September 19, 2024

ಕರ್ನಾಟಕಕ್ಕೆ ಓರ್ವ ಕೋಮುವಾದಿ ಮುಖ್ಯಮಂತ್ರಿ ಆರಿಸಲಾಗಿದೆ

0
ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರಡಪ್ಪ ಸುದ್ದಿಗೋಷ್ಠಿ

ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರಡಪ್ಪ ಸುದ್ದಿಗೋಷ್ಠಿ

ಚಿಕ್ಕಮಗಳೂರು: ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಹಿಂದಕ್ಕೆ ಪಡೆಯುವುದಾಗಿ ಸಿಎಂ ಸಿದ್ದರಾಮಯ್ಯ ನೀಡುವ ಹೇಳಿಕೆಯಿಂದ ಕರ್ನಾಟಕಕ್ಕೆ ಓರ್ವ ಕೋಮುವಾದಿ ಮುಖ್ಯಮಂತ್ರಿಯನ್ನು ಆರಿಸಲಾಗಿದೆ ಎನ್ನುವ ಚಿಂತೆಗೆ ಕಾರಣವಾಗುತ್ತಿದೆ ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಎಚ್.ಸಿ.ಕಲ್ಮರಡಪ್ಪ ಆರೋಪಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಜಾಬ್ ಧರಿಸಿ ಶಾಲೆಗೆ ಹೋಬಹುದು ಎಂದು ಸಿಎಂ ಹೇಳಿರುವುದು ಓಟ್‌ಬ್ಯಾಂಕ್ ರಾಜಕಾರಣದ ಉದ್ದೇಶ ಅಷ್ಟೇ ಅಲ್ಲ. ಗ್ಯಾರಂಟಿ ಯೋಜನೆ ಅನುಷ್ಟಾನದಲ್ಲಿನ ವಿಫಲತೆ, ಬರ ಪರಿಪರಿಸ್ಥಿತಿ ನಿಭಾಯಿಸುವಲ್ಲಿ ಉಂಟಾಗಿರುವ ಲೋಪಗಳು, ಐಷಾರಾಮಿ ವಿಶೇಷ ವಿಮಾನದಲ್ಲಿ ಪ್ರಯಾಣಿಸಿ ಜನರ ಕೆಂಗಣ್ಣಿಗೆ ಗುರಿಯಾಗಿರುವಂತಹ ಲೋಪಗಳನ್ನು ಮುಚ್ಚಿ ಹಾಕುವ ಸಲುವಾಗಿ ಸಿಎಂ ಈ ವಿಚಾರವನ್ನು ಮುನ್ನೆಲೆಗೆ ತಂದಿದ್ದಾರೆ ಎಂದು ದೂರಿದರು.

ಶಾಲಾ ಮಕ್ಕಳಲ್ಲಿ ಕೋಮು ದ್ವೇಷ ಹೆಚ್ಚಿಸಲು ಹೊರಟಿದ್ದಾರೆ. ಹಿಂದಿನ ಸರ್ಕಾರ ಶಾಲೆಗಳಿಗಷ್ಟೇ ಹಿಜಾಬ್ ನಿಷೇಧಿಸಿದೆ. ಸಾರ್ವಜನಿಕವಾಗಿ ಅಲ್ಲ. ಅಲ್ಲದೆ ಈ ಪ್ರಕರಣ ಈಗ ನ್ಯಾಯಾಲಯದಲ್ಲಿದೆ. ಹೀಗಿದ್ದರೂ ಸಿಎಂ ಓರ್ವ ವಕೀಲರಾಗಿ ಹಸ್ತಕ್ಷೇಪ ಮಾಡುತ್ತಾರೆ ಎಂದರೆ ಇದು ಅವರ ಜಾಣ ಪೆದ್ದುತನ ಎನ್ನುವುದು ಗೊತ್ತಾಗುತ್ತದೆ ಎಂದರು.

