September 19, 2024

ಸಂಸ್ಕೃತಿಯನ್ನು ಸಂಘಟಿತರಾಗಿ ಯುವ ಪೀಳಿಗೆಗೆ ವರ್ಗಾಯಿಸಬೇಕು

0
ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ

ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ

ಚಿಕ್ಕಮಗಳೂರು: ನಮ್ಮ ಸನಾತನ ಹಿಂದೂ ಧರ್ಮೀಯರು ಸಂಘಟಿತರಾಗಿ ಪೀಳಿಗೆಗೆ ನಮ್ಮ ಸಂಸ್ಕೃತಿಯನ್ನು ವರ್ಗಾಯಿಸಬೇಕು ಎಂದು ಶ್ರೀ ಹರಿದಾಸ ಸಂಘದ ಸಂಸ್ಥಾಪಕ, ಸಂಸ್ಕೃತಿ ವಿದ್ವಾಂಸ ಬೆಂಗಳೂರಿನ ಡಾ.ಹರಾ ನಾಗರಾಜಾಚಾರ್ಯ ಕಿವಿಮಾತು ಹೇಳಿದರು.

ನಗರದ ಬ್ರಹ್ಮಸಮುದ್ರ ಶ್ರೀ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಮಹಿಳಾ ವಿಭಾಗದ ಜಿಲ್ಲಾ ಘಟಕ ಹಾಗೂ ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ಆಶ್ರಯದಲ್ಲಿ ಬುಧವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆಯ ತೀರ್ಪುಗಾರರಾಗಿ ಭಾಗವಹಿಸಿದ್ದ ಅವರು ವಿಶೇಷ ಪ್ರವಚನ ನೀಡಿದರು.

ಇಂದು ಸನಾತನ ಧರ್ಮ ಉಳಿಯಬೇಕು, ಬೆಳೆಯಬೇಕು ಎನ್ನುವ ನಿಟ್ಟಿನಲ್ಲಿ ಇಡೀ ದೇಶದಲ್ಲಿ ಆಂದೋಲನವೇ ನಡೆಯುತ್ತಿದೆ. ಇಡೀ ಪ್ರಪಂಚಕ್ಕೆ ಬೆಳಕು ನೀಡಬೇಕು ಎಂದು ದೇಶದ ಪ್ರಧಾನಿಯವರು ಸಂಕಲ್ಪ ಮಾಡಿದ್ದಾರೆ. ಹೀಗಾಗಿ ಇಡೀ ಪ್ರಪಂಚವೇ ಇಂದು ಭಾರತದ ಕಡೆ ತಿರುಗಿದೆ. ಇಡೀ ವಿಶ್ವ ಇಂದು ಭೋಗದಲ್ಲಿದ್ದರೂ ಅವರಿಗೆ ನೆಮ್ಮದಿ ಇಲ್ಲ. ಅನೇಕ ಕಾಯಿಲೆಗಳಿಗೆ ತುತ್ತಾಗಿ ಸಂಕಟಪಡುತ್ತಿದ್ದಾರೆ. ಅದಕ್ಕೆ ಬೆಳಕು ಸಿಗುವುದು ಭಾರತದಿಂದ ಮಾತ್ರ. ಭಾರತವೇನಾದರೂ ಪ್ರಜ್ವಲಿಸಬೇಕಾದರೆ ಸನಾತನ ಧರ್ಮ ಉಳಿಯಬೇಕು. ಅದು ಉಳಿಯಬೇಕಾದರೆ ನಮ್ಮ ತಾಯಂದಿರು ಬಹುಮುಖ್ಯ ಪಾತ್ರ ವಹಿಸಬೇಕು ಎಂದು ಕಿವಿಮಾತು ಹೇಳಿದರು.

