September 19, 2024

ಉತ್ತಮ ಪುಸ್ತಕಗಳು ಯಶಸ್ಸು-ಪರಿವರ್ತನೆಗೆ ಸಹಕಾರಿ

0
ಟೌನ್ ಮಹಿಳಾ ಸಮಾಜ ಶಿಕ್ಷಣಸಂಸ್ಥೆಗಳ ೪೭ನೆಯ ವಾರ್ಷಿಕೋತ್ಸವ

ಟೌನ್ ಮಹಿಳಾ ಸಮಾಜ ಶಿಕ್ಷಣಸಂಸ್ಥೆಗಳ ೪೭ನೆಯ ವಾರ್ಷಿಕೋತ್ಸವ

ಚಿಕ್ಕಮಗಳೂರು: ಉತ್ತಮ ಪುಸ್ತಕಗಳು ಯಶಸ್ಸು-ಪರಿವರ್ತನೆಗೆ ಸಹಕಾರಿ ಎಂದು ಜಿಲ್ಲಾಧಿಕಾರಿ ಸಿ.ಎನ್.ಮೀನಾನಾಗರಾಜ್ ನುಡಿದರು.

ಟೌನ್ ಮಹಿಳಾ ಸಮಾಜ ಶಿಕ್ಷಣಸಂಸ್ಥೆಗಳ ೪೭ನೆಯ ವಾರ್ಷಿಕೋತ್ಸವ ಉದ್ಘಾಟಿಸಿ ಕುವೆಂಪು ಕಲಾಮಂದಿರದಲ್ಲಿ ನಿನ್ನೆ ಸಂಜೆ ಅವರು ಮಾತನಾಡಿದರು.

ಜೀವನದಲ್ಲಿ ಯಶಸ್ಸು ಕಾಣಲು, ಕೌಶಲ್ಯ ಹಾಗೂ ಜೀವನಾನುಭವ ಕಟ್ಟಿಕೊಡಲು ಕೆಲ ಉತ್ತಮ ಪುಸ್ತಕಗಳ ಅಧ್ಯಯನ ಅಗತ್ಯ. ಭವಿಷ್ಯದ ಆಲೋಚನೆ ಉತ್ತಮವಾಗಿಸಲು ಪುಸ್ತಕಗಳು ಸಹಕಾರಿ. ಸ್ವಲ್ಪ ಹಣ, ಸ್ವಲ್ಪ ಸಮಯ ವಿನಿಯೋಗಿಸಿ ಒಳ್ಳೆಯ ಪುಸ್ತಕಗಳನ್ನು ಓದಬೇಕು. ವಿದ್ಯಾರ್ಥಿಗಳಷ್ಟೇ ಅಲ್ಲ ಪೋಷಕರೂ ಓದುವ ಹವ್ಯಾಸ ರೂಢಿಸಿಕೊಳ್ಳಬೇಕೆಂದ ಜಿಲ್ಲಾಧಿಕಾರಿಗಳು, ಓದಲೇಬೇಕಾದ ಪುಸ್ತಕಗಳನ್ನು ಹೆಸರಿಸಿದರು.

ಮಕ್ಕಳ ಸರ್ವಾಂಗೀಣ ಬೆಳವಣಿಗೆ ಶಿಕ್ಷಣಕ್ಷೇತ್ರದ ಆಶಯ. ನಿಜವಾದ ಕಲಿಕೆ ಜೀವನಾನುಭವವನ್ನು ಕಟ್ಟಿಕೊಡುತ್ತದೆ. ಅಂಕಗಳಿಕೆ ಮುಖ್ಯವೆನಿಸಿದರೂ ನಿಜವಾದ ಕಲಿಕೆ ಲೋಕಾನುಭವದಿಂದ ಸಿಗುತ್ತದೆ. ಶೇಕಡವಾರು ಅಂಕಗಳಿಗಿಂತ ಪ್ರಾಯೋಗಿಕಜ್ಞಾನ ಇಂದಿನ ಉದ್ಯೋಗಕ್ಕೂ ಪ್ರಮುಖ ಅಳತೆಗೋಲು. ಈ ಮೊದಲು ಐಟಿ ಬಿಟಿ ಅಧಿಕಾರಿಯಾಗಿದ್ದ ಅನುಭವ ಹಂಚಿಕೊಂಡ ಮೀನಾನಾಗರಾಜ್, ಅಲ್ಲಿ ಕೆಲಸ ನಿರ್ವಹಿಸುವ ಸಾಮರ್ಥ್ಯವೇ ಅಂಕಗಳಿಗಿಂತ ಪ್ರಾಮುಖ್ಯವನಿಸುತ್ತದೆ ಎಂದರು.

