September 19, 2024

ಕಾಂಗ್ರೆಸ್ ನಗರಸಭೆ ಸದಸ್ಯರು ಅಧ್ಯಕ್ಷರಿಂದ ಕಿಕ್‌ಬ್ಯಾಕ್

0
ನಗರಸಭೆ ಸದಸ್ಯ ಟಿ.ರಾಜಶೇಖರ್ ಸುದ್ದಿಗೋಷ್ಠಿ

ನಗರಸಭೆ ಸದಸ್ಯ ಟಿ.ರಾಜಶೇಖರ್ ಸುದ್ದಿಗೋಷ್ಠಿ

ಚಿಕ್ಕಮಗಳೂರು:  ಈ ಹಿಂದೆ ಬಿಜೆಪಿಯಿಂದ ನಗರಸಭೆ ಅಧ್ಯಕ್ಷರಾಗಿದ್ದ ವರಸಿದ್ದಿವೇಣುಗೋಪಾಲ್ ಅವರು ದಾರಿ ತಪ್ಪಲು ಕಾಂಗ್ರೆಸ್ ಕಾರಣ. ಕಾಂಗ್ರೆಸ್ ನಗರಸಭೆ ಸದಸ್ಯರು ಅಧ್ಯಕ್ಷರಿಂದ ಕಿಕ್‌ಬ್ಯಾಕ್ ಪಡೆಯುತ್ತಿದ್ದಾರೆ ಎಂಬ ಅನುಮಾನವಿದೆ ಎಂದು ನಗರಸಭೆ ಸದಸ್ಯ ಟಿ.ರಾಜಶೇಖರ್ ಆರೋಪಿಸಿದರು.

ಅವರು ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ನಗರಸಭೆ ಅಧ್ಯಕ್ಷರು ಕಾಂಗ್ರೆಸ್ ಮತ್ತು ಶಾಸಕರ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ಇತ್ತೀಚೆಗೆ ನಡೆದ ನಗರಸಭೆ ಸಾಮಾನ್ಯ ಸಭೆಯಲ್ಲಿ ಎಲ್ಲ ೫೨ ವಿಷಯಗಳು ಚರ್ಚೆಗೆ ಬರುವ ಮುನ್ನವೇ ೪ ತಿಂಗಳ ಲೆಕ್ಕಪತ್ರಕ್ಕೆ ಒಮ್ಮಲೇ ಅನುಮೋದನೆ ಪಡೆದು ಅಧ್ಯಕ್ಷರು, ಶಾಸಕರು ಮತ್ತು ಸದಸ್ಯರು ಪಲಾಯನ ಮಾಡಿದರು ಎಂದು ದೂರಿದರು.

ಇದು ಕಾನೂನು ಬಾಹಿರ. ಇದಕ್ಕೆ ಶಾಸಕರ ಕುಮ್ಮಕ್ಕಿದೆ. ಅನುಮೋದನೆ ಸಿಕ್ಕಿದೆ ಎಂದು ಮುಂದಿನ ೬ ತಿಂಗಳು ಯಾವುದೇ ಸಭೆ ನಡೆಸದೆ ಸಾರ್ವಜನಿಕರ ಹಣವನ್ನು ಲೂಟಿ ಮಾಡುವ ಹುನ್ನಾರ ನಡೆಸಿದ್ದಾರೆ. ಈ ಹಣದಿಂದ ಕಾಂಗ್ರೆಸ್ ಸದಸ್ಯರಿಗೆ ಕಿಕ್‌ಬ್ಯಾಕ್ ದೊರೆಯುವ ಸಂಶಯವಿದೆ. ಹೀಗಾಗಿ ಸಭೆಯಲ್ಲಿ ಕೈಗೊಂಡಿರುವ ನಡಾವಳಿಯನ್ನು ರದ್ದುಪಡಿಸುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸುವುದಾಗಿ ತಿಳಿಸಿದರು.

