September 19, 2024
ಕಸ್ತೂರಿ ರಂಗನ್ ಮೀಸಲು ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎಸ್.ವಿಜಯ್‌ಕುಮಾರ್

ಚಿಕ್ಕಮಗಳೂರು: ಜಿಲ್ಲೆಯ ಅರಣ್ಯ ಮತ್ತು ಕಂದಾಯ ಭೂಮಿ ಜಂಟಿ ಸರ್ವೆ ಮಾಡಲು ನಿಯೋಜನೆಗೊಂಡಿರುವ ಭೂಮಾಪಕರು ಬರಿ ಗಡಿ ಗುರುತು ಮಾಡದೆ ಜನವಸತಿ, ಗೋಮಾಳ, ಸಾರ್ವಜನಿಕ ಉದ್ದೇಶಕ್ಕೆ ಭೂಮಿ ಗುರುತಿಸಬೇಕು ಎಂದು ಕಸ್ತೂರಿ ರಂಗನ್ ಮೀಸಲು ಯೋಜನೆ ವಿರೋಧಿ ಹೋರಾಟ ಸಮಿತಿ ಸಂಚಾಲಕ ಎಸ್.ವಿಜಯ್‌ಕುಮಾರ್ ಆಗ್ರಹಿಸಿದರು.

ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸತತ ಹೋರಾಟದ ಫಲವಾಗಿ ಸರಕಾರ ಅಂತೂ ಜಂಟಿ ಸರ್ವೆಗೆ ಮುಂದಾಗಿದೆ. ಇದಕ್ಕೆ ಶ್ರಮಿಸಿದ ಚುನಾಯಿತ ಪ್ರತಿನಿಧಿಗಳು, ಹೋರಾಟದಲ್ಲಿ ಭಾಗಿಯಾದ ವಿವಿಧ ಪಕ್ಷ ಸಂಘಟನೆಗಳಿಗೆ ಅಭಿನಂದಿಸುತ್ತೇವೆ ಎಂದರು.

ಸರ್ವೆ ಮಾಡುವಾಗ ಕಂದಾಯ ಮತ್ತು ಅರಣ್ಯ ಅಧಿಕಾರಿಗಳ ಜತೆ ಗ್ರಾಮಸ್ಥರ ಭಾಗವಹಿಸುವಿಕೆ ಇರಬೇಕು. ಸರ್ವೆ ಸಂದರ್ಭ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ, ಗಾಡಿಜಾಡು, ಕಾಲುದಾರಿ, ರೈತರ ಜಮೀನುಗಳು, ಪಂಚಾಯಿತಿ ಅಭಿವೃದ್ಧಿಗೆ ಬೇಕಿರುವ ಪ್ರದೇಶ, ಸ್ಮಶಾನ, ನಿವೇಶನ ರಹಿತರಿಗೆ ನಿವೇಶನಕ್ಕೆ ಕಾಯ್ದಿರಿಸಬಹುದಾದ ಜಮೀನಿನ ವಿವರವನ್ನು ಸರ್ವೆ ಮ್ಯಾಪಿನಲ್ಲಿ ಉಲ್ಲೇಖಿಸಬೇಕು. ಜತೆಗೆ ದನಕರುಗಳ ಸಂಖ್ಯೆಗೆ ಅನುಗುಣವಾಗಿ ಗೋಮಾಳವನ್ನು ಸ್ಕೆಚ್‌ನಲ್ಲಿ ಗೊತ್ತುಪಡಿಸಬೇಕು ಎಂದು ಒತ್ತಾಯಿಸಿದರು.

ನನಗೆ ತಿಳಿದಿರುವಂತೆ ಈಗಾಗಲೇ ಸೆಕ್ಷನ್ ೪/೧ ಆಗಿರುವ ಕಡತಗಳನ್ನು ಸರ್ವೆಯರ್‌ಗಳು ತಾಲೂಕು ಕಚೇರಿಯಿಂದ ಪಡೆದಿರುವ ಬಗ್ಗೆ ಮಾಹಿತಿ ಇದೆ. ಯಾವುದೇ ಕಾರಣಕ್ಕೂ ಆ ಕಡತಗಳನ್ನು ಅವರು ಮುಟ್ಟಬಾರದು. ೪/೧ ಕಡತಗಳು ಈಗಾಗಲೇ ಎಫ್‌ಎಸ್‌ಓಗಳ ಬಳಿ ಹೋಗಿವೆ. ಅವರು ಅಂತಿಮ ನಿರ್ಧಾರ ತೆಗೆದುಕೊಳ್ಳುವ ಹಂತದಲ್ಲಿವೆ. ಹೀಗಾಗಿ ಈ ದಾಖಲೆ ಪತ್ರಗಳನ್ನು ಪಡೆಯಬಾರದು ಎಂದರು.

