September 19, 2024

ರಸ್ತೆ ಅಪಘಾತ ನಿಯಂತ್ರಿಸುವ ಸಲುವಾಗಿ ಬಿಡಾಡಿ ದನಗಳಿಗೆ ರಿಫ್ಲೆಕ್ಟೀವ್ ಕಾಲರ್ ಬೆಲ್ಟ್

0
ಧಾರವಾಡದ ಸಮಾಜ ಸೇವಕ  ನೀಲಕಂಠ ಹಂಪಣ್ಣವರ್ ಮತ್ತು ಸ್ನೇಹಿತರನ್ನೊಳಗೊಂಡ ಯುವ ತಂಡ

ಧಾರವಾಡದ ಸಮಾಜ ಸೇವಕ  ನೀಲಕಂಠ ಹಂಪಣ್ಣವರ್ ಮತ್ತು ಸ್ನೇಹಿತರನ್ನೊಳಗೊಂಡ ಯುವ ತಂಡ

ಚಿಕ್ಕಮಗಳೂರು: ರಸ್ತೆ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಬಿಡಾಡಿ ದನಗಳಿಗೆ ರಿಫ್ಲೆಕ್ಟೀವ್ ಕಾಲರ್ ಬೆಲ್ಟ್ ಅಳವಡಿಸುವ ವಿನೂತನ ವಿಧಾನವೊಂದನ್ನು ಕಂಡುಕೊಳ್ಳಲಾಗಿದೆ. ಸಮಾಜಸೇವಾಸಕ್ತರ ನೆರವಿನಲ್ಲಿ ನಮ್ಮ ಜಿಲ್ಲೆಯ ವಿವಿಧೆಡೆ ಇಂತಹ ಬೆಲ್ಟ್‌ಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಬಿ.ಗೋಪಾಲಕೃಷ್ಣ ತಿಳಿಸಿದರು.

ಧಾರವಾಡದ ಸಮಾಜ ಸೇವಕ  ನೀಲಕಂಠ ಹಂಪಣ್ಣವರ್ ಮತ್ತು ಸ್ನೇಹಿತರನ್ನೊಳಗೊಂಡ ಯುವ ತಂಡದ ನೆರವಿನಲ್ಲಿ ಜಿಲ್ಲೆಯ ಮಲೆನಾಡಿನ ತಾಲ್ಲೂಕುಗಳಲ್ಲಿ ಸುಮಾರು ೫೦೦ ಬೆಲ್ಟ್‌ಗಳನ್ನು ಬೀಡಾಡಿ ದನಗಳಿಗೆ ಅಳವಡಿಸಲಾಗುತ್ತದೆ ಎಂದರು.

ಇತ್ತೀಚೆಗೆ ಕಳಸ ಇನ್ನಿತರೆ ಕಡೆಗಳಲ್ಲಿ ನಡೆದ ಜನತಾದರ್ಶನ ಕಾರ್ಯಕ್ರಮದಲ್ಲಿ ಬಿಡಾಡಿ ದನಗಳಿಂದ ಅಪಘಾತಗಳು ಹೆಚ್ಚಾಗಿ ಜನ ಹಾಗೂ ಜಾನುವಾರುಗಳ ಸಾವು-ನೋವು ಸಂಭವಿಸುತ್ತಿರುವ ಬಗ್ಗೆ ಹೆಚ್ಚಿನ ದೂರುಗಳು ಬಂದ ಹಿನ್ನೆಲೆಯಲ್ಲಿ ನಾವು ನೀಲಕಂಠ ಹಂಪಣ್ಣವರ್ ಮತ್ತು ತಂಡವನ್ನು ಭೇಟಿ ಮಾಡಿ ಕೋರಿಕೆ ಸಲ್ಲಿಸಿದ ಮೇರೆಗೆ ಅವರು ಈ ಬೆಲ್ಟ್‌ಗಳನ್ನು ಸಂಪೂರ್ಣ ಉಚಿತವಾಗಿ ನೀಡಲು ಮುಂದಾಗಿದ್ದಾರೆ ಎಂದರು.

ಈ ಬೆಲ್ಟ್‌ಗಳಿಂದ ರಾತ್ರಿವೇಳೆ ಬೆಳಕಿನ ಪ್ರತಿಫಲನವಾಗುವುದರಿಂದ ಅಪಘಾತಗಳಾಗುವುದನ್ನು ತಡೆಯಬಹದು ಅಲ್ಲದೆ. ಪ್ರತಿ ಬೆಲ್ಟ್‌ನಲ್ಲಿ ಕ್ಯೂಆರ್ ಕೋಡ್‌ನ ತಂತ್ರಜ್ಞಾನವನ್ನೂ ಅಳವಡಿಸಿರುವುದರಿಂದ ಅದರಲ್ಲಿ ಹಸುವಿನ ಮಾಲೀಕರ ಹೆಸರು, ವಿಳಾಸ, ದೂರವಾಣಿ ಸಂಖ್ಯೆ, ಇ-ಮೇಲ್ ಐಡಿ ಇನ್ನಿತರೆ ಮಾಹಿತಿಗಳನ್ನು ಅಳವಡಿಸಲು ಸಾಧ್ಯವಿದೆ. ಅಗತ್ಯ ಸಂದರ್ಭದಲ್ಲಿ ಮಾಲೀಕರನ್ನು ಪತ್ತೆಹಚ್ಚಲು ಸಹಕಾರಿ ಆಗುತ್ತದೆ ಎಂದು ತಿಳಿಸಿದರು.

