September 8, 2024

ಗ್ರಾಮೀಣ ಸಮೃದ್ದಿಗಾಗಿ ಸಹಕಾರ ಸಂಸ್ಥೆಗಳ ಕೊಡುಗೆ ಅಪಾರ

0
೭೦ನೇ ಅಖಿಲ ಭಾರತ ಸಹಕಾರ ಸಪ್ತಾ ಹದ ಉದ್ಘಾಟನೆ

೭೦ನೇ ಅಖಿಲ ಭಾರತ ಸಹಕಾರ ಸಪ್ತಾ ಹದ ಉದ್ಘಾಟನೆ

ಚಿಕ್ಕಮಗಳೂರು: ಗ್ರಾಮೀಣ ಸಮೃದ್ಧಿಗಾಗಿ ಸಹಕಾರ ಸಂಸ್ಥೆಗಳು ರೈತರಿಗೆ ಸಾಲಸೌಲಭ್ಯ ಸೇರಿದಂತೆ ಹಲವಾರು ಯೋಜನೆಗಳನ್ನು ಸಮಯಕ್ಕೆ ಒದಗಿಸುವ ಮೂಲಕ ಅಪಾರ ಕೊಡುಗೆಯನ್ನು ನೀಡಿದೆ ಎಂದು ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಬಿ.ಸಿ.ಲೋಕಪ್ಪಗೌಡ ಹೇಳಿದರು.

ರಾಜ್ಯ ಸಹಕಾರ ಮಹಾಮಂಡಳ, ಜಿಲ್ಲಾ ಸಹಕಾರ ಯೂನಿಯನ್, ಸಹಕಾರ ಕೇಂದ್ರ ಬ್ಯಾಂಕ್, ಸಹಕಾರ ಇಲಾಖೆ ಸಹಯೋಗದೊಂದಿಗೆ ನಗರದ ಯೂನಿಯನ್ ಸಭಾಂಗಣದಲ್ಲಿ ೭೦ನೇ ಅಖಿಲ ಭಾರತ ಸಹಕಾರ ಸಪ್ತಾ ಹದ ಉದ್ಘಾಟನೆ ಹಾಗೂ ಸಹಕಾರ ಸಂಘ ಸಂಸ್ಥೆಗಳಲ್ಲಿನ ಇತ್ತೀಚಿನ ಬೆಳವಣಿಗೆಗೆ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ಉದ್ಘಾಟಿಸಿ ಅವರು ಮಾತನಾಡಿದರು.

ಹಳ್ಳಿಗಾಡಿನ ರೈತರಿಗೆ ಹಣಕಾಸಿನ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಸಹಕಾರಿ ಕ್ಷೇತ್ರವು ೧೯೦೪ರಲ್ಲಿ ಭಾರತದಲ್ಲಿ ಸ್ಥಾಪನೆಗೊಂಡು ಜನತೆಯ ಆರ್ಥಿಕ, ಸಾಮಾಜಿಕ ಬೆಳವಣಿಗೆಗೆ ಚಳುವಳಿ ಮೂಲಕ ಶ್ರಮಿಸುತ್ತಾ ಬಂದಿದೆ. ಪ್ರತಿ ವರ್ಷವು ನ.೧೪ ರಂದು ಸಹಕಾರ ಸಪ್ತಾಹವನ್ನು ಭಾರತದಾದ್ಯಂತ ಆಚರಿಸಲಾಗುತ್ತಿದೆ. ಜೊತೆಗೆ ಸಹಕಾರಿ ಕ್ಷೇತ್ರಕ್ಕೆ ನೆಹರು ಪ್ರೋತ್ಸಾಹಿಸಿದ ನೆನಪಾರ್ಥ ಅವರ ಜನ್ಮದಿನದಂದು ಸಪ್ತಾಹ ಉದ್ಘಾಟನೆ ಮಾಡಲಾಗಿದೆ ಎಂದರು.

ಭಾರತದಲ್ಲಿ ಸಹಕಾರ ಚಳುವಳಿ ವ್ಯಾಪ್ತಿಯಲ್ಲಿ ವಿಶ್ವಮಾನ್ಯತೆಯನ್ನು ಪಡೆದಿದೆ. ಸರ್ವರಿಗೂ ಸಮಪಾಲು, ಸಮಬಾಳು ದೊರಕಿಸಿಕೊಡಬೇಕೆಂಬ ಮಹತ್ತರ ಆಶಯವನ್ನು ಇರಿಸಿಕೊಂಡು ಹಲವಾರು ಕ್ಷೇತ್ರಗಳಲ್ಲಿ ಪ್ರಗತಿ ಯನ್ನು ಸಾಧಿಸುತ್ತಾ ಭಾರತ ಆರ್ಥಿಕತೆಯ ಸುಭದ್ರತೆಗೆ ತನ್ನದೆಯಾದ ಛಾಪು ಮೂಡಿಸಿದೆ ಎಂದರು.

