September 8, 2024

ಕರ್ತವ್ಯಕ್ಕೆ ಅಡ್ಡಿ ಪ್ರಕರಣ-ವಕೀಲರ ವಿರುದ್ಧ 4 ಪತ್ಯೇಕ ಎಫ್‌ಐಆರ್ ದಾಖಲು

0
ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಪ್ರತಿಭಟನಾಕಾರರ ಸಮಧಾನ ಪಡಿಸುವ ಪ್ರಯತ್ನ

ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಪ್ರತಿಭಟನಾಕಾರರ ಸಮಧಾನ ಪಡಿಸುವ ಪ್ರಯತ್ನ

ಚಿಕ್ಕಮಗಳೂರು: ನಗರದ ಟೌನ್ ಪೊಲೀಸ್ ಠಾಣೆಯಲ್ಲಿ ನ.೩೦ರ ರಾತ್ರಿ ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ಪ್ರಕರಣ ದಿನೇ ದಿನೇ ಬಿಗಾಡಾಯಿಸುತ್ತಿದೆ. ಪೊಲೀಸ್ ಠಾಣೆಯ ನಾಲ್ಕು ಗೋಡೆಯ ನಡುವೆ ನಡೆದ ಘಟನೆ ಬೀದಿಗೆ ಬಂದಿದೆ. ಪೊಲೀಸರು ಹಾಗೂ ವಕೀಲರ ನಡುವೆ ಜಂಗಿ ಕುಸ್ತಿ ಆರಂಭಗೊಂಡಿದೆ.

ವಕೀಲರ ಮೇಲಿನ ಆಕ್ರೋಶ ಸ್ಪೋಟಗೊಂಡಿದ್ದು, ಒಂದೇ ದಿನ ಮಧ್ಯ ರಾತ್ರಿ ೨ ಗಂಟೆಯ ಅವಧಿಯೊಳಗೆ ಚಿಕ್ಕಮಗಳೂರು ವಕೀಲರ ಸಂಘದ ಅಧ್ಯಕ್ಷ ಸುಧಾಕರ್ ಸೇರಿದಂತೆ ಹಲವು ಮಂದಿ ವಕೀಲರ ವಿರುದ್ಧ ಟೌನ್ ಪೊಲೀಸ್ ಠಾಣೆಯಲ್ಲಿ ೪ ಎಫ್‌ಐಆರ್ ದಾಖಲು ಮಾಡಿಕೊಳ್ಳಲಾಗಿದೆ.

ಈ ದೂರುಗಳನ್ನು ನೀಡಿದ್ದು ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿಗಳೇ. ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ದೂರುಗಳಾಗಿವೆ. ವಕೀಲ ಪ್ರೀತಂ ಮೇಲೆ ಹಲ್ಲೆ ನಡೆಸಿರುವ ಪ್ರಕರಣದ ಒಂದನೇ ಆರೋಪಿ ಗುರುಪ್ರಸಾದ್ ಅವರು ಪ್ರೀತಂ ವಿರುದ್ಧ ಪ್ರತಿ ದೂರನ್ನು ನೀಡಿದ್ದು, ಇದು, ಕೂಡ ಎಫ್‌ಐಆರ್ ಆಗಿದೆ.

ಕರ್ತವ್ಯಕ್ಕೆ ಅಡ್ಡಿಪಡಿಸಿರುವ ವಕೀಲರ ವಿರುದ್ಧ ಪ್ರಕರಣ ದಾಖಲು ಮಾಡುವಂತೆ ಆಗ್ರಹಿಸಿ ಟೌನ್ ಪೊಲೀಸ್ ಠಾಣೆ ಎದುರು ಶನಿವಾರ ರಾತ್ರಿ ೮ ಗಂಟೆಯ ವೇಳೆಗೆ ಧರಣಿ ನಡೆಸಿದ ಪೊಲೀಸ್ ಸಿಬ್ಬಂದಿ ಹಾಗೂ ಅವರ ಕುಟುಂಬದವರು ಏರು ಧ್ವನಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ರಕ್ಷಣಾಧಿಕಾರಿ ಡಾ.ವಿಕ್ರಂಅಮಟೆ ಹಾಗೂ ಹೆಚ್ಚುವರಿ ಜಿಲ್ಲಾ ರಕ್ಷಣಾಧಿಕಾರಿ ಕೃಷ್ಣಮೂರ್ತಿಯವರು ಎಷ್ಟೇ ಮನವೊಲಿಸಿದರು ಸಿಬ್ಬಂದಿಗಳು ಕೇಳಲಿಲ್ಲ. ರಾತ್ರಿ ೯.೩೫ರ ವೇಳೆಗೆ ಪ್ರತಿಭಟನಾ ನಿರತ ಪೊಲೀಸರು ಹಾಗೂ ಅವರಿಗೆ ಸಾಥ್ ಕೊಟ್ಟ ಸಾರ್ವಜನಿಕರು ರಾಷ್ಟ್ರೀಯ ಹೆದ್ದಾರಿ ೧೭೩ರಲ್ಲಿರುವ ಹನುಮಂತಪ್ಪ ವೃತ್ತದಲ್ಲಿ ರಸ್ತೆ ತಡೆ ನಡೆಸಿದರು.