ನಾವಿಂದು ಸಂಕುಚಿತರಾಗುತ್ತಾ ಸನಾತನ ಸಂಸ್ಕೃತಿ ಅಳಿದು ಹೋಗುತ್ತಿದೆ. ನಾವೇನಾದರೂ ಸ್ವಾರ್ಥಿಗಳಾದರೆ, ಜಗಳಗಂಟಿಗಳಾದರೆ, ಒಬ್ಬರನ್ನೊಬ್ಬರು ನೋಡದೆ ಇದ್ದರೆ ಇನ್ನು ಹಲವಾರು ವರ್ಷಗಳಲ್ಲಿ ನಮ್ಮ ದೇಶ ಅನ್ಯಧರ್ಮೀಯರ ಪಾಲಾದರೂ ಆಶ್ಚರ್ಯವಿಲ್ಲ. ಬೆಂಗಳೂರಿನಲ್ಲಿ ಆ ಮಟ್ಟಿಗಿನ ಬೆಳವಣಿಗೆ ಕಂಡು ಬರುತ್ತಿದೆ. ಆ ಧರ್ಮೀಯರು ತಮ್ಮ ಸಂಪ್ರದಾಯ, ಆಚರಣೆಯನ್ನು ಉತ್ತಮವಾಗಿಟ್ಟುಕೊಂಡಿದ್ದಾರೆ. ಅವರು ತಮ್ಮ ಸಂಸ್ಕೃತಿ ಕಾಪಾಡಿಕೊಂಡಿದ್ದಾರೆ. ಆ ಬಗೆಗಿನ ಪಾಠ-ಪ್ರವಚನಗಳು ಅವರಿಗೆ ನೀಡಲಾಗುತ್ತಿದೆ. ಆದರೆ ನಾವು ಮಾತ್ರ ಸಂಸ್ಕೃತಿಯನ್ನು ಸಂಪೂರ್ಣವಾಗಿ ಬಿಟ್ಟಿದ್ದೇವೆ. ಬೆಂಗಳೂರಿನಲ್ಲಿ ಎಷ್ಟೋ ಜನರು ಬಳೆಹಾಕುವುದಿಲ್ಲ, ಕುಂಕುಮ ಇಟ್ಕೊಳ್ಳೋದಿಲ್ಲ, ಹೂ ಮುಡಿಯುವುದಿಲ್ಲ. ಶಿಕ್ಷಣ ಸಂಸ್ಥೆಗಳು ಮಕ್ಕಳಿಗೆ ಈ ರೀತಿಯ ನಿರ್ಬಂಧಗಳನ್ನು ವಿಧಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ತಾಯಿ-ತಂದೆಗೆ ನಮಸ್ಕಾರ ಮಾಡಿದರೆ ಪುಣ್ಯ ಬರುತ್ತದೆ ಎಂದು ನನಗೆ ಗೊತ್ತು; ಆದರೆ ನಾನು ನಮಸ್ಕಾರ ಮಾಡುವುದಿಲ್ಲ. ದೇವಾಲಯಕ್ಕೆ ಹೋದರೆ ಉತ್ತಮ ಸಂಸ್ಕಾರ ಸಿಗುತ್ತದೆ ಎಂದು ಸಹ ನನಗೆ ಗೊತ್ತು. ಆದರೆ ನಾನು ಹೋಗೋದಿಲ್ಲ ಎನ್ನುವವರು ಇಂದು ನಮ್ಮಲ್ಲಿದ್ದಾರೆ. ಅವರೆಲ್ಲ ಇಂಜಿನಿಯರ್‌ಗಳು, ವಕೀಲರು, ವೈದ್ಯರು ಆಗಿದ್ದಾರೆ. ಎಲ್ಲರ ಆಸೆಯೂ ಒಂದೆ. ನಾನು ದೊಡ್ಡವನಾಗಬೇಕು, ಚೆನ್ನಾಗಿ ಹಣ ಸಂಪಾದಿಸಬೇಕು. ಅಮೆರಿಕಾ, ಕೆನಡಾಕ್ಕೆ ಹೋಗಬೇಕು. ಬೆಂಗಳೂರಿನಲ್ಲಿ ಹೆಚ್ಚಿನಂಶ ಜನರಿಗೆ ಈ ಹುಚ್ಚು ಹಿಡಿದಿದೆ. ಅಲ್ಲಿ ಅವನೂ ಅನಾಥ. ಇಲ್ಲಿರುವ ಅವರ ಪಾಲಕರೂ ಅನಾಥರು. ಹೀಗಾಗಿ ನಾವು ನಮ್ಮ ಮಕ್ಕಳಿಗೆ ಸಂಸ್ಕಾರ ನೀಡುವುದು ಅಗತ್ಯ ಎಂದರು.

