September 16, 2024

ಕಾಫಿ ಉದ್ಯಮಕ್ಕೆ ಕೇಂದ್ರದ ಎಲ್ಲಾ ನೆರವು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ

0
ಕಾಫಿ ಮಂಡಳಿ ನೂತನ ಅಧ್ಯಕ್ಷ ದಿನೇಶ್ ದೇವವೃಂದ ಸುದ್ದಿಗೋಷ್ಠಿ

ಕಾಫಿ ಮಂಡಳಿ ನೂತನ ಅಧ್ಯಕ್ಷ ದಿನೇಶ್ ದೇವವೃಂದ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಕಾಫಿ ಬೆಳೆಗಾರರು, ಕಾರ್ಮಿಕರು ಹಾಗೂ ಕಾಫಿ ಉದ್ಯಮ ಹಲವು ರೀತಿಯ ಸಂಕಷ್ಟಗಳನ್ನು ಎದುರಿಸುತ್ತಿರುವ ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ದೊರೆಯಬಹುದಾದ ಎಲ್ಲಾ ನೆರವುಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಕಾಫಿ ಮಂಡಳಿ ನೂತನ ಅಧ್ಯಕ್ಷ ದಿನೇಶ್ ದೇವವೃಂದ ಭರವಸೆ ನೀಡಿದರು.

ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಪ್ರಸ್ತುತ ಕಾಫಿ ಉತ್ಪಾದನೆಯಲ್ಲಿ ಭಾರತ ಏಳನೇ ಸ್ಥಾನದಲ್ಲಿದ್ದು, ಮುಂದೆ ಐದನೇ ಸ್ಥಾನಕ್ಕೆ ತೆರಲು ಗುರಿ ಹೊಂದಲಾಗಿದೆ. ಜೊತೆಗೆ ಹವಾಮಾನಾಧಾರಿತ ಕಾಫಿ ಬೆಳೆಯನ್ನಾಗಿಸಲು ಪ್ರಯತ್ನಿಸಲಾಗುವುದೆಂದು ಹೇಳಿದರು.

ಕಾಫಿ ಬೆಳೆಯಿಂದ ಸುಮಾರು ೮ ಸಾವಿರ ಕೋಟಿ ರೂ ವಿದೇಶಿ ವಿನಿಮಯ ವಾರ್ಷಿಕ ವಹಿವಾಟು ನಡೆಯುತ್ತಿದ್ದು, ಇದನ್ನು ೧೧ ಸಾವಿರ ಕೋಟಿ ರೂಗಳಿಗೆ ಹೆಚ್ಚಿಸಲು ಉದ್ದೇಶ ಹೊಂದಲಾಗಿದೆ ಎಂದ ಅವರು ಸರ್ಫೇಸಿ ಕಾಯ್ದೆ ಬಗ್ಗೆ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಎರಡು ಸಭೆ ನಡೆಸಿ ಚರ್ಚಿಸಲಾಗಿದ್ದು ಸಧ್ಯದಲ್ಲೇ ಇದಕ್ಕೆ ಉತ್ತಮ ಪ್ರತಿಕ್ರಿಯೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವೈಜ್ಞಾನಿಕತೆ ಹಾಗೂ ತಾಂತ್ರಿಕತೆಗೆ ಹೆಚ್ಚು ಒತ್ತು ನೀಡಿ, ಉತ್ಪಾದನೆಯನ್ನು ದ್ವಿಗುಣಗೊಳಿಸುವ ಮೂಲಕ ಉದ್ಯಮವನ್ನು ಸದೃಢಗೊಳಿಸಿ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಸುವ ಯೋಜನೆಗಳನ್ನು ಹಮ್ಮಿಕೊಳ್ಳುವ ಬಗ್ಗೆ ಮಂಡಳಿ ಆಲೋಚಿಸಲಿದೆ ಎಂದು ತಿಳಿಸಿದರು.

ಮಂಡಳಿಯಲ್ಲಿ ಲಭ್ಯವಿರುವ ಸಂಪನ್ಮೂಲಗಳನ್ನೇ ಬಳಸಿಕೊಂಡು ಬೆಳಗಾರರಿಗೆ ಮಣ್ಣಿನಿಂದ ಅಗತ್ಯವಿರುವ ಅಂಶಗಳ ಕುರಿತು ಕಾರ್ಯಗಾರಗಳನ್ನು ಕೈಗೊಳ್ಳುವ ಬಗ್ಗೆ ಚಿಂತನೆ ನಡೆಯುತ್ತಿದೆ ಎಂದರು.

ಬಾಳೆಹೊನ್ನೂರಿನ ಕೇಂದ್ರೀಯ ಕಾಫಿ ಸಂಶೋಧನಾ ಕೇಂದ್ರದಲ್ಲಿ ಎರಡು ವರ್ಷದ ಡಿಪ್ಲೊಮಾ ಕೋರ್ಸ್ ಆರಂಭಿಸಿ ಯುವಕರಿಗೆ ಕಾಫಿ ಉದ್ಯಮದ ಕುರಿತು ಪರಿಣಿತಿಯನ್ನು ನೀಡಿ ಉದ್ಯೋಗ ಕಲ್ಪಿಸಲಾಗುವುದು. ಇದಕ್ಕಾಗಿ ಬೇರೆ ಬೇರೆ ವಿಶ್ವವಿದ್ಯಾಲಯಗಳ ಜೊತೆ ಒಪ್ಪಂದ ಮಾಡಿಕೊಳ್ಳಲು ಮಂಡಳಿ ಉದ್ದೇಶಿಸಿದೆ ಎಂದು ಹೇಳಿದರು.