ಸ್ಥಳಕ್ಕೆ ಪಶ್ಚಿಮ ವಲಯದ ಐಜಿಪಿ ಡಾ. ಚಂದ್ರಗುಪ್ತ ಅವರು ಬಂದು ಸಮಧಾನ ಪಡಿಸಿದರೂ ಕೇಳಲಿಲ್ಲ. ಬೆಳಗಿನ ಜಾವದವರೆಗೆ ರಸ್ತೆ ತಡೆ ಮುಂದುವರೆದಿತ್ತು. ವಕೀಲರ ವಿರುದ್ಧ ಎಫ್‌ಐಆರ್ ದಾಖಲಾಗಿರುವ ವಿಷಯ ತಿಳಿಯುತ್ತಿದ್ದಂತೆ ಪ್ರತಿಭಟನೆಯನ್ನು ಕೈಬಿಟ್ಟರು.

ಹನುಮಂತಪ್ಪ ವೃತ್ತದಲ್ಲಿ ಪೊಲೀಸರು ರಸ್ತೆ ತಡೆ ಮುಂದುವರೆಸಿದ್ದರೆ, ಇತ್ತ ಅದೇ ಸಮಯಕ್ಕೆ ಟೌನ್ ಪೊಲೀಸ್ ಠಾಣೆಯಲ್ಲಿ ವಕೀಲರ ವಿರುದ್ಧ ಪೊಲೀಸರಿಂದ ದೂರು ಹಾಗೂ ಎಫ್‌ಐಆರ್ ದಾಖಲು ಪ್ರಕ್ರಿಯೆ ಆರಂಭಗೊಂಡಿತು.ಗುರುಪ್ರಸಾದ್ ಅವರು ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂಬ ಕಾರಣವನ್ನು ನೀಡಿ ವಕೀಲ ಪ್ರೀತಂ ವಿರುದ್ಧ ನೀಡಿರುವ ದೂರಿನನ್ವಯ ಪ್ರೀತಂ ವಿರುದ್ಧ ಶನಿವಾರ ಮಧ್ಯ ರಾತ್ರಿ ೧೨.೩೦ಕ್ಕೆ ಎಫ್‌ಐಆರ್ ದಾಖಲಾಗಿದೆ.

ನ.೩೦ ರಂದು ಜಿಲ್ಲಾ ರಕ್ಷಣಾಧಿಕಾರಿಯವರು ಠಾಣೆಯಲ್ಲಿದ್ದ ಸಂದರ್ಭದಲ್ಲಿ ವಕೀಲರಾದ ಭುವನೇಶ್, ನಂದೀಶ್, ಸುಧಾಕರ್, ಸುಜೇಂದ್ರ ಹಾಗೂ ಇತರೆ ೧೦ ಮಂದಿ ಠಾಣೆಯೊಳಗೆ ನುಗ್ಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಮುಖ್ಯಪೇದೆ ಎ.ಎಂ. ಸತೀಶ್ ಅವರು ನೀಡಿರುವ ದೂರಿನನ್ವಯ ೧ ಗಂಟೆ ೩ ನಿಮಿಷಕ್ಕೆ ಎಫ್‌ಐಆರ್ ದಾಖಲು ಮಾಡಲಾಗಿದೆ.

ಇದೇ ಠಾಣೆಯ ಮುಖ್ಯಪೇದೆ ರವಿ ಅವರು ಸುಧಾಕರ್ ಹಾಗೂ ಮಹೇಶ್‌ಕುಮಾರ್ ವಿರುದ್ಧ ಎಫ್‌ಐಆರ್ ಹರಿದು ಹಾಕಿರುವ ಕಾರಣವನ್ನು ನೀಡಿ ಸಲ್ಲಿಸಿರುವ ದೂರಿಗೆ ಸಂಬಂಧಿಸಿದಂತೆ ೧ ಗಂಟೆ ೪೫ ನಿಮಿಷಕ್ಕೆ ಎಫ್‌ಐಆರ್ ದಾಖಲಾಗಿದೆ. ಅದೇ ದಿನ ಟೌನ್ ಪೊಲೀಸ್ ಠಾಣೆಯಿಂದ ಜಿಲ್ಲಾಸ್ಪತ್ರೆಗೆ ತೆರಳುವ ಸಂದರ್ಭದಲ್ಲಿ ತಮ್ಮ ಜೀಪ್‌ವನ್ನು ತಡೆಯುವ ಮೂಲಕ ಕರ್ತವ್ಯಕ್ಕೆ ಅಡ್ಡಿಪಡಿಸಿದರೆಂದು ಸುಧಾಕರ್, ಸುನೀಲ್, ಸತೀಶ್, ಹಳೇಕೋಟೆ ತೇಜಸ್ವಿ ಹಾಗೂ ಇತರರ ವಿರುದ್ಧ ಪೊಲೀಸ್ ವಾಹನ ಚಾಲಕ ಕೇಶವಮೂರ್ತಿ ನೀಡಿದ ದೂರಿನನ್ವಯ ೨ ಗಂಟೆ ೩೦ ನಿಮಿಷಕ್ಕೆ ಎಫ್‌ಐಆರ್ ದಾಖಲಾಗಿದೆ. ಅಂದರೆ, ರಾತ್ರೋ ರಾತ್ರಿ ೨ ಗಂಟೆ ಅವದಿಯೊಳಗೆ ೪ ದೂರುಗಳು ದಾಖಲು ಮಾಡಿಕೊಳ್ಳಲಾಗಿದೆ.

Obstruction of duty case- 4 separate FIRs filed against lawyers

 

 

About Author

Leave a Reply

Your email address will not be published. Required fields are marked *

You may have missed