September 19, 2024

ಚಿಕ್ಕಮಗಳೂರು ತಾಲ್ಲೂಕು ಬರಗಾಲಪೀಡಿತ ಪ್ರದೇಶವೆಂದು ಘೋಷಣೆಗೆ ರೈತ ಸಂಘ ಆಗ್ರಹ

0
ತಾಲ್ಲೂಕು ಅಧ್ಯಕ್ಷ ಎಂ.ಬಿ ಚಂದ್ರಶೇಖರ್ ಪತ್ರಿಕಾಗೋಷ್ಠಿ

ತಾಲ್ಲೂಕು ಅಧ್ಯಕ್ಷ ಎಂ.ಬಿ ಚಂದ್ರಶೇಖರ್ ಪತ್ರಿಕಾಗೋಷ್ಠಿ

ಚಿಕ್ಕಮಗಳೂರು: ಚಿಕ್ಕಮಗಳೂರು ತಾಲ್ಲೂಕನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸುವಂತೆ ಒತ್ತಾಯಿಸಿ ಶಾಸಕಧ್ವಯರ ಮನೆ ಮುಂದೆ ಧರಣಿ ನಡೆಸಲು ನಿರ್ಧರಿಸಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಶಾಖೆ ನಿರ್ಧರಿಸಿದೆ.

ಪತ್ರಿಕಾಗೋಷ್ಠಿಯಲ್ಲಿಂದು ಈ ವಿಷಯ ತಿಳಿಸಿದ ಸಂಘದ ತಾಲ್ಲೂಕು ಅಧ್ಯಕ್ಷ ಎಂ.ಬಿ ಚಂದ್ರಶೇಖರ್ ಚಿಕ್ಕಮಗಳೂರು ತಾಲೂಕನ್ನು ಬರಗಾಲಪೀಡಿತ ಪ್ರದೇಶವೆಂದು ಘೋಷಿಸಿ ಸಮರೋಪಾದಿಯಲ್ಲಿ ಬರ ಪರಿಹಾರ ಕಾಮಗಾರಿಯನ್ನು ಆರಂಭಿಸಲು ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಆಗ್ರಹಿಸಿದರು.

ಜಿಲ್ಲೆಯ ೭ ತಾಲೂಕುಗಳನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದ್ದು, ಆದರೆ ಚಿಕ್ಕಮಗಳೂರು ತಾಲೂಕನ್ನು ಬರಗಾಲ ಪೀಡಿತ ಪ್ರದೇಶ ವ್ಯಾಪ್ತಿಯಿಂದ ಕೈಬಿಡಲಾಗಿದೆ. ಈ ಹಿನ್ನೆಲೆಯಲ್ಲಿ ಮೂಡಿಗೆರೆ ಮತ್ತು ಚಿಕ್ಕಮಗಳೂರು ತಾಲೂಕು ವಿಧಾನಸಭಾವಾರು ಹಂಚಿಕೆಯಾಗಿದ್ದು, ಈ ನಿಟ್ಟಿನಲ್ಲಿ ಉಭಯ ಶಾಸಕರು ಸರ್ಕಾರದ ಮೇಲೆ ಒತ್ತಡ ತಂದು ಬರಪೀಡಿತ ತಾಲೂಕು ಘೋಷಿಸಿ, ರೈತರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದರು.

ಮುಂಗಾರು ಮಳೆ ನಿಗಧಿತ ಸಮಯಕ್ಕೆ ಬಾರದೇ ಇರುವುದರಿಂದ ರೈತರು ಕಂಗಾಲಾಗಿದ್ದು, ಆಲೂಗಡ್ಡೆ, ಬೀನ್ಸ್, ಟೊಮ್ಯಾಟೋ, ಭತ್ತ, ರಾಗಿ, ಜೋಳ ಇನ್ನಿತರ ಬೆಳೆಗಳು ಸೇರಿದಂತೆ ರೈತರ ಕೈಗೆ ಬಂದಿಲ್ಲ, ಪ್ರಸಕ್ತ ವರ್ಷ ಭೂಮಿಗೆ ಹಾಕಿದ ಬೀಜ, ರಸಗೊಬ್ಬರ, ಔಷಧ, ಕಳೆ, ಕೂಲಿ ಕಾರ್ಮಿಕರಿಗೆ ನೀಡಿದ ಹಣ ಸಹಿತ ರೈತರಿಗೆ ಸಾಲದ ಹೊರೆಯಾಗಿ ನಿಂತಿದೆ ಎಂದು ಹೇಳಿದರು.

