September 19, 2024

ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕಣಕ್ಕಾಗಿ ಕೇಂದ್ರ ಸರಕಾರ 9 ಸಾವಿರ ಕೋಟಿ ರೂ.ವಿನಿಯೋಗ

0
ಸ್ವ-ನಿಧಿ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಸುದ್ದಿಗೋಷ್ಠಿ

ಸ್ವ-ನಿಧಿ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಬೀದಿಬದಿ ವ್ಯಾಪಾರಿಗಳ ಆರ್ಥಿಕ ಸಬಲೀಕಣಕ್ಕಾಗಿ ಕೇಂದ್ರ ಸರಕಾರ ೯ ಸಾವಿರ ಕೋಟಿ ರೂ.ವಿನಿಯೋಗಿಸಿದೆ. ರಾಜ್ಯಕ್ಕೆ ೫೫೫ ಕೋಟಿ ರೂ.ನೀಡಲಾಗಿದೆ ಎಂದು ಮಾಜಿ ಸಚಿವ, ಪ್ರಧಾನ ಮಂತ್ರಿ ಸ್ವ-ನಿಧಿ ಯೋಜನೆಯ ರಾಜ್ಯ ಸಂಚಾಲಕ ಎಸ್.ಎ.ರಾಮದಾಸ್ ತಿಳಿಸಿದರು.

ಅವರು ಇಂದು ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮೊದಲ ಹಂತವಾಗಿ ರಾಜ್ಯದ ೧೮ ಜಿಲ್ಲೆಯಲ್ಲಿ ಈ ಯೋಜನೆ ಜಾರಿಗೆ ತರಲಾಗಿದ್ದು, ೨ ನೇ ಹಂತದಲ್ಲಿ ಉಳಿದ ಜಿಲ್ಲೆಗಳಿಗೆ ಹಾಗೂ ಗ್ರಾಮೀಣ ಮಟ್ಟಕ್ಕೂ ವಿಸ್ತರಿಸಲಾಗುವುದು ಎಂದು ಹೇಳಿದರು.

ಭಾರತದ ಸಾಂಪ್ರದಾಯಿಕ ವೃತ್ತಿಗಳಿಗೆ ಉತ್ತೇಜನ ನೀಡಿ, ವೃತ್ತಿಪರರನ್ನು ಆರ್ಥಿಕ ಸದೃಢರನ್ನಾಗಿ ಮಾಡಲು ದೇಶದ ೭೫೦ ಜಿಲ್ಲೆಯಲ್ಲಿ ಸ್ವ-ನಿಧಿ ಯೋಜನೆಗೆ ಚಾಲನೆ ನೀಡಲಾಗಿದೆ. ಬೀದಿಬದಿ ವ್ಯಾಪಾರಿಗಳಿಗೆ ಮೊದಲ ಹಂತದಲ್ಲಿ ೧೦ ಸಾವಿರ ರೂ. ನೀಡುತ್ತಿದ್ದು ಅದನ್ನು ತೀರುವಳಿ ಮಾಡಿದ ಮೇಲೆ ೨೦ ಸಾವಿರ, ತದ ನಂತರ ೫೦ ಸಾವಿರ ರೂ ನೀಡಲಾಗುವುದು ಎಂದು ತಿಳಿಸಿದರು.

ನಂತರ ಇವರನ್ನು ಮುದ್ರಾ ವ್ಯಾಪ್ತಿಗೆ ಸೇರಿಸಿ ಯಾವುದೇ ಆಧಾರ ಇಲ್ಲದೆ ೭-೧೦ ಲಕ್ಷ ರೂ.ವರೆಗೆ ಸಾಲ ಸೌಲಭ್ಯ ಕಲ್ಪಿಸಲಾಗುವುದು. ಶೇ.೭ ರಷ್ಟು ಬಡ್ಡಿಯನ್ನು ಸರಕಾರವೇ ಭರಿಸಲಿದೆ ಎಂದ ಅವರು ಜಿಲ್ಲೆಯಲ್ಲಿ ೩೪೦೦ ಫಲಾನುಭವಿಗಳನ್ನು ಆಯ್ಕೆ ಮಾಡಿದ್ದು, ಹಾಲು ಮಾರಾಟ ಮತ್ತು ಪೇಪರ್ ಹಾಕುವವರನ್ನು ಇದರ ವ್ಯಾಪ್ತಿಗೆ ತರಲಾಗುವುದು ಎಂದು ಮಾಹಿತಿ ನೀಡಿದರು.

