September 16, 2024

ಓರ್ವ ಮಹಿಳೆ ಜಾಗೃತಳಾದರೆ ಇಡೀ ಪರಿವಾರವೇ ಸುರಕ್ಷಿತವಾಗುತ್ತದೆ.

0
ನಾರಿಶಕ್ತಿ ಸಂಗಮ ಮಹಿಳಾ ಸಮ್ಮೇಳನ

ನಾರಿಶಕ್ತಿ ಸಂಗಮ ಮಹಿಳಾ ಸಮ್ಮೇಳನ

ಚಿಕ್ಕಮಗಳೂರು: ಓರ್ವ ಮಹಿಳೆ ಜಾಗೃತಳಾದರೆ ಇಡೀ ಪರಿವಾರವೇ ಸುರಕ್ಷಿತವಾಗುತ್ತದೆ. ಈ ಗಾಂಭೀರ್ಯವನ್ನು ಅರಿತು ಸಮಾಜವನ್ನು ಕಾಡಪಾಡುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ ಎಂದು ಬೆಂಗಳೂರಿನ ದಿವ್ಯ ಜ್ಯೋತಿ ಜಾಗೃತಿ ಸಂಸ್ಥಾನದ ಸಾಧ್ವಿ ಉನ್ಮೇಷಾ ಭಾರತಿ ಹೇಳಿದರು.

ಅವರು ಭಾನುವಾರ ನಗರದ ಗಾಯತ್ರಿ ದೇವಿ ಕಲ್ಯಾಣ ಮಂಟಪದಲ್ಲಿ ಮಹಿಳಾ ಸಮನ್ವಯ ಕರ್ನಾಟಕ ದಕ್ಷಿಣ ಪ್ರಾಂತ ಹಾಗೂ ಚಿಕ್ಕಮಗಳೂರು ಸಮರ್ಪಣಾ ಟ್ರಸ್ಟ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ನಾರಿಶಕ್ತಿ ಸಂಗಮ ಮಹಿಳಾ ಸಮ್ಮೇಳನದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮಾಜಕ್ಕಾಗಿ ಅತ್ಯುತ್ತಮವಾದುದನ್ನೇ ಮಾಡಬೇಕು. ಲೋಕ ಕಲ್ಯಾಣದ ಜೊತೆಗೆ ಭಾರತಾಂಬೆಯ ರಕ್ಷಣೆ ಹೇಗೆ? ದೇಶಕ್ಕೆ ಸ್ಥಾನ ಮಾನ ತಂದುಕೊಡುವುದು ಹೇಗೆ? ನಮ್ಮ ಮರ್ಯಾದೆಯನ್ನು ಶ್ರೇಷ್ಠತೆಯೆಡೆಗೆ ಕೊಂಡೊಯ್ಯುವುದು ಹೇಗೆ? ಎನ್ನುವ ನಿಟ್ಟಿನಲ್ಲಿ ಚಿಂತಿಸಿ ಕಾರ್ಯೋನ್ಮುಖರಾಗಬೇಕಿದೆ ಎಂದು ಸಲಹೆ ಮಾಡಿದರು.

ನಮ್ಮ ದೇಶ ಅನೇಕ ಮಹಾನ್ ನಾರಿಯರನ್ನು ಸಮಾಜಕ್ಕೆ ನೀಡಿದೆ. ಆದರೆ ಇಂದು ಪ್ರತಿನಿತ್ಯ ಲೋಕದ ಮೋಹಕ್ಕೆ ಅಂಟಿಕೊಂಟಿದ್ದೇವೆ. ಅದರಿಂದ ಹೊರಬಂದು ನಮ್ಮ ಪರಂಪರೆ, ಸಂಪ್ರದಾಯಗಳನ್ನು ಮಕ್ಕಳು, ಮೊಮ್ಮಕ್ಕಳಲ್ಲಿ ರಕ್ತಗತಗೊಳಿಸಿದಲ್ಲಿ ನಮ್ಮ ಧರ್ಮ, ದೇಶವನ್ನು ಉಳಿಸಲು ಸಾಧ್ಯ ಎಂದರು.

ಜೀವನ ಶಿಸ್ತು ಇಂದಿನ ಸಮಾಜಕ್ಕೆ ಬಹಳ ಅಗತ್ಯ. ನಮ್ಮ ಸಂಸ್ಕೃತಿಗಳಾದ ಮಂಗಳ ಸೂತ್ರ, ಹಣೆಗೆ ಕುಂಕುಮ ಹಾಗೂ ಸಾಂಪ್ರದಾಯಿಕ ವಸ್ತ್ರಗಳನ್ನು ಧರಿಸುವ ಎಲ್ಲಾ ಸಂಪ್ರದಾಯಗಳನ್ನು ಬಿಡುತ್ತಿದ್ದೇವೆ. ಈ ಬಗ್ಗೆ ಮಕ್ಕಳಿಗೆ ತಿಳಿಹೇಳಬೇಕಿದೆ. ಇದೇ ವೇಳೆ ಹೆಣ್ಣುಮಕ್ಕಳಿಗೆ ಗೌರವ ಕೊಡುವುದನ್ನು ಮನೆಯಲ್ಲಿರುವ ಗಂಡು ಮಕ್ಕಳಿಗೂ ಹೇಳಿಕೊಡಬೇಕಿದೆ ಎಂದರು.

