಚಿಕ್ಕಮಗಳೂರು: ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರಿಗೆ ದೇಶವನ್ನು ಆಡಲು ಮೀಸಲಾತಿ ಸಿಕ್ಕಿದೆ ಆದರೆ ದಲಿತರು ಮತ್ತು ಶೂದ್ರರಿಗೆ ಮಾತ್ರ ಇದುವರೆಗೂ ದೇಶವನ್ನು ಆಡಲು ಯಾವುದೇ ಅವಕಾಶವೇ ಸಿಕ್ಕಿಲ್ಲ ಎಂದು ಬಿ ಎಸ್ ಪಿ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ ಬೇಸರ ವ್ಯಕ್ತಪಡಿಸಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಆಯೋಜಿಸಲಾಗಿದ್ದ ಬಿ ಎಸ್ ಪಿ ಜಿಲ್ಲಾ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ದಲಿತರು ಮತ್ತು ಶೂದ್ರರು ಈ ದೇಶದ ಮೂಲ ನಿವಾಸಿಗಳು. ಆದರೆ ಅವರಿಗೆ ದೇಶವನ್ನು ಆಳುವ ಹಕ್ಕು ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬ್ರಾಹ್ಮಣರು, ಕ್ಷತ್ರಿಯರು, ವೈಶ್ಯರು ಎರಡು ಸಾವಿರ ವರ್ಷಗಳ ಕಾಲ ದೇಶವನ್ನು ಆಳಿದ್ದಾರೆ. ೧೯೦೫ರಲ್ಲಿ ಮಹಾರಾಷ್ಟ್ರದಲ್ಲಿ ದಲಿತರು ಮತ್ತು ಶೂದ್ರ ರಿಗೆ ಶೇ. ೫ರಷ್ಟು ಮೀಸಲಾತಿ ನೀಡಲಾಯಿತು. ಬಳಿಕ ಮೈಸೂರು ಮಹಾರಾಜರು ತಮ್ಮ ಆಡಳಿತದಲ್ಲಿ ಶೇ. ೭೫ರಷ್ಟು ಮೀಸಲಾತಿ ನೀಡಿದ್ದರಿಂದಾಗಿ ಇಂದು ಶೂದ್ರರು ಮತ್ತು ದಲಿತರು ರಾಜಕೀಯವಾಗಿ ಸ್ವಲ್ಪ ಕಣ್ಣು ಬಿಡಲು ಸಾಧ್ಯವಾಗಿದೆ. ಆದರೆ ಇಂದು ವಿವಿಧ ರಾಜಕೀಯ ಪಕ್ಷಗಳಲ್ಲಿರುವ ದಲಿತರು ಹಾಗೂ ಶೂದ್ರರು ಜೀತದಾಳುಗಳಂತಾಗಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಬ್ರಾಹ್ಮಣೇತರರಿಗೆ ಮತದಾನದ ಹಕ್ಕು ನೀಡುವಂತೆ ಅಂಬೇಡ್ಕರ್ ಅವರು ಒತ್ತಾಯ ಮಾಡಿದಾಗ ಮಹಾತ್ಮ ಗಾಂಧಿ ಅವರೇ ಇದಕ್ಕೆ ಒಪ್ಪಿರಲಿಲ್ಲ. ಆದರೆ ಹೋರಾಟದ ಮೂಲಕ ಮತದಾನದ ಹಕ್ಕನ್ನು ಪಡೆಯಲಾಯಿತು. ೧೯೩೬ರಲ್ಲಿ ಅಂಬೇಡ್ಕರ್ ಪಕ್ಷ ಕಟ್ಟುವ ಅಧಿಕಾರ ತೆಗೆದುಕೊಂಡರು. ಅಂದು ಅಂಬೇಡ್ಕರ್ ಶೂದ್ರರು ಹಾಗೂ ದಲಿತರಿಗೆ ಪಕ್ಷ ಕಟ್ಟುವ ಅಧಿಕಾರಕೊಡಿಸಿದ್ದರಿಂದಲೇ ಎಚ್. ಡಿ. ದೇವೇಗೌಡ ಅವರು ಪಕ್ಷವನ್ನು ಕಟ್ಟಿ ಪ್ರಧಾನಿಯಾಗಲು ಸಾಧ್ಯವಾಯಿತು ಎಂದರು.