ಕಾಫಿ ಉತ್ಪಾದನೆಯಿಂದ ಬಳಕೆಯವರೆಗೆ ತಾಂತ್ರಿಕತೆಯನ್ನು ಬಳಸಿಕೊಂಡು ಇಳುವರಿ ದ್ವಿಗುಣಗೊಳಿಸುವುದು, ಗುಣಮಟ್ಟದ ಬಗ್ಗೆ ಹೆಚ್ಚು ಪ್ರಚುರಪಡಿಸಿ ಮಾರುಕಟ್ಟೆಯನ್ನು ವಿಸ್ತಾರಗೊಳಿಸುವ ಸಂಬಂಧ ಯೋಜನೆ ರೂಪಿಸುತ್ತಿದ್ದು, ಇದಕ್ಕಾಗಿ ೨೦೨೪ ರಿಂದ ೨೦೩೪ರ ವರೆಗಿನ ರೋಡ್‌ಮ್ಯಾಪ್ ತಯಾರಿಸಲಾಗುವುದು ಎಂದು ತಿಳಿಸಿದರು.

ಯೂರೋಪ್ ದೇಶಗಳು ಮರಗಳನ್ನು ಕಡಿತಲೆ ಮಾಡಿ ನೆರಳಿಲ್ಲದ ಪ್ರದೇಶದಲ್ಲಿ ಬೆಳೆಯಲಾದ ಕಾಫಿಯನ್ನು ಆಮದು ಮಾಡಿಕೊಳ್ಳುವುದಿಲ್ಲ ಎನ್ನುವ ಶರತ್ತು ವಿಧಿಸುತ್ತಿವೆ. ಈ ಸಂಬಂಧ ಮಂಡಳಿಯು ಇಸ್ರೋ ಮತ್ತು ಐಐಎಂಪಿ ಜೊತೆ ಸೇರಿ ದಾಖಲೆ ಸಿದ್ಧಪಡಿಸಿ ಯುರೋಪ್ ದೇಶಗಳಲ್ಲಿ ಭಾರತದ ಕಾಫಿಯ ಗುಣಮಟ್ಟವನ್ನು ಪ್ರಚರಪಡಿಸಿ ಅಲ್ಲಿ ಮಾರುಕಟ್ಟೆ ಸೃಷ್ಟಿಸುವ ಪ್ರಯತ್ನ ಮಾಡಲಾಗುವುದು ಎಂದರು.

ನಮ್ಮ ಕಾಫಿಯನ್ನು ಬ್ರಾಂಡ್ ಮಾಡುವ ಪ್ರಯತ್ನಗಳು ಈಗಾಗಲೇ ನಡೆದಿವೆ. ಈ ಮೂಲಕ ಆಂತರಿಕ ಮಾರುಕಟ್ಟೆಯನ್ನು ಉತ್ತಮಪಡಿಸುವುದು, ಕಾಫಿ ಬೆಳೆಯದ ಅಸಾಂಪ್ರದಾಯಿಕ ಪ್ರದೇಶಗಳನ್ನೊಳಗೊಂಡ ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚನೆ ನಡೆಸಿ ಅಲ್ಲಿಯೂ ಕಾಫಿಯನ್ನು ಉದ್ಯಮವನ್ನಾಗಿಸಿ ಉದ್ಯೋಗ ಸೃಷ್ಠಿಸುವ ಜೊತೆಗೆ ಆಂತರಿಕ ಬಳಕೆಯನ್ನು ಹೆಚ್ಚಿಸುವುದು ಮಂಡಳಿ ಉದ್ದೇಶವಾಗಿದೆ ಎಂದು ವಿವರಿಸಿದ್ದರು.

ಮಲೆನಾಡು ಭಾಗದಲ್ಲಿ ಹೆಚ್ಚಿರುವ ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ವೈಜ್ಞಾನಿಕ ಕ್ರಮಗಳನ್ನು ಕೈಗೊಳ್ಳುವ ಕುರಿತು ತಜ್ಞರು, ಬೆಳಗಾರ ಸಂಘಟನೆಗಳು, ಪರಿಸರವಾದಿಗಳು, ಇಲಾಖೆ ಉನ್ನತ ಅಧಿಕಾರಿಗಳ ಸಹಕಾರ ಪಡೆದು ಮಂಡಳಿಯಿಂದಲೇ ಅಧ್ಯಯನ ಒಂದನ್ನು ಕೈಗೊಂಡು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ವರದಿ ಸಲ್ಲಿಸುವ ಕುರಿತು ಚಿಂತಿಸಲಾಗಿದೆ ಎಂದರು.

ಕಾಫಿ ಮಂಡಳಿಗೆ ನೂತನ ಅಧ್ಯಕ್ಷರನ್ನಾಗಿ ತಮ್ಮನ್ನು ನೇಮಕಗೊಳಿಸಿದ ಭಾರತ ಸರ್ಕಾರ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿ ಅವರಿಗೂ, ಇದಕ್ಕಾಗಿ ಸಹಕರಿಸಿದ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಹಾಗೂ ಎಲ್ಲಾ ಮುಖಂಡರಿಗೂ ಧನ್ಯವಾದ ಸಲ್ಲಿಸುತ್ತೇನೆ ಎಂದರು,

ಪತ್ರಿಕಾಗೋಷ್ಠಿಯಲ್ಲಿ ಕಾಫಿ ಮಂಡಳಿ ಸದಸ್ಯರುಗಳಾದ ಪ್ರದೀಪ್ ಪೈ, ಡಾ. ಮಹಾಬಲ ಉಪಸ್ಥಿತರಿದ್ದರು.

A sincere effort to provide all possible assistance from the Center to the coffee industry

About Author

Leave a Reply

Your email address will not be published. Required fields are marked *