೧೯೬೪ ರ ಶಿಕ್ಷಣ ನೀತಿ ಕಾಯಿದೆ ಪ್ರಕಾರ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯಗೊಳಿಸಲಾಗಿದೆ. ಅದಕ್ಕೆ ಯಾರದ್ದೇ ಅಡ್ಡಿಯಿಲ್ಲ. ಸಮವಸ್ತ್ರದ ಭಾಗವಲ್ಲದ ಹಿಜಾಬ್ ಧರಿಸಲು ಯಾವ ಕಾರಣಕ್ಕೆ ಅವಕಾಶ ಎಂದು ಸಿಎಂ ಹೇಳುತ್ತಿದ್ದಾರೆ ಎನ್ನುವ ಪ್ರಶ್ನೆ ಎದ್ದಿದೆ ಎಂದರು.

ಇದರ ಪರಿಣಾಮ ನಾಳೆ ತಮಗಿಷ್ಟಬಂದ ಬಣ್ಣದ ಶಾಲು, ಪಂಚೆ, ದಿರಿಸು ಧರಿಸುವುದಾಗಿ ಹೇಳಿದರೆ ಇಂತಹ ಅವಾಂತರಗಳಿಗೆ ಉತ್ತರ ಕೊಡುವವರು ಯಾರು? ಅಭಿವೃದ್ಧಿಯ ಚಿಂತನೆ, ಬಡವರ ಪರವಾದ ಕಾಳಜಿ ಇದೇನ ಎಂದು ಸರ್ಕಾರವನ್ನು ಪ್ರಶ್ನಿಸಿದರು.

ಸಿದ್ದರಾಮಯ್ಯ ಅವರು ಕೋಮುವಾದವನ್ನೇ ಬಿತ್ತುತ್ತ ರಾಜಕಾರಣ ಮಾಡುತ್ತಿರುವುದು ಸ್ಪಷ್ಟವಾಗಿದೆ. ಈ ಎಲ್ಲಾ ಅಂಶಗಳ ಕಾರಣಕ್ಕೆ ಅವರಿಗೆ ಹಲವು ಜನರು ಸಿದ್ರಾಮುಲ್ಲಾ ಖಾನ್ ಎನ್ನುತ್ತಾರೆ. ಅವರ ಮನಸ್ಸು, ಮನಸ್ಥಿತಿ, ಅವರ ನಡವಳಿಕೆಗಳೇ ಇದಕ್ಕೆ ಕಾರಣ ಎಂದು ದೂರಿದರು.

ಮುಸ್ಲಿಮರಿಗೆ ೧೦ ಸಾವಿರ ಕೋಟಿ ಕೊಡುತ್ತೇವೆ ಎಂದು ಸಿಎಂ ಹೇಳುತ್ತಾರೆ. ಅವರಿಗಷ್ಟೇ ಅಲ್ಲ ಎಲ್ಲರಿಗೂ ಕೊಡಿ ಎನ್ನುವುದು ನಮ್ಮ ಆಗ್ರಹವಾಗಿದೆ. ಇದನ್ನು ಹೇಳಿದರೆ ಬಿಜೆಪಿ ಕೋಮುವಾದಿ ಎನ್ನುತ್ತಾ ಬಿಜೆಪಿ ಗುಮ್ಮವನ್ನು ತೋರಿಸುತ್ತಾ ಕಾಂಗ್ರೆಸ್ ಅಲ್ಪ ಸಂಖ್ಯಾತರಿಗೆ ಮೋಸ ಮಾಡುತ್ತಿದೆ ಎಂದು ಆರೋಪಿಸಿದರು.