ರಾಜ್ಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ವಿವಿಧ ರೀತಿಯ ಸಹಕಾರಿ ಸಂಘಗಳು ನೊಂದಣೀಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇವುಗಳಲ್ಲಿ ೨.೭೬ ಕೋಟಿ ಅಧಿಕ ಸದಸ್ಯ ಬಳಗವನ್ನು ಹೊಂದಿದ್ದು ಸಹಕಾರ ವ್ಯವಸ್ಥೆ ಜೀವನದ ಎಲ್ಲಾ ಪ್ರಕಾರಗಳನ್ನು ಆವರಿಸಿಕೊಂಡಿದೆ. ರೈತರಿಗೆ ಸರ್ಕಾರ ಸಹಕಾರ ಸಂಘಗಳ ಮೂಲಕ ಶೂನ್ಯ ಬಡ್ಡಿದರಲ್ಲಿ ರೂ.೫ ಲಕ್ಷದವರೆಗೆ, ಶೇ.೦೩ರ ಬಡ್ಡಿದರದಲ್ಲಿ ೧೦ ಲಕ್ಪ್ಷಗಳವರೆಗೆ ಕೃಷಿ ಮಾಧ್ಯಮಾವಧಿ ಸಾಲ ನೀಡುತ್ತಿದೆ ಎಂದರು.

ರೈತರಿಗೆ ಸವಲತ್ತು ಒದಗಿಸುವ ನಿಟ್ಟಿನಲ್ಲಿ ಕಠಿಣ ಪರಿಸ್ಥಿತಿಗಳಲ್ಲೂ ಸಹಕಾರಿ ಕ್ಷೇತ್ರವು ನಿರಂತರವಾಗಿ ಕಾರ್ಯ ನಿರ್ವಹಿಸುತ್ತಿದೆ. ಆ ನಿಟ್ಟಿನಲ್ಲಿ ರಾಜ್ಯಾದ್ಯಂತ ಸಹಕಾರಿ ಸಪ್ತಾಹ ಆಚರಿಸುವ ಮೂಲಕ ಸಹಕಾರಿ ಕ್ಷೇತ್ರದ ಮಹತ್ವ ವನ್ನು ರೈತರಿಗೆ ಮುಟ್ಟಿಸಲಾಗುತ್ತಿದೆ ಎಂದು ಹೇಳಿದರು.

ನಿವೃತ್ತ ಸಹಕಾರ ಸಂಘಗಳ ಸಹಾಯಕ ನಿಬಂಧಕ ಎಸ್.ವಿ.ಬಸವರಾಜಪ್ಪ ಉಪನ್ಯಾಸ ನೀಡಿ ಮಾತನಾಡಿ ಸಹಕಾರಿ ಸಂಸ್ಥೆಗಳು ಸ್ಪರ್ಧಾತ್ಮಕ ಆರ್ಥಿಕತೆಯ ಸವಾಲುಗಳನ್ನು ಎದುರಿಸುತ್ತಿರುವ ಬಗ್ಗೆ ಸಹಕಾರಿ ಸಪ್ತಾಹದ ಆಚರಣೆಗಳು ಎಲ್ಲಾ ಹಂತಗಳಲ್ಲಿ ತಮ್ಮ ಕಾರ್ಯನಿರ್ವಹಣೆಯನ್ನು ಸುಧಾರಿಸಲು ಸಹಕಾರಿ ವಲಯವನ್ನು ಪುನ ಶ್ಚೇತನಗೊಳಿಸುವಲ್ಲಿ ಹೆಚ್ಚಿನ ಮಹತ್ವವನ್ನು ಹೊಂದಿದೆ ಎಂದರು.

ಕಳೆದ ಎರಡು ವರ್ಷಗಳಿಂದ ಕೇಂದ್ರ ಸರ್ಕಾರ ಸಹಕಾರ ಸಚಿವಾಲಯದ ಮೂಲಕ ದೇಶದಲ್ಲಿ ಸಹಕಾರಿ ಕ್ಷೇತ್ರಕ್ಕೆ ಮಹತ್ವ ನೀಡುತ್ತಿದೆ. ಈಗಾಗಲೇ ಭಾರತದಲ್ಲಿ ಎಂಟು ಲಕ್ಷಕ್ಕೂ ಹೆಚ್ಚು ವಿವಿಧ ರೀತಿಯ ಸಹಕಾರಿ ಸಂಸ್ಥೆ ಗಳು ಯಶೋಗಾಥೆಗಳೊಂದಿಗೆ ಭಾರತೀಯ ಆರ್ಥಿಕತೆಯ ಅಸಾಧಾರಣ ವಲಯವಾಗಿ ಹೊರಹೊಮ್ಮಿದೆ ಎಂದರು.