ನಾವು ಭರತ ಮಾತೆಯನ್ನಷ್ಟೇ ಅಲ್ಲ, ಇಡೀ ಭೂಮಿಯನ್ನೇ ತಾಯಿ ಎನ್ನುತ್ತೇವೆ. ನಾವೆಲ್ಲರೂ ಈ ಭೂಮಿಯ ಮಕ್ಕಳು. ಬ್ರಾಹ್ಮಣ ದೇವರಿಗೆ ಮಂಗಳಾರತಿ ಮಾಡಬೇಕಾದರೆ ಇಡೀ ದೇಶ ಚೆನ್ನಾಗಿರಲಿ ಎಂದು ಪ್ರಾರ್ಥಿಸುತ್ತಾನೆ. ಅದೇ ನಾನು ಚೆನ್ನಾಗಿರಬೇಕು, ನಾನು ಉದ್ದಾರ ಆಗಬೇಕು ಎನ್ನುವ ಭಾವನೆ ಬ್ರಾಹ್ಮಣತ್ವದಲ್ಲಿ ಇಲ್ಲ. ಈ ನಿಟ್ಟಿನಲ್ಲಿ ಬ್ರಾಹ್ಮಣರು ಸಂಘಟಿತರಾಗಬೇಕು. ಎಲ್ಲಿ ಬ್ರಾಹ್ಮಣ ಸಂಘಟನೆ ಶಕ್ತಿಯುತವಾಗಿರುತ್ತದೆಯೋ ಆ ಕ್ಷೇತ್ರ ಪ್ರಭಾವಿಯಾಗಿರುತ್ತದೆ ಎಂದು ಹೇಳಿದರು.

ಯಾವ ಮನೆಯಲ್ಲಿ ಭಜನೆಗಳು ನಡೆಯುತ್ತವೋ ಆ ಮನೆಯಲ್ಲಿ ಮನಸ್ಸುಗಳು ವಿಭಜನೆಯಾಗುವುದಿಲ್ಲ. ಭಗವಂತ ವಿಭಜನೆಯಾಗಲು ಅವಕಾಶ ನೀಡುವುದಿಲ್ಲ. ತಂದೆ, ತಾಯಿ, ಮಕ್ಕಳು, ಮೊಮ್ಮಕ್ಕಳು ಒಟ್ಟಿಗೇ ಇರುತ್ತಾರೆ. ಪುಷ್ಪಗಳು, ಅರಿಶಿಣ, ಕುಂಕುಮಗಳನ್ನು ಬಳಸಿ ಭಗವಂತನನ್ನು ಅರ್ಚಿಸುವುದರಿಂದ ಪುಣ್ಯಫಲ ಪ್ರಾಪ್ತಿಯಾಗುತ್ತದೆ. ಆದರೆ ಅವುಗಳಿಂದ ಭಗವಂತ ಸಂತುಷ್ಟನಾಗುವುದಿಲ್ಲ. ನಮ್ಮಲ್ಲಿ ಸದ್ಗುಣಗಳನ್ನು ಬೆಳೆಸಿಕೊಂಡು ನಾಮ ಸಂಕೀರ್ತನೆ ಮಾಡುವುದರಿಂದ ಮಾತ್ರ ಭಗವಂತ ಸಂತುಷ್ಟನಾಗುತ್ತಾನೆ. ಎಲ್ಲೆಲ್ಲಿ ದೇವರನಾಮ ಸ್ಮರಣೆ ನಡೆಯುತ್ತದೆಯೋ ಅಲ್ಲಿ ಒಂದು ಕಂಪನ ಸೃಷ್ಟಿಯಾಗಿ ದೇವರ ಸಾನ್ನಿಧ್ಯ ನೆಲೆಗೊಳ್ಳುತ್ತದೆ. ಅಲ್ಲಿ ರೋಗ-ರುಜಿನಾದಿಗಳು ಇರುವುದಿಲ್ಲ. ಸಂಕಟ, ಕ್ಲೇಶಗಳು ಕೂಡ ಇರುವುದಿಲ್ಲ ಎಂದರು.

