September 19, 2024

ನಗರಸಭೆ ಅಧ್ಯಕ್ಷ ವಿರುದ್ಧದ ಅವಿಶ್ವಾಸ ವಿಫಲ-ಬಿಜಿಪಿ ತೀವ್ರ ಮುಖಭಂಗ

0
ನಗರಸಭೆ ಅಧ್ಯಕ್ಷ ವಿರುದ್ಧದ ಅವಿಶ್ವಾಸ ಸಭೆ

ನಗರಸಭೆ ಅಧ್ಯಕ್ಷ ವಿರುದ್ಧದ ಅವಿಶ್ವಾಸ ಸಭೆ

ಚಿಕ್ಕಮಗಳೂರು: ಬಿಜೆಪಿ ಪಕ್ಷದ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರನ್ನು ಪದಚ್ಯುತಿಗೊಳಿಸುವ ಬಿಜೆಪಿ ಪ್ರಯೋಗ ಮಾಡಿದ್ದ ಅವಿಶ್ವಾಸ ನಿರ್ಣಯದ ಅಸೆ ವಿಫಲವಾಗಿ ಬಿಜಿಪಿ ತೀವ್ರ ಮುಖಭಂಗವಾಯಿತು.

ವ್ಯಕ್ತಿಗಿಂತ ಪಕ್ಷ ದೊಡ್ಡದೆಂಬ ಸಿದ್ಧಾಂತ ಪಠಿಸುವ ಬಿಜೆಪಿಗೆ ಓರ್ವ ವ್ಯಕ್ತಿಯಿಂದ ಮುಖಭಂಗವಾಯಿತು. ಅವಿಶ್ವಾಸ ನಿರ್ಣಯದ ಸಭೆಯಲ್ಲಿ ಪರ ಮತ್ತು ವಿರೋಧ ಮತಗಳ ಚಲಾವಣೆ ಪ್ರಕ್ರಿಯೆ ನಡೆಯಲೇ ಇಲ್ಲ. ಸಭೆಯಲ್ಲಿ ಬಿಜೆಪಿ ಸದಸ್ಯರು, ಅಧ್ಯಕ್ಷರ ವಿರುದ್ಧ ಗದ್ದಲ ಸೃಷ್ಟಿ ಮಾಡಿದ್ದರಿಂದ ನಿಯಮಬದ್ಧವಾಗಿ ಸಭೆ ಮುಕ್ತಾಯಗೊಳ್ಳಲಿಲ್ಲ. ಇದೇ ಪರಿಸ್ಥಿತಿ ಅಧ್ಯಕ್ಷರು ಮುಂದುವರಿಕೆಗೆ ಅನುಕೂಲವಾಯಿತು.

ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಸಂಬಂಧ ಶುಕ್ರವಾರ ಮಧ್ಯಾಹ್ನ ೧೨.೧೫ಕ್ಕೆ ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅಧ್ಯಕ್ಷತೆಯಲ್ಲಿ ನಗರಸಭೆಯಲ್ಲಿ ವಿಶೇಷ ಸಾಮಾನ್ಯ ಸಭೆಯನ್ನು ಕರೆಯಲಾಗಿತ್ತು. ಸಭೆ ಆರಂಭಕ್ಕೂ ಮುನ್ನ ನಗರಸಭಾಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಅವರು ಕಚೇರಿಯ ಮುಂಭಾಗದಲ್ಲಿರುವ ಗಣಪತಿ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿ ನೇರವಾಗಿ ಸಭಾಂಗಣದೊಳಗೆ ಆಗಮಿಸಿದರು.