ಆಫ್ಘಾನಿಸ್ಥಾನ, ತಾಲಿಬಾನ್‌ನಲ್ಲಿ ೧೯೯೦ಕ್ಕಿಂತಲೂ ಹಿಂದೆ ಎಲ್ಲಾ ವಿದ್ಯಾರ್ಥಿಗಳು ಸಮವಸ್ತ್ರವನ್ನು ಧರಿಸಿಯೇ ಶಾಲೆಗೆ ಹೋಗುತ್ತಿದ್ದರು. ಆದರೆ ಇಂದು ಎಲ್ಲರೂ ಹಿಜಾಬ್ ಧರಿಸಬೇಕು, ಬುರ್ಖಾ ಧರಿಸಬೇಕು ಎಂದು ಕಾನೂನು ತರಲಾಗಿದೆ. ಇದು ಸ್ತ್ರೀ ಸ್ವಾತಂತ್ರ್ಯವನ್ನು ಹರಣ ಮಾಡುತ್ತದೆ. ಇದರ ಬಗ್ಗೆ ಚಕಾರವನ್ನು ಎತ್ತುವುದಿಲ್ಲ ಎಂದರು.

ಬಂಜಾರ ಸಮಾಜದವರು ಶಾಲು ಧರಿಸಲು ಹೋದರೆ ಸಿದ್ದರಾಮಯ್ಯ ಸಿಟ್ಟಿನಿಂದ ತಿರಸ್ಕಾರ ಮಾಡುತ್ತಾರೆ. ಅದೇ ಮುಸ್ಲಿಮರ ಔತಣ ಕೂಟಗಳಲ್ಲಿ ಅವರು ಕೊಡುವ ಟೋಪಿಯನ್ನು ಸಂತೋಷದಿಂದ ಹಾಕಿಸಿಕೊಳ್ಳುತ್ತಾರೆ. ಅವರಲ್ಲಿರುವ ಈ ಮನಸ್ಥಿತಿ ಕಾರಣಕ್ಕೆ ಅವರನ್ನು ಹಲವರು ಬೇರೆ ಹೆಸರಿಟ್ಟು ಟೀಕೆ ಮಾಡುತ್ತಾರೆ. ಅವರು ಟೋಪಿ ಧರಿಸಿದರೂ ಸರಿ ಬೇರೆಯವರನ್ನು ದ್ವೇಷ ಮಾಡಬಾರದು ನಮ್ಮ ಆಗ್ರಹ ಎಂದರು.

ಈಗಾಗಲೇ ತೆಲಂಗಾಣದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಆಸ್ಪತ್ರೆ ತೆರೆದು ಕಾಂಗ್ರೆಸ್ ಪಕ್ಷ ಸಮಾಜವನ್ನು ಒಡೆಯಲು ಮುಂದಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತಕ್ಕಾಗಿ ಹಿಂದೂ-ಮುಸ್ಲಿಮರ ನಡುವಿನ ಬಾಂಧವ್ಯವನ್ನು ಒಡೆಯಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.

ಸಿದ್ದರಾಮಯ್ಯ ಅವರ ಹೇಳಿಕೆಯನ್ನು ಖಂಡಿಸುತ್ತೇವೆ. ನ್ಯಾಯಾಲಯದಲ್ಲಿರುವ ವಿಚಾರವನ್ನು ಮಾತನಾಡಲು ಅವರಿಗೆ ಹಕ್ಕಿಲ್ಲ. ನ್ಯಾಯಾಲಯ ನೀಡುವ ತೀರ್ಪಿಗೆ ತಕ್ಕಂತೆ ನಡೆದುಕೊಳ್ಳಬೇಕು. ಅದನ್ನು ಬಿಟ್ಟು ಪ್ರಜಾಪ್ರಭುತ್ವದ ವಿರೋಧಿಯಂತೆ ವರ್ತಿಸುವುದು ಸರಿಯಲ್ಲ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಸಿ.ಆರ್.ಪ್ರೇಂ ಕುಮಾರ್, ಜಿಲ್ಲಾ ಬಿಜೆಪಿ ವಕ್ತಾರ ಟಿ.ರಾಜಶೇಖರ್, ಮುಖಂಡರುಗಳಾದ ಹಿರೇಮಗಳೂರು ಪುಟ್ಟಸ್ವಾಮಿ, ದಿನೇಶ್ ಇದ್ದರು.

A communal Chief Minister has been elected for Karnataka

About Author

Leave a Reply

Your email address will not be published. Required fields are marked *

You may have missed