ಮಾತೃಭಾಷೆಯ ಜೊತೆಗೆ ಇಂಗ್ಲೀಷ್ ಭಾಷೆ ಜ್ಞಾನವೂ ಸಹಕಾರಿ. ಮಧ್ಯಮವರ್ಗದ ಮಕ್ಕಳಿಗೆ ಅನುಕೂಲವಾಗುವಂತೆ ಇಂಗ್ಲೀಷ್ ಮಾಧ್ಯಮದಲ್ಲಿ ಬೋಧನೆ ಮಾಡುವ ಟೌನ್ ಮಹಿಳಾ ಸಮಾಜದ ಆಲೋಚನೆಗಳು ಸಮಾಜಹಿತಕ್ಕೆ ಪೂರಕವಾಗಿತ್ತು. ಜಿಲ್ಲಾಡಳಿತದ ವಿವಿಧ ಜಾಗೃತಿ ಕಾರ್‍ಯಕ್ರಮಗಳಲ್ಲಿ ಟಿಎಂಎಸ್ ಸಕ್ರಿಯವಾಗಿ ಪಾಲ್ಗೊಳ್ಳುತ್ತಿದೆ. ಇಂಗ್ಲೀಷ್ ಭಾಷೆಯಿಂದ ಜೀವನಕೌಶಲ್ಯ, ಸಂದರ್ಶನದಲ್ಲಿ ಆತ್ಮವಿಶ್ವಾಸದೊಂದಿಗೆ ಪಾಲ್ಗೊಳ್ಳುವ ಧೈರ್‍ಯ, ಸ್ಥೈರ್ಯಗಳು ಬರುತ್ತವೆ ಎಂದರು.

೯೮ವರ್ಷಗಳ ಭವ್ಯ ಇತಿಹಾಸ ಹೊಂದಿರುವುದು ಅಂದಿನ ಮಹಿಳೆಯರ ಪ್ರಗತಿಪರ ಚಿಂತನೆಗೆ ದ್ಯೋತಕ. ೪೮ವರ್ಷಗಳ ಹಿಂದೆಯೆ ಆಂಗ್ಲಮಾಧ್ಯಮಶಾಲೆ ಆರಂಭಿಸಿರುವುದು ಮುಂದಾಲೋಚನೆಯನ್ನು ತೋರಿಸುತ್ತದೆ. ಇಲ್ಲಿಯ ಫಲಿತಾಂಶವು ಪ್ರೇರಣಾದಾಯಕವಾಗಿದೆ ಎಂದ ಜಿಲ್ಲಾಧಿಕಾರಿಗಳು, ಮಕ್ಕಳು ಭವ್ಯವಾದ ಕನಸನ್ನು ಕಾಣಬೇಕು. ಅದನ್ನು ಸಾಕಾರಗೊಳಿಸಲು ಶ್ರಮಿಸಬೇಕು. ಮನಸ್ಸು-ಬುದ್ಧಿ-ಆತ್ಮ ವಿಕಾಸಗೊಳಿಸುವ ಪುಸ್ತಕಗಳನ್ನು ಓದಿ ಉತ್ತಮ ನಾಗರಿಕರಾಗಿ ಸಮಾಜಕ್ಕೆ ಉಪಕಾರಿಗಳಾಗಿ ರೂಪುಗೊಳ್ಳಬೇಕೆಂದು ಹಾರೈಸಿದರು.

ಕೆಆರ್‌ಐಡಿಎಲ್ ಕಾರ್‍ಯಪಾಲಕ ಅಭಿಯಂತರ ವಿ.ಎನ್.ಅಶ್ವಿನಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿ, ಕ್ರೀಡೆ, ಸಾಂಸ್ಕೃತಿಕ, ಸಾಮಾಜಿಕ ಕಾರ್‍ಯಗಳಿಗೂ ಟಿಎಂಎಸ್ ಶಿಕ್ಷಣಸಂಸ್ಥೆ ಆದ್ಯತೆ ನೀಡುತ್ತಿರುವುದು ಮಕ್ಕಳ ಬೆಳವಣಿಗೆಗೆ ಸಹಕಾರಿ. ಶಿಕ್ಷಣದ ಜೊತೆಗೆ ಸಾಂಸ್ಕೃತಿಕ ಜ್ಞಾನವೂ ಇಂದಿನ ಅವಶ್ಯಕತೆ ಎಂದರು.