ಟ್ಯಾಂಕರ್ ಮೂಲಕ ನೀರು ಪೂರೈಸಿದ್ದೇವೆ ಎಂದು ೨೫ ಲಕ್ಷ ರೂ. ಬಿಲ್ ತಯಾರಿಸಿದ್ದಾರೆ. ಇದನ್ನು ಸಾಮಾನ್ಯ ಸಭೆ ಅಜೆಂಡಾದಲ್ಲಿ ತೋರಿಸಿಲ್ಲ. ಈ ಬಗ್ಗೆ ಜಿಲ್ಲಾಧಿಕಾರಿಗೆ ದೂರು ನೀಡುತ್ತೇವೆ. ನಗರಸಭೆ ಖಾತೆಯಲ್ಲಿ ಕೇವಲ ೩ ಲಕ್ಷ ರೂ. ಇದೆ. ಆದರೆ, ಇವರು ೭.೫೦ ಕೋಟಿ ರೂ.ಗೆ ಟೆಂಡರ್ ಕರೆಯಲು ಮುಂದಾಗಿದ್ದಾರೆ ಎಂದು ಟೀಕಿಸಿದರು.

ಇದೂ ಕೂಡ ಕಾನೂನು ಬಾಹಿರ. ಫ್ಲೆಕ್ಸ್, ಶಾಮಿಯಾನ, ಲೈಟಿಂಗ್ಸ್ ಮತ್ತು ಊಟದ ಲೆಕ್ಕದಲ್ಲಿ ದುಂದು ವೆಚ್ಚ ಮಾಡಿದ್ದಾರೆ. ಸಿಂಗಲ್ ಟೆಂಡರ್ ಕರೆಯಲು ಅವಕಾಶ ಇಲ್ಲದಿದ್ದರೂ ಒಮ್ಮೆ ಟೆಂಡರ್ ಕರೆದು ಆಪ್ತ ಗುತ್ತಿಗೆದಾರರಿಗೆ ಕಾಮಗಾರಿ ನೀಡಲಾಗಿದೆ. ಈ ಎಲ್ಲ ಅವ್ಯವಹಾರಗಳ ಬಗ್ಗೆ ನಗರಾಭಿವೃದ್ಧಿ ಕಾರ್ಯದರ್ಶಿ, ಲೋಕಾಯುಕ್ತ ಹಾಗೂ ಜಿಲ್ಲಾಧಿಕಾರಿಗೂ ದೂರು ನೀಡಲಿದ್ದೇವೆ ಎಂದು ಹೇಳಿದರು.

ಜೆಡಿಎಸ್ ಸದಸ್ಯ ಎ.ಸಿ.ಕುಮಾರೇಗೌಡ ಮಾತನಾಡಿ, ವಿಧಾನಸಭೆ ಸದಸ್ಯರಾದವರಿಗೆ ನಗರಸಭೆ ಅಧ್ಯಕ್ಷರ ಚುನಾವಣೆಯಲ್ಲಿ ಮಾತ್ರ ಮತ ಹಾಕುವ ಅಧಿಕಾರವಿದೆ. ಉಳಿದಂತೆ ನಗರಸಭೆಯ ಸ್ಥಾಯಿ ಸಮಿತಿ ಆಯ್ಕೆ ಅಥವಾ ಮತ್ತಿತರೆ ಪ್ರಕ್ರಿಯೆಗಳಲ್ಲಿ ಮತ ನೀಡುವಂತಿಲ್ಲ ಎಂದು ಮುನ್ಸಿಪಲ್ ಕಾಯಿದೆಯಲ್ಲಿ ಸ್ಪಷ್ಟವಾಗಿ ಹೇಳಿದೆ ಎಂದರು.

ಶಾಸಕರು ಕಾಯಿದೆಯನ್ನು ಉಲ್ಲಂಘಿಸಿ ಅಂದು ಕೈ ಎತ್ತುವ ಮೂಲಕ ಅನುಮೋದನೆ ದೊರೆತಿದೆ ಎಂದು ಸಭೆಯಿಂದ ಹೊರನಡೆಯುವಂತೆ ಸನ್ನೆ ಮಾಡಿರುವುದು ಖಂಡನೀಯ ಎಂದು ಹೇಳಿದರು.

ಉಪಾಧ್ಯಕ್ಷ ಅಮೃತೇಶ್ ಚನ್ನಕೇಶವ, ಸದಸ್ಯರಾದ ಕವಿತಾಶೇಖರ್, ಮಧುಕುಮಾರ್ ರಾಜ್ ಅರಸ್, ಸುಜಾತ, ರೂಪಕುಮಾರ್, ಗೋಪಿ ಇದ್ದರು.

Congress municipal councilors kickback from the president

About Author

Leave a Reply

Your email address will not be published. Required fields are marked *

You may have missed