ನೀರಿನ ಜಲಮೂಲಗಳೆಲ್ಲ ಬತ್ತುತ್ತಿರುವುದರಿಂದ ಬರಗಾಲದ ಛಾಯೆ ಇಡೀ ತಾಲ್ಲೂಕನ್ನು ಆವರಿಸಿದೆ. ಮುಂಗಾರು ಹಾಗೂ ಹಿಂಗಾರಿನ ಹಂಗಾಮಿನಲ್ಲಿ ಯಾವುದೇ ಬೆಳೆಗಳನ್ನು ಬೆಳೆಯಲಾಗದೇ ರೈತರು ತುಂಬಾ ತೊಂದರೆಯಲ್ಲಿದ್ದು, ವಾಣಿಜ್ಯ ಬೆಳೆಗಳಾದ ಅಡಿಕೆ, ಕಾಫಿ, ತೆಂಗು, ಮೆಣಸು ಸೇರಿದಂತೆ ನೆಲ ಕಚ್ಚಿರುವುದರಿಂದ ತಾಲೂಕಿನ ಅಂಬಳೆ, ಲಕ್ಯಾ, ಕಸಬಾ ಹೋಬಳಿಗಳ ರೈತರು ಮುಂದಿನ ಭವಿಷ್ಯದ ಬಗ್ಗೆ ಚಿಂತಾಕ್ರಾಂತರಾಗಿದ್ದಾರೆ ಎಂದರು.

ರಾಜ್ಯ ಸರ್ಕಾರ ಜಿಲ್ಲೆಯ ಕಡೂರು, ತರೀಕೆರೆ, ಮೂಡಿಗೆರೆ, ಅಜ್ಜಂಪುರ, ಶೃಂಗೇರಿ, ಎನ್.ಆರ್ ಪುರ, ಕೊಪ್ಪ ಹಾಗೂ ಕಳಸ ತಾಲೂಕನ್ನು ಬರಗಾಲ ಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೆ ಚಿಕ್ಕಮಗಳೂರು ತಾಲೂಕನ್ನು ಬರಗಾಲ ಪಟ್ಟಿಯಿಂದ ಹೊರಗಿಟ್ಟು ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಸರ್ಕಾರದ ನೀತಿಯನ್ನು ಖಂಡಿಸಿದರು.

ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ರಾಜ್ಯ ಸರ್ಕಾರ ಹಿಂದಿನ ನಿಯಮಗಳನ್ನು ರದ್ದುಗೊಳಿಸಿರುವುದರಿಂದ ರೈತರಿಗೆ ೮ ಲಕ್ಷದವರೆಗೆ ಖರ್ಚು ಬರುತ್ತಿದ್ದು, ಕೂಡಲೇ ಈ ಆದೇಶವನ್ನು ವಾಪಾಸ್ ಪಡೆದು, ಇಲಾಖೆಯಿಂದಲೇ ವಿದ್ಯುತ್ ಕಂಬ, ವೈರ್, ಟ್ರಾನ್ಸ್‌ಫಾರ್ಮ್‌ರ್ ಸೇರಿದಂತೆ ಕಾರ್ಮಿಕರ ಖರ್ಚನ್ನು ಭರಸಬೇಕೆಂದು ಹಾಗೂ ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ಉಚಿತ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪ, ಮಾಜಿ ಅಧ್ಯಕ್ಷ ಎಂ.ಸಿ ಬಸವರಾಜ್, ಮುಖಂಡರುಗಳಾದ ಉಮೇಶ್ ಹಿರೇಗೌಜ, ಪರ್ವತೇಗೌಡ, ಚನ್ನೇಗೌಡ, ಶಿವಣ್ಣ ಮತ್ತಿತರರು ಉಪಸ್ಥಿತರಿದ್ದರು.

Farmers’ association demands declaration of Chikmagalur taluk as drought prone area

About Author

Leave a Reply

Your email address will not be published. Required fields are marked *

You may have missed