ಯಶಸ್ಸಿಗೆ ಪರಿಶ್ರಮ ಅಗತ್ಯ. ಮಕ್ಕಳಲ್ಲಿ ಹೋಲಿಕೆ ಮಾಡಬಾರದು. ಅವರಿಗೆ ತಿಳುವಳಿಕೆ ಬಂದ ನಂತರ ಆದ್ಯತೆಯ ಮೇರೆಗೆ ಪರಿಶ್ರಮಿಸುತ್ತಾರೆ. ದೊಡ್ಡ ಗುರಿಯೊಂದಿಗೆ ಪರಿಶ್ರಮ ಸಾಧನೆಗೆ ಮುಂದಾಲೋಚನೆ ಅಗತ್ಯ. ಪ್ರತಿಯೊಬ್ಬ ಪೋಷಕರೂ ತಮ್ಮ ಮಕ್ಕಳು ಸ್ವಾವಲಂಭಿಗಳಾಗಿ ಯಶಸ್ವಿ ಸಾಧಕರಾಗಿ ಹೊರಹೊಮ್ಮಬೇಕೆಂಬುದನ್ನೆ ಅಪೇಕ್ಷಿಸುತ್ತಾರೆ. ಚೆನ್ನಾಗಿ ಅಭ್ಯಾಸ ಮಾಡುವ ಮೂಲಕ ವಿದ್ಯಾರ್ಥಿ ಜೀವನವನ್ನು ಸಾರ್ಥಕಪಡಿಸಿಕೊಳ್ಳಬೇಕೆಂದ ಅಶ್ವಿನಿ, ಮಕ್ಕಳ ಪ್ರತಿಭೆ ಸಾಮರ್ಥ್ಯ ದರ್ಶನಕ್ಕೆ ಪೋಷಕರು ವಾರ್ಷಿಕೋತ್ಸವದಲ್ಲಿ ಕಾತುರರಾಗಿರುತ್ತಾರೆಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಸಿ.ರವೀಶ್ ವಿಶ್ರಾಂತ ನೌಕರರನ್ನು ಸನ್ಮಾನಿಸಿ ಮಾತನಾಡಿ ಗುಣಾತ್ಮಕ ಶಿಕ್ಷಣಕ್ಕೆ ಟಿಎಂಎಸ್ ಹಿಂದಿನಿಂದಲೂ ಹೆಸರಾಗಿದೆ. ಶಿಕ್ಷಣ ಇಲಾಖೆಯೊಂದಿಗೆ ಸಕ್ರಿಯವಾಗಿ ಸ್ಪಂದಿಸುತ್ತಿದೆ. ಕಲಾ-ವಿಜ್ಞಾನ ವಿಚಾರಗೋಷ್ಠಿ, ಪ್ರಬಂಧಸ್ಪರ್ಧೆ, ವಸ್ತುಪ್ರದರ್ಶನಗಳು ಮಕ್ಕಳ ಸಾಮರ್ಥ್ಯಕ್ಕೆ ಸೂಕ್ತ ವೇದಿಕೆ. ನವೆಂಬರ್ ಮತ್ತು ಡಿಸೆಂಬರ್ ತಿಂಗಳಿನಲ್ಲಿ ಇಲಾಖೆ ಕ್ರೀಡಾಕೂಟ ಮತ್ತು ಪ್ರತಿಭಾಕಾರಂಜಿ ಆಯೋಜಿಸುವ ಮೂಲಕ ವೇದಿಕೆ ನೀಡುತ್ತದೆ. ಶಾಲೆಗಳೂ ಪ್ರವಾಸ, ಕ್ರೀಡಾಸ್ಪರ್ಧೆಗಳು ಹಾಗೂ ವಾರ್ಷಿಕೋತ್ಸವವನ್ನು ವರ್ಷಾಂತ್ಯದೊಳಗೆ ಪೂರ್ಣಗೊಳಿಸುತ್ತವೆ. ಮುಂದಿನದಿನಗಳು ವಿದ್ಯಾರ್ಥಿಗಳ ಪರೀಕ್ಷೆಗೆ ಸಿದ್ಧತಾವಧಿಯಾಗಿರುತ್ತದೆ ಎಂದರು.