ಕಸ್ತೂರಿ ರಂಗನ್ ವರದಿಯಲ್ಲಿರುವ ಲೋಪ ಸರಿಪಡಿಸಲು ಕೇಂದ್ರ ಸರಕಾರದಿಂದ ನಿಯೋಜಿಸಿರುವ ಅಧಿಕಾರಿಗಳು ಒಂದು ವರ್ಷವಾದರೂ ಬರಲಿಲ್ಲ. ಈ ಬಗ್ಗೆ ಸರಕಾರ ಒತ್ತಡ ತರಬೇಕು. ಮತ್ತೊಮ್ಮೆ ಯಥಾಸ್ಥಿತಿಯಲ್ಲಿ ವರದಿ ಜಾರಿಯಾಗುವುದನ್ನು ವಿರೋಸಲು ಸಂಬಂಧಿಸಿದ ಜಿಲ್ಲೆಯ ರೈತ ಬೆಳೆಗಾರರು, ಗ್ರಾಮಸ್ಥರು, ಕಾರ್ಮಿಕರು ಎಲ್ಲ ಜನಸಮೂಹ ಹೆಚ್ಚಿನ ಸಂಖ್ಯೆಯಲ್ಲಿ ಹೋರಾಟಕ್ಕೆ ಇಳಿಯಬೇಕಿದೆ ಎಂದು ಮನವಿ ಮಾಡಿದ ಅವರು. ಜಿಲ್ಲೆಯಲ್ಲಿ ಆನೆ ಹಾವಳಿ ತಡೆಯಲು ಹಂತಹಂತವಾಗಿ ರೈಲ್ವೇ ಬ್ಯಾರಿಕೇಡ್ ಹಾಕಬೇಕು ಎಂದರು.

ಮುಳ್ಳಯ್ಯನಗಿರಿ ಸಂರಕ್ಷಿತ ಮೀಸಲು ಪ್ರದೇಶ ಯೋಜನೆಯಡಿ ಗುರುತಿಸಿರುವ ಪ್ರದೇಶದಲ್ಲಿ ಜನವಸತಿ, ಶಾಲೆ, ಸ್ಮಶಾನ, ನಿವೇಶನಕ್ಕಾಗಿ ಭೂಮಿ, ರೈತರ ಜಮೀನುಗಳು, ಧಾರ್ಮಿಕ ಕ್ಷೇತ್ರಗಳಿದ್ದು ಅಗತ್ಯ ಪ್ರಮಾಣದ ಭೂಮಿಯನ್ನು ಕಾಯ್ದಿರಿಸಿ ಮುಳ್ಳಯ್ಯನಗಿರಿ ಸಂರಕ್ಷಿತ ಮಾಡಲಿ ಎಂದರು.

ಕಂದಾಯ ಇಲಾಖೆಯಲ್ಲಿನ ಭೂಮಿಯನ್ನು ಅರಣ್ಯ ಇಲಾಖೆಗೆ ವರ್ಗಾಯಿಸುವ ಮುನ್ನ ನಮೂನೆ ೫೩, ೫೭, ೯೪ ಸಿ, ೯೪ ಸಿಸಿ ಅರ್ಜಿಗಳ ಫಲಾನುಭವಿಗಳಿಗೆ ಮತ್ತು ಗೋಮಾಳಕ್ಕೆ ಭೂಮಿ ನಿಗಧಿಗೊಳಿಸಿ ಬೇಕಿದ್ದರೆ ಅರಣ್ಯಕ್ಕೆ ವರ್ಗಾಯಿಸಲಿ ಎಂದರು. ಸಂಚಾಲಕರಾದ ಕೆ.ಕೆ.ರಘು, ಪ್ರಭುಆರಾಧ್ಯ, ಶಾಂತಕುಮಾರ್ ಇದ್ದರು.

Anti-Kasturi Rangan Reserve Scheme Struggle Committee

About Author

Leave a Reply

Your email address will not be published. Required fields are marked *

You may have missed