ಬೆಂಗಳೂರು ಕಾಸ್ಕಾರ್ಡ್ ಬ್ಯಾಂಕ್ ನಿರ್ದೇಶಕ ಈ.ಆರ್.ಮಹೇಶ್ ಮಾತನಾಡಿ ರೈತರಿಗೆ ಯಾವ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ದೊರೆಯದ ನಿಯಮಿತ ಬಡ್ಡಿದರದಲ್ಲಿ ಸಾಲಸೌಲಭ್ಯವನ್ನು ಸಹಕಾರಿ ಬ್ಯಾಂಕ್‌ಗಳು ಒದಗಿಸುತ್ತಿವೆ. ರಾಷ್ಟ್ರೀಕೃತ ಹಾಗೂ ಸಹಕಾರಿ ಕ್ಷೇತ್ರದಲ್ಲಿ ವ್ಯವಹರಿಸಿರುವವರಿಗೆ ಇವುಗಳ ಅನುಭವ ತುಂಬಾನೇ ತಿಳಿದಿದೆ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಡಾ.ಜಿ.ಎಸ್.ಮಹಾ ಬಲ ಕೇಂದ್ರ ಸರ್ಕಾರದ ವಿವಿಧ ಸವಲತ್ತುಗಳನ್ನು ರೈತರಿಗೆ ತಲುಪಿಸುವ ಮೂಲಕ ಸಂಸ್ಥೆಯು ಮುಂದಿನ ದಿನಗಳಲ್ಲಿ ಗಟ್ಟಿಯಾಗಿ ನಿಲ್ಲಬೇಕಾಗಿದೆ. ಆ ಹಿನ್ನೆಲೆಯಲ್ಲಿ ಏಳು ದಿನಗಳ ಕಾಲ ಜಿಲ್ಲೆಯಾದ್ಯಂತ ಸಹಕಾರ ಸಪ್ತಾಹ ಆಚರಣೆ ನಡೆಸಿ ಪ್ರಗತಿಯ ಚಿಂತನೆ ಆವಲೋಕನ ನಡೆಸಲಾಗುವುದು ಎಂದು ಹೇಳಿದರು.

ಇದೇ ವೇಳೆ ಸಹಕಾರಿ ಸಂಸ್ಥೆಯಲ್ಲಿ ಉತ್ತಮ ಸಾಧನೆಗೈದ ಮಲ್ಲಂದೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ, ಟಿಎಪಿಸಿಎಂಎಸ್ ಹಾಗೂ ಜಿಲ್ಲಾ ಮಹಿಳಾ ಬ್ಯಾಂಕ್ ಆಡಳಿತ ಮಂಡಳಿಗೆ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ನಗರಸಭಾ ಅಧ್ಯಕ್ಷ ವರಸಿದ್ದಿ ವೇಣುಗೋಪಾಲ್, ಸಹಕಾರ ಯೂನಿಯನ್ ನಿರ್ದೇಶಕರು ಗಳಾದ ಸಿ.ಎಸ್.ರಂಗನಾಥ್, ಬಿ.ಟಿ.ರಾಮಚಂದ್ರಪ್ಪ, ಸಹಕಾರ ಕೇಂದ್ರ ಬ್ಯಾಂಕ್ ನಿರ್ದೇಶಕ ಎಂ.ಪರಮೇಶ್ವರಪ್ಪ, ಟಿಎಪಿಸಿಎಂಎಸ್ ಅಧ್ಯಕ್ಷ ಟಿ.ಈ.ಮಂಜುನಾಥ್, ಪದವೀಧರ ಪತ್ತಿನ ಸಹಕಾರ ಸಂಘದ ನಿರ್ದೇಶಕ ಎಂ.ಸಿ. ಶಿವಾನಂದಸ್ವಾಮಿ, ಯೂನಿಯನ್ ಬ್ಯಾಂಕ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಹೆಚ್.ಕೆ.ಯಶಸ್, ವ್ಯವಸ್ಥಾಪಕ ಇಂದ್ರೇಶ್ ಮತ್ತಿತರರು ಉಪಸ್ಥಿತರಿದ್ದರು.

Inauguration of 70th All India Cooperation Week

About Author

Leave a Reply

Your email address will not be published. Required fields are marked *

You may have missed