ನಮ್ಮ ಋಷಿ ಮುನಿಗಳು ವೇದಾಧ್ಯಯನ ಮಾಡಿ ಸಂಸ್ಕೃತಿ, ಸಂಪ್ರದಾಯಗಳನ್ನು ಸಂರಕ್ಷಿಸಿ ಪಾತಿವ್ರತ್ಯದ ಬದುಕು ನಡೆಸಿದ್ದನ್ನು ನೋಡುತ್ತಾ ಬಂದಿದ್ದೇವೆ. ನಮ್ಮಲ್ಲಿ ಹೆಣ್ಣನ್ನು ಭೋಗದ ವಸ್ತುವಾಗಿ ಮಾತ್ರವಲ್ಲ, ದೈವೀಸ್ವರೂಪವಾಗಿಯೂ ಕಾಣುತ್ತಾರೆ. ದೈವೀ ಗುಣಗಳನ್ನು ತುಂಬಿಕೊಳ್ಳುವ ಸೌಭಾಗ್ಯವನ್ನು ನಾವು ಪಡೆದಿದ್ದೇವೆ. ಅದನ್ನು ತಮ್ಮದಾಗಿಸಿಕೊಳ್ಳಬೇಕು ಎಂದರು.

ನಮ್ಮ ಸನಾತನ ಪರಂಪರೆಯಲ್ಲಿ ತುಂಬಿರುವ ಧರ್ಮ, ನ್ಯಾಯ, ಸತ್ಯಶೀಲತೆ, ಕ್ಷಮಾಗುಣ, ತಾಳ್ಮೆ, ಮಾತೃತ್ವದ ಗುಣಗಳಬಗ್ಗೆ ಅರಿವು ಮೂಡಿಸಬೇಕಿದೆ. ಇದಕ್ಕಾಗಿ ನಾರಿಶಕ್ತಿ ಸಂಗಮ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು.

ಪಾಶ್ಚಿಮಾತ್ಯರ ಅನುಕರಣೆ ಮಾಡುವುದಾದರೆ ಅವರಲ್ಲಿರುವ ಸಮಯ ಪ್ರಜ್ಞೆ, ಹೆಣ್ಣು ಗಂಡು ಶ್ರಮವಹಿಸಿ ಸರ್ವಕಾರ್ಯವನ್ನೂ ನಿರ್ವಹಿಸುವ ರೀತಿ, ಮಹಿಳೆಯರಿಗೆ ನೀಡುವ ಆರ್ಥಿಕ ಸ್ವಾತಂತ್ರ್ಯಗಳನ್ನು ಕಲಿಯಬೇಕು ಎಂದು ಹೇಳಿದರು.

ಬಾಹ್ಯ ಸೌಂದರ್ಯವಷ್ಟೇ ಅಲ್ಲದೆ ಆಂತರಿಕವಾಗಿ ಸದ್ಗುಣಗಳನ್ನು ತುಂಬಿರುವ ಭಾರತೀಯ ಸ್ತ್ರೀ ಎಂತಹವರೆಂದು ವಿಶ್ವಕ್ಕೇ ತೋರಿಸುವ ಶಕ್ತಿ ನಮ್ಮಲ್ಲಿದೆ. ನಮ್ಮನ್ನು ನಾವು ಕುಟುಂಬ, ಸಮಾಜಕ್ಕೆ ಸಮರ್ಪಣೆ ಮಾಡಿಕೊಂಡು ನಿಸ್ವಾರ್ಥವಾಗಿ ಸಮಾಜ, ಧರ್ಮ, ಸಂಪ್ರದಾಯ, ದೇಶ ರಕ್ಷಣೆಗೆ ಎಲ್ಲರನ್ನೂ ಜಾಗೃತಗೊಳಿಸುವುದು ನಿಜವಾದ ನಾರೀಶಕ್ತಿ ಎಂದರು.

ದಿವ್ಯ ಜ್ಯೋತಿ ಜಾಗೃತ ಸಂಸ್ಥಾನದ ಹೊಯ್ಸಳ ಪ್ರಾಂತ ಸಹ ಬೌದ್ದಿಕ್ ಪ್ರಮುಖ್ ಕುದುದಿನಿ ಶೆಣೈ ಮಾತನಾಡಿ, ಮನುಸ್ಮೃತಿಯಲ್ಲಿ ಮಹಿಳೆಗೆ ಸ್ವಾತಂತ್ರ್ಯ ಕೊಟ್ಟಿಲ್ಲ ಎಂದು ಹೇಳುವವರಿದ್ದಾರೆ. ಆದರೆ ಹಣ ಪಡೆಯದೆ ವಿದ್ಯೆ ಕೊಡುವವನು ಆಚಾರ್ಯ ಎನಿಸಿಕೊಳ್ಳುತ್ತಾನೆ. ಅಂತಹ ೧೦೦ ಆಚಾರ್ಯರಿಗಿಂತ ಒಬ್ಬ ತಂದೆ ಹಿರಿಯ ಎಂದು ಮನು ಹೇಳುತ್ತಾನೆ ಇದೇ ವೇಳೆ ತಾಯಿಯಾದವಳು ಹಿರಿಮೆ, ಗರಿಮೆಯಲ್ಲಿ ೧೦೦೦ ತಂದೆಯರನ್ನು ಮೀರಿಸುತ್ತಾಳೆ ಎಂದೂ ಹೇಳಿದ್ದಾನೆ. ವಿವೇಕಾನಂದರೂ ಇದನ್ನೇ ತಿಳಿಸಿದ್ದಾರೆ ಎಂದರು.