ತಾವು ಹುಬ್ಬಳ್ಳಿ ಪಾಲಿಕೆಯಲ್ಲಿ ಕಮಿಷನರ್ ಆಗಿದ್ದ ಸಂದರ್ಭದಲ್ಲಿ ನೀಲಕಂಠ ಹಂಪಣ್ಣವರ್ ಮತ್ತವರ ತಂಡವು ಬೀದಿ ನಾಯಿಗಳಿಗೆ ಇಂತಹ ಬೆಲ್ಟ್ ಅಳವಡಿಸಿದ್ದರು. ಇದರಿಂದ ಅಪಘಾತಗಳು ಕಡಿಮೆಯಾಗಿದ್ದಲ್ಲದೆ, ಜನ ಮತ್ತು ನಾಯಿಗಳ ಸಾವು-ನೋವು ನಿಯಂತ್ರಣಗೊಂಡ ನಿದರ್ಶನ ನಮ್ಮ ಮುಂದೆ ಇದ್ದ ಕಾರಣ ಅವರನ್ನು ಮತ್ತೆ ಸಂಪರ್ಕಿಸಿ ನಮ್ಮ ಜಿಲ್ಲೆಯ ಮೂಡಿಗೆರೆ, ಕಳಸ ಹಾಗೂ ಶೃಂಗೇರಿ ತಾಲ್ಲೂಕುಗಳ ಭಾಗದಲ್ಲಿ ಜಾನುವಾರುಗಳಿಗೆ ಬೆಲ್ಟ್ ಅಳವಡಿಸಲು ಮುಂದಾಗಿದ್ದೇವೆ ಎಂದರು.

ನೀಲಕಂಠ ಹಂಪಣ್ಣವರ್ ತಂಡದಲ್ಲಿ ಅಮೆರಿಕಾದಲ್ಲಿ ವಿದ್ಯಾಭ್ಯಾಸ ಮಾಡಿ ಬಂದವರು, ಧಾರವಾಡ ಹಾಗೂ ಚಿಕ್ಕಮಗಳೂರಿನ ಉದ್ಯಮಿಗಳು ಸಹ ಇದ್ದಾರೆ. ಈ ತಂಡದ ಕಾರ್ಯ ಬೇರೆಯವರಿಗೂ ಮಾದರಿಯಾಗಲಿ ಎಂದರು.

ಈ ವೇಳೆ ನೀಲಕಂಠ ಹಂಪಣ್ಣವರ್ ಮಾತನಾಡಿ, ಬೀಡಾಡಿ ಜಾನುವಾರುಗಳು, ನಾಯಿಗಳಿಂದಾಗಿ ರಸ್ತೆ ಅಪಘಾತಗಳು ಸಂಭವಿಸಿ ಸಾವು-ನೋವುಗಳು ಸಂಭವಿಸುವುದನ್ನು ಕಾಣುತ್ತೇವೆ. ಇದನ್ನು ನಿಯಂತ್ರಿಸುವ ಸಲುವಾಗಿ ರಿಫ್ಲೆಕ್ಟೀವ್ ಕಾಲರ್ ಬೆಲ್ಟ್ ಅಳವಡಿಸಲಾಗುತ್ತಿದೆ. ತಂತ್ರಜ್ಞಾನ ಬಳಸಿ ಕ್ಯೂಆರ್ ಕೋಡ್ ಸಹ ಅಳವಡಿಸಲಾಗಿದೆ ಎಂದರು.

ಹಿಂದೆ ಧಾರವಾಡದಲ್ಲಿ ಸುಮಾರು ೩೦೦ ನಾಯಿಗಳಿಗೆ ಇಂತಹ ಬೆಲ್ಟ್‌ಗಳನ್ನು ನೀಡಿದ್ದೇವೆ. ಈಗ ಇಲ್ಲಿನ ಸಿಇಓ ಅವರು ಜಾನುವಾರುಗಳ ಬೆಲ್ಟ್ ಅಗತ್ಯವಿರುವ ಬಗ್ಗೆ ತಿಳಿಸಿದ ಹಿನ್ನೆಲೆಯಲ್ಲಿ ೫೦೦ ಬೆಲ್ಟ್‌ಗಳನ್ನು ನೀಡುತ್ತಿದ್ದೇವೆ. ಅಗತ್ಯ ಬಿದ್ದರೆ ಇನ್ನಷ್ಟು ನೀಡುತ್ತೇವೆ. ಮಾನವೀಯತೆಯನ್ನು ಉಳಿಸುವ ನಿಟ್ಟಿನಲ್ಲಿ ಈ ಸಣ್ಣ ಕಾರ್ಯ ಕೈಗೊಂಡಿದ್ದೇವೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ತಂಡದ ಸುಶ್ಮಿತ್ ಬಾರಿಗಿಡದ್, ಶ್ರೀಧರ್ ಸಂಗೊಳ್ಳಿ, ನಾಗರಾಜ್ ತೇಗಿ ಮತ್ತು ದೀಕ್ಷಿತ್ ಇದ್ದರು.

Reflective collar belt for stray cattle

About Author

Leave a Reply

Your email address will not be published. Required fields are marked *

You may have missed