ಸಭೆಯಲ್ಲಿ ಶಾಸಕ ಎಚ್.ಡಿ. ತಮ್ಮಯ್ಯ ಸೇರಿದಂತೆ ಕಾಂಗ್ರೆಸ್ ಪಕ್ಷದ ನಗರಸಭೆಯ ಎಲ್ಲಾ ಸದಸ್ಯರು ಹಾಜರಿದ್ದರು. ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು ಸಹ ಇದ್ದರು. ಆದರೆ, ವರಸಿದ್ಧಿ ವೇಣುಗೋಪಾಲ್ ಅವರನ್ನು ಅಧಿಕಾರದಿಂದ ಇಳಿಸಲು ಅವಿಶ್ವಾಸ ನಿರ್ಣಯ ಕರೆಯುವ ಕೋರಿಕೆ ಪತ್ರಕ್ಕೆ ಸಹಿ ಮಾಡಿದ್ದ ಎಸ್‌ಡಿಪಿಐ ಸದಸ್ಯೆ ಮಂಜುಳಾ, ಜೆಡಿಎಸ್ ಬೆಂಬಲಿತ ಪಕ್ಷೇತರ ಸದಸ್ಯರಾದ ಶೀಲಾ ದಿನೇಶ್ ಗೈರು ಹಾಜರಿಯಾಗಿದ್ದರು.

ಕೇಂದ್ರದ ಕೃಷಿ ಮತ್ತು ರೈತರ ಕಲ್ಯಾಣ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಅವರು ನಗರಸಭೆಯ ಸಾಮಾನ್ಯಸಭೆಗೆ ಹಾಜರಾಗಲು ಚಿಕ್ಕಮಗಳೂರಿಗೆ ಬಂದಿತಾದರೂ ಕೂಡ ಸಭೆಗೆ ಹಾಜರಾಗಲಿಲ್ಲ. ವಿಧಾನಪರಿಷತ್ ಸದಸ್ಯರಾದ ಎಂ.ಕೆ. ಪ್ರಾಣೇಶ್, ಎಸ್.ಎಲ್. ಭೋಜೇಗೌಡ ಕೂಡ ಗೈರು ಹಾಜರಿಯಾಗಿದ್ದರು. ಅಂದರೆ, ಬಿಜೆಪಿಯ ಸಂಖ್ಯಾ ಬಲ ೧೭ ರಷ್ಟಿತ್ತು.

ಮಧ್ಯಾಹ್ನ ೧೨.೩೦ಕ್ಕೆ ಸಭೆ ಆರಂಭವಾಗುತ್ತಿದ್ದಂತೆ ಅಧ್ಯಕ್ಷರು ಮಾತನಾಡಿ, ಇದೊಂದು ವಿಶೇಷ ಸಭೆ. ಅಧ್ಯಕ್ಷರ ವಿರುದ್ಧ ಮತ ಚಲಾವಣೆ ಮಾಡುವವರು ಕೈ ಎತ್ತಬೇಕು ಎಂದು ಹೇಳುತ್ತಿದ್ದಂತೆ, ಬಿಜೆಪಿಯ ನಗರಸಭಾ ಸದಸ್ಯರಾದ ಟಿ. ರಾಜಶೇಖರ್ ಮಾತನಾಡಿ, ಸಭೆಯಲ್ಲಿ ಮೊದಲು ಮಾತನಾಡಲು ಅವಕಾಶ ನೀಡಬೇಕು ಎಂದು ಆಗ್ರಹಿಸಿದರು. ಮಾತನಾಡಲು ಅವಕಾಶ ಇಲ್ಲ, ಈಗಾಗಲೇ ರೂಲಿಂಗ್ ಕೊಟ್ಟಾಗಿದೆ, ಅವಿಶ್ವಾಸ ಮತಯಾಚನೆ ಪ್ರಕ್ರಿಯೆ ನಡೆಯಲಿ ಎಂದು ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ಹೇಳಿದರು.

ಆಗ ಮಧುಕುಮಾರ್ ರಾಜ್‌ಅರಸ್ ಮಾತನಾಡಿ, ನಮ್ಮ ಪಕ್ಷದ ಸದಸ್ಯರ ಮತದಿಂದ ನೀವು ಅಧ್ಯಕ್ಷರಾಗಿದ್ದವರು. ನಿಮಗೆ ಅಽಕಾರದಲ್ಲಿ ಮುಂದುವರೆಯಲು ಯಾವುದೇ ನೈತಿಕತೆ ಇಲ್ಲ, ನೀವು ರಾಜೀನಾಮೆ ಕೊಡಿ ಎಂದು ಹೇಳುತ್ತಿದ್ದಂತೆ, ಸಭೆಯ ನಿಯಮವನ್ನು ಮೀರಿ ವರ್ತಿಸಿದರೆ ಸಭೆಯಿಂದ ಹೊರಗೆ ಹಾಕಬೇಕಾಗುತ್ತದೆ ಎಂದು ಅಧ್ಯಕ್ಷರು, ಸದಸ್ಯರಿಗೆ ಖಡಕ್ ಎಚ್ಚರಿಕೆ ನೀಡಿದರು.