ಸ್ವಾತಂತ್ರ್ಯ ಹೋರಾಟದಲ್ಲಿ ಹೊಡೆತ ತಿಂದವರು, ಜೈಲಿಗೆ ಹೋದವರು, ನೇಣುಗಂಬಕ್ಕೆ ಏರಿದವರು ಶೂದ್ರರು. ಒಂದು ಹನಿ ರಕ್ತವನ್ನು ಹರಿಸದ ಮೇಲ್ವರ್ಗದವರು ತಾವೇ ಹೋರಾಟ ಮಾಡಿದ್ದು ಎಂದು ಬಿಂಬಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಹಿಂದಿನಿಂದಲೂ ಕೆಳ ವರ್ಗದ ಜನರನ್ನು ನಿರಂತರವಾಗಿ ಶೋಷಣೆ ಮಾಡುತ್ತಿರುವುದನ್ನು ನಾವು ಕಾಣುತ್ತಲೇ ಬರಬಹುದು. ಅಂಬೇಡ್ಕರ್ ಸಂವಿಧಾನ ಬರೆಯಬಾರದು ಎಂದು ಕಾಂಗ್ರೆಸ್ಸಿಗರೇ ತಡೆದಿದ್ದರು. ಒಂದು ವೇಳೆ ಅಂಬೇಡ್ಕರ್ ಅವರಿಗೆ ಸಂವಿಧಾನ ಬರೆಯುವ ಅಧಿಕಾರ ಸಿಗದೇ ಇದ್ದಲ್ಲಿ ಪಂಚಾಂಗವೇ ಇಂದು ನಮ್ಮ ಸಂವಿಧಾನವಾಗಿರುತ್ತಿತ್ತು ಎಂದು ವ್ಯಾಖ್ಯಾನಿಸಿದರು.

ದೇಶದ ಮೇಲ್ಜಾತಿಯ ಶ್ರೀಮಂತರಿಗೆ ಮಾತ್ರ ಸ್ವಾತಂತ್ರ್ಯ ಸಿಕ್ಕಿದೆ. ದಲಿತರು ಶೂದ್ರರು, ರೈತರು, ಕಾರ್ಮಿಕರು ಹಾಗೂ ಮುಸ್ಲಿಮರಿಗೆ ಸ್ವಾತಂತ್ರ್ಯ ಇನ್ನೂ ಸಿಕ್ಕಿಲ್ಲ. ಸಂವಿಧಾನ ಜಾರಿ ಮಾಡುವ ಆಯಕಟ್ಟಿನ ಜಾಗಗಳಲ್ಲಿ ನಮ್ಮ ವಿರೋಧಿಗಳಿದ್ದಾರೆ. ಹಾಗಾಗಿ ನಮಗೆ ಯಾವುದೇ ಸವಲತ್ತುಗಳು ಸಿಗುತ್ತಿಲ್ಲ. ಸಂವಿಧಾನ ನಮ್ಮ ಪರವಾಗಿಯೇ ಇದೆ. ಆದರೆ ಅದನ್ನು ಅನುಷ್ಠಾನ ಮಾಡುವವರು ಮಾತ್ರ ದಲಿತ ವಿರೋಧಿಯಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಮಾವೇಶದಲ್ಲಿ ಬಿಎಸ್ ಪಿ ರಾಜ್ಯ ಸಂಯೋಜಕ ಎಂ.ಗೋಪಿನಾಥ್, ರಾಜ್ಯ ಉಸ್ತುವಾರಿ ಕೃಷ್ಣಮೂರ್ತಿ, ರಾಜ್ಯ ಉಪಾಧ್ಯಕ್ಷ ಗಂಗಾಧರ್ ಬಹುಜನ್, ರಾಜ್ಯ ಪ್ರಧಾನ ಕಾರ್ಯದರ್ಶಿಗಳಾದ ಎಂ.ಮುನಿಯಪ್ಪ, ಜಾಕಿರ್ ಹುಸೇನ್, ರಾಜ್ಯ ಕಾರ್ಯದರ್ಶಿಗಳಾದ ಕೆ ಬಿ ಸುಧಾ, ಜಾಕೀರ್ ಅಲಿಖಾನ್, ಜಿಲ್ಲಾಧ್ಯಕ್ಷ ಕೆ.ಟಿ.ರಾಧಾಕೃಷ್ಣ ಉಪಸ್ಥಿತರಿದ್ದರು.

Dalits and Shudras have not got any chance to play the country

About Author

Leave a Reply

Your email address will not be published. Required fields are marked *