ಅಸಂಘಟಿತ ವಲಯದಲ್ಲಿ ಬರುವ ದುಡಿಯುವ ವರ್ಗಗಳಾದ ಅಡುಗೆ ಮಾಡುವವರು, ಬಡಿಸುವವರು, ಹೂವಾಡಿಗರು, ಡೋಬಿ, ದರ್ಜಿಗಳು, ಡೋರ್ ಡೆಲಿವರಿ ಬಾಯ್ಸ್‌ಕೂಡ ಸೇರಲಿದ್ದಾರೆ. ಪ್ರಧಾನಿ ಘೋಷಿಸಿರುವ ೮ ಯೋಜನೆಗಳ ಪೈಕಿ ಬಿಮಾ ಯೋಜನೆಯಲ್ಲಿ ೨ ಲಕ್ಷ ರೂ. ಅಪಘಾತ ವಿಮೆ, ಗಾಯಗೊಂಡರೆ ೧ ಲಕ್ಷ ರೂ., ಮಾತೃವಂದನಾದಲ್ಲಿ ಗರ್ಭಿಣಿಗೆ ೫ ಸಾವಿರ, ಬಾಣಂತಿಗೆ ೬ ಸಾವಿರ, ಜೀವನ ಸುರಕ್ಷಾದಲ್ಲಿ ನೈಸರ್ಗಿಕ ಸಾವಿಗೆ ೨ ಲಕ್ಷ ರೂ., ೬೦ ವರ್ಷ ಮೇಲ್ಪಟ್ಟವರಿಗೆ ವೃದ್ಧಾಪ್ಯವೇತನ, ಜನಧನ್, ಆರೋಗ್ಯ ವಿಮೆ ಮತ್ತಿತರೆ ಅನೇಕ ಯೋಜನೆ ಜಾರಿಗೆ ತರಲಾಗಿದೆ ಎಂದು ವಿವರಿಸಿದರು.

ಪ್ರಧಾನ ಮಂತ್ರಿಗಳ ೮ ಯೋಜನೆಗಳು ಅರ್ಹ ಎಲ್ಲರಿಗೂ ತಲುಪಬೇಕು. ನೊಂದಣಿ ಆಗದವರು ಕೂಡಲೇ ನೊಂದಣಿ ಮಾಡಿಸಿದಲ್ಲಿ ಯೋಜನೆ ಲಾಭ ಪಡೆಯಬಹುದು. ವಿಶ್ವಕರ್ಮ ಸಮುದಾಯ ಸಾಲ ಪಡೆಯಲು ಸಿಬಿಲ್ ಅಂಕ ಅಡ್ಡಿಯಾಗುವುದಿಲ್ಲ ಎಂದರು.

ಜಿಲ್ಲೆಯಲ್ಲಿ ೨೦ ಸಾವಿರ ರೂ.ಸಾಲವನ್ನು ೧೨೦೬ ಜನರಿಗೆ, ೫೦ ಸಾವಿರ ರೂ.ಗಳನ್ನು ೨೦೬ ಜನರಿಗೆ ನೀಡಲಾಗಿದೆ. ಬಂಡವಾಳ ವಿನಿಯೋಗಿಸುವ ಆಧಾರದಲ್ಲಿ ಸಾಲ ನೀಡಲಾಗುವುದು ಹಾಗೂ ಅವರ ಆರ್ಥಿಕ ಮಟ್ಟವನ್ನೂ ಸಮೀಕ್ಷೆ ನಡೆಸಿ ಕೇಂದ್ರಕ್ಕೆ ವರದಿ ನೀಡಲಾಗುವುದು ಎಂದು ಹೇಳಿದರು.ಬಿಜೆಪಿ ಮುಖಂಡರಾದ ಸಿ.ಆರ್ ಪ್ರೇಮ್‌ಕುಮಾರ್, ರವೀಂದ್ರ ಬೆಳವಾಡಿ, ಟಿ.ರಾಜಶೇಖರ್, ಸೋಮಶೇಖರ್, ನರೇಂದ್ರ, ಸಂತೋಷ್ ಕೊಟ್ಯಾನ್, ಸಚಿನ್ ಇದ್ದರು.

Economic empowerment of street vendors

About Author

Leave a Reply

Your email address will not be published. Required fields are marked *

You may have missed