September 16, 2024

ನ.21 ಸದಾಶಿವ ಆಯೋಗದ ವರದಿ ಜಾರಿಗೆ ಆಗ್ರಹಿಸಿ ಬಿಎಸ್‌ಪಿ ಪ್ರತಿಭಟನೆ

0
ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ ರಾಧಾಕೃಷ್ಣ ಸುದ್ದಿಗೋಷ್ಠಿ

ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ ರಾಧಾಕೃಷ್ಣ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಸಂವಿಧಾನದ ಆಶಯದಂತೆ ಸಾಮಾಜಿಕ ನ್ಯಾಯ ಎತ್ತಿ ಹಿಡಿಯುವ ಕಾಂತರಾಜು ಆಯೋಗದ ವರದಿಯ ಮತ್ತು ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿ ಮಾಡುವಂತೆ ಆಗ್ರಹಿಸಿ ನ.೨೧ರಂದು ಮಂಗಳವಾರ ನಗರದ ಆಜಾದ್ ವೃತದಲ್ಲಿ ಪ್ರತಿಭಟನಾ ಧರಣಿ ನಡೆಸಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದೆಂದು ಬಿಎಸ್‌ಪಿ ಜಿಲ್ಲಾಧ್ಯಕ್ಷ ಕೆ.ಟಿ ರಾಧಾಕೃಷ್ಣ ತಿಳಿಸಿದರು.

ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಈ ಎರಡು ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕೆಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿ ಅಂದು ಬಿಎಸ್‌ಪಿ ರಾಜ್ಯವ್ಯಾಪಿ ಮುಷ್ಕರಕ್ಕೆ ಕರೆ ಕೊಟ್ಟಿದ್ದು, ಅದರ ಭಾಗವಾಗಿ ಜಿಲ್ಲಾ ಕೇಂದ್ರದಲ್ಲಿಯೂ ಪ್ರತಿಭಟನೆ ನಡೆಸಲು ನಿರ್ಧರಿಸಲಾಗಿದೆ ಎಂದರು.

ಚುನಾವಣೆ ಸಮಯದಲ್ಲಿ ಮಾದಿಗ ಮತ್ತು ಮಾದಿಗ ಸಂಬಂಧಿತ ಜಾತಿಗಳಿಗೆ ಆಗಿರುವ ಅನ್ಯಾಯವನ್ನು ಸರಿಪಡಿಸಿ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳು ತಮ್ಮ ಪ್ರಣಾಳಿಕೆಗಳಲ್ಲಿ ಘೋಷಣೆ ಮಾಡಿ ಗೆದ್ದ ನಂತರ ಮೌನ ವಹಿಸಿ ಈ ಸಮಾಜಕ್ಕೆ ನಿರಂತರವಾಗಿ ದ್ರೋಹ ಮಾಡುತ್ತಾ ಬಂದಿದೆ ಎಂದು ಆರೋಪಿಸಿದರು.

೨೦೨೩ರ ಚುನಾವಣಾ ಪೂರ್ವದಲ್ಲಿ ತಮ್ಮ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದರೆ ಮೊದಲನೇ ಸಚಿವ ಸಂಪುಟದಲ್ಲಿ ಚರ್ಚಿಸಿ ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸುವುದಾಗಿ ಘೋಷಣೆ ಮಾಡಿದ್ದು ಆದರೆ ಗೆದ್ದು ಅಧಿಕಾರಕ್ಕೆ ಬಂದು ೬ ತಿಂಗಳು ಕಳೆಯುತ್ತಿದ್ದರೂ ಇದುವರೆಗೂ ಈ ಬಗ್ಗೆ ಮೌನ ವಹಿಸಿರುವುದು ಖಂಡನೀಯ. ಪರಿಶಿಷ್ಟ ಜಾತಿಯ ಮೀಸಲಾತಿ ಹಂಚಿಕೆಯಲ್ಲಿ ತಾರತಮ್ಯ ಸೃಷ್ಠಿಗೆ ಕಾರಣ ೨೫ ವರ್ಷಗಳು ರಾಜ್ಯವಾಳಿದ ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಪಕ್ಷಗಳೇ ಹೊಣೆ ಎಂದು ದೂರಿದರು.

ಈ ವರದಿಯ ಸೋರಿಕೆಯಾದ ಅಂಶಗಳ ಪ್ರಕಾರ ಮಾದಿಗ ಮತ್ತು ಮಾದಿಗ ಸಂಬಂಧಿತ ೪೯ ಜಾತಿಗಳಿಗೆ ಶೇ.೬ ಹೊಲೆಯ ಮತ್ತು ಹೊಲೆಯ ಸಂಬಂಧಿತ ೨೯ ಜಾತಿಗಳಿಗೆ ಶೇ.೫ ಮತ್ತು ಭೋವಿ, ಬಂಜಾರ, ಕೊರಮ, ಕೊರಚ ಇತ್ಯಾದಿ ೧೩ ಸ್ಪೃಷ್ಯ ಜಾತಿಗಳಿಗೆ ಶೇ.೩ ಮತ್ತು ೧೧ ಅಸ್ಪೃಶ್ಯ ಅಲೆಮಾರಿ ಜಾತಿಗಳಿಗೆ ಶೇ.೧ ಮೀಸಲಾತಿಯನ್ನು ಕಲ್ಪಿಸಲಾಗಿತ್ತು ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಬಿ ಸುಧಾ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಸಂಯೋಜಕ ಕೆ.ಆರ್ ಗಂಗಾಧರ್, ಉಪಾಧ್ಯಕ್ಷೆ ಕೆ.ಎಸ್ ಮಂಜುಳಾ, ಪ್ರಧಾನ ಕಾರ್ಯದರ್ಶಿ ವಸಂತ್‌ಕುಮಾರ್, ಕಚೇರಿ ಕಾರ್ಯದರ್ಶಿ ತಂಬನ್ ಇದ್ದರು.

Nov. 21 BSP protests demanding implementation of Sadashiva commission report

About Author

Leave a Reply

Your email address will not be published. Required fields are marked *