ಟಿಎಂಎಸ್ ಅಧ್ಯಕ್ಷೆ ಗೀತಾಮೂರ್ತಿ ಸಮಾರಂಭದ ಅಧ್ಯಕ್ಷೆವಹಿಸಿ ಮಾತನಾಡಿ ಎರಡುವರ್ಷಗಳಲ್ಲಿ ಶತಮಾನೋತ್ಸವ ಆಚರಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ ಇದಾಗಿದೆ. ೧೯೫೨ರಲ್ಲೆ ಸರ್ವಪಲ್ಲಿರಾಧಾಕೃಷ್ಣನ್ ಭೇಟಿ ನೀಡಿದ್ದರು. ೧೯೪೫ರಲ್ಲಿ ಮಹಾರಾಜ ನಾಲ್ವಡಿಕೃಷ್ಣರಾಜಒಡೆಯರ್ ಸ್ಪಂದಿಸಿ ಸ್ಥಳನೀಡಲು ಸಹಕರಿಸಿದ್ದರು. ಶ್ರೀಕಂಠದತ್ತ ಒಡೆಯರ್, ರಮಾದೇವಿ, ಎ.ಎನ್.ಬ್ಯಾನರ್ಜಿ ಸೇರಿದಂತೆ ದೇಶದ ಹಲವು ಗಣ್ಯರು ಟಿಎಂಎಸ್ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದಾರೆ. ೧೪೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕಲಿಯುತ್ತಿದ್ದರು. ಏಳುಬೀಳುಗಳನ್ನು ದಾಟಿ ಪ್ರಗತಿಯತ್ತ ಮುನ್ನಡೆದಿರುವ ಶಿಕ್ಷಣಸಂಸ್ಥೆಗೆ ಎಲ್ಲರ ಸಹಕಾರ ಅಗತ್ಯ ಎಂದು ಗೀತಾಮೂರ್ತಿ ವಿನಂತಿಸಿದರು.

ಸೇವಾನಿವೃತ್ತ ಹೊಂದಿದ ಭಾರತಿ, ಲತಾ ಮತ್ತು ತಾರಾನಾಥಕಾಮತ್‌ರನ್ನು ಸಂಸ್ಥೆ ವತಿಯಿಂದ ಸನ್ಮಾನಿಸಲಾಯಿತು. ಆಡಳಿತಮಂಡಳಿ ಸದಸ್ಯರಾದ ಆಶಾಹೇಮಂತ್, ಭಾರತಿಶಿವರುದ್ರಪ್ಪ ಮತ್ತು ಮೀರಾರಂಗನಾಥ್ ಸನ್ಮಾನಿತರನ್ನು ಪರಿಚಯಿಸಿದರು. ವಿದ್ಯಾರ್ಥಿಗಳಾದ ಚಂದನಾ ಮತ್ತು ಚಿನ್ಮಯ್ ಕಾರ್‍ಯಕ್ರಮ ನಿರೂಪಿಸಿದರು. ಮುಖ್ಯಅತಿಥಿಗಳನ್ನು ಗೀತಾಸುಂದ್ರೇಶ್, ಸುಬದಾ ಪರಿಚಯಿಸಿದರು.

ಟಿಎಂಎಸ್ ಕಾರ್‍ಯದರ್ಶಿ ಅರ್ಪಿತಾನಿತಿನ್ ಸ್ವಾಗತಿಸಿ, ಮುಖ್ಯಶಿಕ್ಷಕ ನಟರಾಜ್ ವಂದಿಸಿದರು. ಪ್ರಾಂಶುಪಾಲರಾದ ಇಂದ್ರೇಶ್ ವಾರ್ಷಿಕವರದಿ ಮಂಡಿಸಿದರು. ಖಜಾಂಚಿ ಯಮುನಾಸಿ.ಶೆಟ್ಟಿ, ಆಡಳಿತ ಮಂಡಳಿ ಸದಸ್ಯರಾದ ಮಂಜುಳಾಮಹೇಶ್, ನೇತ್ರಾವೆಂಕಟೇಶ್, ಗೀತಾಸಿಂಗ್, ಮಾಲತಿಜಗದೀಶ್, ಸುಧಾನಾಗೇಶ್, ಶಾಲಿನಿಸುಬ್ರಮಣ್ಯ, ತಾರಾಅರಸ್, ನೇತ್ರಾಅಣ್ಣಪ್ಪ ಮತ್ತು ಪ್ರಾಂಶುಪಾಲ ಎಂ.ಬಿ.ಕಟಗಿ ವೇದಿಕೆಯಲ್ಲಿದ್ದರು. ಕಾಲೇಜು, ಶಾಲೆ, ಪೂರ್ವಪ್ರಾಥಮಿಕ ವಿದ್ಯಾರ್ಥಿಗಳಿಂದ ವಿವಿಧ ಮನರಂಜನಾ ಕಾರ್‍ಯಕ್ರಮಗಳು ಗಮನಸೆಳೆದವು.

About Author

Leave a Reply

Your email address will not be published. Required fields are marked *

You may have missed