September 16, 2024

ಭದ್ರಾ ಉಪ ಕಣಿವೆ ಯೋಜನೆ ಪೂರ್ಣಗೊಳಿಸಲು ಒತ್ತಾಯ

0
ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕರ ಸುದ್ದಿಗೋಷ್ಠಿ

ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕರ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಎದ್ರಾ ಉಪ ಕಣಿವೆ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಿದರೆ ಜಿಲ್ಲೆಯ ಬಹುಪಾಲು ನೀರಾವರಿ ಸಮಸ್ಯೆಗೆ ಪರಿಹಾರ ಸಿಗಲಿದ್ದು, ಜಿಲ್ಲೆಯ ೫ ಶಾಸಕರುಗಳು ಒಟ್ಟಾಗಿ ಪ್ರಯತ್ನ ನಡೆಸಿ ಈ ಯೋಜನೆ ಪೂರ್ಣಗೊಳಿಸುವಂತೆ ಸಮಗ್ರ ನೀರಾವರಿ ಹೋರಾಟ ಸಮಿತಿಯ ಸಂಚಾಲಕರುಗಳು ಒತ್ತಾಯಿಸಿದ್ದಾರೆ.

ಈ ಹೋರಾಟ ಸಮಿತಿಯ ಸಂಚಾಲಕರುಗಳಾದ ರವೀಶ್ ಬಸಪ್ಪ, ಗುರುಶಾಂತಪ್ಪ ಇನ್ನಿತರರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ಜಿಲ್ಲೆಯಲ್ಲಿ ಮಂಜೂರಾಗಿರುವ ಎಲ್ಲಾ ನೀರಾವರಿ ಯೋಜನೆಗಳು ಕುಂಠಿತವಾಗಿ ಸಾಗುತ್ತಿವೆ. ಹೊಸ ಸರ್ಕಾರದಲ್ಲಿ ಶಾಸಕರುಗಳು ಒಟ್ಟಾಗಿ ಪ್ರಯತ್ನ ನಡೆಸಿ ಈ ಯೋಜನೆ ಪೂರ್ಣಗೊಳಿಸುವಂತೆ ಆಗ್ರಹಿಸಿದರು.

ಗೋಂದಿಹಳ್ಳ ಯೋಜನೆಯಿಂದ ಪರಿವರ್ತಿಸಲಾಗಿರುವ ಭದ್ರಾ ಉಪ ಕಣಿವೆ ಯೋಜನೆಗೆ ಮೊದಲ ಹಂತದ ಹಣ ಮಂಜೂರಾಗಿ ಅತ್ಯಂತ ನಿಧಾನ ಗತಿಯಲ್ಲಿ ಕಾಮಗಾರಿ ನಡೆಯುತ್ತಿದೆ. ಎರಡನೇ ಹಂತದ ಯೋಜನೆಗೂ ಮಂಜೂರಾತಿ ದೊರೆತಿದ್ದು ಹಣ ಬಿಡುಗಡೆಯಾಗಬೇಕು, ಮೂರನೇ ಹಂತದ ಯೋಜನೆಗೆ ಮಂಜೂರಾತಿ ಪಡೆದು ಅನುಷ್ಠಾನಗೊಳಿಸಿದರೆ ಬಯಲು ಭಾಗಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಿದಂತಾಗುತ್ತದೆ ಎಂದು ತಿಳಿಸಿದರು.

ಅದೇ ರೀತಿ ಮದಗದ ಕೆರೆ ಮತ್ತು ಅಯ್ಯನ ಕೆರೆ ನೀರು ತುಂಬಿಸುವ ಯೋಜನೆಗೆ ಚಾಲನೆ ನೀಡಬೇಕು. ಈ ನಿಟ್ಟಿನಲ್ಲಿ ಶಾಸಕರುಗಳು ಅವಶ್ಯವಿದ್ದರೂ ಮುಖ್ಯಮಂತ್ರಿಗಳು ಹಾಗೂ ನೀರಾವರಿ ಸಚಿವರೊಂದಿಗೆ ಸಭೆ ನಡೆಸಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕೆಂದು ಒತ್ತಾಯಿಸಿದರು.

ಹೋರಾಟ ಸಮಿತಿ ಸಂಚಾಲಕರಾದ ಗುರುಶಾಂತಪ್ಪ ಮಾತನಾಡಿ ಬೆಳವಾಡಿ, ಕಳಸಾಪುರ ಸುತ್ತಮುತ್ತಲ ಕೆರೆ ತುಂಬಿಸುವ ಕರಗಡ ಯೋಜನೆ ಹಾಗೂ ಬೈರಾಪುರ ಪಿಕಪ್ ಯೋಜನೆ ಸ್ಥಗಿತವಾಗಿದ್ದು, ಆ ಭಾಗದ ರೈತರಿಗೆ ತೊಂದರೆಯಾಗಿದೆ. ಈ ಯೋಜನೆ ಬಗ್ಗೆ ಹೆಚ್ಚುವರಿ ಹಣ ಮಂಜೂರು ಮಾಡಿಸಿ ತ್ವರಿತವಾಗಿ ಪೂರ್ಣಗೊಳಿಸಲು ಹಾಗೂ ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಮಳಲೂರು ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಈ ಭಾಗದ ಶಾಸಕರು ಪ್ರಯತ್ನಿಸಬೇಕು. ಇನ್ನೂ ವಿಳಂಭ ಮಾಡಿದರೆ ಹೋರಾಟ ಸಮಿತಿಯಿಂದ ಚಳುವಳಿ ರೂಪಿಸುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಇನ್ನೋರ್ವ ಸಂಚಾಲಕ ನಟರಾಜ್ ಮಾತನಾಡಿ ಹಳೇಬೀಡು, ಕಳಸಾಪುರ, ಬೆಳವಾಡಿ ಕೆರೆಗೆ ನೀರು ಹರಿಸಬಹುದಾದ ಬೇಲೂರು ತಾಲೂಕಿನ ರಣಗಟ್ಟ ಯೋಜನೆ ನೆನಗುದಿಗೆ ಬಿದ್ದಿದ್ದು, ಈ ಯೋಜನೆಯನ್ನು ಕೂಡಲೇ ಪುನರಾರಂಭಿಸಿ ಅನುಷ್ಠಾನಗೊಳಿಸಬೇಕೆಂದು ಹೇಳಿದರು.ಈ ಸಂದರ್ಭದಲ್ಲಿ ಹೋರಾಟ ಸಮಿತಿ ಮುಖಂಡ ವಿಜಯ್ ಕುಮಾರ್ ಉಪಸ್ಥಿತರಿದ್ದರು.

Urge to complete Bhadra sub valley project

About Author

Leave a Reply

Your email address will not be published. Required fields are marked *