ಪುರುಷ ಬೌತಿಕ, ಸ್ತ್ರೀ ಎಂದರೆ ಪ್ರಕೃತಿ ಹಾಗೇ ಆಧ್ಯಾತ್ಮ ಶಕ್ತಿ. ತನ್ನ ಮಗುವಿಗೆ ಸಂತೋಷದಿಂದ ಎಲ್ಲವನ್ನೂ ಕೊಟ್ಟು ಸಮರ್ಪಣೆ ಮಾಡಿ ಧನ್ಯತೆ ಮತ್ತು ಸಾರ್ಥಕತೆ ಪಡೆಯುವುದು ಮಾತೃತ್ವದ ಆಧ್ಯಾತ್ಮ ಶಕ್ತಿ ಎಂದು ಹೇಳಿದರು.

ಸಮರ್ಪಣಾ ಟ್ರಸ್ಟ್‌ನ ಮುಖ್ಯಸ್ಥ ಮಲ್ಲಿಕಾರ್ಜುನ ರಾವ್ ಮಾತನಾಡಿ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರೇರಣೆಯಿಂದ ಅಸ್ಥಿತ್ವಕ್ಕೆ ಬಂದಿರುವ ಟ್ರಸ್ಟ್, ಮಹಿಳಾ ಕಾರ್ಯಕ್ರಮದಿಂದಲೇ ಪ್ರಾರಂಭಗೊಂಡಿದೆ. ಕರೋನಾ ಸಂದರ್ಭದಲ್ಲೂ ಹಲವು ಸೇವಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ. ಅನೇಕ ವಿಷಯಗಳಲ್ಲಿ ಚಿಂತನ, ಮಂತಹ ಕಾರ್ಯಕ್ರಮಗಳನ್ನು ನಡೆಸಲಾಗಿದೆ ಎಂದು ತಿಳಿಸಿದರು.

ಸಮಾರಂಭಕ್ಕೂ ಮುನ್ನಾ ತಾಲ್ಲೂಕು ಕಚೇರಿಯಿಂದ ನೂರಾರು ಮಹಿಳೆಯರನ್ನೊಳಗೊಂಡ ಸಾಂಸ್ಕೃತಿಕ ಮೆರವಣಿಗೆ ನಡೆಯಿತು. ಮಕ್ಕಳ ಛದ್ಮವೇಷದ ಸ್ಥಬ್ಧಚಿತ್ರ, ಮಹಿಳೆಯರಿಂದ ಸಂಕೀರ್ತನೆ, ಜಯಘೋಷಗಳು ಕೇಳಿಬಂದವು.

ಚಿಕ್ಕಮಗಳೂರು ಶಾರದಾ ಮಠದ ಶುಭವೃತ ಪ್ರಾಣ ಮಾತಾಜಿ, ಕಸ್ತೂರ್ ಬಾ ಸದನದ ಅಧ್ಯಕ್ಷೆ ಯಮುನಾ ಚನ್ನಬಸಪ್ಪ, ದಾಸ ಸಾಹಿತ್ಯ ಮಹಿಳಾ ಮಂಡಳಿಯ ವೀಣಾ ಉದಯ ಸಿಂಹ, ರಚಿತಾ ಮಹಿಳಾ ಮಂಡಳಿ ಅಧ್ಯಕ್ಷೆ ಕವಿತಾ ಗೋಪಾಲ್, ನೂಪುರ ಅಕಾಡೆಮಿಯ ಜ್ಯೋತಿ ಪ್ರಕಾಶ್, ರಾಷ್ಟ್ರ ನೈಟಿಂಗೇಲ್ ಪ್ರಶಸ್ತಿ ವಿಜೇತೆ ಕಾವೇರಮ್ಮ, ಉಪನ್ಯಾಸಕಿ ವಿಜಯಕ್ಷ್ಮಿ ದೇಸಾಯಿ, ರಾಜ್ಯ ನೈಟಿಂಗೇಲ್ ಪ್ರಶಸ್ತಿ ವಿಜೇತೆ ಅಣ್ಣಮ್ಮ ಉಪಸ್ಥಿತರಿದ್ದರು.

Narishakti Sangam Women’s Conference

About Author

Leave a Reply

Your email address will not be published. Required fields are marked *