ಚಿಕ್ಕಮಗಳೂರು ಬ್ರಾಹ್ಮಣ ಮಹಾಸಭಾದ ನಿಕಟಪೂರ್ವ ನಿರ್ದೇಶಕಿ ರಾಧಾ ಬಾಲಕೃಷ್ಣ ಕಾರ್ಯಕ್ರಮ ಉದ್ಘಾಟಿಸಿದರು. ಅಧ್ಯಕ್ಷತೆ ವಹಿಸಿದ್ದ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ಪಿ.ಮಂಜುನಾಥ ಜೋಷಿ ಮಾತನಾಡಿದರು. ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿ ಎನ್.ಕೆ.ಅಶ್ವಿನ್, ಖಜಾಂಚಿ ಶ್ಯಾಮಲಾ ಎಂ.ರಾವ್ ಕಾರ್ಯಕ್ರಮದಲ್ಲಿದ್ದರು. ಎಕೆಬಿಎಂಎಸ್ ಮಹಿಳಾ ವಿಭಾಗದ ಜಿಲ್ಲಾ ಘಟಕದ ಸಂಚಾಲಕಿ ಎಸ್.ಶಾಂತಕುಮಾರಿ ಪ್ರಾಸ್ತಾವಿಕ ಭಾಷಣ ಮಾಡಿದರು. ವಾಣಿ ಹಾಗೂ ಸರಸ್ವತಿ ಪ್ರಾರ್ಥನೆ, ಬ್ರಾಹ್ಮಣ ಮಹಾಸಭಾದ ನಿರ್ದೇಶಕಿ ಜಯಶ್ರೀ ಜೋಷಿ ಸ್ವಾಗತ, ಮಹಿಳಾ ಘಟಕದ ತಾಲ್ಲೂಕು ಸಂಚಾಲಕಿ ಸುಮಾ ಪ್ರಸಾದ್ ನಿರೂಪಣೆ, ಬ್ರಾಹ್ಮಣ ಮಹಾಸಭಾದ ನಿರ್ದೇಶಕಿ ಕೆ.ಕೆ.ತಾರಾಮಣಿ ವಂದನಾರ್ಪಣೆ ನೆರವೇರಿಸಿದರು.

ವಿಜೇತರು: ಭಜನಾ ಸ್ಪರ್ಧೆಯಲ್ಲಿ ಕೊಪ್ಪದ ಸೀತಾರಾಮ ಭಜನಾ ಮಂಡಳಿ ಪ್ರಥಮ, ಶೃಂಗೇರಿಯ ವಿನಾಯಕ ಭಜನಾ ಮಂಡಳಿ ದ್ವಿತೀಯ, ನರಸಿಂಹರಾಜಪುರದ ಗಾಯತ್ರಿ ವಿಪ್ರ ಮಹಿಳಾ ಭಜನಾ ಮಂಡಳಿ ಹಾಗೂ ಚಿಕ್ಕಮಗಳೂರಿನ ದಾಸ ವಿಠ್ಠಲ ಯುವ ಭಜನಾ ಮಂಡಳಿ ತೃತೀಯ ಸ್ಥಾನಕ್ಕೆ ಭಾಜನವಾದವು. ತೀರ್ಪುಗಾರರಾಗಿ ಬೆಂಗಳೂರಿನ ಡಾ. ಹರಾ ನಾಗರಾಜಾಚಾರ್ಯ, ಸಾಹಿತಿ, ಸಂಶೋಧಕ ಬೇಲೂರಿನ ಡಾ. ಶ್ರೀವತ್ಸಾ ಎಸ್.ವಟಿ ಹಾಗೂ ನಗರದ ಎಂ.ಎನ್.ಎಂ.ಎಲ್. ಬಿ.ಎಡ್. ಶಿಕ್ಷಣ ಕಾಲೇಜಿನ ಗ್ರಂಥಾಲಯದ ಗ್ರಂಥಪಾಲಕಿ ಸತ್ಯವತಿ ರಾಘವೇಂದ್ರ ತೀರ್ಪುಗಾರರಾಗಿ ಭಾಗವಹಿಸಿದ್ದರು.

 

About Author

Leave a Reply

Your email address will not be published. Required fields are marked *

You may have missed