ಈ ಗದ್ದಲದ ನಡುವೆ ಕಾಂಗ್ರೆಸ್ ಪಕ್ಷದ ನಗರಸಭಾ ಸದಸ್ಯರಾದ ಮುನಿರ್ ಅಹಮದ್ ಮಾತನಾಡಿ, ಸಭೆ ಅಜೆಂಡದಂತೆ ನಡೆಯಲಿ ಎಂದು ಹೇಳುತ್ತಿದ್ದಂತೆ ಬಿಜೆಪಿ ಸದಸ್ಯೆ ಕವಿತಾ ಶೇಖರ್ ಮಧ್ಯ ಪ್ರವೇಶಿಸಿ, ನಾವು ಅಧ್ಯಕ್ಷರ ದುರಾಡಳಿತವನ್ನು ಖಂಡಿಸಿ ಮಾತನಾಡುತ್ತಿದ್ದೇವೆಂದು ಹೇಳಿದರು.

ಕೆಲವು ಸದಸ್ಯರು ಏನು ಮಾತನಾಡುತ್ತಿದ್ದಾರೆಂಬ ತಿಳಿಯದಷ್ಟು ಗದ್ದಲ ಉಂಟಾಯಿತು. ಸಭೆಯನ್ನು ನಿಯಮ ಬದ್ಧವಾಗಿ ನಡೆಸಲು ಅನುವು ಮಾಡಿಕೊಡಬೇಕೆಂದು ಪೌರಾಯುಕ್ತ ಬಿ.ಸಿ. ಬಸವರಾಜ್ ಆಗಾಗ ಹೇಳುತ್ತಲೇ ಇದ್ದರು. ಅಸಂವಿಧಾನಿಕ ಪದಗಳ ಬಳಕೆ ಏರು ಧ್ವನಿ ಪಡೆಯುತ್ತಿದ್ದಂತೆ ನಗರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸಕ್ಕೆ ಸೋಲಾಯಿತ್ತೆಂದು ಪರಿಗಣಿಸಲಾಯಿತು.

ಆಗ ಬಿಜೆಪಿ ಸದಸ್ಯರು, ನಗರಸಭೆ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್ ವಿರುದ್ಧ ಘೋಷಣೆ ಹಾಕಿದರು, ಸಭಾಂಗಣದಿಂದ ಹೊರ ನಡೆದು, ಅಧ್ಯಕ್ಷರ ಕೊಠಡಿ ಎದುರು ಧರಣಿ ಕುಳಿತರು. ಇವರಿಗೆ ಜೆಡಿಎಸ್ ಸದಸ್ಯರು ಸಾಥ್ ನೀಡಿದರು. ಕೆಲ ಸಮಯದ ಬಳಿಕ ನಗರಸಭೆಯ ಎಲ್ಲಾ ಸದಸ್ಯರು ಮನೆಗಳಿಗೆ ತೆರಳಿದರು. ಹತ್ತೇ ನಿಮಿಷದಲ್ಲಿ ಅವಿಶ್ವಾಸ ನಿರ್ಣಯ ಸಭೆ ಮುಕ್ತಾಯಗೊಂಡಿತು. ನಗರಸಭೆ ಕಾರ್ಯಾಲಯ ಸೇರಿದಂತೆ ಸುತ್ತಮುತ್ತ ಬಿಗಿ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿ ಸ್ಥಳದಲ್ಲೇ ಮೊಕ್ಕಂ ಹೂಡಿದ್ದರು.

The motion of no confidence against the municipal chairman failed

About Author

Leave a Reply

Your email address will not be published. Required fields are marked *

You may have missed